ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸದಾಶಿವ ದೊಡಮನಿ


 ಸದಾಶಿವ ದೊಡಮನಿ 


ಡಾ. ಸದಾಶಿವ ದೊಡಮನಿ ಶಿಕ್ಷಕರಾಗಿ ಮತ್ತು ಬರಹಗಾರರಾಗಿ ಸಾಧನೆ ಮಾಡುತ್ತ ಬಂದಿದ್ದಾರೆ. 

ಸದಾಶಿವ ದೊಡಮನಿ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೂದಿಹಾಳ ಗ್ರಾಮದವರು. ಇವರು ವಿಜಯಪುರ ಜಿಲ್ಲೆಯ
ಬಸವನ ಬಾಗೇವಾಡಿ ತಾಲ್ಲೂಕಿನ ಗೊಳಸಂಗಿಯ ಚ೦ದವಳ್ಳಿಯ ತೋಟದಲ್ಲಿ 1977ರ ಜುಲೈ 22ರಂದು ಜನಿಸಿದರು. ತಂದೆ ತುಕಾರಾಮ ಅವರು ಶ್ರಮಜೀವಿ ಹಾಗೂ ಅಪ್ಪಟ ಜಾನಪದ ಗಾಯಕರು.  ತಾಯಿ ಕಾ೦ತಾಬಾಯಿ ನೋವನ್ನೇ ಹಾಡಿ ಹಾಡಿ ಬೀಸಿದವರು.

ತಮ್ಮ ಬಾಲ್ಯದ ಬಹುದಿನಗಳನ್ನು ಚಂದವಳ್ಳಿಯ ತೋಟದಲ್ಲಿಯೇ ಕಳೆದ ಸದಾಶಿವ ಅವರು ಅದನ್ನು “ಜೀವನ ಪಾಠಗಳನ್ನು ಕಲಿಸಿದ ಮಹಾಗುರು" ಎಂದು ಭಾವಿಸಿದ್ದಾರೆ.  ಸದಾಶಿವ ಅವರು ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಶಿಕ್ಷಣವನ್ನು ತೆಲಗಿ, ಗೊಳಸಂಗಿಯಲ್ಲಿ ಹಾಗೂ ಪದವಿ ಶಿಕ್ಷಣವನ್ನು ಗದಗಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನಲ್ಲಿ ಪಡೆದರು. ಮುಂದೆ ಮೈಸೂರಿನ ಸೇಂಟ್‌ ಜೋಸೆಫ್‌ ಕಾಲೇಜಿನಿ೦ದ ಬಿ.ಇಡಿ ಪದವಿಯನ್ನು ಪಡೆದುಕೊಂಡು, ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಎಂ.ಎ. ಪದವಿಯನ್ನು ಪಡೆದರು. ಅದೇ ವಿಶ್ವವಿದ್ಯಾಲಯದಿಂದ 2000 ದ ಇಸವಿಯಲ್ಲಿ ಡಾ. ಶ್ಯಾಮಸುಂದರ ಬಿದರಕುಂದಿಯವರ ಮಾರ್ಗದರ್ಶನದಲ್ಲಿ “ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು : ಒಂದು ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು ಪಿಎಚ್‌.ಡಿ. ಪದವಿಯನ್ನು ಗಳಿಸಿದರು. 

ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸದಾಶಿವ ಅವರು ಪಿಯು, ಹಾಗೂ ನಾಲ್ಕೈದು ಪದವಿ ಕಾಲೇಜುಗಳಲ್ಲಿ, ಹಾವೇರಿಯ ಸ್ನಾತಕೋತ್ತರ ಕೇ೦ದ್ರದಲ್ಲಿ ಕನ್ನಡ ಉಪನ್ಯಾಸಕರಾಗಿ ಸುಮಾರು ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, 2009 ವರ್ಷದಿಂದ ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸದಾಶಿವ ದೊಡಮನಿ ಅವರ ಪ್ರಕಟಿತ ಕೃತಿಗಳಲ್ಲಿ 'ಧರೆ ಹತ್ತಿ ಉರಿದೊಡೆ'‍, 'ನೆರಳಿಗೂ ಮೈಲಿಗೆ', 'ಇರುವುದು ಒಂದೇ ರೊಟ್ಟಿ', 'ಇರುಳ ಬಾಗಿಲಿಗೆ ಕಣ್ಣ ದೀಪ' ಎಂಬ ಕವನ ಸಂಕಲನಗಳು; “ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು : ಒಂದು ಸಾಂಸ್ಕೃತಿಕ ಅಧ್ಯಯನ” ಎಂಬ ಸಂಶೋಧನೆ ಕೃತಿ, 'ದಲಿತ ಸಾಹಿತ್ಯ ಸಂಚಯ’ ಎಂಬ ಸಂಪಾದಿತ ಕೃತಿ, 'ಪ್ರತಿಸ್ಪಂದನ' ಎಂಬ ವಿಮರ್ಶಾ ಕೃತಿಗಳಿವೆ.

ಸದಾಶಿವ ದೊಡಮನಿ ಅವರ 'ಇರುವುದು ಒಂದೇ ರೊಟ್ಟಿ' ಕಾವ್ಯ ಸಂಕಲನಕ್ಕೆ ಸೃಷ್ಟಿ ಕಾವ್ಯ ಪುರಸ್ಕಾರ, ಕಸಾಪ ದತ್ತಿ ಪುರಸ್ಕಾರ, ದಲಿತ ಸಾಹಿತ್ಯ ಪರಿಷತ್ತಿನ 'ಬೆಳ್ಳಿ ಸಂಭ್ರಮ ಪುಸ್ತಕ ಬಹುಮಾನ' ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಸದಾಶಿವ ದೊಡಮನಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Sadashiva Dodamani 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ