ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಂದುಮತಿ ಲಮಾಣಿ


 ಇಂದುಮತಿ ಲಮಾಣಿ


ಇಂದು ನಮ್ಮ ಆತ್ಮೀಯರೂ, ಬರಹಗಾರರೂ ಆದ ಇಂದುಮತಿ ಲಮಾಣಿ ಅವರ ಜನ್ಮದಿನ.

ಇಂದುಮತಿ ಲಮಾಣಿ ಅವರು 1959ರ ಜೂನ್ 1ರಂದು ವಿಜಯಪುರ ಜಿಲ್ಲೆಯ ಬರಟಗಿಯ ಮೂರನೇ ತಾಂಡದಲ್ಲಿ ಜನಿಸಿದರು. ಓದಿದ್ದು ಪಿಯುಸಿವರೆಗೆ. 

ಸಾಹಿತ್ಯದಲ್ಲಿ ಅಪಾರ ಆಸಕ್ತಿ ಉಳ್ಳ ಇಂದುಮತಿ ಲಮಾಣಿ ಅವರು ಬರವಣಿಗೆಯಲ್ಲೂ ಅಪಾರ ಸಾಧನೆ ಮಾಡಿದ್ದಾರೆ. ತಮ್ಮ ಬರವಣಿಗೆಯ ಕಾಳಜಿಗಳ ಕುರಿತಾಗಿ ಹೇಳುವ ಲಮಾಣಿ ಅವರು "ಹೆಚ್ಚಾಗಿ ನನ್ನ ವಸ್ತು ವ್ಯಾಪ್ತಿ ಸಾಮಾಜಿಕ ಜೀವನ. ಪ್ರತಿಭೆಯ ಕತ್ತು ಹಿಸುಕುವಂಥಹ ಸನ್ನಿವೇಶ, ವಯಸ್ಸಿನ ಪರಿ ಇಲ್ಲದೆ ಹೆಣ್ಣಿನ ಮೇಲೆ ಘಟಿಸುವಂಥಾ ಅತ್ಯಾಚಾರ, ಅವಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹೀನಾಯ ಬಂಧನ, ನೋವಿನ ಆಕೆಯ ಜೀವನ ಪಥ, ಜಾತಿ ಭೇದ, ಹೆಣ್ಣೆಂಬ ತಾರತಮ್ಯ... ಇವು ಪದೇ ಪದೇ ನನ್ನ ಕಾಡುವ ವಿಷಯ" ಎನ್ನುತ್ತಾರೆ. 

ಇಂದುಮತಿ ಲಮಾಣಿ ಅವರು ಕತೆ, ಕಾದಂಬರಿ, ಕಾವ್ಯ, ನಾಟಕ, ಪ್ರಬಂಧ, ಸಂಪಾದನೆ ಹೀಗೆ ಸುಮಾರು 20 ಕೃತಿಗಳನ್ನು ಪ್ರಕಟಿಸಿದ್ದಾರೆ. ಕೊರಡು ಕೊನರುವುದು ಬರಡು ಹಯನಹುದು, ದಲನ ಇವರ ಕಾದಂಬರಿಗಳು; ನನ್ನ ಸುತ್ತಿನ ಸತ್ಯಗಳು, ತಾಯಿ ಲೋಕ,  ಬಾನ ಚಂದಿರ, ಪ್ರೇಮ ಯೋಗಿ ಕಾವ್ಯ ಸಂಕಲನಗಳು; ಏಕಾದಶ ಕಥಾಸಂಕಲನ; ಭಾವಲೋಕ ಎಂಬುದು ಜನಪದ ಕವನ ಸಂಕಲನ; ಗೋರ್, ಬಂಜಾರ ಸ್ತ್ರೀಯರ ವಸ್ತ್ರಾಭರಣ ಮುಂತಾದವು ಸಮುದಾಯದ ಸಾಂಸ್ಕೃತಿಕ ಕೃತಿಗಳು; ಬಂಜಾರಾ ಭೀಷ್ಮ ಎಲ್.ಆರ್. ನಾಯ್ಕ ಜೀವನ ಚರಿತ್ರೆ; ಎಟುಝಡ್ ಹಾಸ್ಯ ನಾಟಕ; ಕಬ್ಬಡಿ, ಶ್ಯಮಂತಕ ಮಣಿ ಲಲಿತ ಪ್ರಬಂಧಗಳು; ಹೀಗೆ ಅನೇಕ ರೀತಿಯಲ್ಲಿ ಅವರ ಸಾಹಿತ್ಯ ಕೃಷಿ ಸಾಗಿದೆ.

ಇಂದುಮತಿ ಲಮಾಣಿ ಅವರು ಬಿಜಾಪುರದ ಬಂಜಾರ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಬಿಜಾಪುರ ಮಹಿಳಾ ಸೇನಾ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತುರ್ಕಿ, ಈಜಿಪ್ಟ್ ದೇಶಗಳ ಪ್ರವಾಸ ಮಾಡಿದ್ದಾರೆ. ಬಂಜಾರ ನೃತ್ಯ ಸಂಸ್ಕೃತಿ ಉಳಿಸಲು ತಂಡ ಕಟ್ಟಿ‌ ಶ್ರಮಿಸುತ್ತಿದ್ದಾರೆ. ಇವರ ಪುತ್ರರಾದ ಬಸವರಾಜು ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇಂದುಮತಿ ಲಮಾಣಿ ಅವರ 'ನನ್ನ ಆಸೆ' ಕವನ 9ನೇ ತರಗತಿ ಕನ್ನಡ ಪಠ್ಯದಲ್ಲಿ ಸೇರಿದೆ. ಅವರಿಗೆ ಅತ್ತಿಮಬ್ಬೆ, ರಾಣಿ ಚೆನ್ನಮ್ಮ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.‌

ಆತ್ಮೀಯರೂ ಬಹುಮುಖಿ ಸಾಧಕರೂ ಆದ ಇಂದುಮತಿ ಲಮಾಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of writer and social worker Indumati Lamani


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ