ಸತೀಶ್ ಚಪ್ಪರಿಕೆ
ಸತೀಶ್ ಚಪ್ಪರಿಕೆ
’ಬುಕ್ ಬ್ರಹ್ಮ’ ಡಿಜಿಟಲ್ ಮಾಧ್ಯಮ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾಗಿ ಅದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಸತೀಶ್ ಚಪ್ಪರಿಕೆ ಪತ್ರಿಕೋದ್ಯಮಿ, ಪತ್ರಕರ್ತ, ಬರಹಗಾರ ಹೀಗೆ ಬಹುಮುಖಿ ಸಾಧಕರು.
ಜೂನ್ 30, ಸತೀಶ್ ಅವರ ಜನ್ಮದಿನ. ಮೂಲತಃ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಚಪ್ಪರಿಕೆ ಎಂಬ ಗ್ರಾಮದವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಅವರು, ತಂದೆಯವರು ಜೀವನ ನಿರ್ವಹಣೆಗಾಗಿ ಪುಟ್ಟ ಹೊಟೇಲ್ ನಿರ್ವಹಿಸಲು ಆರಂಭಿಸಿದಾಗ ಬೆಂಗಳೂರಿಗೆ ಬಂದರು. ಹೀಗಿದ್ದರೂ ಬದುಕು ಕಟ್ಟಿಕೊಳ್ಳಲು ಬೇರೊಬ್ಬರ ಹೋಟಲಲ್ಲಿ ಎಲ್ಲ ರೀತಿಯ ಕಷ್ಟಕರ ಕೆಲಸಗಳನ್ನೂ ಮಾಡಿದರು. ಅನೇಕ ಕಷ್ಟ ಅಪಮಾನಗಳಲ್ಲಿ ನೊಂದು ಬೆಂದರೂ, ಸ್ವಾಭಿಮಾನ, ಸಾಹಿತ್ಯ ಪ್ರೀತಿ ಮತ್ತು ಓದಬೇಕೆಂಬ ಛಲವನ್ನು ಅಚಲವಾಗಿ ಮೈಗೊಡಿಸಿಕೊಂಡು ಪ್ರಾಜ್ಞವಾಗಿ ಬದುಕು ರೂಪಿಸಿಕೊಂಡರು.
ಸಸ್ಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ‘ಪ್ರಜಾವಾಣಿ’ ದಿನಪತ್ರಿಕೆ ಸೇರಿ, ಪತ್ರಕರ್ತ ಜೀವನ ಆರಂಭಿಸಿದರು. ಸುಮಾರು ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ ನಂತರ ‘ಟಿವಿ೯’, ‘ದಿ ಸಂಡೆ ಇಂಡಿಯನ್’ ನಿಯತಕಾಲಿಕದ ಸಹಾಯಕ ಸಂಪಾದಕರಾಗಿದ್ದರು. ಈ ನಡುವೆ ‘ಪ್ರಜಾವಾಣಿ’ ಮತ್ತು ‘ಹಫಿಂಗ್ಟನ್ ಪೋಸ್ಟ್’ (ಇಂಗ್ಲಿಷ್)ನಲ್ಲಿ ಅಂಕಣಗಳನ್ನು ಬರೆದರು. 'ಬ್ರಿಟಿಷ್ ಶಿವ್ನಿಂಗ್ ಸ್ಕಾಲರ್‌ಷಿಪ್’ ಪಡೆದರು. ಲಂಡನ್‌ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡಿದರು. ಒಂದು ವರ್ಷ ಕಾಲ ‘ಸಿಂಬಯಾಸಿಸ್ ವಿಶ್ವವಿದ್ಯಾಲಯ’ದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರು. ನಂತರ ‘ವಿಆರ್‌ಎಲ್ ಮಿಡಿಯಾ’ ಸಂಸ್ಥೆಯ ಪ್ರಧಾನ ಸಂಪಾದಕರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ್ದರು. ಪತ್ರಿಕಾ ವ್ಯವಸಾಯಕ್ಕೆ ವಿದಾಯ ಹೇಳಿದ ಮೇಲೆ, ಬೆಂಗಳೂರು ಮೂಲದ ಅಂತರ್ ರಾಷ್ಟ್ರೀಯ ಸಂಸ್ಥೆ ‘ಫರ್ಬೆಂಡನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. 2021ರಲ್ಲಿ ಬುಕ್ ಬ್ರಹ್ಮ ಆರಂಭಗೊಂಡು ಬೃಹತ್ತಾಗಿ ಪಸರಿಸುತ್ತಿದೆ.
‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಗಳ ಮೂಲಕ ಬೆಳಕಿಗೆ ಬಂದ ಕತೆಗಾರರಾದ ಸತೀಶ್ ಚಪ್ಪರಿಕೆ ಅವರ ‘ಮತ್ತೊಂದು ಮೌನಕಣಿವೆ’ (ಪರಿಸರ ಲೇಖನಗಳು), ‘ಹಸಿರು ಹಾದಿ’ (ಅ.ನ.ಯಲ್ಲಪ್ಪ ರೆಡ್ಡಿ ಆತ್ಮಕತೆ), ವಿಶ್ವಕಪ್ ಕ್ರಿಕೆಟ್ (ಕ್ರಿಕೆಟ್ ಕುರಿತಾದ ಕೃತಿ), ಬೇರು (ಕಥಾ ಸಂಲಕನ), ಥೇಮ್ಸ್ ತಟದ ತವಕ ತಲ್ಲಣ (ಪ್ರವಾಸ ಕಥನ), ದೇವಕಾರು (ಜನಪರ ಲೇಖನಗಳ ಸಂಗ್ರಹ), ಮುಸಾಫಿರ್ 1 ಮತ್ತು ಮುಸಾಫಿರ್ 2 (ಅಂಕಣ ಬರಹಗಳ ಸಂಗ್ರಹ), 'ಖಾಂಜಿ ಭಾಯ್’ (ಜೀವನ ಚರಿತ್ರೆ), 'ಘಾಂದ್ರುಕ್' (ಕಾದಂಬರಿ), ಸಂಚಲನ (ಅಂಕಣ ಬರಹಗಳ ಸಂಕಲನ), 'ವರ್ಜಿನ್ ಮೊಹಿತೊ’(ಕಥಾ ಸಂಕಲನ) ಮುಂತಾದ ಕೃತಿಗಳು ಪ್ರಕಟವಾಗಿವೆ.
ಸತೀಶ್ ಅವರ ‘ಥೇಮ್ಸ್ ತಟದ ತವಕ ತಲ್ಲಣ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಸಂದಿದೆ. ಇವರ ಬಹುತೇಕ ಕೃತಿಗಳು ಇ-ಪುಸ್ತಕಗಳಾಗಿ ಪ್ರಕಟವಾಗಿವೆ. ಇವರ 'ಘಾಂದ್ರುಕ್' ಕಾದಂಬರಿ ಕನ್ನಡವಲ್ಲದೆ ಬಹುಭಾಷೆಗಳಲ್ಲಿ ಮೂಡಿಬಂದಿದೆ. ಇವರ ನೇತೃತ್ವದ ’ಬುಕ್ ಬ್ರಹ್ಮ’ ಸಾಹಿತ್ಯಲೋಕಕ್ಕೆ ಅಪಾರ ವ್ಯಾಪಕತೆ ತಂದಿದೆ.
ಸಾಹಸಿ, ಸಾಧಕ, ಸರಳ ಸಹೃದಯಿ ಸತೀಶ್ ಚಪ್ಪರಿಕೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Satish Chapparike🌷🌷🌷

ಕಾಮೆಂಟ್‌ಗಳು