ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಸಂತ ಕುಷ್ಟಗಿ


 ವಸಂತ ಕುಷ್ಟಗಿ


ಹಿರಿಯ ಸಾಹಿತಿಗಳೂ, ಸಂಘಕರೂ ಅದ ಡಾ. ವಸಂತ ಕುಷ್ಟಗಿ ಅವರು ನಿಧನರಾಗಿದ್ದಾರೆ.

ವಸಂತ ಕುಷ್ಟಗಿಯವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ 1936ರ ಅಕ್ಟೋಬರ್ 10ರಂದು ಜನಿಸಿದರು.  ತಂದೆ ರಾಘವೇಂದ್ರ ಕುಷ್ಟಗಿಯವರು ನಿಜಾಂ ಆಡಳಿತದ ವ್ಯವಸಾಯ ಖಾತೆಯಲ್ಲಿ ಸಹಾಯಕರಾಗಿ ಕೆಲಸ ಮಾಡಿದವರು, ತಾಯಿ ಸುಂದರಾಬಾಯಿ. ಯಾದಗಿರಿಯಲ್ಲಿ ಅವರ ಪ್ರಾರಂಭಿಕ ಶಿಕ್ಷಣ ನಡೆಯಿತು. 

ವಸಂತ ಕುಷ್ಟಗಿ ಅವರು ಶಂಕರರಾವ್‌ ಕುಲಕರ್ಣಿಯವರ ಮೇಲ್ವಿಚಾರಣೆಯಲ್ಲಿ ಉರ್ದು ಭಾಷೆ ಕಲಿತರು. ತಾಯಿ ಸುಂದರಾಬಾಯಿಯವರಿಂದ ಕನ್ನಡ ಭಾಷೆ ಕಲಿತರು.  ತಂದೆಗೆ ಆಗಾಗ್ಗೆ ವರ್ಗವಾಗುತ್ತಿದ್ದುದರಿಂದ ಮಾಧ್ಯಮಿಕ ಶಾಲಾಭ್ಯಾಸ ಶಹಾಪೂರದಲ್ಲಿ ನಡೆಯಿತು. ಗುಲಬರ್ಗಾದ ನೂತನ ವಿದ್ಯಾಲಯದಲ್ಲಿ ಪ್ರೌಢಶಾಲೆಯವರೆಗೆ ಓದಿದರು. ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌ ಓದಿದ ನಂತರ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಎಂ.ಎ. ಪದವಿ ಗಳಿಸಿದರು. 

ವಸಂತ ಕುಷ್ಟಗಿಯವರು ಉಪನ್ಯಾಸಕರಾಗಿ ಸೇರಿದ್ದು ಬೀದರಿನ ಎಚ್‌.ಕೆ.ಇ. ಸೊಸೈಟಿಯ ಟಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ. ನಂತರ ಶಹಾಬಾದಿನ ಎಸ್‌.ಎಸ್‌.ಎಂ. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ರೀಡರಾಗಿ, ಪ್ರಾಧ್ಯಾಪಕರಾಗಿ ಕಲಬುರ್ಗಿಯ ಎಂ.ಎಸ್‌.ಐ. ಕಾಲೇಜು, ಮತ್ತು ಶಹಾಬಾದಿನ ಎಸ್‌.ಎಸ್‌.ಎಂ. ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಲ್ಲದೆ ನಿವೃತ್ತಿಯ ನಂತರವೂ ಸ್ವಾಮಿ ರಾಮಾನಂದ ತೀರ್ಥ ಸಂಶೋಧನ ಸಂಸ್ಥೆಯಲ್ಲಿ ಗೌರವ ನಿರ್ದೇಶಕರಾಗಿ, ಗುಲಬರ್ಗಾ ವಿ.ವಿ. ಸ್ಥಾಪನೆಯಾದಾಗ (1980 – 82) ಉಪಕುಲಪತಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. 

ವಸಂತ ಕುಷ್ಟಗಿಯವರಿಗೆ ತಾಯಿ ಸುಂದರಾಬಾಯಿಯವರು ಅಕ್ಷರಾಭ್ಯಾಸ ಮಾಡಿಸಿದರೆ ತಂದೆ ರಾಘವೇಂದ್ರ ಕುಷ್ಟಗಿಯವರು ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ತಂದೆಯವರು ವರ್ಗವಾಗಿ ಹೋದೆಡೆಯಲ್ಲೆಲ್ಲಾ ಸಾಹಿತಿಗಳ ಸ್ನೇಹ ಸಂಪಾದಿಸಿ ನಡೆಸುತ್ತಿದ್ದ ಸಾಹಿತ್ಯಕೂಟದಲ್ಲಿ ಬೇಂದ್ರೆ, ಆಲೂರು ವೆಂಕಟರಾಯರು, ಗೋಕಾಕ್‌, ಸಿಂಪಿಲಿಂಗಣ್ಣ, ಮುಗಳಿ ಮುಂತಾದವರೆಲ್ಲರೂ ಹಾಜರಿರುತ್ತಿದ್ದರು. ಹಲವಾರು ನಾಟಕಗಳನ್ನು ಬರೆದುದಲ್ಲದೆ ರಂಗನಟರಾಗಿಯೂ ಪಾಲ್ಗೊಳ್ಳುತ್ತಿದ್ದರು.  ಹೀಗೆ ಸಾಹಿತ್ಯದ ವಾತಾವರಣದಲ್ಲೇ ಬೆಳೆದ ವಸಂತ ಕುಷ್ಟಗಿಯವರು ‘ನನ್ನ ಮನೆ ಹಾಲಕೆನೆ’ ಎಂಬ ಕವಿತೆಯನ್ನು ಐದನೆಯ ತರಗತಿಯಲ್ಲಿದ್ದಾಗಲೇ ಬರೆದಿದ್ದರು. ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿದ್ದಾಗ ಕಾಲೇಜಿನ ಪತ್ರಿಕೆಗೂ ಬರೆಯತೊಡಗಿದ್ದರು. 

ಗಳಗನಾಥರಂತಹವರು ತಮ್ಮ ಪುಸ್ತಕಗಳನ್ನು ಗೋಣಿ ಚೀಲದಲ್ಲಿ ಹೊತ್ತು, ಮಾರಾಟಮಾಡಲು ಬರುತ್ತಿದ್ದುದನ್ನು ಕಂಡ ಕುಷ್ಟಗಿಯವರು ಈ ರೀತಿ ನನ್ನ ಪುಸ್ತಕವೂ ಮಾರಾಟವಾಗುವುದು ಯಾವಾಗ ಎಂದು ಯೋಚಿಸುತ್ತಿದ್ದರು.  ಪತ್ರಿಕೆಗಳಿಗೆ ಕವನಗಳನ್ನು ಬರೆಯತೊಡಗಿದ್ದ ಅವರ ಮೊದಲ ಕವನ ಸಂಕಲನ ‘ಭಾವದೀಪ್ತಿ’ ಪ್ರಕಟವಾದದ್ದು 1970ರಲ್ಲಿ. ನಂತರ ಬಂದ ಕವನ ಸಂಕಲನಗಳು ಹೊಸಹೆಜ್ಜೆ, ಗಾಂಧಾರಿಯ ಕರುಣೆ, ದಿಬ್ಬಣದ ಹಾಡು, ಬೆತ್ತಲೆಯ ಬಾನು, ಹಾರಯಿಕೆ ಮುಂತಾದವು ಅವರ ಕವನ ಸಂಕಲನಗಳು. 

ಗದ್ಯಸಾಹಿತ್ಯದಲ್ಲಿಯೂ ಹಲವಾರು ಕೃತಿ ರಚಿಸಿದ ವಸಂತ ಕುಷ್ಟಗಿಯವರು ಬರೆದ ಮೊದಲ ಕೃತಿ ಭಕ್ತಿಗೋಪುರ. ಮುಂಡರಗಿ ಭೀಮರಾಯ, ಮದನಮೋಹನ ಮಾಳವೀಯ, ಕಲಬುರಗಿಯ ಶ್ರೀ ಮಹಾದೇವಪ್ಪ ರಾಂಪುರೆ ಮುಂತಾದವು ವ್ಯಕ್ತಿ ಚಿತ್ರ ಕೃತಿಗಳು; ಜಗನ್ನಾಥ ದಾಸರ ಹಿರಿಮೆ, ದಾಸ ಸಾಹಿತ್ಯದ ಹಾದಿಯಲ್ಲಿ, ವಿಜಯನಗರ ಸಾಮ್ರಾಜ್ಯದ ಪತನಾನಂತರದ ಹರಿದಾಸ ಸಾಹಿತ್ಯ ಮುಂತಾದವು ಅವರ ದಾಸ ಸಾಹಿತ್ಯದ ಕೃತಿಗಳು; ಹೊತ್ತಿಗೆಗಳ ಸೊಗಡು, ಓದಿ ಪುಸ್ತಕ ಓದು, ಅಸಂಗತ ಸ್ವಗತ ಮೊದಲಾದ ಸಾಹಿತ್ಯ ಪರಿಚಯಾತ್ಮಕ ಕೃತಿಗಳೂ ಸೇರಿ ಅನೇಕ ಕೃತಿಗಳನ್ನು ರಚಿಸಿದರು. 

ಕೃತಿ ಸಂಪಾದನೆಯ ಕಾರ್ಯದಲ್ಲಿಯೂ ತೊಡಗಿದ್ದ ಕುಷ್ಟಗಿಯವರು ಕಾವ್ಯಶ್ರೀ, ತೊದಲು, ಅಜ್ಜಿಹೇಳಿದ್ದು ಮೊಮ್ಮಕ್ಕಳು ಬರೆದದ್ದು ಶ್ರೀರಾಘವೇಂದ್ರ ಮಹಿಮೆ, ಕಂದಗಲ್‌ ಕೃತ ಶ್ರೀ ಚಂದ್ರಕಲಾ ಪರಮೇಶ್ವರಿ ನಾಟಕ ಮುಂತಾದ ವಿವಿಧ ಪ್ರಕಾರಗಳ ಕೃತಿಗಳನ್ನು ಸಂಪಾದಿಸಿದ್ದರು. ತಮ್ಮದೇ ಬತೇರೇಶ ಪ್ರಕಾಶನದಡಿಯಲ್ಲಿ ತಮ್ಮದಲ್ಲದೆ, ಇತರ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿದ್ದರು. 

ವಸಂತ ಕುಷ್ಟಗಿಯವರು ಕರ್ನಾಟಕ ಸಾಹಿತ್ಯ ಅಕಾಡಮಿ, ಇತಿಹಾಸ ಅಕಾಡಮಿ, ಹೈದರಾಬಾದಿನ ಶಿಕ್ಷಣ ಸಂಸ್ಥೆ, ಕರ್ನಾಟಕ ವಿ.ವಿ.ದ ಸೆನೆಟ್‌, ಗುಲಬರ್ಗಾ ವಿ.ವಿ.ದ ಸೆನೆಟ್‌, ಕೋಲ್ಕತ್ತಾದ ಏಷಿಯಾಟಿಕ್‌ ಸೊಸೈಟಿ ಆಫ್‌ ಇಂಡಿಯಾ ಮುಂತಾದ ಹಲವಾರು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿ ದುಡಿದಿದ್ದರು.

ವಸಂತ ಕುಷ್ಟಗಿಯವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ವಾರಂಬಳ್ಳಿ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ – ಆನಾಮಿಕ ದತ್ತಿ ಪ್ರಶಸ್ತಿ, ಭಾರತ ರತ್ನ ಸರ್. ಎಂ.ವಿ. ಪ್ರತಿಷ್ಠಾನ ಪ್ರಶಸ್ತಿ, ಉಡುಪಿ ಜಿಲ್ಲೆಯ ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳಲ್ಲದೆ ಬಾದಾಮಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಮೇದಕ್ಕಿಯಲ್ಲಿ ನಡೆದ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷತೆ, ಕಲಬುರ್ಗಿ ಜಿಲ್ಲಾ 9ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ ಗೌರವ ಡಾಕ್ಟರೇಟ್‌ ಮುಂತಾದ ಅನೇಕ ಗೌರವಗಳು ಸಂದವು. ಇವರ ಸಾಹಿತ್ಯ ಮತ್ತು ವ್ಯಕ್ತಿ ಪರಿಚಯದ ‘ಹಾರಯಿಕೆಯ ಕವಿ ಪ್ರೊ. ವಸಂತ ಕುಷ್ಟಗಿ’ ಕೃತಿಯು 2010ರಲ್ಲಿ ಪ್ರಕಟಗೊಂಡಿತು.

ಹಿರಿಯರಾದ ವಸಂತ ಕುಷ್ಟಗಿ ಅವರು 2021ರ ಜೂನ್ 4ರಂದು ತಮ್ಮ 85ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದ್ದಾರೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


Respects to the departed soul Dr. Vasantha Kushtagi 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ