ಶಾರದಾ ಗೋಕಾಕ್
ಶಾರದಾ ಗೋಕಾಕ್
ವಿನಾಯಕ ಕೃಷ್ಣ ಗೋಕಾಕರ ಪತ್ನಿಯವರಾದ ಶಾರದಾ ಗೋಕಾಕ್ ಸಾಹಿತ್ಯದಲ್ಲಿ ಗಣನೀಯ ಕೃಷಿ ಮಾಡಿದ್ದಾರೆ.
ಶಾರದಾ ಗೋಕಾಕರು 1916ರ ಜುಲೈ 31ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಬಳವಂತರಾವ್ ಬೆಟ್ಟದೂರು. ತಾಯಿ ಕಮಲಾಬಾಯಿ. ಶಾರದಾ ಗೋಕಾಕರು ಓದಿದ್ದು ಆರನೆಯ ತರಗತಿಯವರೆಗೆ. ಆದರೆ ಅಪಾರ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡವರು.
1969ರಲ್ಲಿ ಗೋಕಾಕರ ಷಷ್ಟ್ಯಬ್ದಿ ಸಂದರ್ಭದಲ್ಲಿ ಶಾರದಾ ಗೋಕಾಕರು ಬರೆದ ಕವನ ಸಂಕಲನ ‘ಸುಮಂಗಲಾಕ್ಷತೆ’ ಪ್ರಕಟಗೊಂಡಿತು. ಅದರಲ್ಲಿ 37 ಕವನಗಳಿವೆ. ಗೋಕಾಕರು ತಮ್ಮ 1973ರಲ್ಲಿ ಪ್ತಕಟಗೊಣಂಡ ಕವನ ಸಂಗ್ರಹ 'ಸಿಮ್ಲಾ ಸಿಂಫನಿಗೆ' ಕೃತಿಗೆ ತಮ್ಮ ಮಡದಿ ಶಾರದಾರವರನ್ನೂ ಸಹಲೇಖಕಿಯಾಗಿಸಿಕೊಂಡಿದ್ದಾರೆ. ಆ ಸಂಗ್ರಹದ ಒಂದು ಭಾಗದಲ್ಲಿ ಶಾರದಾ ಗೋಕಾಕರ ರಚನೆಗಳಿವೆ. ಬಾ ಎಂದು ಕರೆದಾವ ಸೋಬಾನ ಹಾಡ್ಯಾವ ಸಿಮ್ಲಾದ ಹಕ್ಕಿ! ಎಂದು ಸಿಮ್ಲಾ ನಿಸರ್ಗದ ಸೊಬಗಿಗೆ ಮಾರು ಹೋಗಿ ಎಂಬ ಸುಂದರ ಕವಿತೆ ಸಹಾ ಅದರಲ್ಲಿದೆ.
ಶಾರದಾ ಗೋಕಾಕರ ಮತ್ತೊಂದು ಮುಖ್ಯ ಕೃತಿ 1977ರಲ್ಲಿ ಮೂಡಿಬಂದ ‘ಒಲವೇ ನಮ್ಮ ಬದುಕು’. ಮರಾಠಿಯಲ್ಲಿ ಪ್ರಕಟವಾಗಿದ್ದ ಮರಾಠಿ ಸಾಹಿತಿ ವಾಮನ ತಿಲಕರ ಪತ್ನಿ ಲಕ್ಷ್ಮೀಬಾಯಿ ತಿಲಕರು ಬರೆದ ‘ಸ್ಮೃತಿ ಚಿತ್ರಗಳ’ ಕೃತಿಯಲ್ಲಿ ವಾಮನ ತಿಲಕರ ವ್ಯಕ್ತಿತ್ವದ ಚಿತ್ರಣವಿರುವುದನ್ನು ಓದಿದ ಶಾರದಾ ಗೋಕಾಕರು ಇದರಿಂದ ಪ್ರೇರಿತರಾಗಿ ಬರೆದ ಆತ್ಮಕಥೆ ‘ಒಲವೇ ನಮ್ಮ ಬದುಕು’. ಇದು ಅವರು ಮದುವೆಯಾದಂದಿನಿಂದ ಬೆಂಗಳೂರಿಗೆ ಬಂದು ನೆಲೆಸುವವರೆಗಿನ ದಾಂಪತ್ಯ ಕತೆಯ ನಿರೂಪಣೆಯಾಗಿದೆ.
ಶಾರದಾ ಗೋಕಾಕರು ತಮ್ಮ ಕೃತಿಗಳಲ್ಲಿ ಗೋಕಾಕರ ವ್ಯಕ್ತಿತ್ವವನ್ನು ಹಿಡಿದಿಟ್ಟು, ಗೋಕಾಕರ ಬದುಕನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತಹ ಕೃತಿ ರಚಿಸಿದ್ದರೆ, ಗೋಕಾಕರು ಶಾರದಾರವರಿಗೆ ಬರೆದ ಪತ್ರಗಳನ್ನು ‘ಜೀವನ’ ಪತ್ರಿಕೆಯಲ್ಲಿ ‘ವನಮಾಲಿಯ ಒಲವಿನೋಲೆಗಳು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದು ನಂತರ ‘ಜೀವನ ಪಾಠಗಳು’ ಎಂಬ ಪುಸ್ತಕ ರೂಪದಲ್ಲಿ ಪ್ರಕಟಿಸಿ ಶಾರದಾರವರ ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ. ಹೀಗೆ ಅವರದ್ದು ಅನುರೂಪ ದಾಂಪತ್ಯ.
ಶಾರದಾ ಗೋಕಕರು 1994ರ ಜನವರಿ 23ರಂದು ನಿಧನರಾದರು.
On the birth anniversary of Sharada Gokak
ಕಾಮೆಂಟ್‌ಗಳು