ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ.ವಿ. ಶಿವಶಂಕರ್



ಸಿ.ವಿ. ಶಿವಶಂಕರ್ 


ಸಿ.ವಿ. ಶಿವಶಂಕರ್ ಕನ್ನಡ ವೃತ್ತಿರಂಗಭೂಮಿ ಮತ್ತು ಚಲನಚಿತ್ರ ರಂಗದ ಹಿರಿಯ ಸಾಹಿತಿಗಳಾಗಿ, ನಟರಾಗಿ ಮತ್ತು ನಿರ್ದೇಶಕ - ನಿರ್ಮಾಪಕರಾಗಿ ಪ್ರಸಿದ್ಧರಾಗಿದ್ದವರು. 

ಶಿವಶಂಕರ್ ಅವರು 1935ರ ಮೇ 3 ರಂದು ಜನಿಸಿದರು. ತಂದೆ  ರಾಮಧ್ಯಾನಿ ವೆಂಕಟಕೃಷ್ಣ ಭಟ್. ತಾಯಿ ವೆಂಕಟಲಕ್ಷ್ಮಮ್ಮ. 

ಬಾಲ್ಯದಲ್ಲಿದ್ದಾಗಲೇ  ರಂಗಭೂಮಿ ಪ್ರವೇಶಿಸಿದ್ದ ಶಿವಶಂಕರ್ ಅವರು ಸುದೀರ್ಘ ಅವಧಿಯವರೆಗೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ನಾಟಕ, ನಟನೆಯತ್ತ ಒಲವಿದ್ದ ಶಿವಶಂಕರ್ ಅವರು, ತಮಗೆ ವಂಶಪಾರಂಪರ್ಯವಾಗಿ ಬಂದಿದ್ದ ಪೌರೋಹಿತ್ಯ, ಜ್ಯೋತಿಷ್ಯ, ಶಾಸ್ತ್ರಾಧ್ಯಯನಗಳನ್ನು  ಮಾತ್ರವಲ್ಲದೆ ಪ್ರೌಢಶಿಕ್ಷಣವನ್ನೂ ಅರ್ಧದಲ್ಲೇ ಬಿಟ್ಟು ಗುಬ್ಬಿವೀರಣ್ಣ  ನಾಟಕಮಂಡಲಿಯನ್ನು ಸೇರಿದರು. ನಂತರ ಸುಬ್ಬಯ್ಯನಾಯ್ಡು ಅವರ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸೇರಿದರು. ಅಲ್ಲಿಂದ ಮುಂದೆ  ಹಲವಾರು ನಾಟಕಗಳನ್ನು ಬರೆದು, ಪ್ರಕಟಿಸಿ, ನಟಿಸಿ ಹೆಸರುವಾಸಿಯಾದರು. 

ಶಿವಶಂಕರ್ ಅವರು 1962ರಲ್ಲಿ 'ರತ್ನಮಂಜರಿ' ಚಲನಚಿತ್ರದೊಂದಿಗೆ ನಟ, ಸಹಾಯಕ ನಿರ್ದೇಶಕ ಮತ್ತು ನಿರ್ಮಾಣ ವ್ಯವಸ್ಥಾಪಕರಾಗಿ ಚಿತ್ರರಂಗದಲ್ಲಿ  ವೃತ್ತಿ ಜೀವನ ಪ್ರಾರಂಭಿಸಿದರು. ‘ಸ್ಕೂಲ್ ಮಾಸ್ಟರ್ ’, ‘ಕೃಷ್ಣ ಗಾರುಡಿ’, ‘ರತ್ಮಮಂಜರಿ’, ‘ರತ್ನಗಿರಿ ರಹಸ್ಯ’ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ  ನಟಿಸಿದ್ದರು. ಹಲವು ನಿರ್ದೇಶಕರ ಜೊತೆ ಸಹಾಯಕರಾಗಿ ಅನುಭವ ಪಡೆದ ಬಳಿಕ ‘ಮನೆ ಕಟ್ಟಿ ನೋಡು’ ಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದರು. ‘ಪದವೀಧರ’, ‘ನಮ್ಮ ಊರು’, ‘ಮಹಡಿಯ ಮನೆ’, ‘ಹೊಯ್ಸಳ', ‘ಮಹಾ ತಪಸ್ವಿ’, ‘ಕನ್ನಡ ಕುವರ’, ‘ವೀರ ಮಹಾದೇವ’ ಮತ್ತಿತರ ಚಿತ್ರಗಳನ್ನು  ನಿರ್ದೇಶಿಸಿದ್ದರು. ಅವರು ಕನ್ನಡ ಚಿತ್ರರಂಗದಲ್ಲಿ ಗೀತರಚನಕಾರರಾಗಿ  ಪ್ರಸಿದ್ಧರಾದರು. ಅವರು ರಚಿಸಿದ 'ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ..’ ಕನ್ನಡ ನಾಡಿನ ಸಾರ್ವಕಾಲಿಕ ಪ್ರಸಿದ್ಧ ಗೀತೆಗಳಲ್ಲಿ ಒಂದೆನಿಸಿದೆ. "ಹೋಗದಿರಿ ಸೋದರರೆ…. ನೀವೆಲ್ಲಿ ಹೋದರೆ ಬರಲೇ ಬೇಕು ನಮ್ಮೂರಿನಲ್ಲೇ ಬದುಕಲೇ ಬೇಕು, ಪರದೇಶದಲ್ಲೂ ಸ್ಥಳ ನಿಮಗಿಲ್ಲ ಹುಟ್ಟಿದ ಊರೆ ನಮಗೆಲ್ಲಾ" ಎಂಬಂತಹ ಭವ್ಯ ಸಾಲುಗಳನ್ನು ಬರೆದರು. "ಬೆಳೆದಿದೆ ನೋಡ ಬೆಂಗಳೂರು ನಗರ" ಅವರ ಮತ್ತೊಂದು ಭವ್ಯ ಗೀತೆ.

ಸಿ.ವಿ. ಶಿವಶಂಕರ್ ಅವರಿಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳೂ ಸೇರಿದಂತೆ  ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು. 

ಸಿ.ವಿ. ಶಿವಶಂಕರ್ ಅವರು 2023ರ ಜೂನ್ 27ರಂದು ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು.  ಅವರ ನೆನಪು, ನಮಗೂ ನಮಗೆಲ್ಲ ಆಪ್ತರಾದ ಅವರ ಕುಟುಂಬದವರಿಗೂ ಅಮರ. 

On the birth anniversary of great lyricist, actor, producer and director C. V. Shivashankar 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ