ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಂಡಿತ್ ಚೌರಾಸಿಯಾ


 ಪಂಡಿತ್ ಹರಿಪ್ರಸಾದ್ ಚೌರಾಸಿಯಾ


ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ನಾದವೆಂದರೆ ತಂಗಾಳಿಯಂತೆ. “ಸಂಗೀತವನ್ನೇ ಉಸಿರಾಡುವಷ್ಟು ಒಲವು ನಮ್ಮೊಳಗಿರಬೇಕು” ಎಂಬುದು ಅವರ ಮಾತು ಮತ್ತು ಬದುಕು.  ಸತತ ಅಭ್ಯಾಸವೇ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಸಂಗೀತದಲ್ಲಿನ ಸುದೀರ್ಘ ಸಾಧನೆಗೆ  ಕಾರಣವಾಗಿದೆ. 

ಪಂಡಿತ್  ಹರಿಪ್ರಸಾದ್ ಚೌರಾಸಿಯಾ 1938ರ ಜುಲೈ 1ರಂದು ಅಲಹಾಬಾದಿನಲ್ಲಿ ಜನಿಸಿದರು.  ಅವರದ್ದು ಕುಸ್ತಿ ಪೈಲ್ವಾನರ ಮನೆತನ.  ಅವರ ತಂದೆ ಕಟ್ಟುಮಸ್ತಾದ ಕುಸ್ತಿ ಪಟು.  ಹರಿಪ್ರಸಾದ್ ಚೌರಾಸಿಯಾ ಅವರು ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡರು.   ತಂದೆಗೆ ಮಗನೂ ತನ್ನಂತೆ ಕುಸ್ತಿ ಪಟುವಾಗಬೇಕೆಂದು ಆಸೆ.  ಬಾಲಕ ಹರಿಪ್ರಸಾದನಿಗೋ ಸಂಗೀತದ ಮೇಲೆ ಮೋಹ. ಹೀಗಾಗಿ ಗೌಪ್ಯವಾಗಿ ಸಂಗೀತ ಕಲಿಯಲು ಪ್ರಾರಂಭಿಸಿದ.  ತಂದೆಯ ಮೇಲಿನ ಪ್ರೀತಿಗಾಗಿ ಕುಸ್ತಿ ಅಖಾಡಕ್ಕೂ ಹೋಗುತ್ತಿದ್ದ.   “ನಾನೇನೂ ಒಳ್ಳೆಯ ಕುಸ್ತಿಪಟುವಾಗಿರಲಿಲ್ಲ.  ಆದರೆ, ತಂದೆಯ ಖುಷಿಗಾಗಿ ಗರಡಿಗೆ ಹೋಗುತ್ತಿದ್ದೆ. ಹೀಗೆ  ಮಾಡಿದ ಅಭ್ಯಾಸಗಳಿಂದಾಗಿ ನನ್ನ ದೇಹಧಾರ್ಡ್ಯತೆ ಮತ್ತು ಶ್ವಾಸಕೋಶಗಳು  ಬಲಗೊಂಡಿದ್ದು, ಇಂದಿನ ದಿನದಲ್ಲೂ ಸುದೀರ್ಘ ಸಮಯದವರೆಗೆ ಕೊಳಲು ನುಡಿಸಲು ನನಗೆ ಸಹಾಯಕವಾಗಿದೆ” ಎನ್ನುವ ಹರಿಪ್ರಾಸಾದ್ ಚೌರಾಸಿಯಾ, ಬದುಕಿನ ಪ್ರತಿಯೊಂದು ಕ್ರಿಯೆಯೂ ಹೇಗೆ ನಮ್ಮ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಬಲ್ಲದು ಎಂಬುದನ್ನು ಮನದಟ್ಟು ಮಾಡಿಕೊಡುತ್ತಾರೆ.

ಹರಿಪ್ರಸಾದರು ತಮ್ಮ ಹದಿನೈದನೆಯ ವಯಸ್ಸಿನ ವೇಳೆಗೆ  ತಮ್ಮ ನೆರೆಯಲ್ಲಿದ್ದ ಪಂಡಿತ ರಾಜಾರಾಮರ ಬಳಿ ಗಾಯನವನ್ನು ಕಲಿಯಲು ಪ್ರಾರಂಭಿಸಿದರು.  ನಂತರದಲ್ಲಿ  ವಾರಣಾಸಿಗೆ ಹೋಗಿ  ಪಂಡಿತ ಭೋಲಾನಾಥರ ಬಳಿ ಕೊಳಲು ವಾದನವನ್ನು ಕಲಿಯಲು ಪ್ರಾರಂಭಿಸಿದರು.  

ಹರಿಪ್ರಸಾದರು ತಮ್ಮ 19ನೆಯ ವಯಸ್ಸಿನಲ್ಲಿ ಒರಿಸ್ಸಾದ ಕಟಕ್ ಆಕಾಶವಾಣಿ ಕೇಂದ್ರದಲ್ಲಿ  ಕೊಳಲು ವಾದಕರಾಗಿ ಸೇರ್ಪಡೆಗೊಂಡರು. ಐದು  ವರ್ಷಗಳ ನಂತರದಲ್ಲಿ  ಇವರಿಗೆ ಮುಂಬೈ ಆಕಾಶವಾಣಿ ಕೇಂದ್ರಕ್ಕೆ  ವರ್ಗವಾಯಿತು.   ಈ ಸಂದರ್ಭದಲ್ಲಿ  ಬಾಬಾ ಅಲ್ಲಾವುದ್ದೀನ್ ಖಾನರ ಮಗಳು ಅನ್ನಪೂರ್ಣಾ ದೇವಿ ಅವರ ಬಳಿ ಹೆಚ್ಚಿನ ಮಾರ್ಗದರ್ಶನವನ್ನು ಪಡೆದುಕೊಂಡರು.   ಮುಂಬೈನಲ್ಲಿ  ಹರಿಪ್ರಸಾದರ  ಕೊಳಲು ವಾದನವು ಶ್ರದ್ಧಾಪೂರ್ವಕ ಪರಿಶ್ರಮ ಮತ್ತು ಅನ್ನಪೂರ್ಣಾದೇವಿ ಅವರ ಮಾರ್ಗದರ್ಶನದ ಮೂಲಕ ಸಂಗೀತಲೋಕದಲ್ಲಿ ವಿಸ್ತಾರಗೊಳ್ಳುತ್ತಾ ಸಾಗಿತು. 

ಸಂಗೀತ ಸಂಪ್ರದಾಯದ ಅಡಿಪಾಯದ ಮೇಲೆ ಸುಮನೋಹರ  ಕಲ್ಪನೆ ಮತ್ತು ಪ್ರಾಯೋಗಿಕ ಮನೋಧರ್ಮಗಳನ್ನು ಬೆಸೆದ ಹರಿಪ್ರಸಾದ್ ಚೌರಾಸಿಯಾ ಅವರು ತಮ್ಮದೇ  ಹೊಸ ಶೈಲಿಯನ್ನು ನಿರೂಪಿಸತೊಡಗಿದರು. ದ್ರುಪದ್ ಶೈಲಿಯ ಸಂಗೀತವನ್ನು  ಪ್ರಧಾನವಾಗಿ ಅಳವಡಿಸಿಕೊಂಡಿರುವ ಇವರ ವೇಣುವಾದನ, ಸುದೀರ್ಘ ಅಲಾಪನೆ ಮತ್ತು ಗಾಂಭೀರ್ಯ  ಸುಶ್ರಾವ್ಯತೆಗಳನ್ನು ಮೇಳೈಸಿಕೊಂಡಿದೆ. ಚೌರಾಸಿಯಾ ಅವರದ್ದು ಶಾಸ್ತ್ರೀಯ ಸಂಗೀತ ಮಾತ್ರವಲ್ಲ, ಭಾರತೀಯ ಜಾನಪದ ಸಂಗೀತದಿಂದ ಮೊದಲ್ಗೊಂಡು ಪಾಶ್ಚಾತ್ಯ ಸಂಗೀತದ ವಿವಿಧ ಮಜಲುಗಳವರೆಗೆ ಅವರ ಭೂಮಿಕೆ ಹರಡಿದೆ. 

ಚೌರಾಸಿಯಾ ಅವರಿಗೆ ಯಾವುದೇ ಸಂಗೀತವೂ ಹೊರಗಿನದಲ್ಲ. ಅವರು ಪಂಡಿತ್‌ ಶಿವಕುಮಾರ ಶರ್ಮಾರೊಂದಿಗೆ ಸಿಲ್‌ ಸಿಲಾ, ಚಾಂದನಿ, ಲಾಂಹೆ,  ಢರ್‌,  ಫಾಸ್ಲೆ, ಪರಂಪರಾ ಮುಂತಾದ ಹಲವಾರು  ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 

ಪಂಡಿತ್ ಚೌರಾಸಿಯಾ ಅವರ ಪ್ರಾಯೋಗಿಕ ಆಲ್ಬಂ ‘ಎಟರ್ನಿಟಿ’ ಪಾಶ್ಚಾತ್ಯ ಸಂಗೀತದ ಅಂಶಗಳನ್ನೂ ತನ್ನ  ತೆಕ್ಕೆಗೆ ತೆಗೆದುಕೊಂಡಿದೆ. ಪಾಶ್ಚಾತ್ಯ ಸಂಗೀತವನ್ನು ಭಾರತೀಯ ಶಾಸ್ತ್ರೀಯ ಸಂಗೀತದೊಂದಿಗೆ ಮೇಳೈಸುವ ಯತ್ನವನ್ನು ಚೌರಾಸಿಯಾ ನಿರಂತರವಾಗಿ  ನಡೆಸುತ್ತ ಬಂದಿದ್ದಾರೆ. ಅವರು ಓಸ್ಲೋದಲ್ಲಿ ಜಾಝ್‌ ಆರ್ಟಿಸ್ಟ್‌, ಜಾನ್‌ ಮ್ಯಾಕ್‌ ಲಾಫ್ಲಿನ್‌ ಮತ್ತು ಜ್ಯಾನ್‌ ಗಾರ್‌ ಬರೆಕ್‌ ಅವರ ಸಹಯೋಗದಲ್ಲಿ ಧ್ವನಿಮುದ್ರಿಕೆಯನ್ನು ತಂದು ವಿಶ್ವಸಂಗೀತಪ್ರಿಯರ ಮಡಿಲಿಗಿಟ್ಟಿದ್ದಾರೆ. ಈ ಸಂಗೀತ ಧ್ವನಿಮುದ್ರಿಕೆ  ಚೌರಾಸಿಯಾ ಅವರ ಅಂತರರಾಷ್ಟ್ರೀಯ ಖ್ಯಾತಿಯನ್ನು ಮತ್ತಷ್ಟು ವಿಸ್ತರಿಸಿದೆ.  ಭಜನ್‌, ಶಾಸ್ತ್ರೀಯ ಸಂಗೀತ, ಜಾನಪದ, ಸಂಪ್ರದಾಯದ ಹಾಡುಗಳು ಎಲ್ಲವೂ ಚೌರಾಸಿಯಾ ಅವರ ಕೊಳಲಿನ ಇಂಪಲ್ಲಿ ನಿರಂತರವಾಗಿ ಪ್ರಕಾಶಿಸುತ್ತ ಬಂದಿವೆ. 

ವಿಶ್ವದೆಲ್ಲೆಡೆ ವಿವಿದ ವೇದಿಕೆಗಳಲ್ಲಿ ಅಸಂಖ್ಯಾತ ಕಛೇರಿಗಳನ್ನು ನಡೆಸಿರುವ ಚೌರಾಸಿಯಾ, ಜಗತ್ತಿನ ಶ್ರೇಷ್ಟ ಸಂಗೀತ ತಜ್ಞರೊಂದಿಗೆ ಜೊತೆಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಪಂಡಿತ್‌ ಜಸ್ರಾಜ್‌, ಪಂಡಿತ್‌ ಶಿವಕುಮಾರ್‌ ಶರ್ಮಾ, ಕಿಶೋರಿ ಅಮೋನ್ಕರ್‌,  ಬಾಲಮುರಳಿ ಕೃಷ್ಣ,  ಉಸ್ತಾದ್‌ ಜಾಕಿರ್‌ ಹುಸೇನ್‌, ಜಾನ್‌ ಮ್ಯಾಕ್‌ ಲಾಫ್ಲಿನ್‌,  ಜ್ಯಾನ್‌ ಗಾರ್‌ ಬರೆಕ್‌, ಲಾರ್ರಿ ಕೋರ್ರಿಯೆಲ್‌, ಎಗ್‌ಬರ್‌ಟೋ ಗಿಸ್‌ ಮೋಂಟಿ .... ಹೀಗೆ ಈ ಪಟ್ಟಿ ಸುದೀರ್ಘವಾದದ್ದು. 

ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿನ ಗುರುತರ ಸಾಧನೆ,  ಸರಳ  ಸಜ್ಜನಿಕೆ, ಪಾಂಡಿತ್ಯ,  ಸಂಗೀತದ ಕುರಿತಾದ ಭಕ್ತಿ, ಪ್ರೀತಿ, ತಲ್ಲೀನತೆ, ವಿಶ್ವದೆಲ್ಲೆಡೆ ಹೊರಹೊಮ್ಮಿಸಿರುವ ಕೊಳಲಿನ ಮಾರ್ದನಿ  ಇವು  ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ ಅವರಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಸಿದ್ಧಿ ಮನ್ನಣೆಗಳನ್ನು ತಂದುಕೊಟ್ಟಿವೆ.   ಈ ಮಹಾನ್ ಸಂಗೀತಗಾರರಿಗೆ  1984ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1990ರ ಮಹಾರಾಷ್ಟ್ರ ಸರಕಾರದಿಂದ ಮಹಾರಾಷ್ಟ್ರ ಗೌರವ ಪುರಸ್ಕಾರ, 1992ರಲ್ಲಿ ಭಾರತ ಸರಕಾರದಿಂದ ಪದ್ಮಭೂಷಣ, 1992ರಲ್ಲಿ ಒರಿಸ್ಸಾ ಸರಕಾರದಿಂದ ಕೋನಾರ್ಕ್ ಸನ್ಮಾನ, 1994ರಲ್ಲಿ ಉತ್ತರ ಪ್ರದೇಶ ಸರಕಾರದಿಂದ ಯಶಭಾರತೀ ಸನ್ಮಾನ,  1999ರಲ್ಲಿ ಮಧ್ಯ ಪ್ರದೇಶ ಸರಕಾರದಿಂದ ಕಾಳಿದಾಸ ಸನ್ಮಾನ, 2000ದ ವರ್ಷದಲ್ಲಿ  ಪದ್ಮವಿಭೂಷಣ ಪ್ರಶಸ್ತಿ ಮತ್ತು ಪ್ರಖ್ಯಾತ ಉಸ್ತಾದ್‌ ಹಫೀಸ್‌ ಖಾನ್‌ ಗೌರವ ಮುಂತಾದ ಅಸಂಖ್ಯಾತ ಗೌರವಗಳು ಅರಸಿ ಬಂದಿವೆ.  

ಹರಿಪ್ರಸಾದ್ ಚೌರಾಸಿಯಾ ಅವರ ಕುರಿತು 2013ರ ವರ್ಷದಲ್ಲಿ  ಸಾಕ್ಷ ಚಿತ್ರ ಬಿಡುಗಡೆಗೊಂಡು ಜನಪ್ರಿಯವಾಗಿದೆ.  ಈ ಮಹಾನ್ ಸಂಗೀತಗಾರರ ನಾದ ನಿರಂತರವಾಗಿ ನಮ್ಮ ನಡುವೆ ಹೊರಹೊಮ್ಮುತ್ತಿರಲಿ.

On the birth day of great flutist and musician Hariprasad Chaurasia Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ