ನಾಗಮಣಿ ಚಂದ್ರಶೇಖರ್
ನಾಗಮಣಿ ಚಂದ್ರಶೇಖರ್
ಲೇಖಕಿ : ಡಾ. ರುಕ್ಮಿಣಿ ರಘುರಾಮ್
ನಾಗಮಣಿ ಚಂದ್ರಶೇಖರ್ ಅವರು ಆಗಸ್ಟ್ 6 1935 ರಲ್ಲಿ ಸತ್ಯಮಂಗಲಮ್ ನಲ್ಲಿ ಜನಿಸಿದರು. ತಂದೆ ಡಾ. ಆರ್ .ನರಸಿಂಹಯ್ಯ ವೈದ್ಯರಾಗಿದ್ದರು. ತಾಯಿ ಡಾ. ಆರ್ ಲಕ್ಷ್ಮೀದೇವಿ ಹಿಂದಿ ಅಧ್ಯಾಪಕರಾಗಿದ್ದರು. ಇವರಿಗೆ ಮೂರು ಜನ ತಂಗಿಯರು ಹಾಗೂ ಒಬ್ಬ ತಮ್ಮ. ಪ್ರಾಥಮಿಕ ಶಿಕ್ಷಣವನ್ನು ಸತ್ಯಮಂಗಲಮ್ ನಲ್ಲಿ ಮುಗಿಸಿ, ಅಲ್ಲಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಸ್ವಲ್ಪ ಕಾಲ ತಮ್ಮ ಅವರ ಚಿಕ್ಕಪ್ಪನ ಮನೆಯಲ್ಲಿ ಇದ್ದು ವ್ಯಾಸಂಗ ಮಾಡಿದರು. ಅನಂತರ ಇಡೀ ಪರಿವಾರ ಬೆಂಗಳೂರಿನ ಬಸವನಗುಡಿಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಂದು ನೆಲೆಸಿದರು. ನಾಗಮಣಿಯವರು ಮೌಂಟ್ ಕಾರ್ಮೆಲ್ ಕಾಲೇಜಿನಿಂದ 1954 ರಲ್ಲಿ ಬಿ.ಎಸ್ಸಿ. ಪದವಿಯನ್ನು ಪಡೆದರು .ಕಾಲೇಜಿನ ದಿನಗಳಲ್ಲಿ ಅವರು ಟೆನ್ನಿಕಾಯಿಟ್ ಆಟದಲ್ಲಿ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಬೆಂಗಳೂರಿನ ವೈದ್ಯರಾಗಿದ್ದ ಡಾ. ನರಸಿಂಹಯ್ಯನವರ ಮನೆಯ ಸಮೀಪದಲ್ಲಿಯೇ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸ ರಾಯರ ಮನೆ. ಇತ್ತು ಇವರಿಬ್ಬರಿಗೂ ಪರಿಚಯವಾಗಿ , ಮುಂದೆ ಶ್ರೀನಿವಾಸರಾಯರ ಹಿರಿಯ ಪುತ್ರ ವಕೀಲರಾಗಿದ್ದ ಎನ್. ಎಸ್ .ಚಂದ್ರಶೇಖರ ಅವರೊಂದಿಗೆ ನಾಗಮಣಿಯವರ ವಿವಾಹ ನಂಜನಗೂಡಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯಿತು.
ಮದುವೆಯಾದ ನಂತರ ನಾಗಮಣಿಯವರು ಆರ್. ವಿ. ಟೀಚರ್ಸ್ ಕಾಲೇಜಿನಲ್ಲಿ ಬಿ.ಎಡ್ .ಪದವಿಯನ್ನು ಪಡೆದರು. ಅನಂತರ ಕೆಲಕಾಲ ಈಸ್ಟ್ ವೆಸ್ಟ್ ಶಾಲೆಯಲ್ಲಿ ಆಧ್ಯಾಪಿಕೆಯಾಗಿ ಕೆಲಸ ಮಾಡಿದರು. ಎನ್. ಎಸ್. ಚಂದ್ರಶೇಖರ ಅವರು ಮತ್ತು ಅವರ ತಮ್ಮ ಎನ್. ಎಸ್. ಸುಬ್ಬಣ್ಣ ಅವರು ರೋಟರಿ ಸಂಸ್ಥೆಯ ಸದಸ್ಯರಾದಾಗ , ಅದರ ಸಹ ಸಂಸ್ಥೆಯಾದ ಇನ್ನರ್ ವೀಲ್ ಕ್ಲಬ್ ಗೆ ನಾಗಮಣಿ ಸದಸ್ಯರಾದರು . ಇನ್ನರ್ ವೀಲ್ ಸಂಸ್ಥೆಯು ನಡೆಸುತ್ತಿದ್ದ ಪೌಷ್ಟಿಕ ಆಹಾರ ವಿತರಣೆ, ಟ್ರಿಪಲ್ ಆಂಟಿಜನ್ ಲಸಿಕೆ, ಸಿಡಿಬು ಲಸಿಕೆ ವಿನಿಯೋಗ ಕಾರ್ಯಕ್ರಮಗಳಲ್ಲಿ ಕ್ರೀಯಾಶೀಲವಾಗಿ ತೊಡಗಿಸಿಕೊಂಡರು. ಬೆಂಗಳೂರು ದಕ್ಷಿಣ ಇನ್ನರ್ ವೀಲ್ ನ ಖಜಾಂಚಿಯಾಗಿ, ಕಾರ್ಯದರ್ಶಿಯಾಗಿ ನಂತರ ಅಧ್ಯಕ್ಷಿಣಿಯಾಗಿ ಕಾರ್ಯ ನಿರ್ವಹಿಸಿದರು . ಇನ್ನರ್ ವೀಲ್ ಕ್ಲಬ್ ಗಳ ಭಾರತ ಹಾಗೂ ಸಿಲೋನ್ ಗಳ ಇಂಟರ್ನ್ಯಾಷನಲ್ ಇನ್ನರ್ ವೀಲ್ ಸಂಸ್ಥೆಯ ರೆಪ್ರೆಸೆಂಟೇಟಿವ್ ಆಗಿ ಎರಡು ವರ್ಷ ಸೇವೆ ಸಲ್ಲಿಸಿದರು.ಈ ಸಮಯದಲ್ಲಿ ಹಲವಾರು ದೇಶಗಳನ್ನು ಸಂದರ್ಶಿಸುವ ಅವಕಾಶವೂ ಬಂತು.
ನಾಗಮಣಿ ಚಂದ್ರಶೇಖರ್ ದಂಪತಿಗಳಿಗೆ ಪುಟ್ಟಪರ್ತಿಯ ಶ್ರೀ ಸತ್ಯ ಸಾಯಿ ಬಾಬಾ ಅವರ ಬಗ್ಗೆ ಬಹಳ ಗೌರವ ಮತ್ತು ಭಕ್ತಿ .ಅವರು ಆಗಾಗ ಬಾಬಾ ಅವರ ದರ್ಶನಕ್ಕಾಗಿ ಪುಟ್ಟಪರ್ತಿ ಹಾಗೂ ವೈಟ್ ಫೀಲ್ಡ್ ಗೆ ಹೋಗುತ್ತಿದ್ದರು. ಬಾಬಾ ಅವರು ಪ್ರಾರಂಭಿಸಿದ ಬಾಲ ವಿಕಾಸ ತರಗತಿಗಳನ್ನು ನಾಗಮಣಿಯವರು ಮನೆಯಲ್ಲಿಯೇ ಮಕ್ಕಳಿಗಾಗಿ ನಡೆಸುತ್ತಿದ್ದರು. ಎಂ.ಎನ್. ಕೃಷ್ಣರಾವ್ ಪಾರ್ಕ್ ನಲ್ಲಿ ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿಯನ್ನು ನೀಡುತ್ತಿದ್ದರು. ಬಾಲ ವಿಕಾಸದ ಮಕ್ಕಳು ಮಾಡುತ್ತಿದ್ದ ನಾಟಕಗಳನ್ನು ಅವರೇ ನಿರ್ದೇಶಿಸಿ, ಮಕ್ಕಳ ಪೋಷಾಕುಗಳನ್ನು ಅವರೇ ತಯಾರಿಸುತ್ತಿದ್ದರು. ಮನೆಯಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಜೇಡಿ ಮಣ್ಣಿನಿಂದ ಗಣೇಶನ ವಿಗ್ರಹವನ್ನು ಸುಂದರವಾಗಿ ತಯಾರಿಸುತ್ತಿದ್ದರು. ಹಲವಾರು ಬಗೆ ಅಪರೂಪದ ಹಕ್ಕಿಗಳು ಹಾಗೂ ಚಿಟ್ಟೆಯ ಚಿತ್ರಗಳನ್ನು ನೋಡಿ, ಅವುಗಳ ಮಾದರಿಯನ್ನು ಬೇರೆ ಬೇರೆ ವರ್ಣದ ಹರಳುಗಳನ್ನು ಬಳಸಿ ಮಾದರಿಗಳನ್ನು ಕಲಾತ್ಮಕವಾಗಿ ತಯಾರಿಸುತ್ತಿದ್ದರು .
ನಾಗಮಣಿಯವರಿಗೆ ವೈದ್ಯರಾಗಬೇಕೆಂಬ ಆಸೆ ಇತ್ತು. ಅವರ ತಂದೆ ಡಾ. ನರಸಿಂಹಯ್ಯನವರು ಬೆಂಗಳೂರಿಗೆ ಬಂದ ನಂತರ ಪರ್ಯಾಯ ಔಷದ ಪದ್ಧತಿಯಾದ ಹೋಮಿಯೋಪತಿಯಲ್ಲಿ ಪರಿಣತಿಯನ್ನು ಪಡೆದು ರೋಗಿಗಳಿಗೆ ಔಷಧ ನೀಡುತ್ತಿದ್ದರು . ತಂದೆಯಿಂದ ಮಾರ್ಗದರ್ಶನ ಪಡೆದು ಜೊತೆಗೆ ದೇಹ ರಚನೆ, ಔಷಧಿಗಳ ಬಗ್ಗೆ ನಾಗಮಣಿಯವರು ಅಧ್ಯಯನ ಮಾಡಿದರು. ಸೋಹಂ ಸಂಸ್ಥೆಯ ಸ್ವಾಮಿ ಆನಂದ ಹಾಗೂ ಸ್ವಾಮಿ ನಾರಾಯಣಿಯವರ ಪರಿಚಯ ಪ್ರಭಾವದಿಂದ ಹೋಮಿಯೋಪತಿ ಔಷಧವನ್ನು ಕೊಡಲು ಪ್ರಾರಂಭಿಸಿದರು. ಮೊದ ಮೊದಲು ಮನೆಯಲ್ಲಿಯೇ ಔಷದ ಕೊಡುತ್ತಿದ್ದರು. ಅನಂತರ ತಾವು ಕಲಿತಿದ್ದನ್ನು, ಚಿಕಿತ್ಸೆ ನೀಡುವ ವಿಧಾನವನ್ನು ನೂರಾರು ಜನಕ್ಕೆ ಬೋಧಿಸಿದರು. ಅವರೆಲ್ಲರೊಡನೆ ಸೇರಿ ಜಯನಗರದ ಆದರ್ಶ ವನಿತ ಸಮಾಜದಲ್ಲಿ ಸೋಹಂ ಹೀಲಿಂಗ್ ಸೆಂಟರ್ ಸ್ಥಾಪಿಸಿ ಉಚಿತವಾಗಿ ರೋಗಿಗಳಿಗೆ ಔಷಧಿಯನ್ನು ಕೊಡಲು ಪ್ರಾರಂಭಿಸಿದರು. ಇದಲ್ಲದೆ ಅಕ್ಯುಪ್ರೆಶರ್, ವೈಬ್ರಾನಿಕ್ಸ್ , ರೇಡಿಯೋನಿಕ್ಸ್ ಬಗ್ಗೆಯೂ ತರಬೇತಿ ಪಡೆದುಕೊಂಡರು. ರೇಖಿಯಲ್ಲಿ ಗ್ರಾಂಡ್ ಮಾಸ್ಟರ್ ಪದವಿ ಪಡೆದರು. ಆದರ್ಶ ವನಿತಾ ಸಮಾಜದ ಸದಸ್ಯರಾಗಿದ್ದರು. ಬೆಂಗಳೂರಿನ ವುಮೆನ್ಸ್ ಫೀಸ್ ಲೀಗ್ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಗುರೂಜಿ ಕೃಷ್ಣಾನಂದರು ಸ್ಥಾಪಿಸಿದ ತಪೋ ನಗರಕ್ಕೆ ಹೋಗುತ್ತಿದ್ದರು. ಸಪ್ತ ಋಷಿಗಳ ಮಾರ್ಗದಲ್ಲಿ ಅವರು ಧ್ಯಾನವನ್ನು ಮಾಡುತ್ತಿದ್ದರು. ಗುರೂಜಿ ಕೃಷ್ಣಾನಂದ ಅವರು ಬೋಧಿಸಿದ ಲೈಟ್ ಚಾನೆಲ್ ಮೂಲಕ ಪ್ರೀತಿ, ಶಾಂತಿ ಮತ್ತು ಅಹಿಂಸೆಗಳನ್ನು ಪಸರಿಸಲು ನಾಗಮಣಿಯವರು ಕೃಷ್ಣಾನಂದರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು . ಒಮ್ಮೆ ಗುರೂಜಿ ಕೃಷ್ಣಾನಂದರು ಮನೆಗೂ ಬಂದಿದ್ದರು. ನಾಗಮಣಿಯವರು ತಮ್ಮ ಮನೆಯಲ್ಲಿ ಮಾವ ಜಸ್ಟಿಸ್ ನಿಟ್ಟೂರ್ ಶ್ರೀನಿವಾಸ ರಾಯರು ಮತ್ತು ಅತ್ತೆ ಶ್ರೀಮತಿ ಪದ್ಮಮ್ಮ ಇವರುಗಳ ಪ್ರೀತಿಗೆ ಪಾತ್ರರಾಗಿದ್ದರು. ಮನೆಗೆ ಬರುವವರಿಗೆ ಅತಿಥಿ ಸತ್ಕಾರ ನೀಡುತ್ತಿದ್ದರು. ನಾಗಮಣಿ ಚಂದ್ರಶೇಖರ್ ದಂಪತಿಗಳಿಗೆ ಅನುಪಮಾ ಜಯಸಿಂಹ ಮತ್ತು ರಘುರಾಮ್ ನಿಟ್ಟೂರ್ ಇಬ್ಬರು ಮಕ್ಕಳು. ಮೊಮ್ಮಕ್ಕಳನ್ನೇ ಅಲ್ಲದೆ ಮರಿ ಮಕ್ಕಳನ್ನು ನೋಡಿ ಅವರಿಂದ ಕನಕಾಭಿಷೇಕ ಮಾಡಿಸಿಕೊಳ್ಳುವ ಭಾಗ್ಯ ಅವರದ್ದಾಗಿತ್ತು .
ಬಹಳ ವರ್ಷಗಳಿಂದ ಬಾಧಿಸುತ್ತಿದ್ದ ಕಾಯಿಲೆಗಳಿಗೆ ನಾಗಮಣಿಯವರು ಹೋಮಿಯೋಪತಿ, ರೇಖಿ ಹೀಗೆ ಬೇರೆ ಬೇರೆ ಪರ್ಯಾಯ ವಿಧಾನಗಳನ್ನು ಅನುಸರಿಸಿ ಗುಣ ಪಡಿಸುತ್ತಿದ್ದರು. ಪರ್ಯಾಯ ಔಷಧಿ ಪದ್ಧತಿಯಾದ ಹೋಮಿಯೋಪತಿಯು ಪರಿಣಾಮಕಾರಿಯಾದ ಫಲವನ್ನು ನೀಡುತ್ತದೆಂದು ಸಾಬೀತುಪಡಿಸಿದರು . ಅವರು ಎಂದೂ ಯಾರಿಂದಲೂ ಹಣ ಪಡೆಯಲಿಲ್ಲ. ಅವರ ಸೇವೆ ಎಲ್ಲ ಉಚಿತವಾಗಿಯೇ ಮಾಡಿದರು . ಗುಣವಾದವರು ಅವರ ಸೋಹಂ ಹೀಲಿಂಗ್ ಸೆಂಟರ್ ಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಇಳಿ ವಯಸ್ಸಿನಲ್ಲಿಯೂ ಹೀಲಿಂಗ್ ಸೆಂಟರ್ ಅನ್ನು ನಡೆಸಿಕೊಂಡು ಬಂದರು, ಭಾನುವಾರಗಳಂದು ತಪೋ ನಗರಕ್ಕೆ ತಮ್ಮ ಸ್ನೇಹಿತೆಯರೊಂದಿಗೆ ಹೋಗುತ್ತಿದ್ದರು. ನಾಗಮಣಿ ಅವರ ಬಳಿ ಕಲಿತವರು ಈಗಲೂ ಹೋಮಿಯೋಪತಿ ಔಷಧವನ್ನು ಉಚಿತವಾಗಿ ನೀಡುತ್ತಿದ್ದಾರೆ. ಪ್ರತಿ ವರ್ಷವೂ ಅವರಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲ ಸೇರಿ ಔತಣ ಕೂಟವನ್ನು ಏರ್ಪಡಿಸುತ್ತಿದ್ದರು. ಅದರಲ್ಲಿ ನಾನು ತಪ್ಪದೆ ಭಾಗವಹಿಸುತ್ತಿದೆ. ನಮ್ಮ ಮನೆಯಲ್ಲಿಯೂ ಪ್ರತಿವಾರ ಅವರೆಲ್ಲರೂ ಸೇರಿ ಔಷಧಿಗಳ ಹಾಗೂ ಚಿಕಿತ್ಸಾ ಪದ್ಧತಿಗಳ ಬಗ್ಗೆ ಚರ್ಚಿಸುತ್ತಿದ್ದರು. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿ ಮನೆಯಲ್ಲಿಯೂ, ಸಮಾಜದಲ್ಲಿಯೂ ಎಲ್ಲರಿಗೂ ಬೇಕಾದವರಾಗಿ ಹಲವಾರು ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ ಇರಿಸಿಕೊಂಡು ಸಮಾಜ ಸೇವೆಯನ್ನು ಮಾಡಿ ಅಪಾರವಾದ ಜನಪ್ರಿಯತೆಯನ್ನು ಪಡೆದರು. ಜೂನ್ 26, 2020ರಂದು ದೈವಾಧೀನರಾದರು.
ಕೃತಜ್ಞತೆ: ಲೇಖಕಿ : ಡಾ. ರುಕ್ಮಿಣಿ ರಘುರಾಮ್ ಮತ್ತು Raghuram Nittoor
ಕಾಮೆಂಟ್‌ಗಳು