ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ. ವಿ. ಕುಲಕರ್ಣಿ


 ಜಿ. ವಿ. ಕುಲಕರ್ಣಿ


ಹಿರಿಯರಾದ ಡಾ. ಗುರುನಾಥ ವಿಠ್ಠಲರಾವ್ ಕುಲಕರ್ಣಿ ಅವರು ಕವಿ, ನಾಟಕಕಾರ, ವಾಗ್ಮಿ ಮತ್ತು ವಿಮರ್ಶಕರಾಗಿ ಬಹಳ ಸಾಧನೆ ಮಾಡಿದವರು. ಇವರು 'ಜೀವಿ ಕುಲಕರ್ಣಿ' ಎಂದೇ ಹೆಸರಾದವರು.

ಜಿ. ವಿ. ಕುಲಕರ್ಣಿ 1934ರ  ಅಕ್ಟೋಬರ್ 17ರಂದು ಬಿಜಾಪುರದ ಡೊಮ್ನಾಳದಲ್ಲಿ ಜನಿಸಿದರು. ತಂದೆ ವಿಠ್ಠಲರಾವ್ ರಾಮಚಂದ್ರರಾವ್ ಕುಲಕರ್ಣಿ.  ತಾಯಿ ರುಕ್ಮಿಣಿ ಬಾಯಿ. 

ಜಿ. ವಿ. ಕುಲಕರ್ಣಿ ಅವರ ಪ್ರಾರಂಭಿಕ ಶಿಕ್ಷಣ ಹುಬ್ಬಳ್ಳಿ, ಗದಗದಲ್ಲಿ ಮತ್ತು ಕಾಲೇಜು ಶಿಕ್ಷಣ ಧಾರವಾಡದಲ್ಲಿ ನಡೆಯಿತು. ಜೆ.ಎಸ್.ಎಸ್. ಕಾಲೇಜಿನಿಂದ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತ ಎಂ.ಎ. ಪದವಿ, ಜೆ.ಎಸ್.ಎಸ್. ಲಾ ಕಾಲೇಜಿನಿಂದ ಎಲ್.ಎಲ್.ಬಿ., ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿ ಪಡೆದರು. “ವಿ.ಕೃ. ಗೋಕಾಕರ ಮೇಲೆ ಅರವಿಂದರ ಪ್ರಭಾವ” ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು.

ಜಿ. ವಿ. ಕುಲಕರ್ಣಿ ಉದ್ಯೋಗಕ್ಕಾಗಿ ಮುಂಬೈಗೆ ಬಂದರು. ನಾಲ್ಕುವರ್ಷ ಮಾತುಂಗಾದ ಖಾಲ್ಸಾ ಕಾಲೇಜು ಮತ್ತು ಪಾರ್ಲೆಯ ಢಾಣೂಕರ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ನಡೆಸಿ,  ಅಂಧೇರಿಯ ಎಂ.ವಿ. ಕಾಲೇಜಿನಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ವಿವಿಧ ಹುದ್ದೆಗಳಲ್ಲಿ ದುಡಿದು ನಿವೃತ್ತರಾದರು. 

ಜಿ. ವಿ. ಕುಲಕರ್ಣಿ ಅವರ ಕೃತಿಗಳಲ್ಲಿ 'ಧೃತರಾಷ್ಟ್ರ ಸಂತಾನ',  'ಸತ್ಯಕಥೆ ಕಲ್ಪನೆಗಿಂತಲೂ ವಿಚಿತ್ರ' ಕಥಾಸಂಕಲನಗಳು;  ಮಧುಸಂಚಯ, ಹುಚ್ಚ-ಹುಚ್ಚಿ, ನಾಲ್ಕು ಧ್ವನಿ, ಸಂಜೀವಿನಿ, ದಶಪದಿ, ಮ್ಯೂಸಿಂಗ್ (ಆಂಗ್ಲಭಾಷಾ ಕವನ ಸಂಗ್ರಹ), ವಚನಗಳು, ಮುಂತಾದ ಕವನ ಸಂಕಲನಗಳು; ಪ್ರಜಾಪ್ರಭುತ್ವ, ಗುಂಡನ ಮದುವೆ, ಕಾದಿರುವಳು ಶಬರಿ, ವಿವೇಕ ಚೂಡಾಮಣಿ, ಸಂಭವಾಮಿ ಯುಗೇ ಯುಗೇ, ನರಕ ಮುಂತಾದ ನಾಟಕಗಳು; ವ್ಯಥೆಯಾದಳು ಹುಡುಗಿ ಎಂಬ ಕಾದಂಬರಿ ಸೇರಿವೆ.  ಇವರಿಗೆ ಮತ್ತಷ್ಟು ಪ್ರಖ್ಯಾತಿಯನ್ನು ತಂದುಕೊಟ್ಟ ಕೃತಿಗಳೆಂದರೆ ಬೇಂದ್ರೆ ಮತ್ತು ಗೋಕಾಕರ ನಿಕಟ ಸಂಪರ್ಕದಿಂದ ಮೂಡಿ ಬಂದ ‘ನಾ ಕಂಡ ಬೇಂದ್ರೆ’ ಮತ್ತು 'ಸಮನ್ವಯಾಚಾರ್ಯ ಗೋಕಾಕ್’.  ಇದಲ್ಲದೆ ಸಾಹಿತ್ಯ, ಬೇಂದ್ರೆ ಒಳನೋಟ, ಬೇಂದ್ರೆ ಸಮಗ್ರ ಕಾವ್ಯ ದರ್ಶನ ಕೃತಿಗಳನ್ನೂ ಬರೆದಿದ್ದಾರೆ.

ಜಿ. ವಿ. ಕುಲಕರ್ಣಿ ಅವರು ವಿದೇಶ ಪ್ರವಾಸ ಮಾಡಿ 2000ದಲ್ಲಿ ಹ್ಯೂಸ್ಟನ್‌ನಲ್ಲಿ ನಡೆದ ಪ್ರಥಮ ವಿಶ್ವ ಸಹಸ್ರಮಾನ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ, ಅಮೆರಿಕಾದ ವಾಸ್ತವ್ಯದ ಅನುಭವದ ಕುರಿತಾಗಿ ಬರೆದ ಕೃತಿ  ‘ನಾ ಕಂಡ ಅಮೆರಿಕಾ.’  

ಜಿ. ವಿ. ಕುಲಕರ್ಣಿ ಅಧ್ಯಾತ್ಮದಲ್ಲೂ ಆಸಕ್ತರು. ಶ್ರೀ ವಾಯುಸ್ತುತಿ, ಶ್ರೀ ನೃಸಿಂಹಸ್ತುತಿ ಕೃತಿಗಳನ್ನು  ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಯೋಗ. ಯೋಗದ ಪ್ರಚಾರಕ್ಕಾಗಿ ಕರ್ನಾಟಕ, ಮಹಾರಾಷ್ಟ್ರದ ಉದ್ದಗಲಕ್ಕೂ ಸಂಚಾರ ಮಾಡಿದರು. ಇವರು ಪ್ರಕೃತಿ ಚಿಕಿತ್ಸೆಯಲ್ಲೂ ಪರಿಣಿತರು. ಈ ಕುರಿತು ಇವರು ರಚಿಸಿದ ಕೃತಿ ‘ಔಷದಿಯಿಲ್ಲದೆ ಬದುಕಲು ಕಲಿಯಿರಿ’. ‘ಶಾಂತಾರಾಮ ಪಿಕಳೆ’ ಇವರು ಬರೆದ ಜೀವನ ಚರಿತ್ರೆ. 

ಜಿ. ವಿ. ಕುಲಕರ್ಣಿ ಪತ್ರಿಕೆಗಳಲ್ಲೂ ಹೆಸರು. ಸಂಯುಕ್ತ ಕರ್ನಾಟಕಕ್ಕಾಗಿ ‘ಮುಂಬೈ ಕಾಲಂ’ ಬರೆಯುತಿದ್ದರು.  ನಿತ್ಯಾನಂದ ಪತ್ರಿಕೆಯ ಸಂಪಾದಕರಾಗಿದ್ದರು. ಮುಂಬಯಿಯ ಕರ್ನಾಟಕಮಲ್ಲ ಪತ್ರಿಕೆಗಾಗಿ ‘ಜೀವನ ಮತ್ತು ಸಾಹಿತ್ಯ’ ಅಂಕಣ ಬರೆಯುತ್ತಿದ್ದರು. 

ಪೂಜ್ಯ ಡಾ. ಜಿ. ವಿ. ಕುಲಕರ್ಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 


On the birth day of writer Dr. G. V. Kulkarni 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ