ವೈ. ಎನ್. ಗುಂಡೂರಾವ್
ವೈ. ಎನ್. ಗುಂಡೂರಾವ್
ವೈ. ಎನ್. ಗುಂಡೂರಾವ್ ಬರಹಗಾರರಾಗಿ ಪ್ರಸಿದ್ಧರು. ಹಾಸ್ಯ ಬರಹಗಳಲ್ಲಿ ಹೆಸರಾದ ಇವರು ಸದಭಿರುಚಿಯ ಹಾಸ್ಯ ಪ್ರಸಾರಕ್ಕಾಗಿ ಸ್ಥಾಪಿಸಿರುವ ‘ಹಾಸ್ಯಬ್ರಹ್ಮ ಟ್ರಸ್ಟ್’ನ ಸ್ಥಾಪಕ ಸದಸ್ಯರು. ಸ್ವಯಂ ಬರಹಗಾರರಾಗಿ ಮತ್ತು ಅನೇಕ ಹಿರಿಯ ಸಾಹಿತಿಗಳ ಹಾಸ್ಯಬರಹಗಳ ಅನೇಕ ಸಂಕಲನಗಳನ್ನು ಸಂಪಾದಿಸಿರುವ ಇವರು ಕನ್ನಡಿಗರಿಗೆ ಕಟ್ಟಿಕೊಟ್ಟಿರುವ ಹಾಸ್ಯದ ಕೊಡುಗೆ ಮಾತ್ರವಲ್ಲದೆ ಮಾಹಿತಿಗಳ ಸಂಗ್ರಹಣೆಯೂ ಅಪಾರವಾದದ್ದು.
ಗುಂಡೂರಾವ್ 1945ರ ಜೂನ್ 6ರಂದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಮಾಧ್ಯಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ವೈ.ಕೆ. ನರಸಿಂಗರಾಯರು. ತಾಯಿ ರಾಜಮ್ಮ. ಇವರ ಪ್ರಾರಂಭಿಕ ಶಿಕ್ಷಣ ಯರಗಂಬಳ್ಳಿಯಲ್ಲಿ, ಪ್ರೌಢಶಾಲಾ ವಿದ್ಯಾಭ್ಯಾಸ ಯಳಂದೂರಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ.ಯ ನಂತರ ಓದಲು ಬೆಂಗಳೂರಿಗೆ ಬಂದು ಗೌರ್ನಮೆಂಟ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ಸೇರಿದರೂ ಪೂರ್ಣಗೊಳ್ಳದೆ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿ(ಐಟಿಐ)ಯಲ್ಲಿ ಕೆಲಸಕ್ಕೆ ಸೇರಿದರು. ಸ್ನೇಹಿತರ ಒತ್ತಾಯಕ್ಕೆ ಮಣಿದು ಸಂಜೆ ಕಾಲೇಜಿಗೆ ಸೇರಿ ಬಿ.ಕಾಂ. ಪದವಿ ಪಡೆದರು. ಮೂವತ್ತೆಂಟು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು.
ಮಾಧ್ಯಮಿಕ ಶಾಲೆಯಲ್ಲಿ ಲೆಕ್ಕದ ಮೇಸ್ಟ್ರಾಗಿದ್ದ ಸುಬ್ಬರಾಯರಿಂದ ಸಾಹಿತ್ಯದ ಪರಿಚಯ ದೊರಕಿತು. ಜೊತೆಗೆ ತಂದೆಯವರು ಶಾಲೆಯಿಂದ ಓದಲು ತರುತ್ತಿದ್ದ ಪತ್ರಿಕೆಗಳನ್ನು ಓದುತ್ತಿದ್ದರು. ಬಾಲಕ ಗುಂಡೂರಾಯರು ಅ.ನ.ಕೃ. ಎಂಬುದನ್ನು ಆ.ನಾ.ಕೃ. ಎಂದು ಸಂಬೋಧಿಸಿ ಸುಬ್ಬರಾಯರಿಂದ ಹೊಡೆತ ತಿಂದ ನಂತರವೇ ಗಂಭೀರವಾಗಿ ಸಾಹಿತ್ಯವನ್ನು ಓದತೊಡಗಿದ್ದು. ಪ್ರೌಢಶಾಲೆಗೆ ಬರುವ ವೇಳೆಗೆ ಅ.ನ.ಕೃ., ತ.ರಾ.ಸು., ಕಟ್ಟೀಮನಿ, ಮಾಸ್ತಿ, ಶಿವರಾಮ ಕಾರಂತ ಮೊದಲಾದವರ ಕಥೆ, ಕಾದಂಬರಿಗಳ ಪರಿಚಯವಾಗಿತ್ತು. ಇದಲ್ಲದೆ ಸುಬ್ಬರಾಯರು ಪ್ರಬಂಧ ಸ್ಪರ್ಧೆಯಿಟ್ಟು ಗೆದ್ದವರಿಗೆ ಬೆಲ್ಲದುಂಡೆ ಎಂದು ಆಸೆ ತೋರಿಸಿ ಸಾಹಿತ್ಯದ ಹುಚ್ಚು ಹಿಡಿಸಿದ್ದರು. ಒಮ್ಮೆ ಸುಬ್ಬರಾಯರು "ನಿಮ್ಮೂರ ಕಟ್ಟಿ ಹನುಮನ ಬಗ್ಗೆ ಪ್ರಬಂಧ ಬರೆಯಿರಿ" ಎಂದು ಹೇಳಿದಾಗ ಹನುಮಂತ ಸಮುದ್ರ ಹಾರಿದ ಕತೆ ಕೇಳಿದ್ದು ಜ್ಞಾಪಕಕ್ಕೆ ಬಂದು, "ನಮ್ಮೂರ ಹನುಮ ರಾತ್ರಿವೇಳೆ ಊರಮುಂದಿನ ಕೆರೆ ಹಾರಿಕೊಂಡು ಹೋಗಿ ಮಾವಿನತೋಟಕ್ಕೆ ಹೋಗಿ ಮರವೇರಿ ಮಾವಿನ ಹಣ್ಣು ತಿಂದು ಬರುತ್ತಿದ್ದ" ಎಂದು ಬರೆದು ಬೈಸಿಕೊಂಡದ್ದೂ ಉಂಟು. ಸಂಜೆ ಕಾಲೇಜಿಗೆ ಸೇರಿದಾಗ ದೊರೆತ ಸಾಹಿತಿ ಮಿತ್ರರ ಒಡನಾಟದಿಂದ ಸಾಹಿತ್ಯದ ಓದು, ಬರಹವನ್ನು ಅತಿ ಗಂಭೀರವಾಗಿ ತೆಗೆದುಕೊಂಡು ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಮೊದಲ ಲೇಖನ ಕಸ್ತೂರಿ ಮಾಸಪತ್ರಿಕೆಯಲ್ಲಿ, ಮೊದಲ ಕತೆ ಇಂಚರ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಿತು.
ಗುಂಡೂರಾವ್ ಅವರು ಬರೆದ ಮೊದಲ ಹಾಸ್ಯಲೇಖನ "ಮಾರ್ಗರೇಟಿಸಂ V/s ಸೀತಮಿಸಂ"ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಇದೇ ಸಂದರ್ಭದಲ್ಲಿ ನಾಟ್ಯಸಂಘ ಥಿಯೇಟರ್ ಸೆಂಟರಿನವರು ಏರ್ಪಡಿಸುತ್ತಿದ್ದ ಅಂತರ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಉಲ್ಲಾಳ್‌ಷೀಳ್ಡಿಗಾಗಿ ನಾಟಕದಲ್ಲಿ ಅಭಿನಯಿಸಿ ಕಾಲೇಜಿಗೆ ಷೀಲ್ಡ್ ದೊರಕಿಸಿದ್ದಲ್ಲದೆ ಮರುವರ್ಷ ನಾಟಕದ ವಿಮರ್ಶೆಗಾಗಿ ಪ್ರಜಾವಾಣಿ ಪತ್ರಿಕೆಯಿಂದ ಬಹುಮಾನ ಗಳಿಸಿದರು.
ವೈ. ಎನ್. ಗುಂಡೂರಾವ್ ಅವರು ಬರೆದ ಹಲವಾರು ಹಾಸ್ಯ ಲೇಖನಗಳು, ಕಥೆಗಳು ಪ್ರಖ್ಯಾತ ನಿಯತಕಾಲಿಕಗಳಾದ ಸುಧಾ, ತರಂಗ, ಮಯೂರ, ತುಷಾರ, ಕಸ್ತೂರಿ, ಮತ್ತು ದಿನಪತ್ರಿಕೆಗಳಾದ ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಳ್ಳತೊಡಗಿದವು. 1994ರಲ್ಲಿ ಪ್ರಕಟವಾದ ಮೊದಲ ಹಾಸ್ಯ ಸಂಕಲನ ‘ನಗೆಮಿಂಚು’. ನಂತರ ಇವರ ನಗೆಮಲ್ಲಿಗೆ, ಅಡ್ಜೆಸ್ಟ್ ಮಾಡ್ಕೋಬೇಕ್ರಿ, ಅಸಲಿ-ನಕಲಿ, ನಗೆ ಹೂರಣ, ಹಾಸ್ಯಾಂಬರ ಮುಂತಾದ ಸಂಕಲನಗಳು ಪ್ರಕಟಗೊಂಡವು. 'ಅನಾವರಣ', 'ಅಂಕುರ', 'ಭೂಮಿಕ' ಮುಂತಾದವು ಕಥಾಂಕಲನಗಳು. ರಾಮಾಯಣ - ಮಹಾಭಾರತ ಉಪಕಥೆಗಳ 6 ಸಂಗ್ರಹಗಳಿವೆ. ಕಥಾಸರಿತ್ಸಾಗರದ ಕಥೆಗಳು, ತೆನಾಲಿ ರಾಮನ ಕಥೆಗಳು, ಭಾರತದ ಸ್ವಾತಂತ್ರ್ಯ ಹೋರಾಟಗಾರರು, ‘ಗುಬ್ಬಿಗಾನ’, 'ನನ್ನ ಪ್ರೀತಿಯ ಅಪ್ಪ'
ಮುಂತಾದ ಪ್ರಬಂಧ ಸಂಕಲನಗಳು, ಆತ್ಮ ಕಥಾ ವೃತ್ತಾಂತದ " ನಮ್ಮ ಮನೆಯ ಬೆಳಕು, ನೆನಪಿನ ಚಿತ್ತಾರ, ಹಳ್ಳಿಯ ಚಿತ್ರ ವಿಚಿತ್ರಗಳು " ಮುಂತಾದ ಮೂರು ಕೃತಿಗಳು ಅಲ್ಲದೆ ಹಿರಿಯ ಸಾಹಿತಿಗಳು ಬರೆದ ಕ್ಷೌರ ಮತ್ತು ಮಸಾಲೆ ದೋಸೆಗೆ ಸಂಬಂಧಿಸಿದ " ಚೌರಸುಖ ಮತ್ತು ಘಮಘಮ ಮಸಾಲೆದೋಸೆ " ಪ್ರಬಂಧ ಸಂಕಲನಗಳನ್ನು ಸಂಪಾದಿಸಿದ್ದಾರೆ.
ವೈ. ಎನ್. ಗುಂಡೂರಾವ್ ಅವರು ಸಂಪಾದಿಸಿದ ಪ್ರಸಿದ್ಧ ಸಾಹಿತಿಗಳ ಹಾಸ್ಯ ಸಂಕಲನಗಳು ಅನೇಕ. ನಾಡಿಗೇರದ ಆಯ್ದ ನಗೆ ಬರಹಗಳು, ದಾಶರಥಿ ದೀಕ್ಷಿತರ ಆಯ್ದ ನಗೆ ಬರಹಗಳು, ಬೆಸ್ಟ್ ಆಫ್ ಸುನಂದಮ್ಮ, ಬೆಸ್ಟ್ ಆಫ್ ಕಸ್ತೂರಿ, ಬೆಸ್ಟ್ ಆಫ್ ನಾಡಿಗೇರ್, ಬೆಸ್ಟ್ ಆಫ್ ಪಾ. ವೆಂ. ಆಚಾರ್ಯ, ಸಾ.ಕೃ. ಪ್ರಕಾಶ್‌ರವರ ‘ನಗೆಬಾರದೆ ಅರೆಗಳಿಗೆ’ ಮುಂತಾದ ಅನೇಕ ಕೃತಿಗಳು ಇದರಲ್ಲಿವೆ. ಇವರು ದಾಸ ಸಾಹಿತ್ಯಕ್ಕೆ ನೀಡಿದ ಕೃತಿ ‘ಹರಿದಾಸರು ಕಂಡ ಶ್ರೀನಿವಾಸ’. ‘ದಾರ್ಶನಿಕರು ಕಂಡ ಆಂಜನೇಯ’, ‘ನಾಗದರ್ಶನ’ ಮುಂತಾದವು ಇವರು ಇತರರೊಡನೆ ಸಂಪಾದಿಸಿದ ಕೃತಿಗಳು.
ವೈ. ಎನ್. ಗುಂಡೂರಾವ್ ಅವರ ಅಂಕಣಬರಹಗಳ ಕೃತಿ ‘ಸಾಹಿತಿಗಳು ರಸನಿಮಿಷಗಳು’. ಇದಲ್ಲದೆ ಕನ್ನಡ ಸಾಹಿತ್ಯ ದಿನಮಣಿಗಳು, ಎಂ.ನರೇಂದ್ರಬಾಬು (ಸಿನಿಮಾ), ಎಚ್.ನರಸಿಂಹಯ್ಯ, ಚಿತ್ರರಂಗದ ತ್ರಿವಿಕ್ರಮ ದ್ವಾರಕೀಶ್, ಭಾರತ ಸ್ವಾತಂತ್ರ್ಯ ಹೋರಾಟಗಾರರು ಮುಂತಾದ ಅನೇಕ ಕೃತಿಗಳನ್ನು ಮೂಡಿಸಿದ್ದಾರೆ.
ಗುಂಡೂರಾವ್ ಅವರ ಅನೇಕ ಬರಹಗಳು ಕರ್ನಾಟಕ ಸಾಹಿತ್ಯ ಅಕಾಡಮಿಯ ಹಲವಾರು ವಾರ್ಷಿಕ ಸಂಕಲನಗಳಲ್ಲಿ, ಹಾಸ್ಯ ಸಂಕಲನಗಳಲ್ಲಿ, ಪ್ರಬಂಧಗಳಲ್ಲಿ ಸೇರ್ಪಡೆಗೊಂಡಿವೆ. ಕನ್ನಡ ಸಂಸ್ಕೃತಿ ಇಲಾಖೆಯ 'ಕಣಜ'ದಲ್ಲಿ ಇವರು ಮೂಡಿಸಿರುವ ಅನೇಕ ವ್ಯಕ್ತಿಚಿತ್ರಗಳಿವೆ.
ಇಂತಹ ಬರಹಗಳು 1500 ಪುಟಗಳ (2 ಸಂಪುಟಗಳಲ್ಲಿ) “ಕನ್ನಡ ಸಾಹಿತ್ಯದ ದಿನ ಮಣಿಗಳು” ಕೃತಿಯಾಗಿ ಹೊರಹೊಮ್ಮಿದೆ.
ವೈ. ಎನ್. ಗುಂಡೂರಾವ್ ಅವರ 'ಮಬ್ಬು ಹರಿದಾಗ’ ಕೃತಿಗೆ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ (ನವ ಸಾಕ್ಷರರಿಗಾಗಿ), ಬೆಂಗಳೂರು ನಗರ ಪಾಲಿಕೆ ಗಿರಿನಗರ ವಿಭಾಗದಿಂದ ಕೆಂಪೇಗೌಡ ಪ್ರಶಸ್ತಿ, ಅಡ್ಜೆಸ್ಟ್ ಮಾಡ್ಕೋಬೇಕ್ರಿ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕುಂಬಾಸ ದತ್ತಿನಿಧಿ ಪ್ರಶಸ್ತಿ, ಬನಶಂಕರಿ ಕ್ಷೇಮಾಭಿವೃದ್ಧಿ ಸಂಘದಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಪತ್ರಿಕೆಗಳ ವಿಶೇಷಾಂಕಗಳ ಬಹುಮಾನ ಮುಂತಾದ ಹಲವಾರು ಗೌರವಗಳು ಸಂದಿವೆ.
ಇದುವರೆವಿಗೂ 48 ಕೃತಿಗಳನ್ನು ಪ್ರಕಟಿಸಿರುವ ಗುಂಡೂರಾವ್ ಅವರು ತಮ್ಮ 49 ಮತ್ತು 50ನೇ ಕೃತಿಗಳನ್ನು ಜುಲೈ ಮಾಸದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಸರಳ ಸಹೃದಯಿ ಆತ್ಮೀಯರೂ, ನನ್ನ ಬರಹಗಳಿಗೆ ಸ್ಫೂರ್ತಿದಾಯಕರೂ ಆದ ವೈ.ಎನ್. ಗುಂಡೂರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
On the birthday of our writer Y. N. Gundurao 🌷🙏🌷

ಕಾಮೆಂಟ್‌ಗಳು