ನಂದನ್ ನಿಲೇಕಣಿ
ನಂದನ್ ನಿಲೇಕಣಿ
ಆಧಾರ್ ಅಂದರೆ ಮೊದಲು ನೆನಪಾಗುವುದು ನಮ್ಮವರೇ ಆದ ನಂದನ್ ನಿಲೇಕಣಿ. ಅಷ್ಟು ಮಾತ್ರವಲ್ಲದೆ ಭಾರತದ ಉದ್ಯಮಿಗಳಲ್ಲಿಯೂ ಹೆಸರಾಗಿರುವ ನಂದನ್ ನಿಲೇಕಣಿ ಅವರು 1955ರ ಜೂನ್ 2ರಂದು ಜನಿಸಿದರು.
ನಂದನ್ ನಿಲೇಕಣಿ ಅವರು ಜನಿಸಿದ್ದು ಉತ್ತರ ಕನ್ನಡದ ಶಿರಸಿಯಲ್ಲಿ. ಧಾರವಾಡದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ನಡೆಸಿದ ನಂದನ್ ಮುಂದೆ ಮುಂಬೈ ಐ ಐ ಟಿ ಪದವೀಧರರಾದರು. ಮುಂಬೈ ಮೂಲದ 'ಪಟ್ನಿ ಕಂಪ್ಯೂಟರ್ಸ್' ಸಂಸ್ಥೆಯಲ್ಲಿ ನಾರಾಯಣ ಮೂರ್ತಿಗಳಿಂದ ಆಯ್ಕೆಗೊಂಡ ನಂದನ್ ಮುಂದೆ ನಾರಾಯಣ ಮೂರ್ತಿಗಳೊಂದಿಗೆ ಇನ್ಫೋಸಿಸ್ ಸಂಸ್ಥೆಗೂ ಜೊತೆಗೂಡಿದರು.
ಪ್ರಾರಂಭದಿಂದಲೂ ನಾರಾಯಣ ಮೂರ್ತಿಗಳ ಒಡನಾಡಿಯಾದ ನಂದನ್, ಹಿಂದೆ ನಾರಾಯಣ ಮೂರ್ತಿಗಳು ನಿವೃತ್ತಿ ತಲುಪಿದಾಗ ಇನ್ಫ್ಪೋಸಿಸ್ ಸಂಸ್ಥೆಯ ಸಾರಥ್ಯವಹಿಸಿದರು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಆಧಾರ್ ಗುರುತಿನ ಚೀಟಿ ವ್ಯವಸ್ಥೆಯ ಮುಖ್ಯಸ್ಥರಾಗಲು ಒಪ್ಪಿ ತಮ್ಮ ಪ್ರತಿಷ್ಠಿತ ಇನ್ಫೋಸಿಸ್ ಹುದ್ದೆಯಿಂದ ಹೊರಬಂದರು. ಹೀಗಾಗಿ ಕೇಂದ್ರಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನಕ್ಕೆ ಸಮನಾದ Unique Identification Authority of India (UIDAI)ದ ಮುಖ್ಯಸ್ಥರಾದರು. ಜೊತೆಗೆ ಭಾರತ ಸರ್ಕಾರದ ತಂತ್ರಜ್ಞಾನ ಸಲಹಾ ಸಮಿತಿಯ ಮುಖ್ಯಸ್ಥರಾಗಿ ಸಹಾ ಕಾರ್ಯನಿರ್ವಹಿಸಿದರು.
ನಂದನ್ ನಿಲೇಕಣಿ ಅವರು ಬರೆದಿರುವ ಬೃಹತ್ ಪುಸ್ತಕ ‘Imagining India’ ಇಪ್ಪತ್ತನೆಯ ಶತಮಾನದ ಭಾರತೀಯ ಸ್ಥಿತಿಗತಿಗಳ ಅವಲೋಕನವಾಗಿಯೂ, ಇಪ್ಪತ್ತೊಂದನೆಯ ಶತಮಾನದ ಭಾರತೀಯ ಕನಸುಗಾರಿಕೆಗಳಿಗೊಂದು ದಿಕ್ಸೂಚಿಯಂತೆಯೂ ಗಮನ ಸೆಳೆದಿದೆ ಎಂಬುದು ಸಹಾ ಮಹತ್ವದ ಅಂಶ.
ಪ್ರತಿಷ್ಠಿತ National Association of Software and Service Companies (NASSCOM) ಮತ್ತು The Indus Entrepreneurs (TiE)ನ ಬೆಂಗಳೂರು ಚಾಪ್ಟರ್ ಸ್ಥಾಪನೆಯಲ್ಲಿ ನಂದನ್ ಅವರ ಪ್ರಧಾನ ಪಾತ್ರವಿದೆ. ಥಾಮಸ್ ಫ್ರೀಡ್ ಮನ್ ಅವರ ಪ್ರಸಿದ್ಧ ಕೃತಿ The World is Flat ಪುಸ್ತಕದಲ್ಲಿ ಗಣನೀಯವಾಗಿ ಉಲ್ಲೇಖಗೊಂಡಿರುವ ನಂದನ್ ನಿಲೇಕಣಿ, ವಿಶ್ವದಾದ್ಯಂತ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಬೆಳಗಿದ್ದಾರೆ.
World Economic Forumನ ಪ್ರಶಸ್ತಿಗೆ ಆಯ್ಕೆಗೊಂಡ ಪ್ರಮುಖ ಇಪ್ಪತ್ತು ಕಿರಿಯ ಗೌರವಾನ್ವಿತರಲ್ಲಿ ಒಬ್ಬರೆನಿಸಿರುವ ನಂದನ್ ನಿಲೇಕಣಿ ಫೋರ್ಬ್ಸ್ ನಿರ್ಣಯಿಸಿದ ಉತ್ಕೃಷ್ಟ ಏಷ್ಯಾ ಖಂಡದ ಉದ್ಯಮಿಗೆ ಸಲ್ಲುವ ಪ್ರಶಸ್ತಿ ಪಡೆಯುವುದರ ಜೊತೆಗೆ ಫೈನಾನ್ಸಿಯಲ್ ಟೈಮ್ಸ್ ಮತ್ತು ಪ್ರೈಸ್ ವಾಟರ್ ಹೌಸ್ ಕೂಪರ್ಸ್ ನಡೆಸಿದ ಸಮೀಕ್ಷೆಯಲ್ಲಿನ ವಿಶ್ವದ ಗೌರವಾನ್ವಿತರ ಸಾಲಿನಲ್ಲಿ ಅಲಂಕೃತರಾಗಿದ್ದವರು. ಅವರಿಗೆ ವಿಶ್ವದೆಲ್ಲೆಡೆ ಸಂದಿರುವ ಹಲವು ಗೌರವಗಳ ಜೊತೆಗೆ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯ ಗರಿಮೆ ಕೂಡಾ ಇದೆ.
ಭಾರತದ ಚರಿತ್ರೆಯ ಬಗೆಗೆ, ಕಳೆದುರುಳಿರುವ ಸ್ವಾತಂತ್ರ್ಯಾನಂತರದ ದಶಕಗಳ ಬಗೆಗೆ, ಭಾರತದಲ್ಲಿ ಮೂಡಿದ ಆರ್ಥಿಕ ಪ್ರಗತಿಗಳ ಕಾರಣೀಭೂತ ನೆಲೆಗಳು, ಹಿಂದಿನ ಸಮಾಜವಾದೀ ಚಿಂತನೆಗಳು, ಭಾರತೀಯ ಜನಸಮುದಾಯ, ಮಾಹಿತಿ ತಂತ್ರಜ್ಞಾನ, ಜಾತಿಪದ್ಧತಿ, ಕಾರ್ಮಿಕ ಸುಧಾರಣೆ, ಮೂಲಭೂತ ಸೌಕರ್ಯಗಳು, ಶಿಕ್ಷಣ ವ್ಯವಸ್ಥೆ, ಇಂಗ್ಲಿಷ್ ಭಾಷೆ, ಭಾರತಕ್ಕಿರುವ ವಿದ್ಯಾವಂತ ಜನಸಂಖ್ಯಾ ಗತಿಯಲ್ಲಿರುವ ಹೆಚ್ಚಳದಿಂದ ವಿಶ್ವ ಮಾರುಕಟ್ಟೆಯಲ್ಲಿ ಇರುವ ಅನುಕೂಲಗಳು, ಹಲವು ವಿಧದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಹಿನ್ನೆಡೆಗಳು, ಹೀಗೆ ಭಾರತದ ಸಮಗ್ರ ಅಧ್ಯಯನದ ಬಗೆಗೆ ಗಮನ ಹರಿಸಿರುವ ನಂದನ್ ನಿಲೇಕಣಿ ಅವರ ‘Imagining India’ ಒಂದು ಗಮನಾರ್ಹ ಗ್ರಂಥವಾಗಿದೆ.
ನಂದನ್ ನಿಲೇಕಣಿ ಅವರು ಉದ್ಯಮಿಯಾಗಿ ಅವರು ಗಳಿಸಿದ ಯಶಸ್ಸುಗಳಲ್ಲೇ ಐಶಾರಾಮೀ ಜೀವನದ ಸಮಸ್ತ ಭೋಗಗಳನ್ನು ಅನುಭವಿಸುವ ಎಲ್ಲಾ ಸ್ಥಿತಿಗತಿಗಳನ್ನು ತಲುಪಿದ್ದರೂ, ತಾವು ಇರುವ ಭಾರತೀಯ ಸಮಾಜಕ್ಕೆ ಇರುವ ಅಗತ್ಯತೆಗಳನ್ನು ಮನಗಂಡು ರಾಜಕೀಯ ಯಂತ್ರದ ಮೂಲಕ ಭಾರತೀಯರೆಲ್ಲರಿಗೆ ಆಧಾರ್ ಅಂತಹ ಗುರುತಿನ ಚೀಟಿ ವ್ಯವಸ್ಥೆಗೆ ಉತ್ತಮ ಚಾಲನೆ ಕೊಟ್ಟರು. ಭಾರತದಂತಹ ಸಂಕೀರ್ಣ ವ್ಯವಸ್ಥೆಯಲ್ಲಿ ಅದು ಅಷ್ಟು ಸುಲಭವಾಗಿ ಸಾಧ್ಯವಾದಂತದಾಗಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ನಂದನ್ ನಿಲೇಕಣಿ ಅವರು ರಾಜಕೀಯಕ್ಕೆ ಬಂದದ್ದು ಕಾಂಗ್ರೆಸ್ ಸರ್ಕಾರವಿದ್ದ ಸಮಯದಲ್ಲಿ. ಮೊದಲ ಚುನಾವಣೆ ಎದುರಿಸಿದಾಗಲೇ ಬಿಜೆಪಿ ನೆಲೆಯಾದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಿವಂಗತ ಅನಂತಕುಮಾರ್ ವಿರುದ್ಧ ಸೋಲುಕಂಡರು. ಸದ್ಯದಲ್ಲಿ ಅವರು ರಾಜಕೀಯದಲ್ಲಿ ಇಲ್ಲ.
ನಂದನ್ ನಿಲೇಕಣಿ ಅವರು 2017 ವರ್ಷದಲ್ಲಿ ಇನ್ಫೋಸಿಸ್ಗೆ ಇದ್ದ ಸಾಂಸ್ಥಿಕ ಅನಿವಾರ್ಯತೆಗಳ ಕಾರಣದಿಂದ ಆ ಸಂಸ್ಥೆಯ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.
ನಂದನ್ ನೀಲೇಕಣಿ ಅವರು ಬಿಲ್ ಗೇಟ್ಸ್ ಫೌಂಡೇಷನ್ ನಡೆಸುತ್ತಿರುವ ಸಮಾಜದ ಹಿತಕ್ಕಾಗಿನ ಕಾರ್ಯಕ್ರಮಗಳಿಗಾಗಿ ತಮ್ಮ ಸಂಪತ್ತಿನ ಅರ್ಧಭಾಗವನ್ನು ಸಹಾ ಮೀಸಲಿರಿಸಿದ್ದಾರೆ.
On the birth day of brain behind our Adhar Cards Nandan Nilekani
ಕಾಮೆಂಟ್‌ಗಳು