ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆನಂದ್ ಬಕ್ಷಿ


 ಆನಂದ್ ಬಕ್ಷಿ 


ಆನಂದ್ ಬಕ್ಷಿ  ಪ್ರಸಿದ್ಧ ಚಿತ್ರಸಾಹಿತಿ. ಅವರು ನಲವತ್ತೈದು ವರ್ಷ ಕಾಲ ಹಿಂದಿ ಚಲನಚಿತ್ರರಂಗದಲ್ಲಿದ್ದು  4 ಸಾವಿರಕ್ಕೂ ಹೆಚ್ಚು ಹಾಡು ಬರೆದವರು.  ಚಿತ್ರರಂಗದ ಕಿರಿಯರಿಗೆಲ್ಲ ಅವರು 'ಆನಂದ್‌ ಬಕ್ಷಿ ಅಜ್ಜ' ಎಂದೇ ಹೆಸರಾಗಿದ್ದರು. ಅವರು ವಯಸ್ಸಾಗಿ ಹಾಸಿಗೆ ಹಿಡಿದಿದಾಗಲೂ ಹಾಡು ಬರೆಯುತ್ತಿದ್ದಂತ ಮಹಾನ್ ಸಾಧಕ.

ಆನಂದ್‌ ಬಕ್ಷಿ 1930ರ ಜುಲೈ 21ರಂದು ರಾವಲ್ಪಿಂಡಿಯಲ್ಲಿ ಜನಿಸಿದರು.  ಓದಿದ್ದು 8ನೇ ಕ್ಲಾಸಿನವರೆಗೆ. 3 ವರ್ಷ ಕಾಲ ಭೂಸೇನೆಯಲ್ಲಿ ಸೇವೆ ಸಲ್ಲಿಸಿದರು. ಅವರ ಕನಸು ಸದಾ ಸಿನಿಮಾ ಜಗತ್ತಿನ ಕುರಿತಾಗಿತ್ತು. ಮುಂಬೈಗೆ ಪಯಣ ಮಾಡಿದರು. ಬರವಣಿಗೆಯಲ್ಲಿ ಯಾರನ್ನೂ ಒಲಿಸಲಾಗದೆ ವಿಫಲರಾದದ್ದಕ್ಕೆ ಬೇಸರವಾಯಿತು. ಮತ್ತೆ ಭೂಸೇನೆಗೆ ಸೇರಿದರು. ಮದುವೆಯಾಗಿ ಒಂದು ಹೆಣ್ಣು ಮಗು ಹುಟ್ಟಿತು. ಮತ್ತೆ ಸಿನಿಮಾದಲ್ಲಿ ಒಂದು ಕೈನೋಡುವ ಬಯಕೆಯಾಗಿ, ಭೂಸೇನೆ ಕೆಲಸವನ್ನು ಬಿಟ್ಟರು.

ಆನಂದ್‌ ಬಕ್ಷಿ 1958ರಲ್ಲಿ 'ಭಲಾ ಆದ್ಮಿ' ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಬರೆದರು.   'ಧರ್ತಿ ಕೆ ಲಾಲ್ ನಾ ಕರ್ ಇತ್ನಾ ಮಲಾಲ್' ಇವರು ಬರೆದ ಮೊದಲ ಗೀತ ಸಾಹಿತ್ಯ. ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದ  ಬಕ್ಷಿ ರಾಜ್‌ಕಪೂರ್‌ ಅವರ ಸಂಪರ್ಕಕ್ಕೆ ಬಂದರು. 1962ರಲ್ಲಿ 'ಮೆಹಂದಿ ಲಗಿ ಮೇರೇ ಹಾಥ್'‌ ಸಿನಿಮಾ ಹಾಡುಗಳಿಗ ಸಾಹಿತ್ಯ ಬರೆಯುವ ಅವಕಾಶ ದೊರಕಿತು. ರಾಜ್‍ಕಪೂರ್‌ ಹೆಸರಿನ ಜೊತೆ ಗುರುತಿಸಿಕೊಂಡದ್ದೇ ತಡ ಬಕ್ಷಿ ಮನೆಮಾತಾದರು. ಅವಕಾಶಗಳು ನಿರಂತರ ಹರಿದುಬಂದವು. ಸಾಹಿತ್ಯ ಬರೆಯುವುದುದರ ಜೊತೆಗೆ ಅವರು ಕೆಲವು ಗೀತೆಗಳನ್ನು ಹಾಡಿದ್ದೂ ಉಂಟು.

ಆನಂದ್‌ ಬಕ್ಷಿ ಅವರ 1961ರ ಜಂಗ್ಲಿ ಚಿತ್ರದ 'ಚಾಹೆ ಕೊಯಿ ಮುಝೆ ಜಂಗಲಿ ಕಹೇಂ’ ಗೀತೆಯಾಗಲೀ, 90ರ ದಶಕದ ಮೊಹ್ರಾ ಚಿತ್ರದ 'ತೂ ಚೀಸ್‌ ಬಡೀ ಹೈ ಮಸ್ತ್‌ ಮಸ್ತ್'‌ ಗೀತೆಯಾಗಲೀ ಜನ ಮಾನಸದಲ್ಲಿ ಇಂದೂ ಮನೆ ಮಾಡಿದೆ. ಸಂಗೀತದ ಜೊತೆಗೆ ಜನರ ಬದಲಾದ ಅಭಿರುಚಿಗೆ ತಕ್ಕಂತಹ ಹಾಡುಗಳನ್ನು ಇಳಿ ವಯಸ್ಸಿನಲ್ಲೂ ರಚಿಸಿದ್ದು ಬಕ್ಷಿಯವರ ಸಾಧನೆ.

ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ 'ತುಝೆ ದೇಖಾ ತೋ ಯೇ' ಹಾಗೂ ತಾಲ್‌ ಚಿತ್ರದ 'ಇಶ್ಕ್‌ ಬಿನಾ ಕ್ಯಾ ಜೀನಾ ಯಾರೋಂ' ಹಾಡುಗಳ ಸಾಹಿತ್ಯ ಸೇರಿದಂತೆ ನಾಲ್ಕು ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದ ಆನಂದ್ ಬಕ್ಷಿ ತಮ್ಮ ಜೀವಮಾನದಲ್ಲಿ ಬರೆದ ಹಾಡುಗಳ ಸಂಖ್ಯೆ 4 ಸಾವಿರಕ್ಕೂ ಹೆಚ್ಚು. ಮಿಲನ್‌, ಮಹಲ್‌, ದೋ ರಾಸ್ತೆ, ಹಿಮಾಲಯ್‌ ಕಿ ಗೋದ್‌ ಮೇ, ಮೊಹಬ್ಬತೇಂ, ಯಾದೇಂ, ಖಿಲೋನಾ, ಜೀವನ್‌ ಮೃತ್ಯು, ಮೊಹ್ರಾ ಮುಂತಾದ ಅನೇಕ ಜನಪ್ರಿಯ ಚಿತ್ರಗಳು ಆನಂದ ಬಕ್ಷಿ ಸಾಹಿತ್ಯ ನೀಡಿರುವ ಚಿತ್ರಗಳಲ್ಲಿ ಸೇರಿವೆ

ಆನಂದ್ ಬಕ್ಷಿ 2002ರ ಮಾರ್ಚ್ 30ರಂದು ನಿಧನರಾದರು.  

On the birth anniversary of great lyricist and poet Anand Bakshi 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ