ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನುಗ್ಗೇಹಳ್ಳಿ ಪಂಕಜ


 ನುಗ್ಗೇಹಳ್ಳಿ ಪಂಕಜ


ಹಿರಿಯ ಬರಹಗಾರ್ತಿ ನುಗ್ಗೇಹಳ್ಳಿ ಪಂಕಜ ಕನ್ನಡದ ಪ್ರಸಿದ್ಧ ಬರಹಗಾರ್ತಿ.

ನುಗ್ಗೇಹಳ್ಳಿ ಪಂಕಜ 1929ರ ಜೂನ್ 2 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಸ್.ವಿ. ರಾಘವಾಚಾರ್.  ತಾಯಿ ಶಾಂತಮ್ಮ. ಪಂಕಜ ಅವರು ಕಾದಂಬರಿಕಾರರಾದ ಬಿ. ವೆಂಕಟಾಚಾರ್ಯರ ನಾಲ್ಕನೆಯ ತಲೆಮಾರಿನ ಕುಡಿ. ಎಳೆವೆಯಿಂದಲೇ ಮುತ್ತಾತನ ಕಾದಂಬರಿಯಿಂದ ಇವರು ಪ್ರೇರಿತರಾಗಿದ್ದರು.  

ಪಂಕಜ ಅವರು ಗುಡ್ ಶೆಪರ್ಡ್ ಕಾನ್‌ವೆಂಟಿನಲ್ಲಿ ಹೈಸ್ಕೂಲುವರೆಗೆ (ಫೋರ‍್ತ್ ಫಾರಂ) ಓದಿದ್ದು ಇಂಗ್ಲಿಷ್ ಯೂರೋಪಿಯನ್ ಚರಿತ್ರೆ. ಎಚ್.ಎ. ಜೋನ್ಸ್, ಆಸ್ಕರ್‌ವೈಲ್ಡ್, ಪಿನೇರೋ ಇವರೆಲ್ಲರ ಸಾಹಿತ್ಯ ಇವರನ್ನು ಅಪಾರವಾಗಿ ಆವರಿಸಿತ್ತು.  ಆದರೆ ಇಷ್ಟಪಟ್ಟು ಬರೆದಿದ್ದು  ಕನ್ನಡದಲ್ಲಿ. 

ಪಂಕಜ ಅವರು ಬರೆಯಲು ಆಯ್ದುಕೊಳ್ಳುತ್ತಿದ್ದ ಸಮಯ ರಾತ್ರಿಯಂತೆ. ಬೆಳಗಾಗುವುದರೊಳಗೆ ನಾಲ್ಕಾರು ಅಧ್ಯಾಯಗಳನ್ನು ಕಣ್ಣಿಗೆ ಕಟ್ಟುವಂತೆ ಸಿದ್ದಪಡಿಸುವ ಸಾಮರ್ಥ್ಯ ಇವರದ್ದಾಗಿತ್ತು. ಕಾದಂಬರಿ ಪ್ರಾರಂಭಿಸಿ, ಜೈಲಿಗೆ ಹೋಗಿ ಬರುತ್ತೇನೆಂದರೆ ಹಿರಿಯರು ಕಕ್ಕಾಬಿಕ್ಕಿ. ಕಥಾನಾಯಕ ಜೈಲಿನಲ್ಲಿದ್ದಾನೆ…..ಅದಕ್ಕೆ ಎಂದುತ್ತರ ಕೊಡುತ್ತಿದ್ದರು.  ವೇಶ್ಯಾ ವೃತ್ತಿ ಜೀವನದ ಚಿತ್ರಣದ ಕಾದಂಬರಿ ಬರೆಯಲು ವೇಶ್ಯೆಯ ಮನೆಗೆ ಹೋಗಿ ಬರುತ್ತೇನೆಂದಾಗ ಹಿರಿಯರು ಹೌಹಾರಿದರಂತೆ. ಕಡೆಗೆ ಓದಿ ಅನುಭವ ಪಡೆದದ್ದು ‘ಯಾಮಾ’ ಎಂದ ವೈಟ್ ಸ್ಲೇವರಿ ಗ್ರಂಥ. ಬರಲೆ ಇನ್ನು ಯಮುನೆ ಎಂಬ ಢಕಾಯಿತರ ಮೇಲೆ ಕಾದಂಬರಿ ಬರೆದಾಗ, ಢಕಾಯಿತರ ಬಳಿ ಹೋಗಿ ಬರುತ್ತೇನೆನ್ನಲಿಲ್ಲವಲ್ಲಾ! ಮನೆಯವರಿಗೆ ಅದೇ ಸಮಾಧಾನವಾಗಿರಬೇಕು. 

ಪಂಕಜ ಅವರ ಮೊದಲ ಕಾದಂಬರಿ ಕಾವೇರಿಯ ಆರ್ತರವ. ನಂತರ ಹರಿದದ್ದು ಉಷಾನಿದ್ರೆ, ಮಲಯಮಾರುತ, ವೀಣಾ ಓ ವೀಣಾ!, ಬರಲೆ ಇನ್ನು ಯಮುನೆ, ಗಗನ, ದೀಪ, ಗೂಡುಬಿಟ್ಟ ಹಕ್ಕಿ, ತೇಲಿ ಬಂದ ಬಂಧನ, ಸಂಧ್ಯಾ ಬರುವಳೇ?, ತೆರೆ ಸರಿಯಿತು, ಅಲೆಗೆ ಸಿಕ್ಕ ಎಲೆ, ಟುವ್ವಿ ಟುವ್ವಿ ಉಲಿಯಿತು, ಗುಬ್ಬಚ್ಚಿ, ಪ್ರತಿಕಾರದ ಸುಳಿಯಲ್ಲಿ ಮೇಘ ಮುಂತಾದ ಕಾದಂಬರಿಗಳು. ಬರಲೆ ಇನ್ನು ಯಮುನೆ ಕಾದಂಬರಿ  'ಸಿಪಾಯಿ ರಾಮು' ಹೆಸರಿನಿಂದ  ಗಗನ ಮತ್ತು ಮಲಯಮಾರುತ  ಕಾದಂಬರಿಗಳು ಅದೇ ಹೆಸರಿನಿಂದ ಚಲನಚಿತ್ರಗಳಾಗಿವೆ.

ಒಂದು ವಸಂತ ಋತುವಿನಲ್ಲಿ, ಮ್ಯೂಸಿಕ್ ಫಾರ್ ಮೋಹಿನಿ ಪಂಕಜ ಅವರು ಕನ್ನಡಕ್ಕೆ ತಂದ ಅನುವಾದಗಳು.

ನಮಸ್ಕಾರ ಗರುಡಮ್ಮನವರೇ ಏನ್ಸಮಾಚಾರ, ಕೋಣೆಗೊಂದು ಮೂಲೆಗೊಂದು ಮಾತು ಮುಂತಾದವು ಪಂಕಜ ಅವರ ಹಾಸ್ಯ ಕಾದಂಬರಿಗಳು.

ಬಿ. ವೆಂಕಟಾಚಾರ್ಯ, ಪಾದ್ರಿಯ ಕುದುರೆ, ಕಮಲನೆಹರು, ರಾಜಕುಮಾರಿಯ ಸ್ವಯಂವರ, ತೋಳಗಳ ನಡುವೆ ಮುಂತಾದವು ಪಂಕಜ ಅವರು ಮಕ್ಕಳಿಗಾಗಿ ಬರೆದ ಕೃತಿಗಳು. ಸಲೋಮೆ, ಆ ಒಂದು ವಿಷಗಳಿಗೆ, ಅರಳಿಕಟ್ಟೆ ರಾಮಾಚಾರಿಯ ಎರಡನೆಯ ಹೆಂಡತಿ ಅವರ ನಾಟಕಗಳು.

ತರಂಗರಂಗ, ಕಾವೇರಮ್ಮ ಅಮೆರಿಕಾದಲ್ಲಿ, ಮದುವೆ ಗೊತ್ತಾದಾಗ ಮುಂತಾದವು ಪಂಕಜ ಅವರ ಹಾಸ್ಯ ಸಂಕಲನಗಳು. ‘ಇಪ್ಪತ್ತು ವರ್ಷಗಳ ಹಿಂದೆ’, ‘ಅರ್ಧ ಚಂದ್ರ’ ಅವರ ಕಥಾ ಸಂಕಲನಗಳು. 

ನುಗ್ಗೇಹಳ್ಳಿ ಪಂಕಜ ಅವರಿಗೆ ಅತಿಮಬ್ಬೆ  ಪ್ರತಿಷ್ಠಾನ ಪ್ರಶಸ್ತಿ, ಶ್ರೀರಸ ಪ್ರಶಸ್ತಿ, ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಶಸ್ತಿ, ಲಿಪಿ ಪ್ರಾಜ್ಞ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ, International Academy for English Poetry ಸಂಸ್ಥೆಯಿಂದ Excellence in World Poetry Award ಮುಂತಾದ ಅನೇಕ ಗೌರವಗಳು ಸಂದಿವೆ.  

On the birth day writer Nuggehalli Pankaja

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ