ಎನ್.ಎಸ್.ಶಂಕರ್
ಎನ್. ಎಸ್. ಶಂಕರ್ ನಿಧನ
ಪತ್ರಕರ್ತ, ಸಾಹಿತಿ, ಸಿನಿಮಾ ನಿರ್ದೇಶಕ ಎನ್. ಎಸ್. ಶಂಕರ್ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಎನ್. ಎಸ್. ಶಂಕರ್ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸ್ಥಾಪಕರು. ಪ್ರಜಾವಾಣಿ, ಲಂಕೇಶ್ ಪತ್ರಿಕೆಯ ವರದಿಗಾರರಾಗಿಯೂ ಕೆಲಸ ಮಾಡಿದ್ದರು. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿದ್ದರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿತ್ತು. ಶಂಕರ್, ಸಾಂಸ್ಕೃತಿಕ ಚಳವಳಿಗಳು ಮತ್ತು ಬಂಡಾಯ ಸಾಹಿತ್ಯದ ತತ್ವಗಳಿಗೆ ಸದಾ ಧ್ವನಿಯಾಗಿದ್ದರು. ಕಲೆ, ಸಿನಿಮಾ, ರಾಜಕೀಯ ಮತ್ತು ಸಮಾಜದ ವಿವಿಧ ಆಯಾಮಗಳ ಕುರಿತು 20ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳನ್ನು ಬರೆದಿದ್ದ ಅವರ ಹೆಸರಾಂತ ಕೃತಿಗಳಲ್ಲಿ ‘ಅರಸು ಯುಗ', ‘ಚಂಚಲೆ’, ‘ಉಸಾಬರಿ’, 'ಹುಡುಕಾಟ', 'ಚಿತ್ರ ಸಲ್ಲಾಪ', ಅಂಬೇಡ್ಕರ್ ಚಿಂತನೆಗಳ ಕುರಿತ ಕೃತಿಗಳು, ದಲಿತ ಚಳವಳಿ ಕುರಿತ ಚಿಂತನೆಗಳು ಸೇರಿವೆ.
ಎನ್.ಎಸ್. ಶಂಕರ್ ಅವರು ತಮ್ಮ ಚೊಚ್ಚಲ ಸಿನಿಮಾ ‘ಉಲ್ಟಾ ಪಲ್ಟಾ’ (1997) ಮೂಲಕ ಇಡೀ ಸ್ಯಾಂಡಲ್‌ವುಡ್ ತಿರುಗಿ ನೋಡುವಂತೆ ಮಾಡಿದ್ದರು. ವಿಲಿಯಂ ಶೇಕ್ಸ್‌ಪಿಯರ್ ಅವರ ಪ್ರಸಿದ್ಧ ಕೃತಿ ‘ದಿ ಕಾಮಿಡಿ ಆಫ್ ಎರರ್ಸ್’ ಆಧಾರಿತ ಈ ಹಾಸ್ಯ ಪ್ರಧಾನ ಚಿತ್ರ ಕನ್ನಡ ಸಿನೆಮಾ ಇತಿಹಾಸದಲ್ಲಿ ಒಂದು ವಿಶಿಷ್ಟ ಮೈಲಿಗಲ್ಲಾಗಿ ಉಳಿದಿದೆ. ಕಮರ್ಷಿಯಲ್ ಮತ್ತು ಕಲಾತ್ಮಕ ಚಲನಚಿತ್ರಗಳ ನಡುವಿನ ಗೋಡೆಯನ್ನು ಮುರಿದು ಹೊಸ ಮಾದರಿಯ ಚಿತ್ರಗಳಿಗೆ ಇದು ಪ್ರೇರಣೆ ಆಗಿತ್ತು. ತದನಂತರ ಅವರು ‘ಮಣಿ’, ‘ಜೂಟಾಟ', 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್', ‘ರಾಂಗ್ ನಂಬರ್' ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ‘ಈಗ…’ ಎಂಬ ಮೂರು ಸಣ್ಣ ಕಥೆಗಳ ಆಂಥಾಲಜಿ ಸಿನಿಮಾ ಪ್ರೊಡಕ್ಷನ್ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜ್ಯೂರಿ ಮೆಂಬರ್ ಆಗಿಯೂ ಶಂಕರ್ ಸೇವೆ ಸಲ್ಲಿಸಿದ್ದರು. ಶಂಕರ್ ಅವರ ಅಪಾರ ಸಾಧನೆಗಾಗಿ 2024ರಲ್ಲಿ ಕರ್ನಾಟಕ ಸರ್ಕಾರ ಇವರಿಗೆ ಗೌರವಾನ್ವಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
ಅಗಲಿದ ಎನ್. ಎಸ್. ಶಂಕರ್ ಅವರ ಚೇತನಕ್ಕೆ ನಮನ.
Respects to departed soul Journalist, writer and Film Maker N. S. Shankar 🌷🙏🌷

ಕಾಮೆಂಟ್‌ಗಳು