ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಪಟ್ಟಾಭಿ ಜೋಯಿಸ್



ಕೆ. ಪಟ್ಟಾಭಿ ಜೋಯಿಸ್

20ನೆಯ ಶತಮಾನದಲ್ಲಿ ಕರ್ನಾಟಕ ಕಂಡ ಇಬ್ಬರು ಮಹಾನ್ ಯೋಗಪಿತಾಮಹರೆಂದರೆ ಮೈಸೂರಿನ ತಿರುಮಲೆ ಕೃಷ್ಣಮಾಚಾರ್ಯರು ಮತ್ತು ಮಲ್ಲಾಡಿಹಳ್ಳಿಯ ಆಯುರ್ವೇದ ಯೋಗಗಳ ಸವ್ಯಸಾಚಿ ರಾಘವೇಂದ್ರಸ್ವಾಮಿಗಳು.

ತಿರುಮಲೆ ಕೃಷ್ಣಮಾಚಾರ್ಯರ ನಾಲ್ಕು ಯೋಗಶಿಕ್ಷಕರು ವಿಶ್ವದೆಲ್ಲೆಡಯಲ್ಲಿ ಯೋಗವನ್ನು ಜನಪ್ರಿಯಗೊಳಿಸಿದವರಾಗಿದ್ದಾರೆ.  ಅವರೆಂದರೆ ಬಿ.ಕೆ.ಎಸ್.ಅಯ್ಯಂಗಾರ್ (ಅವರ ಭಾವ ಮೈದುನ), ಪಟ್ಟಾಭಿ ಜೋಯಿಸ್ (ಆಪ್ತ ಶಿಷ್ಯ), ದೇಶಿಕಾಚಾರ್ಯ(ಪುತ್ರ) ಹಾಗೂ ಇಂದ್ರಾದೇವಿ (ಆಂಗ್ಲ ಶಿಷ್ಯೆ, ಯೋಗಶಿಕ್ಷಕಿ). ಇವರಲ್ಲಿ ದೇಶಿಕಾಚಾರ್ಯರು ಮದ್ರಾಸಿನಲ್ಲಿ, ಬಿ.ಕೆ.ಎಸ್.ಅಯ್ಯಂಗಾರ್ ಅವರು ಪುಣೆಯಲ್ಲಿ ಮತ್ತು ಪಟ್ಟಾಭಿಯವರು ಮೈಸೂರಲ್ಲಿ ಯೋಗಕೇಂದ್ರಗಳನ್ನು ಸ್ಥಾಪಿಸಿದರು.

ಕೃಷ್ಣ ಪಟ್ಟಾಭಿ ಜೋಯಿಸರು ಹಾಸನದ ಬಳಿ ಇರುವ ಕೌಶಿಕ ಎನ್ನುವ ಹಳ್ಳಿಯಲ್ಲಿ 1915ರ ಜುಲೈ 26ರಂದು ಜನಿಸಿದರು.  ಮಾಧ್ಯಮಿಕ ಶಾಲೆಯೊಂದರಲ್ಲಿ ಓದುತ್ತಿರುವಾಗ ನಡೆದ ಯೋಗಾಸನ ಪ್ರದರ್ಶನದಲ್ಲಿ ಅವರು ಮೊದಲ ಬಾರಿಗೆ ಕೃಷ್ಣಮಾಚಾರ್ಯರನ್ನು ಕಂಡಿದ್ದರು.  ಆಸನಗಳನ್ನು ಬೆರಗಿನಿಂದ ನೋಡಿದ್ದ 12 ವರ್ಷದ ಪಟ್ಟಾಭಿ ಅವುಗಳನ್ನು ತಮಗೆ ಹೇಳಿಕೊಡಬೇಕೆಂದು ಕೇಳಿಕೊಂಡಿದ್ದರು. 

ಪ್ರತಿದಿನ ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು, ಶಾಲೆಬಿಟ್ಟ ನಂತರ ಒಂದೆರಡು ಗಂಟೆಗಳ ಕಾಲ ಪಟ್ಟಾಭಿ ಗುರುವಿನ ಮಾರ್ಗದರ್ಶನದಲ್ಲಿ ಯೋಗಾಸನಗಳನ್ನು ಕಲಿತರು.  ಹದಿನಾಲ್ಕನೇ ವಯಸ್ಸಿನಲ್ಲಿ 2 ರೂಪಾಯಿಯನ್ನು ಜೇಬಿನಲ್ಲಿರಿಸಿಕೊಂಡು ಮೈಸೂರಿನ ಸಂಸ್ಕೃತ ಪಾಠಶಾಲೆ ಸೇರಲು ಮನೆಬಿಟ್ಟು ಓಡಿಹೋದರು. 

1932ರಲ್ಲಿ ನಡೆದ ಯೋಗಾಸನ ಪ್ರದರ್ಶನದಲ್ಲಿ ಮತ್ತೊಮ್ಮೆ ತಮ್ಮ ಗುರು ಕೃಷ್ಣಮಾಚಾರ್ಯರನ್ನು ಭೇಟಿಯಾದರು.  ಮುಂದಿನ 25 ವರ್ಷಗಳ ಕಾಲ ಈ ಗುರು-ಶಿಷ್ಯ ಸಂಬಂಧ ಮುಂದುವರೆಯಿತು.

ಕೃಷ್ಣಮಾಚಾರ್ಯರ ವಿಧೇಯ, ನಿಷ್ಠ ಶಿಷ್ಯರಾಗಿದ್ದ ಪಟ್ಟಾಭಿ ಗುರುಗಳ ಪ್ರತಿಯೊಂದು ಭಂಗಿ, ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.  ಗುರುಗಳ ಮೂಲ ಭಂಗಿಗಳಿಗೆ ಧಕ್ಕೆಯಾಗದಂತೆ ಸೂಕ್ಷ್ಮವಾದ ಚಲನೆಯ ಬದಲಾವಣೆಗಳನ್ನು ತಂದು 1948ರಲ್ಲಿ ಅಷ್ಟಾಂಗ ಯೋಗ ಸಂಶೋಧನಾ ಕೇಂದ್ರದ ಮೂಲಕ ತಮ್ಮದೇ ಆದ 'ಅಷ್ಠಾಂಗ ಯೋಗ' ಪದ್ದತಿಯನ್ನು ಪರಿಚಯಿಸಿದರು.  ಮುಂದೆ ಇದು 'ಪವರ್ ಯೋಗ'ದ ಹುಟ್ಟಿಗೆ ಕಾರಣವಾಯಿತು.  

1964ರಲ್ಲಿ ಬೆಲ್ಜಿಯಂ ಮೂಲದ ವ್ಯಾನ್ ಲ್ಯಾಸ್‍ಬೆಥ್ ಯೋಗಾಸನ ಕಲಿಯಲು ಪಟ್ಟಾಭಿ ಅವರಲ್ಲಿಗೆ ಬಂದರು.  ಈತ ತಮ್ಮ 'ಪ್ರಾಣಾಯಾಮ' ಎಂಬ ಪುಸ್ತಕದ ಮೂಲಕ ಪಟ್ಟಾಭಿಯವರನ್ನು ಯೂರೋಪಿಗೆ ಪರಿಚಯಿಸಿದರು.

ಪಟ್ಟಾಭಿಯವರಿಗಿದ್ದ ಶಿಷ್ಯರ ಬಳಗ ಅಪಾರ. ವಿದೇಶದಿಂದ ಬಂದ ವಿದ್ಯಾರ್ಥಿಗಳೇ ಹೆಚ್ಚು. ಪಟ್ಟಾಭಿ ಅವರ ಕಾಲಾನಂತರವೂ ಈ ಕಲಿಕಾ ವ್ಯವಸ್ಥೆಗಳು ವಿಶ್ವದಾದ್ಯಂತ ಯೋಗಾಸಕ್ತರನ್ನು ನಿರಂತರವಾಗಿ ಆಕರ್ಷಿಸುತ್ತಾ ಸಾಗಿವೆ. ಪಟ್ಟಾಭಿಜೋಯಿಸ್‌ ಅವರ ಪುತ್ರಿ ಸರಸ್ವತಿ, ಮೊಮ್ಮಗ ಶರತ್‌ ಪಟ್ಟಾಭಿ ಯೋಗ ಕಲಿಕಾ ವ್ಯವಸ್ಥೆಗಳನ್ನು ಮುಂದುವರಿಸಿದರು. 

ಪಟ್ಟಾಭಿ ಜೋಯಿಸ್ ಅವರ "ಯೋಗಮಾಲಾ'' ಎಂಬ ಪುಸ್ತಕ ಮೊದಲು 1962ರಲ್ಲಿ ಪ್ರಕಟವಾಯ್ತು. ಈ ಪುಸ್ತಕವನ್ನು ಅವರು ತಮ್ಮ ಗುರುಗಳಾದ ತಿರುಮಲೆ ಕೃಷ್ಣಮಾಚಾರ್ಯರಿಗೆ ಅರ್ಪಿಸಿದ್ದಾರೆ. ಈ ಪುಸ್ತಕಕ್ಕೆ ಆಗ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಎನ್.ಎ.ನಿಕಂ ಅವರು ಮುನ್ನುಡಿ ಬರೆದಿದ್ದಾರೆ. ಅವರು ಹೇಳುತ್ತಾರೆ: "I recommend this little book which is an introduction to the elements of Yoga. Vidvan Pattabhi Jois has explained in simple language the philosophy and discipline of the astanga yoga, based on authentic Sanskrit texts. The Yoga is India's greatest contribution to humanity. The Yoga is an ethics, discipline, and path of spiritual life. Its aim is the purification of the body and mind. It is a perfect way of life.". ಮೈಸೂರು ವಿಶ್ವವಿದ್ಯಾಲಯದ ತತ್ತ್ವಜ್ಞಾನದ ಪ್ರಾಧ್ಯಾಪಕರಾಗಿದ್ದ ಪ್ರೊ. ಎಂ ಯಾಮುನಾಚಾರ್ಯರು ಈ ಪುಸ್ತಕದ ಬಗ್ಗೆ ಬರೆಯುತ್ತಾ "ಈ ಗ್ರಂಥದಿಂದ ಎಲ್ಲರೂ ಪ್ರಯೋಜನವನ್ನು ಹೊಂದಲೆಂದು ಹಾರೈಸುತ್ತೇನೆ. ಇದು ಮುಖ್ಯವಾಗಿ ಆಯುರ್ವೇದ ವಿದ್ಯಾರ್ಥಿಗಳಿಗೆ ಬೇಕಾದುದೆಂದು ವಿಶೇಷವಾಗಿ ಹೇಳಬೇಕಾದುದಿಲ್ಲ. ಮನೋರೋಗ ಚಿಕಿತ್ಸಾ ವಿಧಾನವನ್ನು ವ್ಯಾಸಂಗ ಮಾಡುವ ಆಧುನಿಕ ವೈದ್ಯಶಾಸ್ತ್ರಜ್ಞರಿಗೂ ಈ ಗ್ರಂಥ ಉಪಯೋಗವಾಗಲಿದೆ ಎನ್ನಲು ಅಡ್ಡಿಯಿಲ್ಲ" ಎಂದಿದ್ದಾರೆ.

ಪಟ್ಟಾಭಿ ಜೋಯಿಸ್ ಪುತ್ರ ರಮೇಶ್ ಜೋಯಿಸ್ ನನ್ನ ಹೈಸ್ಕೂಲು ಸಹಪಾಠಿಯಾಗಿದ್ದ.  ಶಾಲೆಯಲ್ಲಿ ತರಗತಿಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಅವನ ಆಪ್ತ ಗೆಳೆಯರಾಗಿದ್ದ ನಮ್ಮ ಮುಂದೆ ವಿಶಿಷ್ಟ ರೀತಿಯಲ್ಲಿ ಯೋಗಾಸನ ಮಾಡಿ ತೋರಿಸುತ್ತಿದ್ದ.  ನಮ್ಮ ಹೈಸ್ಕೂಲು ಅವಧಿ ಮುಗಿಯುತ್ತಿದ್ದ ಹಾಗೆ ಆತ ಹೋಗಿಬಿಟ್ಟ ಎಂಬ ವಿಷಯ ನಮ್ಮನ್ನು ಬಹಳ ಕಾಡಿತ್ತು. ಪಟ್ಟಾಭಿ ಜೋಯಿಸರ ಚಿತ್ರ ನೋಡಿದಾಗ ನನ್ನ ಗೆಳೆಯ ಹೀಗೇ ಇದ್ದ ಎಂಬ ನೆನಪಾಯಿತು.

ಪಟ್ಟಾಭಿ ಜೋಯಿಸ್ ಅವರು 2009ರ ಮೇ 18ರಂದು ನಿಧನರಾದರು.

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ  www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು  ಆದರದಿಂದ  ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ