ಮಣಿರತ್ನಂ
ಮಣಿರತ್ನಂ
ಮಣಿರತ್ನಂ ಉತ್ತಮ ಗುಣಮಟ್ಟದ ಚಿತ್ರಗಳಿಗೆ ಹೆಸರಾದವರು.
ಮಣಿರತ್ನಂ 1956ರ ಜೂನ್ 2ರಂದು ಜನಿಸಿದರು.
ಕಾಮರ್ಸ್ ಪದವಿ, ಎಂ.ಬಿ.ಎ ಪಡೆದು ವೃತ್ತಿಪರ ಸಲಹೆಗಾರರಾಗಿದ್ದ ಮಣಿ, ಪ್ರಸಿದ್ಧ ಚಿತ್ರ ನಿರ್ಮಾಪಕರಾಗಿದ್ದ ಅವರ ಅಣ್ಣ ಜಿ. ವೆಂಕಟೇಶ್ವರನ್ ಪ್ರಭಾವದಿಂದ ಚಿತ್ರರಂಗಕ್ಕೆ ಬಂದರು.
ಮಣಿರತ್ನಂ ಮೊದಲು ಬಂದದ್ದು ಕನ್ನಡ ಚಿತ್ರರಂಗಕ್ಕೆ. ಅಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗ, ಸರ್ಕಾರ ಮತ್ತು ಪ್ರೇಕ್ಷಕ ನೀಡುತ್ತಿದ್ದ ಪ್ರೋತ್ಸಾಹ ಅವರನ್ನು ಕನ್ನಡ ಚಿತ್ರ ಮಾಡಲು ಪ್ರೋತ್ಸಾಹಿಸಿರಬೇಕು. ಆ ಚಿತ್ರದ ಛಾಯಾಗ್ರಾಹಕರಾಗಿ ಕನ್ನಡದಲ್ಲಿ 'ಕೋಕಿಲಾ' ಚಿತ್ರ ನಿರ್ಮಿಸಿದ್ದ ಬಾಲುಮಹೇಂದ್ರ ಅವರ ಪ್ರಭಾವ ಕೂಡಾ ಇರಲು ಸಾಕು. 1983ರಲ್ಲಿ ತಯಾರಾದ 'ಪಲ್ಲವಿ ಅನುಪಲ್ಲವಿ' ಹೆಸರಿನ ಆ ಚಿತ್ರದಲ್ಲಿ ಮುಂದೆ ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ಧರಾದ ಅನಿಲ್ ಕಪೂರ್ ನಟಿಸಿದ್ದರು. ಆ ಚಿತ್ರ ಯಶಸ್ವಿಯಾಗಿದ್ದರೆ ಬಹುಶಃ ಮಣಿ ಕನ್ನಡಕ್ಕೆ ಮತ್ತಷ್ಟು ಉತ್ತಮ ಕೊಡುಗೆ ಕೊಡುತ್ತಿದ್ದರೇನೋ. ವಿಧಿ ಲಿಖಿತ ಅವರಿಂದ ಮತ್ತಷ್ಟು ವ್ಯಾಪ್ತಿಯ ಬೃಹತ್ ಸಾಧನೆಗಳನ್ನು ಮಾಡಿಸಬೇಕೆಂದು ಇತ್ತು. ಹಾಗಾಗಿ ಅವರು ಭಾರತದ ವಿಶ್ವಮಾನ್ಯತೆ ಪಡೆದ ಶ್ರೇಷ್ಠ ಸಿನಿಮಾ ನಿರ್ಮಾಪಕ ನಿರ್ದೇಶಕರಾದರು. ಅವರ ಪತ್ನಿ ನಮ್ಮೆಲ್ಲರ ಮೆಚ್ಚಿನ ಸುಹಾಸಿನಿ ಈಗಲೂ ಕನ್ನಡದೊಂದಿಗೆ ಸುಮಧುರ ಬಾಂಧವ್ಯದಿಂದ ಮುನ್ನಡೆದಿದ್ದಾರೆ.
ಕನ್ನಡದಿಂದ ಪ್ರಾರಂಭಗೊಂಡು ಬೆಳೆದ ಮಣಿರತ್ನಂ ಹಲವು ಭಾಷೆಗಳಲ್ಲಿ ಚಿತ್ರ ನಿರ್ಮಿಸಿದ್ದರೂ ತಮಿಳು ಮತ್ತು ಹಿಂದಿಗಳಲ್ಲಿ ಅಪೂರ್ವ ಚಿತ್ರ ನೀಡಿದವರು. ತಮಿಳಿನ ಮೌನರಾಗಂ, ನಾಯಗನ್, ಅಂಜಲಿ, ದಳಪತಿ, ಇರುವರ್, ರೋಜಾ, ಅಲೈಪಾಯುದೆ, ಬಾಂಬೆ ಇವೆಲ್ಲಾ ಪ್ರೇಕ್ಷಕ ಮತ್ತು ವಿಮರ್ಶಕರ ಆಸಕ್ತಿಯ ಔನ್ನತ್ಯವನ್ನು ಮುಟ್ಟಿದಂತಹ ಚಿತ್ರಗಳು. ರೋಜಾ, ಬಾಂಬೆ ಚಿತ್ರಗಳು ಹಿಂದಿಯಲ್ಲಿ ಕೂಡಾ ಬೆಳಗುವುದರ ಜೊತೆಗೆ ಹಿಂದಿಯಲ್ಲೇ ವಿಶಿಷ್ಟವಾಗಿ ತಯಾರಾದ ಯುವ, ದಿಲ್ ಸೇ, ಗುರು ಚಿತ್ರಗಳು ಕೂಡಾ ಅವರನ್ನು ಇಡೀ ಭಾರತ ಒಪ್ಪಿ ಗೌರವಿಸುವ ನಿರ್ದೇಶಕನನ್ನಾಗಿ ಮಾಡಿದವು. ಅವರ ನಾಯಗನ್ ಚಿತ್ರ ವಿಶ್ವಪ್ರತಿಷ್ಟಿತ 'ಗಾಡ್ ಫಾದರ್' ಮಟ್ಟದ ಮನೋಜ್ಞ ಚಿತ್ರ. ವಿಶ್ವಶ್ರೇಷ್ಠ ಚಿತ್ರಗಳೆಂದು ಹೆಸರಾಗಿರುವ ನೂರು ಚಿತ್ರಗಳಲ್ಲಿ ಸತ್ಯಜಿತ್ ರೇ ಅವರ 'ಅಪು ಟ್ರಿಯಾಲಾಜಿ', ಗುರುದತ್ ಅವರ 'ಪ್ಯಾಸಾ' ಜೊತೆಗೆ ಮಣಿ ಅವರ 'ನಾಯಗನ್' ಕೂಡಾ ಸ್ಥಾನ ಪಡೆದಿದೆ.
ಮಧ್ಯೆ ಮಣಿರತ್ನಂ ಅವರ ರಾವಣ್, ಕಾದಲ್ ಅಂತಹ ಕೆಲವು ಚಿತ್ರಗಳು ಸೋತರೂ ಇತ್ತೀಚಿನ ವರ್ಷದ ಅವರ ಓ ಕಾದಲ್ ಕಣ್ಮಣಿ, ಚೆಕ್ಕ ಚಿವಂತ ವಾನಮ್, ವಾನಮ್ ಕೊಟ್ಟಾಟುಮ್
ಅಂತಹ ಚಿತ್ರಗಳು ಯಶಸ್ವಿಯಾಗಿವೆ. ಕಳೆದ
ವರ್ಷ ಅವರ ಪುಥಂ ಪುದು ಕಾಲೈ, ಪೊನ್ನಿಯಿನ್ ಸೆಲ್ವನ್ ಬಿಡುಗಡೆಯಾಗಿವೆ.
ಮಣಿರತ್ನಂ ಅವರ ಪ್ರಾರಂಭಿಕ ಚಿತ್ರಗಳಲ್ಲಿ ಇಳಯರಾಜಾ ಅವರ ಸಂಗೀತ ಮೋಡಿ ಹರಿದಿದ್ದರೆ, ಅವರ ರೋಜಾ ಚಿತ್ರಗಳಿಂದ ಪ್ರಾರಂಭಗೊಂಡಂತೆ ಎ. ಆರ್. ರೆಹಮಾನ್ ಇಡೀ ಸಂಗೀತ ವಿಶ್ವಕ್ಕೆ ಮಣಿರತ್ನಂ ನೀಡಿದ ಕಾಣಿಕೆಯಾಗಿದ್ದಾರೆ. ಮಣಿರತ್ನಂ ಚಿತ್ರಗಳಲ್ಲಿನ ದೃಶ್ಯವೈಭವ, ಆಧುನಿಕ ತಂತ್ರ ಕೌಶಲ್ಯ ಕೌತುಕ ಪೂರ್ಣ ಕಥೆ ಮತ್ತು ಕಲಾ ನಿರೂಪಣೆಗಳು ಜನಮಾನಸವನ್ನು ಇನ್ನಿಲ್ಲದಂತೆ ಸೆರೆಹಿಡಿದಿವೆ.
ಮಣಿರತ್ನಂ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲಂಫೇರ್ ಮತ್ತು ಇತರ ಪ್ರಶಸ್ತಿಗಳು, ಹಲವು ರಾಜ್ಯಗಳ ಮತ್ತು ಅಂತರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಪದ್ಮಶ್ರೀ ಪುರಸ್ಕಾರ ಕೂಡಾ ಸಂದಿದೆ.
On the birth day of great Director Mani Ratnam
ಕಾಮೆಂಟ್‌ಗಳು