ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಂಚನ ಶ್ರುತಿರಂಜನಿ


 ಕಾಂಚನ ರಂಜನಿ ಸಹೋದರಿಯರು


‘ಕಾಂಚನ  ಸಹೋದರಿಯರು’ ಅಥವಾ 'ಕಾಂಚನ ರಂಜನಿ ಸಹೋದರಿಯರು' ಎಂಬ ಹೆಸರಿನಿಂದ ಪ್ರಖ್ಯಾತರಾಗಿರುವವರು ಶ್ರೀರಂಜನಿ ಮತ್ತ ಶ್ರುತಿರಂಜನಿ ಸಹೋದರಿಯರು.  ಈ ಸಹೋದರಿಯರಲ್ಲಿ ಕಿರಿಯರಾದ ಕಾಂಚನ ಕಾಂಚನಾ ಶ್ರುತಿರಂಜನಿ  ಅವರು ಇಂದು ತಮ್ಮ ಜನ್ಮದಿನ ಆಚರಿಸುತ್ತಿದ್ದಾರೆ.

ಶ್ರೀರಂಜನಿ ಮತ್ತು ಶ್ರುತಿರಂಜನಿ ಸಹೋದರಿಯರು ದಕ್ಷಿಣ ಕನ್ನಡ ಜಿಲ್ಲೆಯ ಬಜತೂರು ಗ್ರಾಮದ ಮೂಲದವರು.  ಕಾಂಚನಾ ಶ್ರುತಿರಂಜನಿ ಅವರು 1981ರ ಜುಲೈ 15ರಂದು ಜನಿಸಿದರು. ಇವರಿಗಿಂತ ಸ್ವಲ್ಪವೇ ಹಿರಿಯರಾದ ಕಾಂಚನ ಶ್ರೀರಂಜನಿ ಅವರು 1978ರ ಫೆಬ್ರವರಿ 8ರಂದು ಜನಿಸಿದರು.  ಈ ಸಹೋದರಿಯರ ತಾತಂದಿರಾದ ಕಾಂಚನ ವೆಂಕಟಸುಬ್ರಹ್ಮಣ್ಯಂ ಮತ್ತು ತಂದೆ ವಿ. ಸುಬ್ಬರತ್ನಂ ಅವರುಗಳು ಮಹಾನ್ ಸಂಗೀತಗಾರರಾಗಿ ಹೆಸರಾದವರು. ಇವರ ತಾಯಿ ಮಹಾನ್ ಗಾಯಕಿ ಮತ್ತು ಬರಹಗಾರ್ತಿ ವಿದುಷಿ ರೋಹಿಣಿ ಸುಬ್ಬರತ್ನಂ ಅವರು ಮಹಾನ್ ವಿದ್ವಾಂಸರಾದ ಪದ್ಮಶ್ರೀ ಪುರಸ್ಕೃತ ರಾ. ಸತ್ಯನಾರಾಯಣ ಅವರ ಪುತ್ರಿ. 

ಶ್ರೀರಂಜನಿ ಮತ್ತು ಶ್ರುತಿರಂಜನಿ ಅವರುಗಳು ಮೂರು ವಯಸ್ಸಿನ ಮಕ್ಕಳಾಗಿದ್ದಾಗಲೇ ಮಹಾನ್ ವಯಲಿನ್ ವಾದಕರಾದ ತಂದೆ ಕರ್ನಾಟಕ ಕಲಾಶ್ರೀ ಕಾಂಚನ ವಿ. ಸುಬ್ಬರತ್ನಂ ಅವರಿಂದ ಸಂಗೀತ ಕಲಿಯಲಾರಂಭಿಸಿದರು. ನಾಲ್ಕನೇ ವಯಸ್ಸಿನಲ್ಲಿರುವಾಗಲೇ ಈ ಸಹೋದರಿಯರಿಗೆ ವೇದಿಕೆಯ ಮೇಲೆ ಹಾಡುವುದು ಅಭ್ಯಾಸವಾಯಿತು.

ಸಹೋದರಿಯರಿಬ್ಬರೂ ಉನ್ನತ ಶ್ರೇಣಿಯಲ್ಲಿ ಕಾನೂನು ಪದವಿ ಪಡೆದುದರ ಜೊತೆಗೆ ಸಂಗೀತದಲ್ಲಿ ವಿದ್ವತ್ ಪದವಿಯ ಸಾಧನೆಯನ್ನೂ ಪ್ರಥಮ ರ್‍ಯಾಂಕ್ ಗಳಿಕೆಯಲ್ಲಿ ಪಡೆದು ಆಕಾಶವಾಣಿಯ 'ಎ' ದರ್ಜೆಯ ಕಲಾವಿದರಾದರು. ಸಂಗೀತದಲ್ಲಿ ಗಾಯನ ಮತ್ತು ಪಿಟೀಲು ವಾದನಗಳೆರಡರಲ್ಲೂ ಉನ್ನತ ಪರಿಶ್ರಮದ ಜೊತೆಗೆ  ತಮ್ಮ ಸೋದರಮಾವನವರಾದ ಡಾ. ಆರ್. ಎಸ್. ನಂದಕುಮಾರ್ ಅವರ ಮೂಲಕ ಸಂಗೀತಲೋಕದಲ್ಲಿ ಅಪರೂಪದ ಸಾಧನೆಯಾದ  "ಅವಧಾನ ಪಲ್ಲವಿ" ಗಾಯನ ಸಾಮರ್ಥ್ಯವನ್ನೂ ತಮ್ಮದಾಗಿಸಿಕೊಂಡವರೆನಿಸಿದ್ದಾರೆ.  ಈ ಸಹೋದರಿಯರ ಅವಧಾನ ಪಲ್ಲವಿ ಕಾರ್ಯಕ್ರಮ ಪ್ರಸ್ತುತಿಗಳು ಎಲ್ಲೆಡೆ ಜನಪ್ರಿಯವಾಗಿವೆ.

ನಾಡಿನೆಲ್ಲೆಡೆಯಲ್ಲಿ ಅಲ್ಲದೆ ವಿಶ್ವದ ಅನೇಕ ಪ್ತತಿಷ್ಠಿತ ಉತ್ಸವಗಳಲ್ಲಿ ಮತ್ತು ವೇದಿಕೆಗಳಲ್ಲಿ ಕಾಂಚನ ರಂಜನಿ ಸಹೋದರಿಯರ ಸಂಗೀತ ಕಚೇರಿಗಳು, ಅವರ ವೈವಿಧ್ಯಪೂರ್ಣ ವಿದ್ವತ್ತತೆಯ ಸಂಗೀತ ಪ್ರಸ್ತುತಿಗಳಿಗೆ ಪ್ರಸಿದ್ಧಿ ಪಡೆದಿವೆ.  ಇವರ ಅನೇಕ ಸಂಗೀತದ ಆಲ್ಬಮ್ಗಳು ಸಹಾ ಪ್ರಸಿದ್ಧಿ ಪಡೆದಿವೆ.

ಕಾಂಚನ ರಂಜನಿ ಸಹೋದರಿಯರಿಗೆ ಅನನ್ಯ ಯುವ ಪ್ರತಿಭಾ ಪುರಸ್ಕಾರ ಮತ್ತು ಹಲವಾರು ಗೌರವಗಳು ಸಂದಿವೆ.

ಕಾಂಚನ ಶ್ರೀರಂಜನಿ ಮತ್ತು ಕಾಂಚನ ಶ್ರುತಿರಂಜನಿ ಸಹೋದರಿಯರ ಸಾಧನೆಯನ್ನು ಅಭಿನಂದಿಸುತ್ತ ಕಾಂಚನ ಶ್ರುತಿರಂಜನಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಹೇಳೋಣ.

Shruthiranjani Kanchana and Kanchana Shriranjani Sisters 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ