ಜಿಎನ್‍ಬಿ
ಜಿ. ಎನ್. ಬಾಲಸುಬ್ರಹ್ಮಣ್ಯಮ್
ಜಿ. ಎನ್. ಬಾಲಸುಬ್ರಹ್ಮಣ್ಯಮ್ ಕರ್ನಾಟಕ ಸಂಗೀತ ವಿದ್ವಾಂಸರಾಗಿ, ವಾಗ್ಗೇಯಕಾರರಾಗಿ ನವಶೈಲಿಯ ಪ್ರವರ್ತಕರೆನಿಸಿದ್ದಾರೆ. ಅವರು ಜಿಎನ್‍ಬಿ ಎಂದೇ ಪ್ರಸಿದ್ಧರು.
ಜಿಎನ್‍ಬಿ 1910ರ ಜೂನ್ 6ರಂದು ಗುಡಲೂರು ಎಂಬಲ್ಲಿ ಜನಿಸಿದರು. ಇವರ ತಂದೆ ಜಿ. ವಿ. ನಾರಾಯಣಸ್ವಾಮಿ ಮದ್ರಾಸಿನ ತಿರುವಲ್ಲಿಕ್ಕೇಣಿಯಲ್ಲಿರುವ ಹಿಂದೂ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದರು. ಇವರು ಸ್ವತಃ ಸಂಗೀತ ರಸಿಕರು, ಪಿಟೀಲುವಾದಕರು ಮತ್ತು ಪಾರ್ಥಸಾರಥಿಸ್ವಾಮಿ ಸಂಗೀತ ಸಭೆಯ ಕಾರ್ಯದರ್ಶಿಗಳಾಗಿದ್ದರು. ತಾಯಿಗೆ ಸಂಗೀತ ಚೆನ್ನಾಗಿ ತಿಳಿದಿತ್ತು. ಇವರ ಪುತ್ರರಾಗಿ ಸಂಗೀತ ಪರಿಸರದಲ್ಲಿ ಬೆಳೆದ ಈ ಬಾಲಕನಿಗೆ ಮನೆಯ ಪಕ್ಕದಲ್ಲಿ ವಾಸವಾಗಿದ್ದ ಪಿಟೀಲು ವಿದ್ವಾಂಸ ಕರೂರು ಚಿನ್ನಸ್ವಾಮಿ ಅಯ್ಯರರ ಮನೆಯಲ್ಲಿ ನಡೆಯುತ್ತಿದ್ದ ತಿರುವೈಯ್ಯಾರ್ ಸಭೇಶ ಅಯ್ಯರ್, ಬೂದಲೂರು ಕೃಷ್ಣಮೂರ್ತಿಶಾಸ್ತ್ರಿ, ಪಲ್ಲಡಮ್ ಸಂಜೀವರಾವ್ ಮುಂತಾದವರ ಕಛೇರಿಗಳನ್ನು ಕೇಳುವ ಸದವಕಾಶ ದೊರಕಿತು. ತಮ್ಮ ಮಗನಲ್ಲಿದ್ದ ಸಂಗೀತದ ಒಲವನ್ನು ಗಮನಿಸಿದ ತಂದೆ ಈತನನ್ನು ಶಾಲೆಗೆ ಸೇರಿಸಿದ್ದಲ್ಲದೆ ಮನೆಯಲ್ಲಿ ಸಂಗೀತವನ್ನೂ, ಸಂಗೀತ ಶಾಸ್ತ್ರವನ್ನೂ ಹೇಳಿಕೊಟ್ಟರು. ಮುಂದೆ ಇವರಿಗೆ ಪಟ್ನಮ್ ಸುಬ್ರಹ್ಮಣ್ಯ ಅಯ್ಯರರ ಶಿಷ್ಯ ಗುರುಸ್ವಾಮಿ ಭಾಗವತರಲ್ಲೂ ತ್ಯಾಗರಾಜರ ವಂಶಕ್ಕೆ ಸೇರಿದ್ದ ಹಾಗೂ ಕರೂರು ಚಿನ್ನ ಸ್ವಾಮಿಯವರ ಶಿಷ್ಯರಾಗಿದ್ದ ಪಿಟೀಲು ವಿದ್ವಾಂಸ ಮಧುರೈ ಸುಬ್ರಹ್ಮಣ್ಯ ಅಯ್ಯರರಲ್ಲೂ ಸಂಗೀತ ಶಿಕ್ಷಣ ದೊರಕಿತು.
ಜಿ. ಎನ್. ಬಾಲಸುಬ್ರಹ್ಮಣ್ಯಮ್ ಕಾಲೇಜು ಶಿಕ್ಷಣದಲ್ಲಿ ಆಂಗ್ಲ ಸಾಹಿತ್ಯ ಆಯ್ದುಕೊಂಡು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಆನರ್ಸ್ ಪದವಿ ತರಗತಿಗೆ ಸೇರಿದರು (1928). ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಸಂಗೀತದ ಕಾಲೇಜು ಪ್ರಾರಂಭವಾದಾಗ ಅಲ್ಲಿಯ ಪ್ರಾಂಶುಪಾಲರಾದ ಸಭೇಶ ಅಯ್ಯರರ ಸಲಹಯಂತೆ ಆ ವಿಶ್ವವಿದ್ಯಾಲಯ ಸೇರಿ ಆನರ್ಸ್ ಅಧ್ಯಯನದ ಜೊತೆಗೆ ಸಂಗೀತ ತರಗತಿಗೆ ಸೇರಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದರು. ಆದರೆ ಅನಾರೋಗ್ಯದ ನಿಮಿತ್ತ ಅಣ್ಣಾಮಲೈಯನ್ನು ಬಿಟ್ಟು ಪುನಃ ಪ್ರೆಸಿಡೆನ್ಸಿ ಕಾಲೇಜಿಗೆ ಮರಳಿ ಆನರ್ಸ್ ಆಧ್ಯಯನ ಮುಂದುವರಿಸಿ ಪದವಿ ಪಡೆದರು. ತಂದೆಯವರಿಗೆ ತಮ್ಮ ಮಗ ವಕೀಲನಾಗಬೇಕೆಂಬ ಆಸೆಯಿತ್ತು. ಆದರೆ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ಯರ ಸಲಹೆ ಮೇರೆಗೆ ಮಗ ಸಂಗೀತದಲ್ಲೇ ಮುಂದುವರಿಯಲು ಸಮ್ಮತಿಸಿದರು. ಅಂತೆಯೇ ಜಿಎನ್‍ಬಿಯವರು ಟೈಗರ್ ವರದಾಚಾರ್ಯರ ನಿರ್ದೇಶನದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಆಗತಾನೇ ಪ್ರಾರಂಭವಾಗಿದ್ದ ಸಂಗೀತ ಡಿಪ್ಲೊಮಾ ತರಗತಿ ಸೇರಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದರು.
1928ರಲ್ಲಿ ಜಿಎನ್‍ಬಿಯವರಿಗೆ ಅವರ 18ನೆಯ ವಯಸ್ಸಿನಲ್ಲಿ ಒಂದು ಸುದಿನ ಒದಗಿತು. ಮದ್ರಾಸಿನ ಕಪಾಲೀಶ್ವರ ದೇವಸ್ಥಾನದಲ್ಲಿ ಏರ್ಪಾಡಾಗಿದ್ದ ಮುಸಿರಿ ಸುಬ್ರಹ್ಮಣ್ಯ ಅಯ್ಯರರ ಕಛೇರಿ ಕೇಳಲು ಹೋಗಿದ್ದರು. ಬಹಳ ಹೊತ್ತಾದರೂ ಮುಸಿರಿಯವರು ಬರಲಿಲ್ಲ. ವ್ಯವಸ್ಥಾಪಕ ರಾಮಚಂದ್ರ ಅಯ್ಯರರ ಕೋರಿಕೆಯಂತೆ ತಂದೆ ಮತ್ತು ತಮ್ಮ ಗುರುವಿನ ಆಶೀರ್ವಾದ ಪಡೆದು ವೇದಿಕೆಯ ಹತ್ತಿರ ಬಂದು ಭಯಭಕ್ತಿಗಳಿಂದ ಕಛೇರಿ ಗಾಯನ ಮಾಡಿ ಒಮ್ಮೆಲೆ ಪ್ರಕಾಶಕ್ಕೆ ಬಂದರು. ಅಲ್ಲಿಂದ ಮುಂದೆ ಅವರ ಸಂಗೀತ ವಾಹಿನಿ ತಡೆಯಿಲ್ಲದೆ ಕೊನೆಯತನಕವೂ ಅವ್ಯಾಹತವಾಗಿ ಪ್ರವಹಿಸಿತು. ಇವರು ತಿರುವಾಂಕೂರು ಮತ್ತು ಎಟ್ಟಯಾಪುರ ಸಂಸ್ಥಾನಗಳ ಆಸ್ಥಾನ ವಿದ್ವಾಂಸರಾಗಿದ್ದರು (1939 ಮತ್ತು 1941). ಮದ್ರಾಸಿನ ಆಕಾಶವಾಣಿಯ ಸಂಗೀತವಿಭಾಗದ ಮುಖ್ಯಸ್ಥರೂ (1954-64) ತಿರುವನಂತಪುರದ ಸ್ವಾತಿ ತಿರುನಾಳ್ ಸಂಗೀತಕಾಲೇಜಿನ ಪ್ರಧಾನಾಚಾರ್ಯರೂ (1964) ಆಗಿದ್ದರು.
ಜಿಎನ್‍ಬಿ ಅವರು ಭಾಮಾವಿಜಯ, ಸತಿ ಅನಸೂಯ, ವಾಸವದತ್ತಾ, ರುಕ್ಮಾಂಗದ ಮತ್ತು ಶಕುಂತಲಾ ಎಂಬ ಚಲನಚಿತ್ರಗಳಲ್ಲಿ ಅಭಿನಯಿಸಿ ಖ್ಯಾತರಾದರು. ಹಿಂದೂಸ್ಥಾನಿ ಸಂಗೀತವೆಂದರೆ ಇವರಿಗೆ ಅಪಾರ ಮೋಹ. ಒಂದು ಸಲ ಬಡೇಗುಲಾಮ್ ಅಲಿಖಾನರ ಗಾಯನವನ್ನು ಕೇಳಿ ತಮಗಾದ ಆನಂದವನ್ನು ತಡೆಯಲಾರದೆ ಅವರಿಗೆ ಪೀತಾಂಬರ ಹೊದ್ದಿಸಿ ಸಾಷ್ಟಾಂಗ ಪ್ರಣಾಮಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಖಾನರು ತಂಗಿದ್ದ ಮನೆಗೆ ಹೋದಾಗ ಅವರ ಕೋರಿಕೆಯಂತೆ ಆಂದೋಳಿಕಾ ರಾಗವನ್ನು ಹಾಡಿದಾಗ ಖಾನರು ಜಿಎನ್‍ಬಿ ಯವರಿಗೆ ಪಾದಮುಟ್ಟಿ ನಮಸ್ಕರಿಸಿದರು.
ಜಿಎನ್‍ಬಿಯವರದು ಹಿತವಾಗಿಯೂ ವೇಗವಾಗಿಯೂ ಓಡುವ ಶಾರೀರ. ತಾರುಣ್ಯದಲ್ಲಿ ಆರೂವರೆ ಅಡಿ ಕಟ್ಟೆ ಶಾರೀರ ಇವರದು. ತ್ರಿಸ್ಥಾಯಿಗಳಲ್ಲೂ ತ್ರಿಕಾಲಗಳಲ್ಲೂ ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದರು. ಶಕ್ತಿಯುತವಾದ, ಜೀವತುಂಬಿರುವ ಮತ್ತು ಮೈನವಿರೇಳಿಸುವ ಶೈಲಿ. ಬಿರ್ಕಾಗಳನ್ನು ಪ್ರಯೋಗಿಸಿ ಹಾಡುವುದರಲ್ಲಿಯೂ ಅಗ್ರಗಣ್ಯರು. ಹೀಗೆ ಇವರು ತಮ್ಮ ನೂತನ ಶೈಲಿಯಿಂದ ಒಂದು ಕ್ರಾಂತಿ ಉಂಟುಮಾಡಿದರು.
ಜಿಎನ್‍ಬಿ ಅವರಿಗೆ ತಮಿಳು, ಸಂಸ್ಕೃತ, ತೆಲುಗು, ಇಂಗ್ಲಿಷ್ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯವಿತ್ತು. ಸಂಶೋಧನಾ ಪ್ರವೃತ್ತಿ ಪ್ರಬಲವಾಗಿತ್ತು. ತತ್ಪರಿಣಾಮವಾಗಿ ಉತ್ತಮ ವಾಗ್ಗೇಯಕಾರರಾಗಿ ಈ ಮೂರೂ ಭಾಷೆಗಳಲ್ಲಿ ದೇವಿ, ಸುಬ್ರಹ್ಮಣ್ಯ, ಶ್ರೀರಾಮ, ಗಣಪತಿ ಇವರನ್ನು ಕುರಿತು ಹಲವಾರು ಕೃತಿಗಳನ್ನು ರಚಿಸಿದರು.
ಜಿಎನ್‍ಬಿಯವರು ಸಂಗೀತ ವಿದ್ವಾಂಸನಲ್ಲಿರಬೇಕಾದ ಎಲ್ಲ ಶ್ರೇಷ್ಠಗುಣಗಳನ್ನೂ ಯೋಗ್ಯತೆಯನ್ನೂ ಹೊಂದಿದ್ದರು. ತರುಣಪೀಳಿಗೆಯ ಸಂಗೀತಗಾರರು ಇವರ ಶೈಲಿಯಿಂದ ಬಹುವಾಗಿ ಪ್ರಭಾವಿತರಾಗಿದ್ದರು. ಇವರ ಅಪಾರ ಶಿಷ್ಯವರ್ಗಕ್ಕೆ ಸೇರಿದವರಲ್ಲಿ ಎಂ.ಎಲ್. ವಸಂತಕುಮಾರಿ, ಟಿ.ಆರ್. ಬಾಲಸುಬ್ರಹ್ಮಣ್ಯಮ್, ಸೋಮೇಶ್ವರಬಾಬು, ಎಸ್. ಬಾಲಸುಬ್ರಹ್ಮಣ್ಯಮ್, ಟಿ.ವಿ. ವಿಶ್ವನಾಥನ್, ಮಧುರೈ ಗಣೇಶನ್, ಎಸ್.ಕಲ್ಯಾಣರಾಮನ್, ತಿರುಚ್ಚೂರ್ ವಿ. ರಾಮಚಂದ್ರನ್, ಎಲ್. ಕೃಷ್ಣನ್ ಮುಂತಾದವರು ಪ್ರಸಿದ್ಧರು.
ಜಿಎನ್‍ಬಿ ಅವರಿಗೆ ಭಾರತ ಸರ್ಕಾರದ ರಾಷ್ಟ್ರಪ್ರಶಸ್ತಿ (1960), ಮದ್ರಾಸ್ ಮ್ಯೂಸಿಕ್ ಅಕಾಡಮಿಯ ಸಂಗೀತದ ಕಲಾನಿಧಿ ಪ್ರಶಸ್ತಿ (1958) ಸಂದಿತು.
ಜಿ. ಎನ್. ಬಾಲಸುಬ್ರಹ್ಮಣ್ಯಮ್ ಅವರು 1965ರ ಮೇ 1ರಂದು ನಿಧನರಾದರು.
On the birth anniversary of great musician G. N. Balasubramaniam
ಕಾಮೆಂಟ್‌ಗಳು