ಭಾರತಿ ಹೆಗಡೆ
ಭಾರತಿ ಹೆಗಡೆ
ಭಾರತಿ ಹೆಗಡೆ ಪತ್ರಕರ್ತೆಯಾಗಿ, ಬರಹಗಾರ್ತಿಯಾಗಿ, ವಾಗ್ಮಿಯಾಗಿ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಮಣ್ಣಿನ ಗೆಳತಿಯಾಗಿ, ಜೊತೆಗೆ ನಮ್ಮೆಲ್ಲರನ್ನೂ ಅಕ್ಕರೆಯಿಂದ ಕಾಣುವ ಅಪೂರ್ವ ಹೃದಯವುಳ್ಳವರಾಗಿ ಎಲ್ಲೆಡೆ ಸುಪರಿಚಿತರು.
ಜೂನ್ 11, ಭಾರತಿ ಹೆಗಡೆ ಅವರ ಜನ್ಮದಿನ. ಅವರ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಶಾಲೆಯಲ್ಲಿ ಓದುತ್ತಿರುವ ದಿನಗಳಲ್ಲೇ ತಂದೆಯವರು ನಿಧನರಾದ ಸಂದರ್ಭದಲ್ಲಿ ಹುಡುಗಿಗೆ ಮದುವೆ ಮಾಡಿಬಿಡಬೇಕೆಂದು ನೆಂಟರು ಸುತ್ತಮುತ್ತಲಿನವರೆಲ್ಲ ಒತ್ತಾಯ ತಂದರೂ, ಮಗಳಲ್ಲಿದ್ದ ಓದುವ ಹಂಬಲವನ್ನು ಮನಗಂಡ ತಾಯಿ ಅದಕ್ಕೆ ಒತ್ತಾಸೆಯಾಗಿ ನಿಂತರು. ಭಾರತಿಯವರು ಅಲ್ಲಿಂದ ಕಷ್ಟದ ಹಾದಿಯಲ್ಲೇ ತಡೆತಡೆದು ಪದವಿಯನ್ನು ಮುಗಿಸಿಕೊಂಡರು. ಫೀಸ್ ಕಟ್ಟುವಾಗಲೆಲ್ಲ ಕಷ್ಟವಾದರೂ ಅಮ್ಮ ಹೇಗೋ ಹೊಂದಿಸಿಕೊಡುತ್ತಿದ್ದರು. ವಿದ್ಯುತ್ತೇ ಇಲ್ಲದ ಮನೆಯಲ್ಲಿ ಚಿಮಣಿ ದೀಪದಲ್ಲೇ ಓದಿದರು. ಏನಾದರೂ ಮಾಡಬೇಕೆಂಬ ಛಲ ಇತ್ತು. ಭಾರತಿ ಹೈಸ್ಕೂಲು ಮತ್ತು ಕಾಲೇಜಿನ ದಿನಗಳಲ್ಲಿ ಚರ್ಚಾಪಟುವಾಗಿದ್ದರು. ರಾಜ್ಯಮಟ್ಟದಲ್ಲೆಲ್ಲ ಬಹುಮಾನಗಳನ್ನು ಪಡೆದಿದ್ದರು. ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಕವನ ಬರೆಯುತ್ತಿದ್ದರು. ಸಾಹಿತ್ಯ, ಯಕ್ಷಗಾನ, ನಾಟಕ ಎಲ್ಲವೂ ಇವರ ಇಷ್ಟದ ವಿಷಯಗಳು.
ಡಿಗ್ರಿಯ ನಂತರ ಭಾರತಿ ಹೆಗಡೆ ಕುಟುಂಬದೊಂದಿಗೆ ಬೆಂಗಳೂರಿಗೆ ಬಂದರು. ವಿವಾಹವಾಯಿತು. ಮಗ ಹುಟ್ಟಿದ. ಮಗನನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದು, ಮನೆಗೆಲಸ ಇಷ್ಟರಲ್ಲೇ ಮುಗಿದು ಹೋಗುತ್ತಿತ್ತು ಜೀವನ. ಇಷ್ಟೇ ಅಲ್ಲ ಈ ಬದುಕು, ಇನ್ನೇನೋ ನಾನು ಮಾಡಬೇಕಿದೆ ಎಂದು ಅವರ ಅಂತರಂಗ ಹೇಳುತ್ತಿತ್ತು. ಪೇಂಟಿಂಗ್ ಕ್ಲಾಸ್‍ಗೆ ಹೋಗಿ ಪೇಂಟಿಂಗ್ ಕಲಿತರು. ಒಂದಷ್ಟು ಗೊಂಬೆಗಳನ್ನು ಮಾಡುವುದನ್ನು ಕಲಿತರು. ಯಾವುದೂ ಖುಷಿಕೊಡಲಿಲ್ಲ. ಇವರಿಗಾಗಿಯೇ ಎಂಬಂತೆ ಭಾರತೀಯ ವಿದ್ಯಾ ಭವನದಲ್ಲಿ 6 ತಿಂಗಳ ಕನ್ನಡ ಪತ್ರಿಕೋದ್ಯಮ ಕೋರ್ಸ್ ಪ್ರಾರಂಭಿಸಿದ್ದರು. ಪತಿಯ ಪ್ರೋತ್ಸಾಹ ಸಹಕಾರ ದೊರೆತು ಕೋರ್ಸ್ ಪೂರೈಸಿದರು. ಅಲ್ಲಿ ಇಲ್ಲಿ ಬರೆಯತೊಡಗಿದರು. ಕೋರ್ಸ್ ಮುಗಿದ ಸ್ವಲ್ಪ ದಿವಸದಲ್ಲಿ ಕನ್ನಡ ಪ್ರಭಕ್ಕೆ ಸೇರಿಕೊಂಡರು. ಪತ್ರಿಕೋದ್ಯಮದಲ್ಲಿ ಅನಿಯಮಿತ ವೇಳೆ ಮತ್ತು ಸದಾ ಜಾಗರೂಕವಾಗಿರಬೇಕಾದ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ಶ್ರದ್ಧೆಯಿಂದ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಾ ಬೆಳೆದರು. ಕನ್ನಡಪ್ರಭ, ಉದಯವಾಣಿ, ಹೊಸದಿಗಂತ ಇಲ್ಲೆಲ್ಲ ಕೆಲಸ ಮಾಡಿದರು. ವಿಜಯವಾಣಿಯ ನ್ಯೂಸ್ ಎಡಿಟರ್ ಆದರು. ಬೇರೆಬೇರೆ ಪತ್ರಿಕೆಗಳಲ್ಲಿ ಹದಿನೈದು ವರ್ಷಗಳ ಕಾಲ ಮಹಿಳಾ ಪುರವಣಿಗಳ ಉಸ್ತುವಾರಿಯನ್ನು ಯಶಸ್ವಿಯಾಗಿ ಹೊತ್ತಿದ್ದರು. ಕೆಲವು ವರ್ಷ ಮಾಧ್ಯಮ ಬಿಟ್ಟು ಸೆಲ್ಕೋ ಫೌಂಡೇಶನ್ ಎಂಬ ಎನ್‍ಜಿಒ ಸಂಸ್ಥೆಯ ಕಾರ್ಯಕ್ರಮ ನಿರ್ವಾಹಕರಾಗಿ ಜವಾಬ್ದಾರಿ ನಿರ್ವಹಿಸಿದರು. ಎರಡು ಬಾರಿ ರಾಜ್ಯ ಸಿನಿಮಾ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿದ್ದರು.
ಅವರೀಗ ಹವ್ಯಾಸಿ ಪತ್ರಕರ್ತೆ ಮತ್ತು ಟಿ ವಿ ಧಾರಾವಾಹಿಗಳಿಗೆ ಚಿತ್ರಕಥೆ ಸಂಭಾಷಣೆ ಬರೆಯುತ್ತಾರೆ.
ಭಾರತಿ ಹೆಗಡೆ ಅವರ ‘ಸೀತಾಳೆ ದಂಡೆಯ ಸದ್ದಿಲ್ಲದ ಕತೆಗಳು’ ಎಂಬ ಕಥಾ ಸಂಕಲನ ಬದುಕಿನ ವಿವಿಧ ಆಯಾಮಗಳನ್ನು ಕಟ್ಟಿಕೊಡುವಂತದ್ದು. ಇಲ್ಲಿನ ಕಥೆಗಳಲ್ಲಿ ಮಲೆನಾಡಿನ ಸುಂದರ ಪರಿಸರ ಮತ್ತು ಹವ್ಯಕ ಸಮಾಜದ ಒಳನೋಟವಿದೆ. ತಿಳಿ ಹಾಸ್ಯ, ಸಂಭಾಷಣೆಯಲ್ಲಿರುವ ಹವ್ಯಕ ಭಾಷೆಯ ಸೊಗಡಿದೆ.
ಭಾರತಿ ಹೆಗಡೆ ಅವರ 'ಮೊದಲ ಪತ್ನಿಯ ದುಗುಡ’ ಕೃತಿ ಚಲನಚಿತ್ರಗಳಲ್ಲಿ ಮಹಿಳೆಯರನ್ನು ನಿಕೃಷ್ಟವಾಗಿ ಬಿಂಬಿಸುವ ಕುರಿತಾದದ್ದು.
ಭಾರತಿ ಹೆಗಡೆ ಅವರ ಮತ್ತೊಂದು ಮಹತ್ವದ ಕೃತಿ 'ಮಣ್ಣಿನ ಗೆಳತಿ'. ಕಾರವಾರ ಜಿಲ್ಲೆಯ ಸಿದ್ದಾಪುರದವರಾದ ಭಾರತಿ ಹೆಗಡೆ, ಅಲ್ಲಿನ ಹಸಿರು, ಅಲ್ಲಿಯ ಕೃಷಿ, ಮಹಿಳೆಯರ ಅಡಕೆ ಕೃಷಿ, ಭತ್ತದ ಗದ್ದೆ ಅವರ ಅವಿರತ ಶ್ರಮಗಳನ್ನು ಮೊದಲಿನಿಂದಲೂ ಕಂಡವರು. ಅವರ ಹಿಂದಿನ ಕತೆಗಳಲ್ಲೂ ಕೃಷಿಕ ಮಹಿಳೆಯರ ಕಷ್ಟಗಳ ಬಗ್ಗೆ ಪ್ರಸ್ತಾಪವಿದೆ. ಈ ಜೀವಿಗಳ ಜೊತೆ ಸೂಕ್ಷ್ಮ ಒಳನೋಟದೊಂದಿಗೆ ಸ್ಪಂದಿಸುವ-ಪ್ರತಿಕ್ರಿಯಿಸುವ ಇಚ್ಛೆ ಭಾರತಿ ಅವರ ಅಂತರಂಗದೊಳಗೆ ಪ್ರಬಲವಾಗಿತ್ತು. ಇದಕ್ಕೆ ಪೂರಕವಾಗಿ, ಮೈಸೂರು ವಿಶ್ವವಿದ್ಯಾಲಯದ ‘ಲೇಖ ಯೋಜನ’ದಿಂದ ಫೆಲೋಷಿಪ್ ಪಡೆದು ಕರ್ನಾಟಕದ ತುಂಬಾ ಸುತ್ತಾಡಿ ರೈತ ಮಹಿಳೆಯರ, ವಿಶೇಷವಾಗಿ ಸಾಧಕಿಯರ ಮಾಹಿತಿ ಪಡೆದು, ಭೇಟಿಯಾಗಿ ಅವರ ವಿಚಾರಗಳು ಮತ್ತು ಸಾಧನಾ ಸಂಕಲ್ಪಗಳನ್ನು ದಾಖಲಿಸಿದರು. ಹೀಗೆ ಮೂಡಿದ ಬರಹಗಳು 'ಮಣ್ಣಿನ ಗೆಳತಿ'ಯಾಗಿ ಓದುಗರೊಂದಿಗೆ ಪ್ರಖ್ಯಾತ ಕೃತಿಯಾಗಿ ಗೆಳತನ ಪಡೆದುಕೊಂಡಿದೆ.
ಭಾರತಿ ಹೆಗಡೆ ಅವರು ಅಪೂರ್ವ ಹೃದಯಿ, ಕಷ್ಟಗಳ ಬದುಕನ್ನು ಸಾಧನೆಯ ಔನ್ನತ್ಯಕ್ಕೆ ಏರಿಸಿಕೊಂಡ ತಮ್ಮ ತಾಯಿ ಮೀನಾಕ್ಷಿ ಭಟ್ಟ ಅವರ ಆತ್ಮಕಥೆಯನ್ನು 'ಹರಿವ ನದಿ' ಎಂಬ ಬರಹದ ಮುಖೇನ ನಿರೂಪಿಸಿದ್ದಾರೆ.
'ಪಂಚಮವೇದ' ವೇದಾ ಬದುಕಿನ ಸಾರ ಎಂಬುದು, ಕೃಷಿ ಕ್ಷೇತ್ರದಲ್ಲಿ ಮನೋಜ್ಞ ಸಾಧನೆ ಮಾಡಿರುವ ವೇದಾ ಮನೋಹರ್ ಅವರ ಬದುಕು ಮತ್ತು ಸಾಧನೆಗಳನ್ನು ಕಟ್ಟಿಕೊಡುವ ವಿಶಿಷ್ಟ ಕೃತಿ.
ಭಾರತಿ ಹೆಗಡೆ ಅವರಿಗೆ 2011ರಲ್ಲಿ ಮಾಧ್ಯಮ ಅಕಾಡಮಿ ಪ್ರಶಸ್ತಿ ಸಂದಿತು. 'ಮಣ್ಣಿನ ಗೆಳತಿ' ಕೃತಿಗೆ ಕೃಷಿ ವಿಶ್ವವಿದ್ಯಾಲಯದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ ಸಂದಿದೆ. ಇವರಿಗೆ ಉತ್ಥಾನ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ದೊರೆತಿದೆ. ಇದಲ್ಲದೆ ಕೆಯುಡಬ್ಲುಜೆ ಕೃಷಿ ಪ್ರಶಸ್ತಿ ಮತ್ತು ಸಿಡಿಎಲ್ ಸಂಸ್ಥೆಯ ಚರಕ ಪ್ರಶಸ್ತಿಗಳೂ ಸಂದಿವೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ‘ಅಮ್ಮ ಪ್ರಶಸ್ತಿ' ಮತ್ತು ಮಾತೋಶ್ರೀ ರತ್ನಮ್ಮ ಹೆ ಗ್ಗಡೆ ಪ್ರಶಸ್ತಿಗಳು ಭಾರತಿ ಹೆಗಡೆ ಅವರ ‘ಸೀತಾಳೆದಂಡೆಯ ಕಥೆಗಳು’ ಕಥಾ ಸಂಕಲನಕ್ಕೆ ಸಂದಿದೆ.
ಭಾರತಿ ಹೆಗಡೆ ಅವರು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿಯೂ, ಸಂಘದ ನಿರಂತರ ಚಟುವಟಿಕೆಗಳಲ್ಲಿ ಸಕ್ರಿಯರು. ಅನೇಕ ವೇದಿಕೆಗಳಲ್ಲಿ ಉಪನ್ಯಾಸಕರಾಗಿ ಕೇಳುಗರನ್ನು ನಿರಂತರ ಪ್ರೇರಿಸುತ್ತ ಬಂದಿದ್ದಾರೆ.
ಆತ್ಮೀಯರು, ಸಾಧಕರೂ, ಉತ್ತಮ ಬರೆಹಗಾರ್ತಿಯೂ ಆದ ಭಾರತಿ ಹೆಗಡೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಆತ್ಮೀಯರೆಂಬ ಹೆಮ್ಮೆ ನಮ್ಮದು. ನಮಸ್ಕಾರ.
On the birthday of journalist, writer and affectionate Bharathi Hegde Madam 🌷🙏🌷
ಕಾಮೆಂಟ್‌ಗಳು