ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೃಂಗಾರ್ ನಾಗರಾಜ್


 ಶೃಂಗಾರ್ ನಾಗರಾಜ್

ಶೃಂಗಾರ್ ನಾಗರಾಜ್ ಎಂದರೆ ತಕ್ಷಣ ನೆನಪಿಗೆ ಬರುವುದು ಅವರು ನಿರ್ಮಿಸಿದ ಅದ್ಭುತ ಚಿತ್ರ 'ಪುಷ್ಪಕ ವಿಮಾನ'.  ಕನ್ನಡ ಚಿತ್ರವೆಂದೇ ಅದು ರಾಷ್ಟ್ರೀಯ ಪ್ರಶಸ್ತಿ ಪಡೆಯಿತಾದರೂ, ಭಾಷಾತೀತ ಸಂವೇದನೆಯುಳ್ಳ ಚಿತ್ರವಾಗಿ, ಅದು ಅನೇಕ ಭಾಷೆಗಳ ಚಿತ್ರವಾಗಿ ಬಿಡುಗಡೆಯಾಗಿ ಎಲ್ಲೆಡೆ ಜಯಭೇರಿ ಬಾರಿಸಿದಂತಹ ನಭೂತೋ ನಭವಿಷ್ಯತಿ ಎಂಬಂತಹ ಚಲನಚಿತ್ರರಂಗದ ವಿಸ್ಮಯ. 

ಶೃಂಗಾರ್ ನಾಗರಾಜ್ ಹೆಸರಿಗೆ ತಕ್ಕಂತೆ ಶೃಂಗಾರವೇ ಮೈದಳೆದಂತಿದ್ದ ವ್ಯಕ್ತಿ. ಗಂಗೊಳ್ಳಿ ರಾಮಶೇಠ್ ನಾಗರಾಜ್ ಯಾವಾಗಲೂ ಉತ್ಸಾಹದಿಂದ ಸಿಂಗಿರಿಸಿಕೊಂಡ ಪೋಷಾಕಿನಲ್ಲಿ ಇರುತ್ತಿದ್ದು, ಆಪ್ತವಲಯದಲ್ಲಿ ಶೃಂಗಾರ್ ನಾಗರಾಜ್ ಎನಿಸಿಕೊಂಡು ಅದೇ ಹೆಸರಿನಿಂದ ಪ್ರಸಿದ್ಧರಾದರು. ಅವರೊಬ್ಬ ಅದ್ಭುತ ಛಾಯಾಗ್ರಾಹಕ, ನಟ ಮತ್ತು ನಿರ್ಮಾಪಕರಾಗಿ ಹೆಸರಾಗಿದ್ದವರು. 

ಶೃಂಗಾರ್ ನಾಗರಾಜ್ 1939ರ ಜುಲೈ 16ರಂದು ಜನಿಸಿದರು. ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದು, ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು.  ಅವರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು.‍ ಒಬ್ಬ ಪುತ್ರ ರಾಮ್‍ಕುಮಾರ್ ಸುಂದರ ನಟರಾಗಿ ಹೆಸರಾಗಿದ್ದಾರೆ.

ಛಾಯಾಗ್ರಾಹಕರಾಗಿ ಮತ್ತು ಕ್ಯಾಮರಾಮನ್ ಆಗಿ ಚಲನಚಿತ್ರರಂಗದವರಿಗೆ ಪರಿಚಿತರಾಗಿದ್ದ ಸುರದ್ರೂಪಿ ಶೃಂಗಾರ್ ನಾಗರಾಜ್ ನಟನೆಗೆ ಕಾಲಿಟ್ಟರು.  ಗೋಲ್ಡ್ ಕಂಟ್ರೋಲ್ ಕಾಯಿದೆ ಬಂದ ಸಂದರ್ಭದಲ್ಲಿ ತಮ್ಮ ಕೌಟುಂಬಿಕ ಚಿನ್ನದ ಆಭರಣಗಳ ವ್ಯಾಪಾರವನ್ನು ಬಿಟ್ಟ ಶೃಂಗಾರ್ ನಾಗರಾಜ್ ಛಾಯಾಗ್ರಹಣ ಕ್ಷೇತ್ರಕ್ಕೆ ಬಂದರು.  ಶೀಘ್ರದಲ್ಲೇ ಬೆಂಗಳೂರಿನ ಪ್ರಖ್ಯಾತ ಛಾಯಾಗ್ರಾಹಕರಲ್ಲಿ ಒಬ್ಬರೆನಿಸಿದರು.‍ ನೇಪಾಳ ಮತ್ತಿತರ ಪ್ರದೇಶಗಳಿಗೆ ಪ್ರವಾಸವನ್ನೂ ವ್ಯವಸ್ಥೆಗೊಳಿಸುತ್ತಿದ್ದರು.‍

1970ರ ದಶಕದಲ್ಲಿ ಚಲನಚಿತ್ರರಂಗಕ್ಕೆ ಕಾಲಿಟ್ಟ ಶೃಂಗಾರ್ ನಾಗರಾಜ್ ಬಂಗಾರದ ಮನುಷ್ಯ, ಸಿಪಾಯಿ ರಾಮು, ಕಥಾ ಸಂಗಮ, ರಂಗನಾಯಕಿ, ಹಾಲು ಜೇನು, ಕೆಸರಿನ ಕಮಲ, ಶಬ್ದವೇದಿ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದರು.  ಕೆಸರಿನ ಕಮಲ ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದರು. 

ಶೃಂಗಾರ್ ನಾಗರಾಜ್ ಅವರಿಗೆ ಅಪಾರ ಹೆಸರು ತಂದದ್ದು ಅವರ 'ಪುಷ್ಪಕ ವಿಮಾನ'
ಚಿತ್ರದ ನಿರ್ಮಾಣ. ಮಾತಿಲ್ಲದೆ ಕೇವಲ ಹಿನ್ನೆಲೆ ಸಂಗೀತ ಮತ್ತು ಕಲಾವಿದರ ಅಭಿನಯವನ್ನು ಆಧರಿಸಿದ ಚಿತ್ರವಿದು. ಈ ಕತೆಯನ್ನು ಹೆಣೆದು ಸುಮಾರು ವರ್ಷಗಳವರೆಗೆ ತಮ್ಮಲ್ಲೇ ಇಟ್ಟುಕೊಂಡು ನಿರ್ಮಾಪಕರಿಗಾಗಿ ಹುಡುಕುತ್ತಿದ್ದ ಸಿಂಗೀತಂ ಶ್ರೀನಿವಾಸರಾಯರಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿರಲಿಲ್ಲ. ಶೃಂಗಾರ್‍ ನಾಗರಾಜರಿಗೆ ಚಿತ್ರರಂಗದಲ್ಲಿ ಏನಾದರೂ ಹೊಸತನ್ನು ಮಾಡಬೇಕೆನಿಸಿ ಸಿಂಗೀತಂ ಅವರೊಡನೆ ಮಾತಾಡಿದಾಗ ಅವರು ತಮ್ಮ ಬಳಿಯಿದ್ದ ಈ ಕತೆಯನ್ನು ಹೇಳಿದರು. ನಾಗರಾಜ್‍ ಇದಕ್ಕೆ ನಿರ್ಮಾಪಕರಾಗಲು ಒಪ್ಪಿಕೊಂಡು ತಮಗಿದ್ದ ಸೀಮಿತ ಬದುಕಿನ ನಿಟ್ಟಿನಲ್ಲಿ ಅತಿದೊಡ್ಡ  ರಿಸ್ಕ್ ಎನ್ನಬಹುದಾದ, ಚಲನಚಿತ್ರರಂಗ ಮಾತಿನ ಚಿತ್ರಗಳೇ ವ್ಯಾಪಿಸಿದ್ದ ಕಾಲದಲ್ಲಿ, ಮೂಕಿಚಿತ್ರ ನಿರ್ಮಾಣದ ಸಾಹಸಕ್ಕೆ ಮುಂದಾದರು.  ಚಿತ್ರದ ಭವಿಷ್ಯದ ಮೇಲೆ ಅವರ ಬದುಕೇ ನಿಂತಿತ್ತು. ಈ ಚಿತ್ರ ಬಿಡುಗಡೆಯಾಗಿ ಎಲ್ಲ ಭಾಷಿಗರಿಗೂ ಇದು ತಮ್ಮದೇ ಭಾಷೆಯ ಚಿತ್ರ ಎಂದು ಆಪ್ತವಾಗಿ ಎನಿಸುವಂತೆ ಮಾಡಿ, ಚಲನಚಿತ್ರರಂಗದ ಬಹುದೊಡ್ಡ ಯಶಸ್ಸುಗಳಲ್ಲಿ ಒಂದೆನಿಸಿದೆ.

ಶೃಂಗಾರ್ ನಾಗರಾಜ್ ಪುಷ್ಪಕ ವಿಮಾನ ಚಿತ್ರವನ್ನು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಕನ್ನಡ ಚಿತ್ರವೆಂದೇ ಪ್ರಶಸ್ತಿಗಿಳಿಸಿದರು. ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ಮನರಂಜನಾ ಚಿತ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನೂ ಹಾಗೂ ರಾಜ್ಯಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ಉತ್ಸವಗಳಲ್ಲಿ ಅನೇಕ ಪ್ರಮುಖ ಪ್ರಶಸ್ತಿಗಳನ್ನೂ ಈ ಚಿತ್ರ ಗಳಿಸಿತು. ನಾಯಕ ಕಮಲಹಾಸನ್ ಮತ್ತು ಆ ಚಿತ್ರದ ಎಲ್ಲ ಕಲಾವಿದರಿಗೆ ಮತ್ತು ನಿರ್ದೇಶಕ ಸಿಂಗೀತಂ ಶ್ರೀನಿವಾಸರಾಯರಿಗೆ ಈ ಚಿತ್ರ ತಂದುಕೊಟ್ಟ ಕೀರ್ತಿ ಅಪರಿಮಿತ. 

ಶೃಂಗಾರ್ ನಾಗರಾಜ್ ತಮ್ಮ ಹುಟ್ಟುಹಬ್ಬದ ದಿನವಾದ ಜುಲೈ 16ರಂದೇ ತಮ್ಮ 74ನೇ ವಯಸ್ಸಿನಲ್ಲಿ 2013ರ ವರ್ಷದಲ್ಲಿ ಈ ಲೋಕವನ್ನಗಲಿದರು. 

On the birth anniversary of photographer, cameraman, actor and producer of Pushpak fame Shringar Nagaraj 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ