ಸೃಜನ್ ಲೋಕೇಶ್
ಸೃಜನ್ ಲೋಕೇಶ್
ಸೃಜನ್ ಲೋಕೇಶ್ ಕನ್ನಡ ಕಲಾಲೋಕದಲ್ಲಿನ ಒಬ್ಬ ಸ್ಪುರದ್ರೂಪಿ. ಅವರು ಕಿರುತೆರೆಯಲ್ಲಿ ತಮ್ಮ 'ಮಜಾ ಟಾಕೀಸ್' ಕಾರ್ಯಕ್ರಮ ನಿರ್ಮಾಣ ಮತ್ತು ನಿರ್ವಹಣೆಯಿಂದ ಪ್ರಸಿದ್ಧರಾಗಿದ್ದಾರೆ.
ಮಹಾನ್ ಕಲಾವಿದರಾದ ಲೋಕೇಶ್ - ಗಿರಿಜಾ ದಂಪತಿಗಳ ಸುಪುತ್ರರಾದ ಸೃಜನ್ ಲೋಕೇಶ್ 1980ರ ಜೂನ್ 28ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾತ ರಂಗಭೂಮಿಯ ಮಹಾನ್ ಹೆಸರಾದ ಸುಬ್ಬಯ್ಯ ನಾಯ್ಡು. ಸೃಜನ್ ಲೋಕೇಶರ ಸಹೋದರಿ ಪೂಜಾ ಲೋಕೇಶ್ ಅವರೂ ರಂಗಭೂಮಿ ಮತ್ತು ದಕ್ಷಿಣ ಭಾರತೀಯ ಕಿರುತೆರೆಯ ಕಲಾವಿದೆಯಾಗಿದ್ದಾರೆ.
ಸೃಜನ್ ಲೋಕೇಶ್ ಅವರನ್ನು ಕಿರುತೆರೆಯಲ್ಲಿ ಕಂಡಾಗಲೆಲ್ಲ ಇಂತಹ ಭವ್ಯ ರೂಪಿ ಯುವಕನನ್ನು ಕನ್ನಡ ಚಲನಚಿತ್ರರಂಗ ಸರಿಯಾಗಿ ಬಳಸಿಕೊಳ್ಳಲಿಲ್ಲವಲ್ಲ ಅನಿಸುತ್ತದೆ.
ಸೃಜನ್ ಲೋಕೇಶ್ 1990ರಲ್ಲಿ ತಮ್ಮ ತಂದೆ ಲೋಕೇಶ್ ನಿರ್ದೇಶಿಸಿದ ಭುಜಂಗಯ್ಯನ ದಶಾವಾತಾರದಲ್ಲಿ ಬಾಲನಟರಾಗಿದ್ದರು. 1991ರಲ್ಲಿ 'ವೀರಪ್ಪನ್' ಎಂಬ ಚಿತ್ರದಲ್ಲೂ ಬಾಲನಟರಾಗಿದ್ದರು. ಮುಂದೆ 2002ರಲ್ಲಿ 'ನೀಲ ಮೇಘ ಶ್ಯಾಮ' ಎಂಬ ಚಿತ್ರದಲ್ಲಿ ನಟಿಸಿದರು. ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಬರದೆ ಪೊರ್ಕಿ, ನವಗ್ರಹ , ಚಿಂಗಾರಿ , ಎದೆಗಾರಿಕೆ , ಅಂದರ್ ಬಾಹರ್ , ಸ್ನೇಹಿತರು , ಐಪಿಸಿ ಸೆಕ್ಷನ್ 300 ಮುಂತಾದ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಧಾರಿಯಾದರು.
ಸೃಜನ್ ಲೋಕೇಶ್ 2013ರಲ್ಲಿ ಲೋಕೇಶ್ ಪ್ರೊಡಕ್ಷನ್ಸ್ ಪ್ರಾರಂಭಿಸಿದರು. ಈ ಮೂಲಕ ಚಾಲೆಂಜ್ , ಛೋಟಾ ಚಾಂಪಿಯನ್ಸ್ , ಕಾಸಿಗೆ ಟಾಸು ಮುಂತಾದ ಹಲವು ಕಾರ್ಯಕ್ರಮಗಳನ್ನು ನಿರ್ಮಿಸಿದರು. 2014ರಲ್ಲಿ ಸೃಜನ್ ಲೋಕೇಶ್ 'ಬಿಗ್ ಬಾಸ್ 2’ ಸರಣಿಯ ಸ್ಪರ್ಧಿಯಾಗಿದ್ದರು.
ಸೃಜನ್ ಲೋಕೇಶ್ 2015ರಲ್ಲಿ ಮಜಾ ಟಾಕೀಸ್ ಎಂಬ ಹಾಸ್ಯಪೂರ್ಣ ಶೋ ಅರಂಭಿಸಿದಾಗ ಅದನ್ನು 16 ವಾರಗಳ ಸೀಮಿತ ಅವಧಿಗೆ ಎಂದುಕೊಂಡು ಮಾಡಿದರು. ಅದಕ್ಕೆ ದೊರೆತ ಅಪಾರ ಜನಪ್ರಿಯ ಪ್ರತಿಕ್ರಿಯೆಯಿಂದ
500ರಷ್ಟು ಕಂತುಗಳನ್ನು ಮೀರಿ ಸಾಗಿತು. ಮಜಾ ಟಾಕೀಸನ್ನು ಹಿಂದಿಯ 'ಕಪಿಲ್ ಶರ್ಮಾ ಶೋ'ದಂತೆ ಎಂದು ಹೋಲಿಸುವ ಮಾತಿದೆ. ಆದರೆ ಮಜಾ ಟಾಕೀಸ್ ಉತ್ತಮ ರೀತಿಯ ನಿರ್ವಹಣೆ, ಅಚ್ಚುಕಟ್ಟುತನ, ಉತ್ತಮ ಕಲಾವಿದರು ಮತ್ತು ತಂತ್ರಜ್ಞಾನದ ಬಳಕೆಯಿಂದ ಕನ್ನಡಿಗರಿಗೆ ಇಷ್ಟವಾಯಿತು. ಸೃಜನ್ ಲೋಕೇಶ್ ಈ ಕಾರ್ಯಕ್ರಮದ ಮೂಲಕ ಒಬ್ಬ ಉತ್ಸಾಹಿ, ವರ್ಚಸ್ಸಿನ, ಸುಂದರ ಮುಖದ, ಉತ್ತಮ ನಿರೂಪಕರಾಗಿ ಕನ್ನಡಕ್ಕೆ ದೊರಕಿದರು ಎಂಬುದಂತೂ ನಿಜ.
ಈ ಮಧ್ಯೆ ಸೃಜನ್ ಇನ್ನೊಂದೆರಡು ಧಾರಾವಾಹಿ ನಿರ್ಮಾಣ ಕೆಲಸ ಹಾಗೂ ಕೆಲವೊಂದು ಚಿತ್ರಗಳ ನಟನೆಯಲ್ಲೂ ಕಂಡಿದ್ದರು. ಕಿರುತೆರೆಯಲ್ಲಿನ ಹಲವಾರು ರೂಪಗಳಲ್ಲೂ ಇದ್ದಾರೆ.
ಈ ಸುಂದರ ಸೃಜನಶೀಲ ಸೃಜನ್ ಲೋಕೇಶ್ ಅವರಿಗೆ ಶುಭವಾಗಲಿ.
On the birth day of talented and smart Srujan Lokesh
ಕಾಮೆಂಟ್ಗಳು