ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಂತಾ ನಾಗರಾಜ್


 ಶಾಂತಾ ನಾಗರಾಜ್


ಶಾಂತಾ ನಾಗರಾಜ್ ಅವರು ಹಿರಿಯ ಲೇಖಕಿ, ಪ್ರಾಧ್ಯಾಪಕಿ, ಸಾಂತ್ವನ ನೀಡುವ ಆಪ್ತ ಸಮಾಲೋಚಕಿ, ಸಲಹೆಗಾರ್ತಿ, ಸಂಘಟನಾ ಚತುರೆ, ರಂಗ ಕಾರ್ಯಕರ್ತೆ, ಕರಕುಶಲ ಚತುರೆ, ಹೀಗೆ ಬಹುಮುಖಿ ಸಾಧಕರು.

ಶಾಂತಾ ನಾಗರಾಜ್ 1943ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಎಸ್.ವಿ. ಹರಿದಾಸ್. ತಾಯಿ ಸೀತಾಬಾಯಿ. ಕನ್ನಡ ಎಂ. ಎ. ಪದವಿ ಪಡೆದ ಶಾಂತಾ ಅವರು ವೃತ್ತಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು. ಸಾಹಿತ್ಯ, ಸಮಾಜಸೇವೆ ಮತ್ತು ಸಾಂಸ್ಕೃತಿಕ ಆಸಕ್ತಿಗಳಲ್ಲದೆ ಕರಕುಶಲ ಕಲೆಯಲ್ಲೂ ಇವರಿಗೆ ಅಪಾರ ಪರಿಣತಿ ಇದೆ.  ನ್ಯಾಷನಲ್ ಇನ್ಸ್ಟಿಟೂಷನ್ ಆಫ್ ವೇದಿಕ್ ಸೈನ್ಸ್ ವತಿಯಿಂದ 'ಮಹಿಳಾ ಹರಿದಾಸರು- ಅಂಬಾಬಾಯಿ ಒಂದು ಅಧ್ಯಯನ'  ಎನ್ನುವ ವಿಷಯದ ಬಗ್ಗೆ ಡಾ. ಅನಂತಪದ್ಮನಾಭರಾವ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿ ಪಿಎಚ್.ಡಿ ಗೌರವ ಗಳಿಸಿದ್ದಾರೆ.

ಶಾಂತಾ ಅವರ ಬರಹಗಳು ಎಲ್ಲ ರೂಪಗಳಲ್ಲಿ ಕನ್ನಡದ ಎಲ್ಲ ಜನಪ್ರಿಯ ನಿಯತಕಾಲಿಕಗಳಲ್ಲಿ ನಿರಂತರವಾಗಿ  ಹರಿದು ಬಂದಿವೆ.  ನುರಿತ ಆಪ್ತ ಸಲಹೆಗಾರರಾದ ಅವರ ನೇರ  ಸಾಂತ್ವನ ಸಮಾಲೋಚನೆಗಳು ಮತ್ತು ಬರಹಗಳು ಜನಪ್ರಿಯವಾಗಿದ್ದು ಅನೇಕರ ಬಾಳಿಗೆ ಬೆಳಕು ತರುತ್ತಿವೆ. 

ಶಾಂತಾ ನಾಗರಾಜ್ ಅವರ ಬರಹಗಳಲ್ಲಿ ನೀವು ಯಶಸ್ವಿ ಗೃಹಿಣಿಯೆ?, ಶಾಲಾ ಮಕ್ಕಳ ಪೋಷಕರಿಗೆ ಕಿವಿಮಾತು, ದುಗುಡ ಕಳೆಯುವ ಮಾರ್ಗ, ಇದು ನಿಮ್ಮ ಕಥೆ ಎಲ್ಲರ ಕಥೆ, ನೆಮ್ಮದಿಗೊಂದು ಕೈಪಿಡಿ ಮುಂತಾದ ಅನೇಕ ವ್ಯಕ್ತಿ ವಿಕಸನ ಚಿಂತನ ಕೃತಿಗಳಿವೆ.  ಇದಲ್ಲದೆ ಕಿತ್ತು ತಿನ್ನುವ ಮುಪ್ಪು ಎಂಬ ಕಾದಂಬರಿ, ಬಾಲಾಪರಾಧಿಗಳು, ಸ್ವಉದ್ಯೋಗ, ತೆರೆದ ಹೆಬ್ಬಾಗಿಲು ಕವನ ಸಂಕಲನ, ಡಾಲರ್ ಹಕ್ಕಿ, ಯಾನ ಸಂಸ್ಕೃತಿ ಕಥಾಸಂಕಲನ, ಪೀಡಾಯಣ ಅಂತಹ ಹಾಸ್ಯ,  ಪಟ್ಟದಗೊಂಬೆಯೂ ಪರದೇಶವೂ ಮುಂತಾದ ವೈವಿಧ್ಯಗಳಿವೆ.  ಎಂ. ವೈ. ಘೋರ್ಪಡೆ ಅವರ ಪ್ರಸಿದ್ಧ ಕೃತಿಗಳನ್ನು ನೆರಳು ಬೆಳಕು, ರೆಕ್ಕೆಯ ಮಿತ್ರರು,"ಅಭಿವೃದ್ಧಿ, ಆಳಿಕೆ, ಮಾನವೀಯ ಮೌಲ್ಯಗಳು", ಪೂರ್ವ ಆಫ್ರಿಕಾದಲ್ಲಿ ಸಫಾರಿ ಮುಂತಾದ ರೂಪಗಳಲ್ಲಿ ಕನ್ನಡಕ್ಕೆ ತಂದಿದ್ದಾರೆ.  ಕಾಗಜ್ಜನ ನ್ಯಾಯ, ನನಗೆ ಇಂಥಾ ಅಮ್ಮ ಬೇಕು ಮುಂತಾದ ಮಕ್ಕಳ ಕೃತಿಗಳಿವೆ.

ಶಾಂತಾ ನಾಗರಾಜ್ ಅವರು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.  'ಅರಳದ ಮೊಗ್ಗುಗಳು' ಎಂಬ ಬಾಲಾಪರಾಧಿಗಳ ಜೀವನದ ಸುತ್ತ ಹೆಣೆದ ದಾರಾವಾಹಿಗೆ ಚಿತ್ರಕತೆ, ಸಂಭಾಷಣೆ ರಚಿಸಿದ್ದಾರೆ. ಕರಿಮಾಯಿ, ಲಕ್ಷಾಪತಿ ರಾಜನ ಕಥೆ ಕತೆ, ವೈಶಾಖ ಮುಂತಾದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. 'ಕನ್ನಡ ಮಹಿಳೆ' ವೆಬ್‌ಸೈಟ್ ಮಾಡಿದ್ದಾರೆ.   ಮಕ್ಕಳಿಗಾಗಿ ಬೇಸಿಗೆ ರಂಗಶಿಬಿರಗಳನ್ನೂ, ಮಕ್ಕಳಿಗಾಗಿ ವಾರಾಂತ್ಯ ರಂಗಶಾಲೆಯನ್ನೂ ಮಾಡಿದ್ದಾರೆ. ಅಚಲ ಮಾಸಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ಕುಹೂ ಕುಹೂ ಎಂಬ ಮಕ್ಕಳ ನಿಯತಕಾಲಿಕೆಯನ್ನೂ ಸಂಪಾದಿಸಿದ್ದಾರೆ.

ಶಾಂತಾ ನಾಗರಾಜ್ ಅವರು ಮಕ್ಕಳಿಗೆ, ಪೋಷಕರಿಗೆ, ಬಾಲಾಪರಾಧಿಗಳಾಗಿ ಕಷ್ಟಕ್ಕೆ ಸಿಲುಕಿದವರಿಗೆ, ನೊಂದವರಿಗೆ ಸಾಂತ್ವನ ನೀಡುತ್ತಾ ಬಂದಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ಅವರ ಪ್ರಶ್ನೋತ್ತರ ರೂಪದ ಸಲಹೆಗಳಿವೆ, ಅಂಕಣಗಳಿವೆ, ಅನುಭವ ಕಥನಗಳಿವೆ, ಮಾರ್ಗದರ್ಶಿ ಬೆಳಕಿದೆ. ಅನೇಕ ಸಂಪಾದನೆಗಳಲ್ಲಿ ವಿಶೇಷ ಬರಹಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಬದುಕನ್ನು ಸಕ್ರಿಯವಾಗಿ ಸದುದ್ದೇಶಕ್ಕಾಗಿ ಬಳಸುವ ಮನೋಧರ್ಮವಿದೆ. 

ಶಾಂತಾ ನಾಗರಾಜ್ ಅವರು ಪ್ರೇಮಾ ಕಾರಂತರಂತಹ ಸಾಧಕರಿಂದ ಗೌರವ ಸ್ವೀಕರಿಸಿದವರು. ಅನೇಕ ಸಂಘಟನೆಗಳು ಇವರನ್ನು ಗೌರವಿಸಿವೆ.   ಇವರ ಕುರಿತು ಕೃತಜ್ಞತೆ ತುಂಬಿಕೊಂಡಿರುವ ಹೃದಯಗಳಂತೂ ಅಪಾರ.

ಹಿರಿಯರೂ ಆತ್ಮೀಯರೂ ಆದ  ಪೂಜ್ಯರಾದ ಶಾಂತಾ ನಾಗರಾಜ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Shantha Nagaraj Amma 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ