ಸಂತೋಷ್ ಹೆಗ್ಡೆ
ಸಂತೋಷ್ ಹೆಗ್ಡೆ
ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿ, ಭಾರತದ ಸಾಲಿಸಿಟರ್ ಜೆನರಲ್ ಹುದ್ದೆಯನ್ನು ನಿರ್ವಹಿಸಿದವರಾಗಿ ಮತ್ತು 2006-2011ರ ಅವಧಿಯಲ್ಲಿ ರಾಜ್ಯದ ಲೋಕಾಯುಕ್ತರಾಗಿ ಹೆಸರಾದವರಾಗಿದ್ದಾರೆ.
ಸಂತೋಷ್ ಹೆಗ್ಡೆಯವರು 1940ರ ಜೂನ್ 16ರಂದು ಉಡುಪಿ ಜಿಲ್ಲೆಯ ನಿಟ್ಟೆ ಎಂಬಲ್ಲಿ ಜನಿಸಿದರು. ತಂದೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಮತ್ತು ಲೋಕಸಭೆಯ ಸ್ಪೀಕರ್ ಆಗಿ ಹೆಸರಾಗಿದ್ದ ಜಸ್ಟಿಸ್ ಕೆ. ಎಸ್. ಹೆಗ್ಡೆ. ತಾಯಿ ಮೀನಾಕ್ಷಿ. ಪ್ರಾರಂಭಿಕ ಶಿಕ್ಷಣವನ್ನು ಮಂಗಳೂರು ಮತ್ತು ಚೆನ್ನೆಗಳಲ್ಲಿ ನಡೆಸಿದ ಸಂತೋಷ್ ಹೆಗ್ಡೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ಓದಿ, ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್‍ಸಿ ಪದವಿ ಪಡೆದರು. ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಿಂದ 1965ರಲ್ಲಿ ಕಾನೂನು ಪದವಿ ಪಡೆದರು.
ಸಂತೋಷ್ ಹೆಗ್ಡೆ ವೃತ್ತಿ ತರಬೇತಿಯ ನಂತರ, 1966ರ ಜನವರಿಯಲ್ಲಿ ವಕೀಲರಾಗಿ ದಾಖಲಾದರು. 1984ರಲ್ಲಿ ಅವರು ಹಿರಿಯ ವಕೀಲರಾಗಿ ಪರಿಗಣಿತರಾದರು. 1984ರಲ್ಲಿ ಕರ್ನಾಟಕ ವಲಯದ ಅಡ್ವೊಕೇಟ್ ಜೆನರಲ್ ಆಗಿ ನೇಮಕಗೊಂಡು 1988ರ ವರೆಗೂ ಆ ಸ್ಥಾನದಲ್ಲಿದ್ದರು.
ಸಂತೋಷ್ ಹೆಗ್ಡೆ 1989-1990 ಅವಧಿಯಲ್ಲಿ ದೇಶದ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದರು. 1998ರಲ್ಲಿ ದೇಶದ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು. ಸಂತೋಷ್ ಹೆಗ್ಡೆಯವರು 1999ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಓರ್ವ ನ್ಯಾಯಾಧೀಶರಾಗಿ ನೇಮಿಸಲ್ಪಟ್ಟು, 2005ರಲ್ಲಿ ನ್ಯಾಯಾಧೀಶರಾಗಿ ನಿವೃತ್ತರಾದರು. ಅಲ್ಪಕಾಲ ಟೆಲ್ಕಾಮ್ ಡಿಸ್ಪ್ಯೂಟ್ ಸೆಟಲ್ಮೆಂಟ್ ಅಪಾಲೇಟ್ ಟ್ರಿಬ್ಯೂನಲ್ ಅಲ್ಲಿ ಕೆಲಸ ನಿರ್ವಹಿಸಿದರು. 2006ರಿಂದ 2011ರ ವರೆಗೆ ಕರ್ನಾಟಕದ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದರು. ಗಣಿಹಗರಣದ ಕುರಿತಾಗಿ ಅವರು ಮಾಡಿದ ವರದಿಗಳು ರಾಜಕೀಯದಲ್ಲಿ ಅನೇಕ ಕಂಪನಗಳನ್ನು ಸೃಷ್ಟಿಸಿತು.
ಅಣ್ಣಾ ಹಜಾರೆ ಅವರ ಭ್ರಷ್ಟಾಚರ ವಿರೋಧಿ ಆಂದೋಲನದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದ ಸಂತೋಷ್ ಹೆಗ್ಡೆ, ಆ ಆಂದೋಲನ ರಾಜಕೀಯಕ್ಕೆ ಕಾಲಿಟ್ಟಾಗ ಅದರಿಂದ ಹೊರಬಂದರು.
ಸಂತೋಷ್ ಹೆಗ್ಡೆ ಅವರಿಗೆ 2005ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಗೌರವ ನೀಡಿತು.
On the birthday of Justice N. Santhosh Hegde
ಕಾಮೆಂಟ್‌ಗಳು