ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೆ. ಎಂ. ಎಸ್. ಮಣಿ


 ಜೆ. ಎಂ. ಎಸ್. ಮಣಿ


ಜೆ. ಎಂ. ಎಸ್. ಮಣಿ ಕಲಾವಿದರಾಗಿ ಮತ್ತು ಕಲಾಗುರುವಾಗಿ ನಾಡಿನಾದ್ಯಂತ ಜನಪ್ರಿಯರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ. 

1949ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಮಣಿ, ಬಾಲ್ಯದಿಂದಲೂ ಚಿತ್ರ ರಚನೆಯ ಬಗ್ಗೆ ಒಲವು ಹೊಂದಿದ್ದರು. ಜೆ ಎಂ ಎಸ್ ಮಣಿ ಅವರು ಹಲವಾರು ಶ್ರೇಷ್ಟ ಚಿತ್ರಕಲಾವಿದರನ್ನು ನಾಡಿಗೆ ಕೊಟ್ಟ ಕೆನ್ ಕಲಾ ಶಾಲೆಯ ವಿದ್ಯಾರ್ಥಿ. ಇದೇ ಕಲಾ ಶಾಲೆಯಲ್ಲಿಯೇ ಉಪನ್ಯಾಸಕರಾಗಿಯೂ,  ಕೆಲವು ಕಾಲ ಪ್ರಾಂಶುಪಾಲರಾಗಿಯೂ ಅವರು ಸೇವೆ ಸಲ್ಲಿಸಿದ್ದರು. 

ಜೆ. ಎಂ. ಎಸ್ ಮಣಿ ಅವರು ಕಲಾವಿದರಾಗಿ ತಮ್ಮದೇ ಆದ ವಿಭಿನ್ನ ರೀತಿಯ ಕಲಾ ಜೀವನವನ್ನು ಕಟ್ಟಿಕೊಂಡರು. ಹಲವಾರು ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಕಲಿಸಿ, ಅವರೊಂದಿಗೆ ತಾವೂ  ಹಲವು ರೀತಿಯ ಪ್ರಯೋಗಗಳನ್ನು ಮಾಡಿದರು. ವಿದ್ಯಾರ್ಥಿಗಳೊಂದಿಗೆ ತಾವೂ ವಿದ್ಯಾರ್ಥಿಯಾಗಿ ಬೆರೆತು ಮೇರುಮಟ್ಟದ ಕಲಾಕೃತಿಗಳನ್ನು ರಚಿಸುತ್ತಾ ಬಂದರು. ಮಣಿ ಅವರು ವಿದ್ಯಾರ್ಥಿಗಳೊಂದಿಗೆ ಗೆಳೆಯರಂತೆ ವರ್ತಿಸುತ್ತಾ ದಣಿವಿಲ್ಲದಂತೆ ದಿನವಿಡೀ ಚಿತ್ರ ರಚನೆಯ ಪ್ರಾತ್ಯಕ್ಷಿಕೆಗಳನ್ನು ಕೊಡುತ್ತಿದ್ದದ್ದು ಅವರ ವಿಶೇಷತೆಯಾಗಿತ್ತು. ಗ್ರಾಮೀಣ ಭಾಗದಿಂದ ಬಡತನದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಶ್ರಮ ವಹಿಸಿ ಕಲೆಯನ್ನು ಹೇಳಿಕೊಟ್ಟದ್ದು ಇವರ ವಿಶೇಷ ಗುಣ ಎನ್ನುವುದು ಇವರಲ್ಲಿ ಕಲಿತು ಬೆಳಕಿಗೆ ಬಂದ ಅನೇಕ ವಿದ್ಯಾರ್ಥಿಗಳ ಅಕ್ಕರೆಯ ಮಾತಾಗಿದೆ.

ಎರಡು ಬಾರಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮಣಿ ಅವರು, ದೇಶಾದ್ಯಂತ ತಮ್ಮ ಕಲಾಪ್ರದರ್ಶನ ನಡೆಸಿದ್ದರು. ನ್ಯೂಯಾರ್ಕ್, ಲಂಡನ್, ಹಾಂಕಾಂಗ್ ಗಳಲ್ಲೂ ಅವರ ಚಿತ್ರಕಲಾ ಪ್ರದರ್ಶನಗಳು  ನಡೆದಿದ್ದವು.

"ನನ್ನ ಕಲಾ ಜೀವನದ ಪಯಣದಲ್ಲಿ ಕೆನ್ ಕಲಾಶಾಲೆಯನ್ನೂ ಹಾಗೂ ಕಲಾ ಶಾಲೆಯ ಸಂಸ್ಥಾಪಕರಾದ ಆರ್. ಎಂ. ಹಡಪದ್ ಅವರನ್ನೂ ಎಂದೂ ಮರೆಯಲಾಗದು. ಅವರ ದಾರಿಯಲ್ಲಿ ನಡೆಯುತ್ತಿದ್ದೇನೆ. ಈ ನನ್ನ ಎಲ್ಲಾ ಬೆಳವಣಿಗೆಗೂ ಗುರುಗಳಾದ ಹಡಪದ್ ಮಾಸ್ಟರ್ ಅವರೇ ಕಾರಣ" ಎಂಬುದು  ಮಣಿ ಅವರು ಆಗಾಗ ಹೇಳುತ್ತಿದ್ದ ವಿನಮ್ರ ಮಾತಾಗಿತ್ತು.  ಗುರುಗಳಾದ ಆರ್. ಎಂ. ಹಡಪದ ಅವರ ಹೆಸರಲ್ಲಿ ಕೊಡುವ ಪ್ರಶಸ್ತಿಗೂ ಪಾತ್ರರಾಗಿದ್ದ ಮಣಿ ಅವರು ಮೂಡುಬಿದರೆಯ ಆಳ್ವಾಸ್ 'ಚಿತ್ರ ಸಿರಿ’ಯ ಪ್ರಶಸ್ತಿ, ಎಚ್. ಜಿ. ಕೇಜರಿವಾಲ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೂ ಪಾತ್ರರಾಗಿದ್ದರು. ಈ ಎಲ್ಲಕ್ಕೂ ಮಿಗಿಲಾಗಿ ಕಲೆಯನ್ನು ಕಲಿಯಬಯಸಿದವರಿಗೆಲ್ಲ ಅಕ್ಕರೆಯ ಬೆಂಬಲಿಗರಾಗಿದ್ದರು.

ಜೆ. ಎಂ. ಎಸ್. ಮಣಿ ಅವರು 2021ರ ಜೂನ್ 2ರಂದು ನಿಧನರಾದರು. 

On Remembrance Day of artist and master J. M. S. Mani

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ