ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವೇಶ್ವರ ಭಟ್


 ವಿಶ್ವೇಶ್ವರ ಭಟ್ 


ವಿಶ್ವೇಶ್ವರ ಭಟ್ ಪತ್ರಿಕಾ ಸಂಪಾದಕರಾಗಿ, ಸುದ್ಧಿ ವಾಹಿನಿಗಳ ಸೂತ್ರಧಾರರಾಗಿ ಮತ್ತು ಬರಹಗಾರರಾಗಿ ಹೆಸರಾಗಿದ್ದಾರೆ.

ವಿಶ್ವೇಶ್ವರ ಭಟ್ 1966ರ ಜುಲೈ 22ರಂದು ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಮೂರೂರು ಅವರ ಊರು. ಬಿ.ಎಸ್ಸಿ ಮಾಡಿ, ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಿ, 4 ಚಿನ್ನದ ಪದಕ ದೊಂದಿಗೆ ಪತ್ರಿಕೋದ್ಯಮದಲ್ಲಿ ಎಂ.ಎ ಮಾಡಿದರು. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ ಮಾಡಿದರು. 

ವಿಶ್ವೇಶ್ವರ ಭಟ್ ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ 'ಅಸಿಸ್ಟೆಂಟ್ ಪ್ರೊಫೆಸರ್' ಆಗಿ ಕೆಲವು ಸಮಯ ಕೆಲಸ ಮಾಡಿದ್ದರು.  ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಾಗಿದ್ದ ಅನಂತ್ ಕುಮಾರ್ ಅವರಿಗೆ  ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದರು.

ವಿಶ್ವೇಶ್ವರ ಭಟ್ ಪತ್ರಕರ್ತರಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಮೊದಲು ಕೆಲಸ ಮಾಡಿದರು. ನಾಲ್ಕು ವರ್ಷ ಕನ್ನಡಪ್ರಭ ಪತ್ರಿಕೆಯಲ್ಲಿ ಉಪ-ಸಂಪಾದಕರಾಗಿ ಕಾರ್ಯನಿರ್ವಹಿಸಿ, ತದನಂತರ ಪ್ರಧಾನ ಸಂಪಾದಕರಾಗಿ ಹುದ್ದೆ ನಿರ್ವಹಿಸಿದ್ದರು. ಕೆಲಕಾಲ ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕರಾಗಿದ್ದರು. ವಿಶ್ವವಾಣಿ ಕನ್ನಡ ದಿನಪತ್ರಿಕೆ ಇವರ ಸಂಪಾದಕತ್ವದಲ್ಲಿ ಮರುಪ್ರಾರಂಭಗೊಂಡಿತು. ಹೀಗೆ ಅವರದ್ದು ಸುದ್ಧಿಮಾಧ್ಯಮಗಳೊಂದಿಗೆ ವ್ಯಾಪಕ ಸೇವೆ.

ಸುದ್ದಿಮನೆ ಕತೆ, ನೂರೆಂಟು ಮಾತು
ಬತ್ತದ ತೆನೆ, ಬಾಲ್ಕನಿಯಿಂದ, ವಕ್ರತುಂಡೋಕ್ತಿ (ಕಿರುಸೂಕ್ತಿಗಳು)
+ve ಥಿಂಕಿಗ್ ಮುಂತಾದವು ವಿಶ್ವೇಶ್ವರ ಭಟ್ ಅವರ ಹೆಸರಾಂತ ಅಂಕಣಗಳಲ್ಲಿ ಸೇರಿವೆ. ತಮ್ಮದೇ ಆದ ಬ್ಲಾಗ್ ಸಹ ನಿರ್ವಹಿಸುತ್ತಿದ್ದಾರೆ.‍

ವಿಶ್ವೇಶ್ವರ ಭಟ್ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರಾಷ್ಟ್ರಪತಿಗಳಾಗಿದ್ದಾಗ ಅವರೊಂದಿಗೆ ಹದಿನಾಲ್ಕು ದಿನ ರಷ್ಯಾ, ಆಸ್ಟ್ರೇಲಿಯಾ, ಯುಕ್ರೇನ್, ಐಸ್ ಲ್ಯಾಂಡ್ನಲ್ಲಿ ಪ್ರವಾಸ ಮಾಡಿದ್ದರು. 

ವಿಶ್ವೇಶ್ವರ ಭಟ್ ಬರಹಗಾರರಾಗಿ ಕನ್ನಡದಲ್ಲಿ 60ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಅಂಜಿಕೆಯಿಲ್ಲದ ಕರಂಜಿಯಾ, ಅಕ್ಷರಗಳೊಂದಿಗೆ ಅಕ್ಕರೆಯ ಯಾನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ,
ಆಗಾಗ ಬಿದ್ದ ಮಳೆ - ಅಂಕಣ ಲೇಖನಗಳು, ಕಲಾಂ ಕಮಾಲ್, ಜನಗಳ ಮನ, ತಲೆಬರಹ ಪತ್ರಿಕೆ ಹಣೆಬರಹ, ತಾಜಮಹಲ - ಕಥಾ ಸಂಕಲನ, ಧನ ದೇವೋಭವ, ನನ್ನ ದೇಶ ನನ್ನ ಜೀವನ (ಮೂಲ: ಎಲ್. ಕೆ. ಅದ್ವಾನಿ), ನನ್ನ ಪ್ರೀತಿಯ ಭಾರತ (ಮೂಲ: ಓಶೊ), ನನ್ನ ಪ್ರೀತಿಯ ವೈಯೆನ್ಕೆ, ನಾನೇಕೆ ಮಂತ್ರಿಯತ್ತ ಬೂಟನ್ನೆಸೆದೆ (ಮೂಲ: ಜರ್ನೇಲ್ ಸಿಂಗ್), ನಾಯಕನಾಗುವುದು ಹೇಗೆ? (ಮೂಲ:ಶಿವಖೇರಾ), ನಿಮಗೆ ಗೊತ್ತಿಲ್ಲದ ರಾಮನಾಥ ಗೋಯೆಂಕಾ, ನೀವು ಗೆಲ್ಲಬಲ್ಲಿರಿ (ಮೂಲ: ಶಿವಖೇರಾ), ನೂರೆಂಟು ಮಾತು, ಹೂಬಿಸಿಲಿನ ನೆರಳು, ನೆನಪಿನ ಬಾಟಲಿಯಲ್ಲಿನ ಕುವೋರ್ಸಿಯರ್, ಹರಿಲಾಲ ಗಾಂಧಿ, ಪತ್ರಿಕೋದ್ಯಮ ಕುರಿತು ಓಶೋ, ಪತ್ರಿಕೋದ್ಯಮ ಪಲ್ಲವಿ, ಬತ್ತದ ತೆನೆ, ಬಾನಯಾನ (ಮೂಲ: ಕ್ಯಾಪ್ಟನ್ ಗೋಪಿನಾಥ್), ಬಿ. ಆರ್. ಪಂತುಲು, ಮತ್ತಷ್ಟು ವಕ್ರತುಂಡೋಕ್ತಿ, ರಾಷ್ಟ್ರಪತಿ ಜೊತೆ ಹದಿನಾಲ್ಕು ದಿನ, ರುಪರ್ಟ್ ಮುರ್ಡೋಕ್ - ಮಾಧ್ಯಮ ಮಹಾಶಯ, ವಂಡರ್ ವೈಯೆನ್ಕೆ, ವಕ್ರತುಂಡೋಕ್ತಿ, ವೈಯೆನ್ಕೆ ಅವರ ಕೊನೆ ಸಿಡಿ, ವೈಯೆನ್ಕೆ ಅವರ ಬೆಸ್ಟ್ ಆಫ್ ವಂಡರ್ಸ್, ಶಾರದಾ ಪ್ರಸಾದ್ ಅವರ ಕಾಲದೇಶ, ಸಂಪಾದಕ ಅಂದ್ರೆ ಗಂಡ ಇದ್ದಂತೆ, ಸರಿಗಮಪದ - ಪತ್ರಿಕಾಭಾಷೆಗೊಂದು ಹದ, ಸಾಲದ ಜೋಕುಗಳು, ಸುದ್ದಿಮನೆ ಕತೆ, ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ?, ಅಷ್ಟಕ್ಕೂ ನಾ ಹೇಳೋದು ಇಷ್ಟು (ಮೂಲ: ಸ್ವಪನ್ ಸೇಠ್), ಪ್ರ'ದಕ್ಷಿಣ' ಆಫ್ರಿಕಾ, ಜೀವಸೆಲೆ, ಮತ್ತೊಬ್ಬ ಉಕ್ಕಿನ ಮನುಷ್ಯ ಪತ್ರಕರ್ತ ಬಾಬುರಾವ್ ಪಟೇಲ್, ಚದುರಿದ ಮೋಡ ಮಳೆಗರೆದಾಗ, ಸ್ಪೂರ್ತಿಸೆಲೆ, ಬಾಲ್ಕನಿಯಿಂದ, ಕಲ್ಪನೆಗೆ ಕನ್ನಡಿ, ಗೊರಿಲ್ಲಾ ನಾಮಕರಣ ಪ್ರಸಂಗ (ರವಾಂಡ ಪ್ರವಾಸ ಟಿಪ್ಪಣಿಗಳು), ಸಂಜಯ ಉವಾಚ (ಪತ್ರಕರ್ತ ಕೆ.ಶಾಮರಾವ್ ಅಪೂರ್ಣ ಆತ್ಮಕತೆ), ರಿಚರ್ಡ್ ಬ್ರಾನ್‍ಸನ್'ವರಿಜಿನಲ್ ವಿಚಾರಗಳು, ಸೆಲ್ಫಿ ವಿತ್ ಲೈಫ್, ಚಿಕನ್ ಸಿಕ್ಸ್ಟಿಫೈವ್ , ಗಟ್ಟಿಗಿತ್ತಿ (ಮೂಲ: ಮಹಿಳಾ ಬಾಕ್ಸರ್ ಮೇರಿ ಕೋಮ್) ಮುಂತಾದವು ಇವುಗಳಲ್ಲಿ ಸೇರಿವೆ.

ವಿಶ್ವೇಶ್ವರ ಭಟ್ ಅವರಿಗೆ ಕರ್ನಾಟಕ ಸರ್ಕಾರದಿಂದ 'ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ', ಕೆ. ಶಾಮರಾವ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

On the birthday of journalist and writer Visweshvar Bhat 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ