ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೆ.ಕೆ. ರಮೇಶ


 ​ಜೆ ಕೆ ರಮೇಶ


ಡಾ|| ಜೆ.ಕೆ ರಮೇಶ ಅವರು ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದ ಸಾಧಕರು.

ಜೆ.ಕೆ ರಮೇಶ ಅವರು 1949ರ ಅಕ್ಟೋಬರ್ 16ರಂದು ಜನಿಸಿದರು.  ಇವರ ಮೂಲ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ (ಬಾವಿಕೈ-ಸರು ಅಂಚೆ) ಜಡ್ಡಗದ್ದೆ.   ತಂದೆ ​​​ಕೊಲ್ಲಣ್ಣ ಗೌಡರು.  ತಾಯಿ ​​​ಪಾರ್ವತಮ್ಮ.  ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.  ಪದವಿ ಪಡೆದು ಕುವೆಂಪು ವಿಶ್ವವಿದ್ಯಾನಿಲಯದಿಂದ “ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳು – ಒಂದು ಅಧ್ಯಯನ" ಎಂಬ ವಿಚಾರದಲ್ಲಿ ಪಿಎಚ್.ಡಿ ಸಾಧನೆ ಮಾಡಿದರು.

​​​​ಜೆ.ಕೆ ರಮೇಶ ಅವರು 34 ವರ್ಷ 
ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ   ಪ್ರಾಧ್ಯಾಪಕರಾಗಿ ಹಾಗೂ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರ ಕೃಷಿಕರಾಗಿ ಗ್ರಾಮೀಣ ಜೀವನ ನಡೆಸುತ್ತಿರುವ ಶ್ರೀಯುತರು, ಸಾಹಿತ್ಯಕೃಷಿಯನ್ನೂ ಅಪಾರವಾಗಿ ಮಾಡುತ್ತ ಬಂದಿದ್ದಾರೆ.

ಜೆ.ಕೆ ರಮೇಶ ಅವರು 1974 ರಲ್ಲಿ ಭುವನೇಶ್ವರದಲ್ಲಿ ನಡೆದ ಭಾಷಾ ವಿಜ್ಞಾನದ ಬೇಸಿಗೆ ಶಿಬಿರ (ಭಾರತೀಯ ಭಾಷಾ ಸಂಸ್ಥಾನದ ಏರ್ಪಾಡು)ದಲ್ಲಿ ಭಾಗಿಯಾಗಿದ್ದರು.  1990 ಮತ್ತು 1998 ರಲ್ಲಿ ಮೈಸೂರು ಮತ್ತು ಶಿವಮೊಗ್ಗಗಳಲ್ಲಿ ನಡೆದ ಪುನರ್ನವೀಕರಣ ಶಿಬಿರಗಳಲ್ಲಿ ಭಾಗಿಯಾಗಿದ್ದರು. 1998-99 ರಲ್ಲಿ
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕುವೆಂಪು ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕುವೆಂಪು ವಿ.ವಿ. (ದೇವಂಗಿ)ಯಲ್ಲಿ
ಸಂಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಜೆ.ಕೆ ರಮೇಶ ಅವರ  ಪ್ರಕಟಿತ ಕೃತಿಗಳಲ್ಲಿ
ಸಿನೆಮಾ ( ವಿಜ್ಞಾನ ಮತ್ತು ಕಲೆಯ ಪರಿಚಯ ), ಆಧುನಿಕ ಸಾಹಿತ್ಯ ಕೆಲವು ಅಧ್ಯಯನಗಳು (ವಿಮರ್ಶೆ),  ನೀತ್ಯುಳ್ಳ ಜ್ಯೋತೀ ನಡೆಮುಂದೆ (ಜಾನಪದ) – ಮಲೆಸೀಮೆಯ ಕಥೆಗಳು (ಜಾನಪದ), ಸ್ಮೃತಿ ಸಂಸ್ಕೃತಿ – (ಸಂಪಾದನೆ), ಕನ್ನಡ ಪೌರಾಣಿಕ ಕಾದಂಬರಿಕಾರರು ಕಲ್ಲುಸಾರ (ವಿಮರ್ಶೆ), ಕುಂಸಿ ಹನುಮಂತಪ್ಪ (ಜಾನಪದ), ಪ್ರೊ|| ಎಸ್.ವಿ.ಪರಮೇಶ್ವರ ಭಟ್ಟರ ಕಾವ್ಯ ಸಂಗ್ರಹ (ಸಂಪಾದನೆ), ಮರಾಟಿ ಕುಣುಬಿಗಳು (ಜಾನಪದ, ಬುಡಕಟ್ಟು ಅಧ್ಯಯನ), ಸಮಕಾಲೀನ ಪ್ರಜ್ಞೆ ಮತ್ತು ಕನ್ನಡ ಪೌರಾಣಿಕ ಕಾದಂಬರಿಗಳು, Kunubis – Marathi Nayaka, ಹಾ.ಮಾ. ನಾಯಕ, ಖ್ಯೇಲಪ್ಪ ಕವಿ ವಿರಚಿತ ಬಾಲಕ್ರೀಡಾ ಕಥೆ – (ಗ್ರಂಥ ಸಂಪಾದನೆ), ಕೋಲಿಂ ಎಂಬ ಕೌತುಕ – ಅಭಿನಂದನಾ ಗ್ರಂಥ (ಕೋಣಂದೂರು ಲಿಂಗಪ್ಪ ಅಭಿನಂದನಾ ಸಮಿತಿ), ಇಂಡಿಯಾದೊಳಗೊಂದು ಇಣುಕು - ಪ್ರವಾಸ ಕಥನ, ಸುಮನಸ - ಅಭಿನಂದನ ಗ್ರಂಥ (ಎನ್.ಶ್ರೀನಿವಾಸ ಉಡುಪ ಅಭಿನಂಧನಾ ಸಮಿತಿ), ಪಳುವಳಿಕೆ (ಜಾನಪದ), ಪ್ರಾಚೀನ ಕನ್ನಡ ಕವಿ ಕಾವ್ಯ ಕಣ್ಣೋಟ, ಗಾಳಿಬೆಳಕಿನ ಪಯಣಿಗರು, ಇಂಡಿಯಾದ ಹೊರಗೊಂದು ಹಣುಕು - ಪ್ರವಾಸ ಕಥನ  ಮುಂತಾದವು ಸೇರಿವೆ. 

ರಮೇಶ ಅವರು ಪೌಢಶಾಲೆಯ 9 ನೇ ತರಗತಿ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ; ಕುವೆಂಪು ವಿ.ವಿ. ಪದವಿ ತರಗತಿ ಕನ್ನಡ ಪಠ್ಯ ಪುಸ್ತಕದ ಸಂಪಾದಕರಾಗಿ; 2003-04 ರಲ್ಲಿ ಕೊಪ್ಪ, ಹಾಸನ ಅರಸೀಕೆರೆ, ಹೊಸನಗರಗಳಲ್ಲಿ ನಡೆದ ಪ್ರೌಢಶಾಲಾ ಕನ್ನಡ ಅಧ್ಯಾಪಕರ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ;  ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಅನೇಕ ವಿಚಾರ ಸಂಕಿರಣ, ಕಮ್ಮಟ, ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ; ಅನೇಕ ಸಭೆ ಸಮಾರಂಭಗಳಲ್ಲಿ ಉಪನ್ಯಾಸಕರಾಗಿ; 2002 ರಿಂದ 2007 ರವರೆಗೆ ಎರಡು ಅವಧಿಗೆ ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ; ನೀನಾಸಂ ವತಿಯಿಂದ (ಹೆಗ್ಗೋಡು) ಚಲನಚಿತ್ರ ಸಹೃದಯತಾ ಶಿಬಿರಗಳನ್ನು ನಡೆಸಿದವರಾಗಿ; 'ಬಾಲಕ ಪುಟ್ಟಪ್ಪ’ ಟೆಲಿ ಚಿತ್ರದಲ್ಲಿ ಅಭಿನಯ ಕಲಾವಿದರಾಗಿ, ನಿರೂಪಕರಾಗಿ; 'ಚಿದಂಬರ ರಹಸ್ಯ’ ಟೆಲಿ ಚಿತ್ರದಲ್ಲಿ ಅಭಿನಯ ಕಲಾವಿದರಾಗಿ; 'ಶ್ರೀಮನ್ಮೂಕವಾಗಿತ್ತು’ ಟೆಲಿ ಚಿತ್ರದಲ್ಲಿ ಅಭಿನಯ ಕಲಾವಿದರಾಗಿ ಮತ್ತು ಸಂಭಾಷಣೆ ರಚನಕಾರರಾಗಿ; 2000-01, 2002-03 ರಲ್ಲಿ ಭದ್ರಾವತಿ ಆಕಾಶವಾಣಿಯ ಜಾನಪದ ಕಾರ್ಯಕ್ರಮಗಳ ಆಯ್ಕೆ ಸಮಿತಿ ಸದಸ್ಯರಾಗಿ; ಮತ್ತೆ 2025-26 ಅವಧಿಗೆ ಇದೇ ಸಮಿತಿಗೆ ಸದಸ್ಯರಾಗಿ; ಆಕಾಶವಾಣಿಯ ಮೂಲಕ ಭಾಷಣಕಾರರಾಗಿ – ಚಿಂತನಕಾರರಾಗಿ; 2004 ರಿಂದ ಹಂಪೆ ಕನ್ನಡ ವಿ.ವಿ ಯ ಪಿಹೆಚ್.ಡಿ ಮತ್ತು ಎಂ.ಫಿಲ್ ಅಭ್ಯರ್ಥಿಗಳಿಗೆ ಮಾರ್ಗದರ್ಶಿಯಾಗಿ ಹೀಗೆ ಬಹುಮುಖಿಯಾಗಿ ಕಾರ್ಯನಿರ್ವಹಿಸಿದ್ದಾರೆ.  ಇವರ 'ನೀತ್ಯುಳ್ಳ ಜ್ಯೋತೀ ನಡೆಮುಂದೆ' ಮೈಸೂರು ವಿ.ವಿ ಜಾನಪದ ಬಿ.ಎ ತರಗತಿಗೆ ಪಠ್ಯಪುಸ್ತಕವಾಗಿತ್ತು. ಇವರ ಹಲವಾರು ಲೇಖನಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರಾಷ್ಟ್ರ ಕುವೆಂಪು ಪ್ರತಿಷ್ಠಾನ (ರಿ) ಕುಪ್ಪಳ್ಳಿ, ಇದರ ನಿರ್ದೇಶಕ ಮಂಡಳಿಯ ಸದಸ್ಯರಾಗಿ 5 ವರ್ಷ ಕಾರ್ಯನಿರ್ವಹಿಸಿದ್ದಾರೆ.  ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗ್ರಾಮಚರಿತ್ರೆಕೋಶ ಯೋಜನೆಯ ಶಿವಮೊಗ್ಗ ಜಿಲ್ಲಾ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ರಮೇಶ ಅವರಿಗೆ 2009 ನೇ ಸಾಲಿನ ಸಂಶೋಧನ ಪ್ರಕಾರಕ್ಕೆ ‘ಮರಾಟಿ ಕುಣುಬಿಗಳು’ ಕೃತಿಗೆ ಬೆಂಗಳೂರಿನ ಅತ್ತಿಮಬ್ಬೆ ಪ್ರತಿಷ್ಠಾನದಿಂದ ‘ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ ಸಂದಿದೆ. 2011 ರ ಜನವರಿಯಲ್ಲಿ ನಡೆದ ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ.  2009 ಇಂಡಿಯಾದೊಳಗೊಂದು ಇಣುಕು ಕೃತಿಗೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಾಯ ಸಾಹಿತ್ಯ ಪ್ರಶಸ್ತಿ ಸಂದಿದೆ.  ಇವರ ಅಂಡಮಾನಿನಲ್ಲಿ ಐದು ದಿನ - ಪ್ರಬಂಧ ಕುವೆಂಪು ವಿವಿ ಬಿ.ಎಸ್ಸಿ ತರಗತಿಯ ಕನ್ನಡ ಪಠ್ಯದಲ್ಲಿ ಸೇರ್ಪಡೆಯಾಗಿದೆ. ಇವರು 2025 ಫೆಬ್ರುವರಿ 6 – 7 ರಂದು ಶಿವಮೊಗ್ಗೆಯಲ್ಲಿ ನಡೆದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು.  

ಸಹೃದಯಿ ಆತ್ಮೀಯ ಹಿರಿಯ ಸಾಧಕರಾದ ಪ್ರೊ. ಜೆ.ಕೆ. ರಮೇಶ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday to Prof. J. K. Ramesh Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ