ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಮ್ತಾಜ್


 ಮಮ್ತಾಜ್


ಮಮ್ತಾಜ್ ಚೆಲುವು, ನಲಿವು ಮತ್ತು ಭಾವಪೂರ್ಣ ಅಭಿವ್ಯಕ್ತಿ ಸಂಗಮಗಳ ಸುಂದರ ನಟಿ.  

ಮಮ್ತಾಜ್ 1947ರ ಜುಲೈ 31ರಂದು ಮುಂಬೈನಲ್ಲಿ ಜನಿಸಿದರು.  ಈಕೆ ಹುಟ್ಟಿದ ಒಂದು ವರ್ಷದಲ್ಲಿ ತಂದೆ ತಾಯಿ ಬೇರೆಯಾದ್ದರಿಂದ ಬಾಲ್ಯದ ಬದುಕು ಬಡತನದ್ದಾಯಿತು.  ಅವರ ತಾಯಿ ನಾಜ್ ಮತ್ತು ಚಿಕ್ಕಮ್ಮ ನಿಲೋಫಾರ್ ಇಬ್ಬರೂ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದರು.

ಮಮ್ತಾಜ್ ಹನ್ನೊಂದನೆಯ ವಯಸ್ಸಿನಲ್ಲಿ 'ಸೋನೆ ಕಿ ಚಿಡಿಯಾ’ ಎಂಬ ಚಿತ್ರದಲ್ಲಿ ನಟಿಸಿದರು. ಮುಂದೆ ಸ್ತ್ರೀ, ಸೆಹ್ರಾ, ಗೆಹ್ರಾ ದಾಗ್ ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸಿದ ಮಮ್ತಾಜ್, ದಾರಾ ಸಿಂಗ್ ಅವರ ಸಾಹಸ ಚಿತ್ರಗಳಾದ ಫೌಲಷ್, ಡಾಕು ಮಂಗಲ ಮುಂತಾದ ಹದಿನಾರು ಚಿತ್ರಗಳಲ್ಲಿ ನಾಯಕಿಯಾದರು.  ಈ ಪಾತ್ರಗಳು ಏಕತಾನತೆ ಸೃಷ್ಟಿಸಿದ್ದವು.  

ಈ ಮಧ್ಯೆ ಮಮ್ತಾಜ್  ಅವರು ರಾಮ್ ಔರ್ ಶ್ಯಾಮ್(1967), ಮೇರೆ ಹಮ್ದಮ್ ಮೇರೇ ದೋಸ್ತ್ (1968) ಮತ್ತು ಬ್ರಹ್ಮಚಾರಿ (1968) ಚಿತ್ರಗಳಲ್ಲಿ ಸಣ್ಣರೀತಿಯ ಪಾತ್ರಗಳಾದರೂ ನಟಿಸಿದ ರೀತಿ, ಅವರಿಗೆ ಹೆಸರು ತಂದವು.  1969ರಲ್ಲಿ ಅವರು ನಟಿಸಿದ ರಾಜ್ ಖೋಸ್ಲಾ 'ದೋ ರಾಸ್ತೆ' ಚಿತ್ರ ಅವರ ಚಿತ್ರಜೀವನದ ಹೊಸ ಅಧ್ಯಾಯವನ್ನಾರಂಭಿಸಿತು.  ಮುಂದೆ ಬಂದ ಬಂಧನ್, ಆದ್ಮಿ ಔರ್ ಇನ್ಸಾನ್, ಸಚ್ಚಾ ಝೂತಾ, ಖಿಲೋನಾ, ತೇರೇ ಮೇರೇ ಸಪ್ನೆ, ಹರೇ ರಾಮ ಹರೇ ಕೃಷ್ಣ, ಅಪ್ನಾ ದೇಶ್, ಲೋಫರ್, ಝೀಲ್ ಕೆ ಉಸ್ ಪಾರ್, ಚೋರ್ ಮಚಾಯೇ ಶೋರ್, ಆಪ್ ಕಿ ಕಸಮ್, ರೋಟಿ, ಪ್ರೇಮ್ ಕಹಾನಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನಪ್ರಿಯರಾದರು.  ರಾಜೇಶ್ ಖನ್ನಾ ಅವರ ಜೊತೆ ನಾಯಕಿಯಾದ ಅವರ ಹತ್ತು ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದವು. ಧರ್ಮೇಂದ್ರ, ರಾಜೇಂದ್ರ ಕುಮಾರ್, ಶಶಿ ಕಫೂರ್, ಸಂಜೀವ್ ಕುಮಾರ್ ಹೀಗೆ ಅವರು ಎಲ್ಲ ಪ್ರಸಿದ್ಧ ನಾಯಕರುಗಳ ಚಿತ್ರಗಳ ನಾಯಕಿಯಾಗಿ ಹೆಸರಾದರು.  'ಖಿಲೋನಾ' ಚಿತ್ರದಲ್ಲಿನ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿ ಗಳಿಸಿದರು.

ಪ್ರಸಿದ್ಧಿಯಲ್ಲಿರುವಾಗಲೇ ಮಮ್ತಾಜ್ 1974ರಲ್ಲಿ ಉದ್ಯಮಿ ಮಯೂರ್ ಮಧ್ವಾನಿ ಅವರನ್ನು ವಿವಾಹವಾದರು.‍ 1977ರಲ್ಲಿ ‘ಆಯ್ನಾ' ಚಿತ್ರದಲ್ಲಿ ನಟಿಸಿದ ನಂತರ ಕುಟುಂಬಕ್ಕೆ ಸಂಪೂರ್ಣ ವೇಳೆ ನೀಡಲು, ವೃತ್ತಿಗೆ ಬಹುತೇಕ ವಿರಾಮ ಹೇಳಿದರು.  ನಂತರದಲ್ಲಿ ಅವರು 1990ರಲ್ಲಿ 'ಆಂಧಿಯಾನ್' ಚಿತ್ರದ ಹೊರತಾಗಿ ಬೇರೆ ಚಿತ್ರಗಳಲ್ಲಿ ನಟಿಸಲಿಲ್ಲ. 

ಮುಮ್ತಾಜ್  2000ದಲ್ಲಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿ ಗುಣಮುಖರಾದರು. ಅವರ ಇಬ್ಬರು ಪುತ್ರಿಯರು ಮತ್ತು ಕುಟುಂಬದೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ.

On the birthday of actress Mumtaz 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ