ಬೇಲೂರು ರಾಮಮೂರ್ತಿ
ಬೇಲೂರು ರಾಮಮೂರ್ತಿ
ಬೇಲೂರು ರಾಮಮೂರ್ತಿ ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರು. ಅವರು ರಚಿಸಿರುವ ಕೃತಿಗಳು ನೂರರಷ್ಟು.
ಬೇಲೂರು ರಾಮಮೂರ್ತಿ 1950ರ ಜೂನ್ 30ರಂದು ಜನಿಸಿದರು. ರಾಮಮೂರ್ತಿ ಬರವಣಿಗೆ ಪ್ರಾರಂಭಿಸಿದ್ದು 1970ರಲ್ಲಿ. ಆಗ ತಾನೇ ಹೈಸ್ಕೂಲು ಮುಗಿಸಿದ್ದರು.
ಬೇಲೂರಿನ ಹೈಸ್ಕೂಲಿನಲ್ಲಿ ಓದುವಾಗ ಸಂಸ್ಕೃತ ಅಧ್ಯಾಪಕರು ಮಕ್ಕಳಿಂದ ಸುಭಾಷಿತಗಳನ್ನು ಬರೆಸುತ್ತಿದ್ದರು. ಈ ಸಂಗ್ರಹ 'ಪುನರ್ನವ' ಎಂದು ಅಚ್ಚಾಗಿತ್ತು ಮುಂದೆ ಅವರು ಎನ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳನ್ನು ಓದಲಾರಂಭಿಸಿದರು. ಅವರು ಪ್ರಥಮವಾಗಿ ಓದಿದ ಸಾಮಾಜಿಕ ಕಾದಂಬರಿ 'ತುಂಗ-ಭದ್ರ'. ಅದಂತೂ ಅವರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿತ್ತು. ಆಗೆಲ್ಲಾ ಮಲೆನಾಡಿನ ಬೇಲೂರಿನಲ್ಲಿ ಮಳೆಗಾಲ ಎಂದರೆ ಮೂರು ದಿನ ಆರು ದಿನ ಹೀಗೆ ಸುರಿಯುತ್ತಿತ್ತು. ಅಂಥಾ ದಿನಗಳಲ್ಲಿ ಮನೆಯಲ್ಲಿ ಪತ್ರಿಕೆ ಇಲ್ಲ, ರೇಡಿಯೋ ಇಲ್ಲ, ಟಿವಿ ಬಂದಿರಲೇ ಇಲ್ಲ. ಅಂತಹ ದಿನಗಳಲ್ಲಿ ಅಮ್ಮನ ಕಥೆ ಕೇಳುವುದು ಒಂದು ಹವ್ಯಾಸವಾಗಿ ಬೆಳೆಯಿತು. ಹೀಗಿರುವಾಗ ಹಾಸನದಿಂದ ಪ್ರಕಟವಾಗುತ್ತಿದ್ದ 'ಜನಮಿತ್ರ' ಪತ್ರಿಕೆಯವರು ದೀಪಾವಳಿ ಹಬ್ಬದ ಪ್ರಯುಕ್ತ 'ನನ್ನ ವಾಚು ಕೈ ಕೊಟ್ಟಾಗ' ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಾಡು ಮಾಡಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನವಾಗಿ ಒಂದು ವರ್ಷ ಜನಮಿತ್ರ ಪತ್ರಿಕೆ ಇವರ ಮನೆಗೆ ಉಚಿತವಾಗಿ ಅಂಚೆಯಲ್ಲಿ ಬರುತ್ತಿತ್ತು.
ಮುಂದೆ ಬೇಲೂರರು ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದರು. ಅವರು ಕೆಲಸಕ್ಕೆ ಸೇರಿಕೊಂಡ ಒಂದು ಕಂಪನಿಯ ಪಕ್ಕದ ಕಟ್ಟಡದಲ್ಲಿಯೇ ನಾಡಿಗೇರರು ಸಂಪಾದಕರಾಗಿದ್ದ ಮಲ್ಲಿಗೆ ಮತ್ತು ಜನಪ್ರಗತಿ ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಬೇಲೂರರು ಒಂದು ಕಥೆ ಬರೆದು ಮಲ್ಲಿಗೆ ಕಛೇರಿಗೆ ತಲುಪಿಸಿ ನಾಡಿಗೇರರನ್ನು ಪರಿಚಯ ಮಾಡಿಕೊಂಡರು. ಒಂದೆರಡು ತಿಂಗಳ ನಂತರ ಮಲ್ಲಿಗೆ ಪತ್ರಿಕೆಯಲ್ಲಿ
ಬೇ.ರಾಮಮೂರ್ತಿ ಎಂಬ ಹೆಸರಲ್ಲಿ ಇವರ ಕಥೆ ಪ್ರಕಟಗೊಂಡಿತು. ಅಲ್ಲಿಂದ ಮುಂದೆ ಅವರ ಅನೇಕ ಕಥೆಗಳು ಮಲ್ಲಿಗೆ ಜನಪ್ರಗತಿ ಪತ್ರಿಕೆಗಳಲ್ಲಿ ಬೇಲೂರು ರಾಮಮೂರ್ತಿ ಎಂಬ ಹೆಸರಿನಲ್ಲೇ ಪ್ರಕಟವಾದವು.
ಮುಂದೆ ಪ್ರಜಾಮತದಲ್ಲಿಯೂ ಅವರ ಕಥೆಗಳು, ಕಾದಂಬರಿಗಳು ಪ್ರಕಟವಾದವು. ಸುಧಾ ಪತ್ರಿಕೆಯಲ್ಲಿ ಮೊದಲಿಗೆ ಅವರ 'ಅಭ್ಯಾಸ ಆಭಾಸ' ನಗೆ ಲೇಖನ ಪ್ರಕಟವಾಯಿತು. ಮುಂದೆ ಸುಧಾದಲ್ಲಿ ಅನೇಕ ಕಥೆ ಹಾಸ್ಯ ಲೇಖನಗಳು ಪ್ರಕಟವಾದವು. ಹಾಗೆಯೇ ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ ಪತ್ರಿಕೆಗಳ ಭಾನುವಾರದ ಪುರವಣಿಯಲ್ಲಿ ಇವರ ಕಥೆಗಳು ಪ್ರಕಟವಾದವು.
ಬೇಲೂರು ರಾಮಮೂರ್ತಿ ಅವರ 'ಅಭಿನೇತ್ರಿ' ಕಾದಂಬರಿ ಪ್ರಜಾಮತದಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಮುಂದೆ ಅದು ಬಾಪ್ಕೊ ಪ್ರಕಾಶನದ ಸಹಕಾರದಿಂದ ಕೃತಿಯಾಗಿ ಪ್ರಕಟವಾಯಿತು. ಮುಂದೆ ಅದು ಮರುಮುದ್ರಣವೂ ಆಯಿತು. ಮುಂದೆ ಬೇಲೂರು ರಾಮಮೂರ್ತಿ ಅವರು ಬರೆದು ನಾಡಿನ ಪ್ರಸಿದ್ಧ ಪ್ರಕಟಣಾ ಸಂಸ್ಥೆಗಳ ಮೂಲಕ ಪ್ರಕಟಗೊಂಡ ಕೃತಿಗಳ ಸಂಖ್ಯೆ ನೂರು ದಾಟಿವೆ.
ಬೇಲೂರರು ರಾಮಮೂರ್ತಿ ಅವರ ವಸ್ತು ವೈವಿಧ್ಯದಲ್ಲಿ ಇದುವರೆವಿಗೂ 22 ಕಾದಂಬರಿಗಳು, 24 ಕಿರುಕಾದಂಬರಿಗಳು, 30 ಹಾಸ್ಯ ಸಂಕಲನಗಳು, 14 ಕಥಾ ಸಂಕಲಗಳು, 2 ಶಿಶು ಸಾಹಿತ್ಯಗಳು; ಹಾಗೂ ಪ್ರವಾಸ ಕಥನ, ವಿಚಾರಧಾರೆ ಮುಂತಾದ ಪ್ರಕಾರಗಳಲ್ಲಿ 8 ಗ್ರಂಥಗಳು ಪ್ರಕಟಗೊಂಡಿವೆ. ಅವರ ಆಧ್ಯಾತ್ಮದಲ್ಲಿನ ಆಸಕ್ತಿ ಬರಹಗಳು ವಿಜಯವಾಣಿಯ ಮನೋಲ್ಲಾಸ, ವಿಶ್ವವಾಣಿಯ ಗುರು ಪುರವಣಿ, ಮತ್ತು ಬೋಧಿವೃಕ್ಷ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.
ಬೇಲೂರು ರಾಮಮೂರ್ತಿ ಅವರಿಗೆ 'ಹಾಸ್ಯ ಗಂಗೋತ್ರಿ' ಹಾಸ್ಯ ಸಂಕಲನಕ್ಕೆ 2012ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಮಹಾಕವಿ ಮುದ್ದಣ ಕೃತಿಗೆ ಗೊರೂರು ಪ್ರಶಸ್ತಿ , ರನ್ನ ಪ್ರಶಸ್ತಿ; ಹಾಸ್ಯ ಸಾಹಿತ್ಯಕ್ಕೆ ಕೇಫ ಪ್ರಶಸ್ತಿ, ಪರಮಾನಂದ ಪ್ರಶಸ್ತಿ, ಮೈಸೂರು ಅಸೋಸಿಯೇಷನ್ ಮುಂಬೈ ಅವರಿಂದ 2019ರ ಪ್ರತಿಭಾ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, 'ಕವಿ, ಕಾವ್ಯ, ಸ್ವಾರಸ್ಯ' ಕೃತಿಗೆ ಜ್ಞಾನಜ್ಯೋತಿ ಟ್ರಸ್ಟ್ ಅವರಿಂದ 2019ರ ಕನ್ನಡ ಕಣ್ಮಣಿ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.
On the birthday of writer Belur Rammurthy
ಕಾಮೆಂಟ್‌ಗಳು