ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸರೋಜಾ ನಟರಾಜನ್


 ಸರೋಜಾ ನಟರಾಜನ್


ವಿದುಷಿ ಸರೋಜಾ ನಟರಾಜನ್ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿದ್ದವರು. 

ಸರೋಜಾ ಅವರು 1943ರ ಜೂನ್ 27ರಂದು ಮುಂಬೈನಲ್ಲಿ ಜನಿಸಿದರು. ತಂದೆ ಎಂ.ಆರ್‌. ಅನಂತ್. ತಾಯಿ ಜ್ಞಾನಂಬಾಳ್. 

ಸರೋಜಾ ಅವರಿಗೆ  3ನೇ ವಯಸ್ಸಿನಿಂದಲೇ ಸಂಗೀತ ಪಾಠ ಆರಂಭಗೊಂಡಿತು. ಏಳನೆಯ ವಯಸ್ಸಿಗೆ ವೇದಿಕೆ ಏರಿ ಸಂಗೀತ ಕಾರ್ಯಕ್ರಮ ನಡೆಸಿದರು. ಮನೆಯಲ್ಲಿ ಸದಾ ಸಂಗೀತದ ವಾತಾವರಣವಿತ್ತು. ತಾಯಿಯಿಂದ ಮಧುರ ಕಂಠ ದೊರೆಯಿತು. ಚಿಕ್ಕಪ್ಪ ಮತ್ತೂರು ಎಂ.ಆರ್‌. ಶಂಕರಮೂರ್ತಿಯವರಿಂದ ಸಂಗೀತ ಶಿಕ್ಷಣ ನಡೆಯಿತು. ನಂತರ ಅಯ್ಯಲೂರು ಕೃಷ್ಣನ್, ಅರಿಯಾಕುಡಿ ರಾಮಾನುಜ ಅಯ್ಯಂಗಾರ್‌, ಮಧುರೈ ಕೃಷ್ಣನ್, ಕಾಕಿನಾಡದ ಮುನಿಕಂಠಿ ವೆಂಕಟರಾವ್ ಮುಂತಾದವರಲ್ಲಿ ಕರ್ನಾಟಕ ಸಂಗೀತದ ಉನ್ನತ ಶಿಕ್ಷಣ ಗಳಿಸಿದರು. ಹಿಂದೂಸ್ತಾನಿ ಸಂಗೀತ ಕಲಿತದ್ದು ಹೈದರಾಬಾದಿನ ಅಂಬೆದಾಸ ಆಪ್ಟೆಯವರಿಂದ. 

ಸರೋಜಾ ನಟರಾಜನ್ ಅವರು ಕರ್ನಾಟಕ, ಹಿಂದೂಸ್ತಾನಿ ಸಂಗೀತದ ಜೊತೆ ಸಂಸ್ಕೃತ ಶ್ಲೋಕಗಳ ಗಾಯನ, ಹಿಂದಿ ಭಜನ್ಸ್, ಪಂಜಾಬಿ ಸಭತ್, ಮರಾಠಿ ಅಭಂಗ್, ತೆಲುಗು, ತಮಿಳು, ಕನ್ನಡ ದೇವರನಾಮಗಳು, ಸುಗಮ ಸಂಗೀತ, ಭಾವಗೀತೆ ಹೀಗೆ ಹಲವಾರು ಪ್ರಕಾರಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಹಲವಾರು ಭರತನಾಟ್ಯ, ಕಥಕ್, ಕೂಚಿಪುಡಿ ನೃತ್ಯಗಳಿಗೆ ಹಿನ್ನೆಲೆ ಸಂಗೀತ ನೀಡುತ್ತಿದ್ದರು. ಹಲವಾರು ರೂಪಕಗಳಿಗೂ ಸಂಗೀತ ನಿರ್ದೇಶಿಸಿದರು. ಆಕಾಶವಾಣಿಯ ಹಲವಾರು ಕೇಂದ್ರಗಳಿಂದ ಇವರ ಸಂಗೀತ ಕಾರ್ಯಕ್ರಮ ಭಿತ್ತರಗೊಂಡಿತ್ತು. ಬಿ.ಬಿ.ಸಿ.ಯಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಪ್ರಥಮ ಕನ್ನಡತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ಯು.ಕೆ., ಜರ್ಮನಿ, ಫಿನ್ಲೆಂಡ್, ಫ್ರಾನ್ಸ್, ಸ್ವಿಜರ್‌‌ಲ್ಯಾಂಡ್, ನೆದರ್‌ಲ್ಯಾಂಡ್ಸ್‌ ಮುಂತಾದ ದೇಶಗಳಲ್ಲಿಯೂ ಸಂಗೀತ ಕಾರ್ಯಕ್ರಮ ನಡೆಸಿದರು. ಅವರ ಭಾಷಣ ಮತ್ತು ಪ್ರಾತ್ಯಕ್ಷಿಕೆಗಳು ಪ್ರಸಿದ್ಧಿ ಗಳಿಸಿದ್ದವು. 1998ರಲ್ಲಿ ವೇಲ್ಸ್‌ನ ಕಾರ್ಡಿಫ್‌ಗೆ ಆಹ್ವಾನಿತರಾಗಿ ಬ್ಯಾಲೆಗಾಗಿ ರಾಗ ಸಂಯೋಜನೆ, ವಾದ್ಯ ಸಂಯೋಜನೆ, ಹಾಡುಗಾರಿಕೆ ಎಲ್ಲ ಜವಾಬ್ದಾರಿ ಹೊತ್ತು, ಕಾರ್ಯಕ್ರಮ ನಡೆಸಿಕೊಟ್ಟಿದ್ದರು.  

ಸರೋಜಾ ನಟರಾಜನ್ ಅವರಿಗೆ ಋಷಿಕೇಶದ ಡಿವೈನ್ ಲೈಫ್ ಸೊಸೈಟಿಯಿಂದ ಸಂಗೀತ ಕಲಾರತ್ನ. ಕರ್ನಾಟಕ ಸರಕಾರದ ಕಲಾಶ್ರೀ, ಸಂಗೀತ ಶಾರದಾ ಮುಂತಾದ ಅನೇಕ  ಪ್ರಶಸ್ತಿ ಗೌರವಗಳು ಸಂದಿದ್ದವು. 

ಸರೋಜಾ ನಟರಾಜನ್ ಅವರು 2016 ಮೇ 5ರಂದು ಈ ಲೋಕವನ್ನಗಲಿದರು.

On the birth anniversary of musician Saroja Natarajan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ