ರೆಂಬ್ರಾಂಟ್
ರೆಂಬ್ರಾಂಟ್
ಡಚ್ ಕಲಾವಿದ ರೆಂಬ್ರಾಂಟ್ ಎಂಬ ಹೆಸರು ಕಲಾ ಇತಿಹಾಸದಲ್ಲಿ ಜಗತ್ಪ್ರಸಿದ್ಧವಾದುದು. ಜಗತ್ತು ಕಂಡ ಅತ್ಯದ್ಭುತ ಕಲಾವಿದರಲ್ಲಿ ರೆಂಬ್ರಾಂಟ್ ಒಬ್ಬರು. ತಮ್ಮ ಜೀವಿತಾವಧಿಯಲ್ಲಿ ಸೃಷ್ಟಿಸಿದ ಶ್ರೇಷ್ಠ ಕಲಾಕೃತಿಗಳಿಂದಾಗಿ ಅವರ ಜೀವನ ಕಾಲವನ್ನು ಕಲಾಜಗತ್ತಿನ ಸ್ವರ್ಣಯುಗವೆಂದು ಕರೆಯಲಾಗಿದೆ.
ರೆಂಬ್ರಾಂಟ್ ವಾನ್ ರಿಜ್ನ್ ಅವರು ಈಗ ನೆದರ್ ಲ್ಯಾಂಡ್ಸ್ ಎಂದು ಕರೆಯಲ್ಪಡುತ್ತಿರುವ ಅಂದಿನ ಡಚ್ ಗಣರಾಜ್ಯದ ಲೀಡನ್ ಎಂಬಲ್ಲಿ 1606ರ ಜುಲೈ 15ರಂದು ಜನಿಸಿದರು. ಪುಟ್ಟ ವಯಸ್ಸಿನಲ್ಲೇ ಕಲೆಯ ಕಡೆಗೆ ಆಕರ್ಷಿತರಾದ ರೆಂಬ್ರಾಂಟರು ಆ ಕಾಲದ ಶ್ರೇಷ್ಠ ಕಲಾವಿದರೆನಿಸಿದ್ದ ಪೀಟರ್ ಲಾಸ್ಟ್ ಮ್ಯಾನ್, ಜಾಕಬ್ ವಾನ್ ಸ್ವಾನೆನ್ ಬರ್ಗ್ ಮತ್ತು ಜಾಕಬ್ ಪಯ್ನಾಸ್ ಮುಂತಾದವರಲ್ಲಿ ತಮ್ಮ ಕಲಿಕೆಯನ್ನು ಮಾಡಿದರು. ತಮ್ಮ ಪ್ರಾರಂಭದ ದಿನಗಳಲ್ಲಿ ಅವರು ತಮ್ಮ ಚಿತ್ರವನ್ನೂ ಒಳಗೊಂಡಂತೆ ಅನೇಕ ವ್ಯಕ್ತಿಚಿತ್ರಗಳನ್ನು ಬಿಡಿಸಿದ್ದರು.
1631ರ ವರ್ಷದಲ್ಲಿ ಆಮ್ಸ್ಟರ್ಡ್ಯಾಮ್ ಪ್ರದೇಶಕ್ಕೆ ಬಂದ ರೆಂಬ್ರಾಂಟ್ ಅಲ್ಲಿ ವೃತ್ತಿಪರ ವ್ಯಕ್ತಿಚಿತ್ರ ಕಲಾವಿದರಾಗಿ ಮಾನ್ಯತೆಗಳಿಸಿದರು. ಮುಂದೆ ರೆಂಬ್ರಾಂಟ್ ಅವರ ಕುಂಚದಲ್ಲಿ ವಿಧ ವಿಧ ರೀತಿಯ ಪೌರಾಣಿಕ, ಐತಿಹಾಸಿಕ, ಪ್ರಕೃತಿ ಚಿತ್ರಣವೇ ಮುಂತಾದ ಅನೇಕ ಹಿನ್ನೆಲೆಗಳ ಚಿತ್ರಗಳು ಮೂಡಲಾರಂಭಿಸಿದವು. ರೆಂಬ್ರಾಂಟರ ಸಮಕಾಲೀನರು ಬೈಬಲನ್ನು ವರ್ಣಕಲೆಗೆ ತಂದ ಇವರ ಸಾಮರ್ಥ್ಯವನ್ನು ಅಪಾರವಾಗಿ ಕೊಂಡಾಡಿದ್ದು ಇವರ ಚಿತ್ರಗಳಲ್ಲಿ ಹೊರಹೊಮ್ಮಿರುವ ಭಾವನಾತ್ಮಕ ಸೂಕ್ಷ್ಮಜ್ಞತೆಗಳನ್ನು ಅಪ್ರತಿಮವೆಂದು ಪರಿಗಣಿಸಿ ಇವರನ್ನು ಕಲಾಜಗತ್ತಿನ ಪ್ರವಾದಿ ಎಂದು ಬಣ್ಣಿಸಿದ್ದಾರೆ. ಕಾಲ್ಪನಿಕ ಚಿತ್ರವಿನ್ಯಾಸಗಳಲ್ಲೂ ರೆಂಬ್ರಾಂಟರದು ಅಪ್ರತಿಮ ಸಿದ್ಧಿ.
ಇಪ್ಪತ್ತನೆಯ ಶತಮಾನದ ಕಲಾಪ್ರವೀಣರ ಪ್ರಕಾರ ರೆಂಬ್ರಾಂಟ್ ವಾನ್ ರಿಜ್ನ್ ಅವರು 600ಕ್ಕೂ ಹೆಚ್ಚು ವರ್ಣ ಚಿತ್ರಗಳನ್ನೂ, 400ಕ್ಕೂ ಹೆಚ್ಚು ಕೆತ್ತನೆಯ ರೀತಿಯ ಚಿತ್ರಗಳನ್ನೂ. ಸುಮಾರು 2000ದಷ್ಟು ರೇಖಾ ಚಿತ್ರಗಳನ್ನು ಬಿಡಿಸಿದ್ದರೆಂದು ಅಂದಾಜಿಸಿದ್ದಾರೆ.
ನೈಟ್ ವಾಚ್, ಅರಿಸ್ಟಾಟಲ್ ಕಂಟೆಂಪ್ಲೇಟಿಂಗ್ ಎ ಬಸ್ಟ್ ಆಫ್ ಹೋಮರ್, ದಿ ಮಿಲ್, ಅರ್ಟಿಮಿಸಿಯಾ ಮುಂತಾದ ಕಲಾಕೃತಿಗಳು ರೆಂಬ್ರಾಂಟರ ಕಲಾ ನೈಪುಣ್ಯವನ್ನು ಅನನ್ಯವಾಗಿ ಬೆಳಗಿದವು. ಪ್ರಕೃತಿ ಚಿತ್ರಣದಲ್ಲಿ ಅತ್ಯಂತ ನಿಪುಣರಾದ ಇವರ ಚಿತ್ರಗಳು ಬೆಳಕು ಮತ್ತು ವರ್ಣ ಸಂಯೋಜನೆಗಳನ್ನು ಅರಿಯಲು ಕಲಾ ಅಭ್ಯಾಸಿಗಳಿಗೆ ಶ್ರೇಷ್ಠ ಮಾರ್ಗದರ್ಶಕಗಳಾಗಿವೆ. ಇಂಪ್ರೆಷನಿಸಂ ಪಂಥದ ಪ್ರಮುಖ ಕಲಾಕಾರರಾದ ಇವರ ‘ದಿ ನೈಟ್ ವಾಚ್’ ಸೇರಿದಂತೆ ಹಲವಾರು ಪ್ರಸಿದ್ಧ ಕೃತಿಗಳು ಪ್ರಸ್ತುತ ನೆದರ್ ಲ್ಯಾಂಡಿನ ಕಲಾ ವಸ್ತು ಸಂಗ್ರಹಾಲಯದಲ್ಲಿ ರಕ್ಷಿಸಲ್ಪಟ್ಟಿವೆ. ರೆಂಬ್ರಾಂಟರ ಮನೆಯನ್ನೂ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ.
ಅನಾಟಮಿ ಲೆಸನ್ ಆಫ್ ಡಾ. ನಿಕೋಲೇಸ್ ಟುಲ್ಪ್ (1632), ಪೋರ್ಟ್ರೈಟ್ ಆಫ್ ದಿ ಶಿಪ್ ಬಿಲ್ಡರ್ ಜಾನ್ ರಿಜ್ಕಸೆನ್ ಅಂಡ್ ಹಿಸ್ ವೈಫ್ (1633), ಬೆಲ್ಶಸ್ಸಾರ್ಸ್ ಫೀಸ್ಟ್ (1635), ನೈಟ್ ವಾಚ್ (1642), ಸಿಂಡಿಕ್ಸ್ ಆಫ್ ಡ್ರೇಪರ್ಸ್ ಗಿಲ್ಡ್ (1662) ಮುಂತಾದ ಚಿತ್ರಗಳು ರೆಂಬ್ರಾಂಟರ ವಿಶ್ವಪ್ರಖ್ಯಾತ ಚಿತ್ರಗಳಲ್ಲಿ ಸೇರಿವೆ.
ಮಹಾನ್ ಕಲಾವಿದ ರೆಂಬ್ರಾಂಟರು 1669ರ ಅಕ್ಟೋಬರ್ 4ರಂದು ಈ ಲೋಕವನ್ನಗಲಿದರು.
On the birth anniversary of great Dutch painter Rembrandt
ಕಾಮೆಂಟ್‌ಗಳು