ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ. ಸು. ಭಟ್ಟ


 ಪರಮೇಶ್ವರ ಸುಬ್ರಾಯ ಭಟ್ಟರು


ಪ. ಸು. ಭಟ್ಟ ಎಂದು ಖ್ಯಾತರಾದವರು ಪತ್ರಿಕೋದ್ಯಮಿ ಮತ್ತು ಸಾಹಿತಿ ಪರಮೇಶ್ವರ ಸುಬ್ರಾಯ ಭಟ್ಟರು.

ಪ. ಸು. ಭಟ್ಟರು 1931ರ ಜೂನ್ 3 ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನ ಹೊಲನಗದ್ದೆ ಎಂಬಲ್ಲಿ ಜನಿಸಿದರು. ತಂದೆ ಸುಬ್ಬರಾಯಭಟ್ಟರು. ತಾಯಿ ಸರಸ್ವತಿ. 

ಪ.ಸು. ಭಟ್ಟರ ಪ್ರಾಥಮಿಕ ವಿದ್ಯಾಭ್ಯಾಸ ಶಿರಸಿಯಲ್ಲಿಯೂ, ಕಾಲೇಜು ವ್ಯಾಸಂಗ ಶಿವಮೊಗ್ಗೆಯಲ್ಲೂ ನಡೆಯಿತು.  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.  ಅವರಿಗೆ ಎಳೆವೆಯಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ತಾಯಿ ಹೇಳುತ್ತಿದ್ದ ಗೋವಿನ ಹಾಡು, ಕಥೆ, ಯಕ್ಷಗಾನ ಪ್ರಸಂಗಗಳು, ಜನಪದ ಕಥೆಗಳು ಅವರ ಮೇಲೆ ಪ್ರಭಾವ ಬೀರಿದ್ದವು.

ಪ.ಸು. ಭಟ್ಟರಿಗೆ ಇಂಟರ್ಮೀಡಿಯೆಟ್ ಓದುವಾಗ ಹಾ.ಮಾ.ನಾ. ಮತ್ತು ಅನಂತಮೂರ್ತಿ ಇವರುಗಳ ಸಾಹಚರ‍್ಯೆ ಮತ್ತು ಎಸ್.ವಿ. ಪರಮೇಶ್ವರ ಭಟ್ಟರ ಮಾರ್ಗದರ್ಶನ ಲಭಿಸಿತು. ಧಾರವಾಡದಲ್ಲಿದ್ದಾಗ ವಿ.ಕೃ.ಗೋಕಾಕ ಹಾಗೂ ಸ.ಸ.ಮಾಳವಾಡರ ಪ್ರೋತ್ಸಾಹ ದೊರಕಿದುವು.

1948ರಲ್ಲಿ ಭಟ್ಟರು ತಮ್ಮ ಹದಿನೇಳನೆಯ ವಯಸ್ಸಿಗೆ ಉತ್ತರ ಕನ್ನಡ ಜಿಲ್ಲೆಯ ಜನಜೀವನಕ್ಕೆ ಸಂಬಂಧಪಟ್ಟ ಕತೆಗಳನ್ನೊಳಗೊಂಡ ‘ಪಡುವಣ’ ಎಂಬ ಕಥಾ ಸಂಕಲನ ಪ್ರಕಟಿಸಿದರು. ಹೀಗೆ ಪ್ರಾರಂಭಿಸಿದ ಅವರ ಸಾಹಿತ್ಯಕೃಷಿ ಅವರ ಬದುಕಿನುದ್ದಕ್ಕೂ ಬೆಳೆಯಿತು. ಅವರ ಎರಡನೆಯ ಕಥಾ ಸಂಕಲನ 'ಹಕ್ಕಿನ ಹೋರಾಟ'. 1948ರಿಂದ 1969ರ ತನಕ ಬರೆದ ಕಥೆಗಳ ಸಂಕಲನ 'ಅಂಗೇಲಾ'.  

ಪ. ಸು. ಭಟ್ಟರ ಮೊದಲ ಕಾದಂಬರಿ ಜಾರುಬಂಡೆ. ವೇಶ್ಯೆಯೊಬ್ಬಳ ಜೀವನಕ್ಕೆ ಸಂಬಂಧಿಸಿದ ಕಥಾವಸ್ತುವಿನ 'ಸಂಕ್ರಮಣ' 1970ರಲ್ಲಿ ಪ್ರಕಟಗೊಂಡಿತು. ‘ಆತ್ಮಾರ್ಪಣೆ’ ಎಂಬುದು ಭಗತ್‌ಸಿಂಗರ ಆತ್ಮಾರ್ಪಣೆ ವಸ್ತುವುಳ್ಳ ಕಾದಂಬರಿ. 'ಕಪ್ಪು ಚಿರತೆ' ಇವರ ಮರಣದ ಅನಂತರ ಪ್ರಕಟಗೊಂಡ ಕಾದಂಬರಿ.

ಕಿಷನ್‌ಚಂದ್‌ ಅವರ ‘ಏಕ್ ಔರತ್ ಔರ್ ಹಜಾರ್ ದಿವಾನೆ’ ಎಂಬ ಕಾದಂಬರಿಯನ್ನು 'ಸಾವಿರ ಪ್ರಣಯಿಗಳು' ಹೆಸರಿನಲ್ಲಿ ಭಟ್ಟರು  ಕನ್ನಡಕ್ಕೆ ತಂದರು. ಗಾಂಧೀಜಿಯವರನ್ನು ಕುರಿತು ಕನ್ನಡ ಕವಿಗಳು ಬರೆದ ಕವಿತೆಗಳನ್ನು ಸಂಗ್ರಹಿಸಿದ ಕೃತಿ ‘ಅಮರನಾದೈ ತಂದೆ’ ಮತ್ತು ‘ಸೌಭಾಗ್ಯ’ ಇವರು ಸಂಪಾದಿಸಿದ ಕೃತಿಗಳು. ಜಾನ್ ಕೆನಡಿ ಜೀವನ ಚರಿತ್ರೆ, ವೀಣೆ ನುಡಿಯಿತು (ನೀಳ್ಗತೆ), ಮಾತನಾಡಿದ ಗಿಣಿ (ಮಕ್ಕಳ ಕಥೆ), ಸಹಕಾರ ಚಳವಳಿ ಮತ್ತು ಸಹಕಾರೀ ಗೃಹ ನಿರ್ಮಾಣ ಸಂಘಗಳು (ಪ್ರಬಂಧ ಸಂಕಲನ) ಹೀಗೆ ಹಲವಾರು ಕೃತಿಗಳನ್ನು ಭಟ್ಟರು ಪ್ರಕಟಿಸಿದರು.  ಇವುಗಳಲ್ಲದೆ ಕನ್ನಡ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದರು.

ಪ.ಸು. ಭಟ್ಟರಿಗೆ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ. ಜ್ಞಾನಗಂಗೋತ್ರಿ (ಕಿರಿಯರ ವಿಶ್ವಕೋಶದ) ವ್ಯವಸ್ಥಾಪಕ ಸಂಪಾದಕರಾಗಿದ್ದರು. ಶಿರಸಿಯ ಸಮಾಚಾರ ವಾರಪತ್ರಿಕೆ ಸಂಸ್ಥಾಪಕರಾಗಿದ್ದರು. ಸಮನ್ವಯ ಸಾಪ್ತಾಹಿಕವನ್ನು, ಸೌರಭ ಮಾಸ ಪತ್ರಿಕೆಯನ್ನು ಹಲವಾರು ವರ್ಷ ಸ್ವತಂತ್ರವಾಗಿ ನಡೆಸಿದರು. ಕಸ್ತೂರಿ, ಸಂಯುಕ್ತ ಕರ್ನಾಟಕ, ಪ್ರಜಾಪ್ರಭುತ್ವ ಪತ್ರಿಕೆಗಳ ಸಂಪಾದಕರ ಜವಾಬ್ದಾರಿಯನ್ನು  ಹಲವಾರು ವರ್ಷ ನಿರ್ವಹಿಸಿದರು. 

ಪ.ಸು. ಭಟ್ಟರು ಕರ್ನಾಟಕ ಸಾಹಿತ್ಯ ಅಕಾಡಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ‍್ಯಕಾರಿ ಸಮಿತಿ ಸದಸ್ಯರಾಗಿ, ಪಿ.ಯು.ಸಿ. ಮಂಡಳಿ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ವಯಸ್ಕರ ಶಿಕ್ಷಣ ಸಮಿತಿಯ ಉಪಾಧ್ಯಕ್ಷರಾಗಿ, ಬ್ಯಾಂಕುಗಳ ನಿರ್ದೇಶಕರಾಗಿ, ಬ್ಯಾಂಕಿಂಗ್ ಕ್ಷೇತ್ರದ ವಿವಿಧ ಸಹಕಾರಿ ಸಂಸ್ಥೆಗಳ ಕಾರ್ಯದರ್ಶಿಯಾಗಿ ವಿವಿಧ ರೀತಿ ಸಲ್ಲಿಸಿದ್ದರು.  

ಹೀಗೆ ಬಹುಮುಖಿ ಸಾಧಕರಾಗಿದ್ದ ಪ.ಸು. ಭಟ್ಟರು ಚಿತ್ರದುರ್ಗದ ಬಳಿ ಬಸ್ ಅಪಘಾತಕ್ಕೀಡಾಗಿ 1981ರ ಜೂನ್ 24 ರಂದು ಈ ಲೋಕವನ್ನಗಲಿದರು.

On the birth anniversary of Parameshwara Subraya Bhatta

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ