ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಜಿ. ಸಣ್ಣಗುಡ್ಡಯ್ಯ


 ಎಚ್. ಜಿ. ಸಣ್ಣಗುಡ್ಡಯ್ಯ


ಜಿ. ಸಣ್ಣಗುಡ್ಡಯ್ಯ ಕನ್ನಡದ ಮಹತ್ವದ ಬರಹಗಾರರಲ್ಲಿ ಒಬ್ಬರೆಂದೆನಿಸಿದವರು.

ಸಣ್ಣಗುಡ್ಡಯ್ಯನವರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಹೊಸಹಳ್ಳಿ ಎಂಬ ಗ್ರಾಮದಲ್ಲಿ 1935ರ ಜೂನ್ 1ರಂದು ಜನಿಸಿದರು. ತಂದೆ ಗೋವಿಂದಪ್ಪ. ತಾಯಿ ತಿಮ್ಮಕ್ಕ. ಕೂಲಿಮಠದಲ್ಲಿ  ಸಣ್ಣಗುಡ್ಡಯ್ಯನವರ ಅಕ್ಷರಾಭ್ಯಾಸ ನಡೆಯಿತು. ಬುಕ್ಕಾಪಟ್ಟಣದಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಓದಿ ನಂತರ ಇಂಟರ್‌ಮಿಡಿಯೇಟ್‌ವರೆಗೆ ತುಮಕೂರಿನಲ್ಲಿ ಓದಿದರು. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು.  ತೀ.ನಂ.ಶ್ರೀ, ಡಿ.ಎಲ್.ಎನ್, ತ.ಸು.ಶಾಮರಾವ್, ಎಸ್.ವಿ. ಪರಮೇಶ್ವರ ಭಟ್ಟ ಮುಂತಾದ ಮಹಾನ್ ಗುರುಗಳ ಮಾರ್ಗದರ್ಶನ ದೊರಕಿತು. 

ಸಣ್ಣಗುಡ್ಡಯ್ಯನವರದು ಬಾಲ್ಯದಿಂದಲೂ ಕಡುಬಡತನದ ಬದುಕು. ಕೂಲಿಕಾರರ ಕಠಿಣ ಜೀವನವನ್ನು ಅವರು ಹತ್ತಿರದಿಂದ ಕಂಡವರು. ವಿದ್ಯಾರ್ಥಿದೆಸೆಯಲ್ಲಿಯೇ ಸಮಾಜವಾದಿ ಪ್ರಗತಿಪರ ಲೇಖಕರ ಗ್ರಂಥಗಳನ್ನು ಓದಿ ಮಾರ್ಕ್ಸ್‌ವಾದದಿಂದ ಪ್ರಭಾವಿತರಾದರು. 

ಸಣ್ಣಗುಡ್ಡಯ್ಯನವರ ಉಪನ್ಯಾಸಕರಾಗಿ ಉದ್ಯೋಗ ಪ್ರಾರಂಭಿಸಿದ್ದು ತುಮಕೂರಿನ ಸರಕಾರಿ ಮೊದಲ ದರ್ಜೆ ಕಾಲೇಜಿನಲ್ಲಿ. ನಂತರ ರೀಡರಾಗಿ, ಪ್ರಾಧ್ಯಾಪಕರಾಗಿ ಬಡ್ತಿಹೊಂದಿದ ನಂತರ ಶಿವಮೊಗ್ಗ, ಕೋಲಾರ ಕಾಲೇಜುಗಳಲ್ಲಿಯೂ ಸೇವೆ ಸಲ್ಲಿಸಿ ಮತ್ತೆ ತುಮಕೂರು ಕಾಲೇಜಿನಲ್ಲಿ ನಿವೃತ್ತರಾದರು. ಅವರು ಅಪಾರ ಶಿಷ್ಯವರ್ಗವನ್ನು ಹೊಂದಿದ್ದ ಪ್ರೀತಿಯ ಮೇಸ್ಟ್ರು.

ಸಣ್ಣಗುಡ್ಡಯ್ಯನವರ ಪ್ರಕಟವಾದ ಮೊದಲ ಕವನ ಸಂಕಲನ 'ಅಭೀಪ್ಸೆ'. ನಂತರ ವಸಂತಪದ - ಕನಸುಗಳು, ಭಿನ್ನ ಮೊದಲಾದ ಕವನ ಸಂಕಲನಗಳನ್ನು  ಪ್ರಕಟಿಸಿದರು. ಅವರಿಗೆ ಹೆಸರು ತಂದುಕೊಟ್ಟದ್ದು ‘ಏಕಾಂತ ಮತ್ತು ಇತರ ಪ್ರಬಂಧಗಳು’ ಮತ್ತು ‘ಹದ್ದು ಮತ್ತು ಇತರ ಪ್ರಬಂಧಗಳು’ ಮುಂತಾದ ಪ್ರಬಂಧ ಸಂಕಲನಗಳು. 1995-96ನೆಯ ಸಾಲಿನ ಬೆಂಗಳೂರು ವಿಶ್ವವಿದ್ಯಾಲಯದ ಪ್ರಥಮ ಪದವಿ. ತರಗತಿಗಳಿಗೆ ಇವರ  ‘ಏಕಾಂತ ಮತ್ತು ಇತರ ಪ್ರಬಂಧಗಳು’ ಪಠ್ಯವಾಗಿ ಆಯ್ಕೆಗೊಂಡಿತ್ತು. 

ಸಣ್ಣಗುಡ್ಡಯ್ಯನವರ ಇತರ ಕೃತಿಗಳಲ್ಲಿ ಭಾಸಮಹಾಕವಿಯ ನಾಟಕದ ರೂಪಾಂತರವಾದ ‘ಪ್ರತಿಮಾ’, ಸಂಪಾದಿತ ಪ್ರೇಮಗೀತೆಗಳ ಸಂಕಲನ ‘ಪಾರಿಜಾತ’, ತಮ್ಮ ನೆಚ್ಚಿನ ಗುರುಗಳ ಜೀವನ, ವ್ಯಕ್ತಿತ್ವ ಮತ್ತು ಕೃತಿ ಸಮೀಕ್ಷೆ ನಡೆಸಿರುವ ‘ತೀ.ನಂ. ಶ್ರೀಕಂಠಯ್ಯ’, ವೈಚಾರಿಕ ಲೇಖನಗಳ ಸಂಗ್ರಹ ‘ವಿಚಾರ ಸಾಹಿತ್ಯ’,  ಅನುವಾದಿತ ಕೃತಿ ‘ರಾಜ್ಯಶಾಸ್ತ್ರ’, ಸಂಪಾದಿತ ಕವನ ಸಂಗ್ರಹ ‘ಕಾವ್ಯಾಂಜಲಿ’, 'ಲೋಕಪ್ರಸಿದ್ಧ ಸಚಿತ್ರ ಮಕ್ಕಳ ಕಥೆಗಳು' ಮುಂತಾದವು ಸೇರಿವೆ.

ಸಣ್ಣಗುಡ್ಡಯ್ಯನವರಿಗೆ 'ಅಭೀಪ್ಸೆ’ ಕವನ ಸಂಕಲನಕ್ಕೆ ಕರ್ನಾಟಕ ರಾಜ್ಯ ಸರಕಾರದ ಪ್ರಶಸ್ತಿ (1962), ‘ಏಕಾಂತ ಮತ್ತು ಇತರ ಪ್ರಬಂಧಗಳು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (1993), ‘ಹದ್ದು ಮತ್ತು ಇತರ ಪ್ರಬಂಧಗಳು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ (1998),  2001ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದವು.

ಸಣ್ಣಗುಡ್ಡಯ್ಯನವರು ಮಾರ್ಕ್ಸ್‌ವಾದದ ಮೇಲಿನ ನಿಷ್ಠೆಯಿಂದ ಮಗಳಿಗೆ ‘ಸಮತಾ’ ಎಂದು ನಾಮಕರಣ ಮಾಡಿದ್ದರೆ ಗುರುಭಕ್ತಿಯ ದ್ಯೋತಕವಾಗಿ ಮಗನಿಗೆ ಇಟ್ಟ ಹೆಸರು ‘ಶ್ರೀತೀರ್ಥ’. 

ಸಣ್ಣಗುಡ್ಡಯ್ಯನವರು ಆದರ್ಶಪ್ರಾಯರಾಗಿದ್ದು ತುಮಕೂರಿನ ಸಮುದಾಯ, ವಿಜ್ಞಾನಕೇಂದ್ರ, ಬಂಡಾಯ ಸಾಹಿತ್ಯ ಸಂಘಟನೆ ಮೊದಲಾದ ಸಾಂಸ್ಕೃತಿಕ ಸಂಘಟನೆಗಳ ಕೇಂದ್ರವ್ಯಕ್ತಿಯಾಗಿ ಶ್ರಮಿಸಿದ್ದರು. 

ಸಣ್ಣಗುಡ್ಡಯ್ಯನವರು 2007ರ ಸೆಪ್ಟೆಂಬರ್ 17ರಂದು ಈ ಲೋಕವನ್ನಗಲಿದರು.

On the birth anniversary of Prof. H. G. Sannaguddaiah

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ