ಇಳಯರಾಜಾ
ಇಳಯರಾಜಾ
ಇಳಯರಾಜಾ ಚಿತ್ರಸಂಗೀತ ಲೋಕದ ಮಹಾನ್ ಸಾಧಕರು. ಅವರು ಗಾಯನ, ಗೀತರಚನೆಗಳಲ್ಲೂ ಪ್ರಸಿದ್ಧರು. ಬಹುಮುಖ ಪ್ರತಿಭಾವಂತರಾದ ಅವರಿಗೆ ಚಿತ್ರರಚನೆಯಲ್ಲೂ ಕೈಚಳಕವಿದೆ.
ಇಳಯರಾಜಾ 1943ರ ಜೂನ್ 2ರಂದು ಜನಿಸಿದರು. ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದೀ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಅವರ ಸಂಗೀತ ಸಂಯೋಜನೆಯಲ್ಲಿ ಅನೇಕ ಸಹಸ್ರ ಸುಮಧುರ ಗೀತೆಗಳು ಹರಿದು ಬಂದಿವೆ.
ಸಿನಿಮಾ ಕ್ಷೇತ್ರ ಹಲವು ಕಾರಣಗಳಿಗೆ ಜನಪ್ರಿಯ. ಕೆಲವೊಂದು ಕಾರಣಗಳಿಗೆ ಗಣ್ಯವೆನಿಸಿದ್ದರೆ ಬಹಳಷ್ಟು ಕಾರಣಗಳಿಗೆ ಅಗಣ್ಯ ಕೂಡಾ. ಆದರೆ, ಕೆಲವೊಂದು ಮಹನೀಯರನ್ನು ಕಂಡಾಗ ಅದಕ್ಕೊಂದು ಗೌರವ ಮೂಡುತ್ತದೆ. ಈ ರೀತಿ ತಾವು ಮಾಡುವ ಕ್ಷೇತ್ರಕ್ಕೆ ಗೌರವ ನೀಡುವ ಮಂದಿ ಹಲವು ಕೋಟಿಗಳಿಗೆ ಒಬ್ಬರು. ಇಳಯರಾಜಾ ಅಂತಹ ಶ್ರೇಷ್ಠರ ಪಂಕ್ತಿಗೆ ಸೇರಿದವರು.
ಇಳಯರಾಜಾ ಈ ಇಳೆಯ ಸಂಗೀತ ಲೋಕದ ರಾಜರೇ ಹೌದು. ಆದರೆ ರಾಜ ಎನ್ನುವುದು ಒಂದು ಸ್ಥಾನಮಾನಕ್ಕೆ ಸೀಮಿತವಾದ ಪದ. ಇಳಯರಾಜಾ ಸಂಗೀತ ಲೋಕದ ಅಂತರಂಗದ ಒಂದು ಎಳೆಗೆ ಸಮೀಪರು. ಅವರ ಪ್ರಸಿದ್ಧ ಚಿತ್ರಗಳನ್ನು ಹೇಳುತ್ತಾ ಹೋದರೂ ಕೂಡಾ ಹಲವು ಪುಟಗಳು ಬೇಕಾದೀತು. ಅವರಿಗೆ ರಾಷ್ಟ್ರ ಪ್ರಶಸ್ತಿ ತಂದ 'ಸಾಗರ ಸಂಗಮಂ' (ತೆಲುಗು), 'ಸಿಂಧು ಭೈರವಿ' (ತಮಿಳು), 'ರುದ್ರವೀಣ' (ತೆಲುಗು), 'ಪಜಾಸ್ಸಿ ರಾಜ' (ಮಲಯಾಳಂ), 'ತರೈ ತಪ್ಪಟ್ಟೈ' (ತಮಿಳು) ಚಿತ್ರಗಳ ಆಚೆಗೆ ಕೂಡಾ ಅವರು ಸಂಗೀತ ಸಂಯೋಜಿಸಿರುವ ಸುಮಾರು ಸಾವಿರ ಚಿತ್ರಗಳ ಹತ್ತು ಸಾವಿರಕ್ಕೂ ಹೆಚ್ಚು ಗೀತೆಗಳಲ್ಲಿ ಸಂಗೀತ ಲೋಕದ ಮುತ್ತುರತ್ನಗಳು ವಿಶಿಷ್ಟವಾಗಿ ಅರಳಿವೆ. ಗೀತ ರಚನಕಾರರಾಗಿ ಮತ್ತು ಗಾಯಕರಾಗಿ ಕೂಡಾ ಅವರು ಅಪ್ರತಿಮರು.
ಕನ್ನಡದಲ್ಲಿ ಕೂಡಾ ಗೀತಾ, ಜನ್ಮಜನ್ಮದ ಅನುಬಂಧ, ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ ಮುಂತಾದ ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು. ಮುಂದೆ ಕೂಡಾ 'ಮೈತ್ರಿ', 'ಒಗ್ಗರಣೆ', 'ದೃಶ್ಯ; ಮುಂತಾದ ಕನ್ನಡ ಚಿತ್ರಗಳಲ್ಲಿ ಅವರ ಸಂಗೀತ ಕಂಡಿದೆ. ಹಿಂದಿಯಲ್ಲೂ 'ಚೀನೀ ಕಂ', 'ಪಾ', 'ಶಮಿತಾಬ್' ಮುಂತಾದ ಹಲವು ಚಿತ್ರಗಳಲ್ಲಿ ಅವರ ಸಂಗೀತ ಗಂಗೆ ಹರಿದಿದೆ. ಇಂಗ್ಲಿಷ್ ಚಿತ್ರಗಳಲ್ಲೂ ಸಂಗೀತ ನಿರ್ದೇಶನ ನೀಡಿದ್ದಾರೆ.
ಪ್ರಾರಂಭದ ದಿನಗಳಲ್ಲಿ ನಮ್ಮ ಬಿ.ಕೆ ಸುಮಿತ್ರ ಅವರ ಗಾನಗೊಷ್ಟಿಗಳಲ್ಲಿ ವಾದ್ಯಗಾರರಾಗಿ, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಅವರ ಶಿಷ್ಯರಾಗಿ ಬೆಳೆದ ಇಳಯರಾಜಾ, ಇಂದು ಚಲನಚಿತ್ರರಂಗದ ಮೇರು ಪರ್ವತವೇ ಆಗಿದ್ದಾರೆ. ಸಂಗೀತದ ಮೂಲಕ ಆರೋಗ್ಯ ಉತ್ತಮಗೊಳಿಸುವ ಕೇಂದ್ರಗಳನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲು ಮುಂದಾಗಿದ್ದಾರೆ.
ಇಳಯರಾಜಾ ಅವರಿಗೆ ಬಂದಿರುವ ಪದ್ಮಭೂಷಣ, ಸಂಗೀತ ನಾಟಕ ಅಕಾಡೆಮಿ ಗೌರವಗಳನ್ನೂ ಒಳಗೊಂಡಂತೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ವಿವಿಧ ಪ್ರಾಂತೀಯ ಪುರಸ್ಕಾರ ಸಮ್ಮಾನಗಳು ಅಸಂಖ್ಯಾತ. ಅವರು ಅವೆಲ್ಲವನ್ನೂ ಮೀರಿದ ಕಲಾಸಾಧಕ ಎಂಬುದು ಇಡೀ ಲೋಕವೇ ಒಪ್ಪುವ ಮಾತು.
On the birth day of great musician Illayaraja
ಕಾಮೆಂಟ್‌ಗಳು