ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಎಸ್. ಗೋಪೀನಾಥ್


 ಎಚ್. ಎಸ್. ಗೋಪೀನಾಥ್


ಎಚ್. ಎಸ್. ಗೋಪೀನಾಥ್ ಆಡಳಿತ ತಜ್ಞರಾಗಿ, ಗ್ರಂಥಕಾರರಾಗಿ, ಪ್ರಾಧ್ಯಾಪಕರಾಗಿ, ಸಾಂಸ್ಕೃತಿಕ ಸಂಘಟಕರಾಗಿ  ಮತ್ತು ಜ್ಯೋತಿಷ್ಯ ಶಾಸ್ತ್ರಜ್ಞರಾಗಿ ಸಾಧನೆ ಮಾಡಿದ್ದಾರೆ.

ಕನ್ನಡ ಸಾಹಿತ್ಯಲೋಕದ ಮಹತ್ವದ ಸಾಹಿತಿಗಳೂ, ಶ್ರೇಷ್ಠ ಪ್ರಕಾಶಕರೂ ಆದ ಪ್ರೊ. ಎಚ್. ಎಂ. ಶಂಕರನಾರಾಣರಾವ್ ಅವರ ಪುತ್ರರಾದ ಎಚ್. ಎಸ್. ಗೋಪಿನಾಥ್ 1943ರ ಜೂನ್ 9ರಂದು ಜನಿಸಿದರು.

ಗೋಪೀನಾಥ್ ಅವರು ಮಂಡ್ಯದ ಪಿ. ಇ. ಎಸ್. ಇಂಜಿನಿಯರಿಂಗ್ ಕಾಲೇಜಿನಿಂದ ಬಿ. ಇ. ಮೆಕಾನಿಕಲ್ ಪದವಿ ಪಡೆದು, ಕೊಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇಂದ ಎಂಬಿಎ ಪದವಿ ಗಳಿಸಿದರು.  ಅವರಿಗೆ ಲಂಡನ್ನಿನ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಡುಕೇಷನ್ನಿನ ಸದಸ್ಯತ್ವ ಗೌರವಗಳು ಸಂದಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್ ಸಂಸ್ಥೆಯ ಮೈಸೂರು ಘಟಕದ ಚೇರ್ಮನ್ನರಾಗಿಯೂ ಅವರ ಸೇವೆ ಸಂದಿದೆ.

ಗೋಪೀನಾಥ್ ಅವರು ಫಿನೊಲೆಕ್ಸ್, ಕಿರ್ಲೋಸ್ಕರ್, ವಿಕ್ರಾಂತ್‍ ಟೈರ್ಸ್ ಮುಂತಾದ ಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ನಂತರ ಜೆಎಸ್‍ಎಸ್ ಸೆಂಟರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.  ನಂತರದಲ್ಲಿ ಹಾಸನದ ಹಾರ್ನಹಳ್ಳಿ ರಾಮಸ್ವಾಮಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಡುಕೇಷನ್ನಿನ ನಿರ್ದೇಶಕರಾಗಿ ಮತ್ತು ಮೈಸೂರಿನ ಎನ್‍ಐಇ, ಎಸ್‍ಜೆಸಿಇ ಸಂಜೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದರು. ಇವರು ಅನೇಕ ವಿಚಾರಗೋಷ್ಠಿಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ  ತಜ್ಞರಾಗಿ ಭಾಗಿಯಾಗಿದ್ದಾರೆ. ಮೆಟೀರಿಯಲ್ ಮ್ಯಾನೇಜ್ಮೆಂಟ್ ಕ್ಷೇತ್ರದ ಶಿಕ್ಷಣ ಸಲಹೆಗಾರರಾಗಿಯೂ ಇವರ ಕೊಡುಗೆ ಸಂದಿದೆ.  ಅನೇಕ ಮಹತ್ವದ ತಾಂತ್ರಿಕ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ.

ಗೋಪಿನಾಥ್ ಅವರ ಮತ್ತೊಂದು ವಿಶಿಷ್ಟತೆ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಗಳಿಸಿರುವ ಪಾಂಡಿತ್ಯ ಮತ್ತು ಗ್ರಂಥರಚನಾ ಕಾರ್ಯ. ಅವರು ನಾಲ್ಕು ದಶಕಗಳ ಕಾಲ ಜ್ಯೋತಿಷ್ಯ ಅಧ್ಯಯನ ಮಾಡಿ ಹದಿಮೂರು ಗ್ರಂಥಗಳನ್ನು ರಚಿಸಿದ್ದಾರೆ. ಗೋಪಿನಾಥರು ರಚಿಸಿರುವ 'ಧನಯೋಗ ನನಗಿದೆಯೇ' ಕೃತಿ ತಳುಕಿನ ವೆಂಕಣ್ಣಯ್ಯನವರ ಸ್ಮಾರಕ ಗ್ರಂಥಮಾಲೆಯಿಂದ ಹೊರಹೊಮ್ಮಿದೆ.  ಇವರ 'ಸಮಗ್ರ ಜ್ಯೋತಿಷ್ಯಗ್ರಂಥ’ ಮತ್ತು ಅನೇಕ ಕೃತಿಗಳು ಸಪ್ನಾ ಬುಕ್ ಹೌಸ್ ಅವರಿಂದ ಪ್ರಕಟಗೊಂಡಿವೆ.  ಅವರ ಬರಲಿರುವ  ಕೃತಿಗಳಲ್ಲಿ ಮುನ್ನೂರು ಯೋಗಗಳು, ನವಗ್ರಹಗಳು, ಬ್ಯುಸಿನೆಸ್ ಸ್ಟಾಟಿಸ್ಟಿಕ್ಸ್, ಮ್ಯಾನೇಜ್ಮೆಂಟ್ ಇನ್ಫರ್ಮೇಷನ್ ಸಿಸ್ಟಮ್, ಪ್ರೊಡಕ್ಷನ್ ಮ್ಯಾನೇಜ್ಮೆಂಟ್ ಮುಂತಾದವು ಸೇರಿವೆ.

ಗೋಪಿನಾಥ್ ಅವರು ಮೈಸೂರಿನ ಶ್ರೀ ತ್ಯಾಗರಾಜ ಸಂಗೀತ ಸಭಾದ ಸಂಸ್ಥಾಪಕ ಅಧ್ಯಕ್ಷರಾಗಿ ಒಂದು ದಶಕಗಳ ಕಾಲ ಸಭಾದ ಮೂಲಕ ಸಂಗೀತ ಕಚೇರಿಗಳನ್ನು ವ್ಯವಸ್ಥಾಪನೆ ಮಾಡಿದವರಾಗಿದ್ದಾರೆ.

ಗೋಪಿನಾಥ್ ಅವರಿಗೆ 1985ರಲ್ಲಿ ದಕ್ಷಿಣ ಭಾರತದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್ ಸಂಸ್ಥೆಯಿಂದ,  ಅಂದಿನ ಮಂತ್ರಿಗಳಾಗಿದ್ದ ಜೆ. ಎಚ್. ಪಟೇಲ್ ಅವರ ಕೈಯಿಂದ ಬೆಸ್ಟ್ ಚೇರ್ಮನ್ ಅವಾರ್ಡ್ ಸಂದಿತು. ತ್ಯಾಗರಾಜ ಸಂಗೀತ ಸಭಾದಿಂದ 25ನೇ ವರ್ಷಾಚರಣೆಯ ಕಲಾದೀಪ್ತಿ ಪ್ರಶಸ್ತಿ, ಸಪ್ನಾ ಬುಕ್ ಹೌಸ್ ರಾಜ್ಯೋತ್ಸವ ಪ್ರಶಸ್ತಿ, ಹೊಯ್ಸಳ ಕನ್ನಡ ಸಂಘದಿಂದ ಹೊಯ್ಸಳ ಪ್ರಶಸ್ತಿ, ಜ್ಯೋತಿಷ್ಯಪ್ರವೀಣ ಬಿರುದು, ಕರ್ನಾಟಕ ಜ್ಯೋತಿಷ್ಯ ರತ್ನ ಬಿರುದು, ಹಾರ್ನಹಳ್ಳಿ ರಾಮಸ್ವಾಮಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಡುಕೇಷನ್ ಸಂಸ್ಥೆಯ ಸನ್ಮಾನ ಮುಂತಾದ ಅನೇಕ ಗೌರವಗಳು ಸಂದಿವೆ.

ಹಿರಿಯ ತಜ್ಞರಾದ ಎಚ್. ಎಸ್. ಗೋಪೀನಾಥ್ ಅವರಿಗೆ ಜನ್ಮದಿನದ ಶುಭಹಾರೈಕೆಗಳು.

Happy birthday Gopinath Harihar Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ