ಆಶುತೋಷ್ ಮುಖರ್ಜಿ
ಆಶುತೋಷ್ ಮುಖರ್ಜಿ
ಆಶುತೋಷ್ ಮುಖರ್ಜಿ ಭಾರತೀಯ ಸಂಸ್ಕೃತಿಯ ಉಚ್ಚತಮ ಪ್ರತೀಕರಾಗಿದ್ದು ಉದ್ಧಾಮ ಪಂಡಿತ, ದಕ್ಷ ಆಡಳಿತಗಾರ, ಸಮರ್ಥ ಉಪಕುಲಪತಿ ಎಂದು ಖ್ಯಾತಿ ಪಡೆದವರು.
ಆಶುತೋಷ್ ಮುಖರ್ಜಿ 1864ರ ಜೂನ್ 29ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಬಾಲ್ಯದಲ್ಲೇ ಅಸಾಧಾರಣ ಪ್ರತಿಭೆಯನ್ನು ತೋರಿ ಕೋಲ್ಕತ್ತಾದಲ್ಲಿ ಬಿ.ಎ. ಡಿಗ್ರಿ ಪಡೆದು ಮರುವರ್ಷವೇ ಗಣಿತಶಾಸ್ತ್ರ ತೆಗೆದುಕೊಂಡು ಎಂ.ಎ. ಪರೀಕ್ಷೆಯಲ್ಲಿ ಉಚ್ಚಸ್ಥಾನ ಗಳಿಸಿದರು (1884). ಸಂಸ್ಕೃತದಲ್ಲೂ ಪಾಂಡಿತ್ಯ ಗಳಿಸಿದರು.
ಆಶುತೋಷ್ ಮುಖರ್ಜಿ 1888ರಲ್ಲಿ ವಕೀಲಿವೃತ್ತಿಯನ್ನು ಪ್ರಾರಂಭಿಸಿದರು. 1889ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಸದಸ್ಯರಾದರು. 1894ರಲ್ಲಿ ಡಾಕ್ಟರ್ ಆಫ್ ಲಾಸ್ ಪ್ರಶಸ್ತಿ ಗಳಿಸಿದರು. 1899 ಮತ್ತು 1901ರಲ್ಲಿ ಬಂಗಾಳ ಶಾಸನ ಸಭೆಯ ಸದಸ್ಯರಾಗಿ ಆರಿಸಲ್ಪಟ್ಟರು. ಇವರ ಪಾಂಡಿತ್ಯ, ಕರ್ತವ್ಯನಿಷ್ಠೆಗಳನ್ನು ಕಂಡ ಸರ್ಕಾರ ಅವರಿನ್ನೂ ನಲವತ್ತು ವರ್ಷದವರಾಗಿದ್ದಾಗಲೇ ಕಲ್ಕತ್ತ ಶ್ರೇಷ್ಠನ್ಯಾಯಾಲಯದ ನ್ಯಾಯಾಧಿಪತಿಯನ್ನಾಗಿ ನೇಮಿಸಿತು. ಹತ್ತೊಂಬತ್ತು ವರ್ಷಕಾಲ ಈ ಪೀಠವನ್ನಲಂಕರಿಸಿ ಅತ್ಯಂತ ಸಮರ್ಥ ಮತ್ತು ನ್ಯಾಯನಿಷ್ಠ ನ್ಯಾಯಾಧೀಶರೆಂದು ಹೆಸರುಗಳಿಸಿದರು.
ಆಶುತೋಷ್ ಮುಖರ್ಜಿ 1906ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಆರಿಸಲ್ಪಟ್ಟು ಎಂಟು ವರ್ಷ ಅದರ ಪ್ರಗತಿಗಾಗಿ ದುಡಿದರು. 1921-22ರಲ್ಲೂ ಅದೇ ಹುದ್ದೆಗೆ ಆರಿಸಲ್ಪಟ್ಟರು. 1902ರಲ್ಲಿ ಸ್ಥಾಪಿತವಾಗಿದ್ದ ವಿಶ್ವವಿದ್ಯಾಲಯಗಳ ಮೇಲಿನ ಸರ್ಕಾರಿ ನಿಯೋಗವು ವಿದ್ಯಾಲಯಗಳ ಆಡಳಿತದ ಮೇಲೆ ಹತೋಟಿಯಿರಬೇಕೆಂದು ಮನವಿ ಮಾಡಿತ್ತು. ಇದು 1904ರಲ್ಲಿ ಕಾನೂನಾಗಿ ಹೊರಬಂತು. ವಿಶ್ವವಿದ್ಯಾಲಯವು ಸರ್ಕಾರಿ ಹತೋಟಿಗೊಳಪಟ್ಟಿರಕೂಡದೆಂದು ಅಸುತೋಷರು ಕಾನೂನನ್ನು ಕಟುವಾಗಿ ವಿರೋಧಿಸಿದರು. ಡಾ|| ಸಿ. ವಿ. ರಾಮನ್ ಮುಂತಾದ ಪ್ರತಿಭಾವಂತ ಪ್ರಾಧ್ಯಾಪಕರನ್ನು ನೇಮಿಸಿಕೊಂಡು ಅವರಿಗೆ ಉತ್ತೇಜನಕೊಟ್ಟರು. ಅವರ ಆಡಳಿತದಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯ ನಾನಾಮುಖವಾಗಿ ಪ್ರಗತಿಹೊಂದಿತು.
ಆಶುತೋಷ್ ಮುಖರ್ಜಿ ಪಾಲಿ,ಫ್ರೆಂಚ್, ರಷ್ಯನ್ ಮುಂತಾದ ಅನೇಕ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಗಣಿತ ಶಾಸ್ತ್ರ ಮತ್ತು ಖಗೋಳ ಶಾಸ್ತ್ರದಲ್ಲಿ ಅವರು ವಿಶ್ವಮಾನ್ಯರಾಗಿದ್ದರು. ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿ, ರಾಯಲ್ ಸೊಸೈಟಿ ಆಫ್ ಎಡಿನ್ಬರ್ಗ್, ಎಡಿನ್ಬರ್ಗ್ ಮ್ಯಾಥಮೆಟಿಕಲ್ ಸೊಸೈಟಿ, ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿ ಸೇರಿದಂತೆ ವಿಶ್ವದ ಪ್ರತಿಷ್ಠಿತ ಸಂಘಟನೆಗಳು ಇವರಿಗೆ ಸದಸ್ಯತ್ವ ಗೌರವ ನೀಡಿದ್ದವು. ಕಂಪಾನಿಯನ್ ಆಫ್ ದ ಆರ್ಡರ್ ಆಫ್ ಸ್ಟಾರ್ ಆಫ್ ಇಂಡಿಯಾ, ಬ್ರಿಟಿಷ್ ಸರ್ಕಾರದ ನೈಟ್ ಗೌರವ ಮುಂತಾದವುಗಳೂ ಅವರಿಗೆ ಸಂದಿದ್ದವು.
ಆಶುತೋಷ್ ಮುಖರ್ಜಿ 1924ರ ಮೇ 25ರಂದು ನಿಧನರಾದರು.
On the birth anniversary of great scholar Ashutosh Mukherjee, CSI, FRSE, FRAS, FPSL, MRIA
ಕಾಮೆಂಟ್ಗಳು