ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಾದೇವ ಪ್ರಭಾಕರ ಪೂಜಾರ


 ಮಹಾದೇವ ಪ್ರಭಾಕರ ಪೂಜಾರ


ಪಂಡಿತ ಮಹಾದೇವ ಪ್ರಭಾಕರ ಪೂಜಾರ ಅವರು ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ವಿದ್ವಾಂಸರು. 

ಮಹಾದೇವ ಪ್ರಭಾಕರ ಪೂಜಾರರು ಧಾರವಾಡ ಜಿಲ್ಲೆಯ ಬಂಕಾಪುರದಲ್ಲಿ 1884ರ ಆಗಸ್ಟ್ 6 ರಂದು ಜನಿಸಿದರು. ಇವರದ್ದು ಅರ್ಚಕರ ಮನೆತನ. ಮನೆಯಲ್ಲಿ ತೀವ್ರ ಬಡತನವಿತ್ತು. 

ಮಹಾದೇವ ಪ್ರಭಾಕರ ಪೂಜಾರರು ಸುಮಾರು 1900ರಲ್ಲಿ ಉಟ್ಟ ಪಂಚೆಯಲ್ಲಿ ಧಾರವಾಡಕ್ಕೆ ಬಂದು ಅಲ್ಲಿಯ ಸಂಸ್ಕೃತ ಶಾಲೆಯಲ್ಲಿ ನಾಲ್ಕು ವರ್ಷ ವ್ಯಾಸಂಗ ಮಾಡಿ ಅಲಂಕಾರ, ನ್ಯಾಯ, ವ್ಯಾಕರಣ ಮತ್ತು ವೇದಾಂತ ಇತ್ಯಾದಿ ಶಾಸ್ತ್ರಗಳಲ್ಲಿ ಪ್ರವೀಣರಾದರು. ಅವರಿಗೆ ಕೃಷ್ಣಶಾಸ್ತ್ರಿಗಳೂ ಎಂಬುವರು ಗುರುಗಳಾಗಿದ್ದರು. ಕನ್ನಡ ಟ್ರೇನಿಂಗ್ ಕಾಲೇಜಿನಲ್ಲಿ ಮೂರನೆಯ ವರ್ಷದ ಟ್ರೇನಿಂಗ್ ಪರೀಕ್ಷೆಯನ್ನು ಮುಗಿಸಿದರು (1907). ಇದರಿಂದಾಗಿ ಮಾಸಿಕ ವೇತನ 25 ರೂಪಾಯಿ ದೊರೆಯುವಂತಾಯಿತು. 

ಮಹಾದೇವ ಪ್ರಭಾಕರ ಪೂಜಾರರು ಉಪ್ಪಿನ ಬೆಟಗೇರಿಯಲ್ಲಿ ಅಧ್ಯಾಪಕವೃತ್ತಿಯನ್ನು ಆರಂಭಿಸಿದರು. ಪಂಡಿತ ಪರೀಕ್ಷೆ ಮುಗಿಸಲು ಮೈಸೂರಿಗೆ ಬಂದರು. 1909ರಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಧಾರವಾಡಕ್ಕೆ ವಾಪಸ್ಸು ಬಂದು ಶಿರಕೋಳ, ಅಮ್ಮಿನಬಾವಿಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. 1913ರಲ್ಲಿ ಧಾರವಾಡದ ಶಿಕ್ಷಣ ಮಹಾವಿದ್ಯಾಲಯದಲ್ಲಿ (ಕನ್ನಡ ಪಂಡಿತರಾಗಿ) ನೇಮಕಗೊಂಡು 1940ರ ತನಕ ಅದೇ ನೌಕರಿಯಲ್ಲಿದ್ದು ನಿವೃತ್ತರಾದರು. ಅನಂತರ ಕೆ.ಇ.ಬೋರ್ಡ್ಸ್ ಆರ್ಟ್ಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆಯನ್ನು ಸ್ವೀಕರಿಸಿದರು.

ಪೂಜಾರರು 1914-16 ಅವಧಿಯಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಗ್ಭೂಷಣ ಪತ್ರಿಕೆಯ ಸಂಪಾದಕರಾಗಿದ್ದರು. ಅನೇಕ ವರ್ಷಗಳ ಕಾಲ ಆ ಸಂಘದ ಕಾರ್ಯಕಾರೀ ಮಂಡಲದಲ್ಲಿಯೂ ಇದ್ದರು. 1947ರಲ್ಲಿ ಮುಂಬಯಿ ಸರ್ಕಾರದ ಕನ್ನಡ ಪಠ್ಯಪುಸ್ತಕ ಸಮಿತಿಯಲ್ಲಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕೈಕೊಂಡ ಕಾರ್ಯಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು. ಅದು ಪ್ರಕಟಿಸಿದ ಪಂಪನ ವಿಕ್ರಮಾರ್ಜುನ ವಿಜಯ ಗ್ರಂಥದ ಸಂಪಾದನೆಯ ಕೆಲಸದಲ್ಲಿ ನೆರವಾದರು.

ಪೂಜಾರರ ಕೆಲವು ಮುಖ್ಯ ಕೃತಿಗಳಲ್ಲಿ ಅಶೋಕ ಅಥವಾ ಪ್ರಿಯದರ್ಶಿ, ಜೈನಧರ್ಮ ಪರಿಭಾಷೆ (1930), ಜೈನಪದ್ಮಪುರಾಣಸಾರ, ಕನ್ನಡ ನುಡಿಗನ್ನಡಿ ಭಾಗ 1-2 (1929), ಪಂಚತಂತ್ರಸಾರ ಭಾಗ 1-2 (1920) ಭಾರತೀಯ ವಿದುಷಿಯರು (1914), ಭೀಷ್ಮಾಚಾರ್ಯ, ಮದುವೆ, ಮಹಮ್ಮದ್ ಪೈಗಂಬರ್, ಮೊಹರಂ, ರಾಮಾಶ್ವಮೇಧ ಸಾರಸಂಗ್ರಹ, ಶಬ್ದಾನುಶಾಸನಕ್ಕೆ ವೃತ್ತಿ (421-600 ಸೂತ್ರಗಳು), ಶೇರಶಹ, ಸತ್ಕಥಾಲಾಪ, ಸತಿಯೂ ಸುನೀತಿಯೂ, ಸದ್ಗುಣಾದರ್ಶ, ಕೆಲವು ಕನ್ನಡ ವ್ಯಾಕರಣ ವಿಚಾರಗಳು (ದರ್ಪಣ-ಶಾಸನಗಳನ್ನಧಿಕರಿಸಿ-1952), ವಾಚನ ಪಾಠಮಾಲೆ-ಕವಿತಾ ಪಾಠಮಾಲೆ (ಸಂಪಾದನೆ ಎನ್.ವಿ. ಕುರಡಿ ಅವರೊಂದಿಗೆ) ಮುಂತಾದವು ಸೇರಿವೆ.‍

ಕರ್ನಾಟಕ ವಿದ್ಯಾವರ್ಧಕ ಸಂಘ ಇವರ ಅಶೋಕ, ಭಾರತೀಯ ವಿದುಷಿಯರು ಮತ್ತು ಮಹಮ್ಮದ್ ಪೈಗಂಬರ್ ಪುಸ್ತಕಗಳಿಗೆ ಬಹುಮಾನವಿತ್ತು ಗೌರವಿಸಿತ್ತು.

ಪೂಜಾರರು 1962ರ ಜನವರಿ 5 ರಂದು ನಿಧನರಾದರು. 

On the birth anniversary scholar and writer Mahadeva Prabhakara Poojara 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ