ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಪಿ ಕೃಷ್ಣ


 ಗೋಪಿ ಕೃಷ್ಣ


ಝಣಕ್ ಝಣಕ್ ಪಾಯಲ್ ಬಾಜೆ ಚಿತ್ರ ನೋಡಿದವರಿಗೆ ಮಹಾನ್ ನೃತ್ಯ ಕಲಾವಿದ ಗೋಪಿ ಕೃಷ್ಣ ಮರೆತಿರಲು ಸಾಧ್ಯವಿಲ್ಲ. ಮೂಲತಃ ಕಥಕ್ ನೃತ್ಯ ಕಲಾವಿದರಾದ ಗೋಪಿ ಕೃಷ್ಣ ತಮ್ಮ ನೃತ್ಯದಲ್ಲಿ ಭರತನಾಟ್ಯ ಮತ್ತು ಕಥಕ್ಕಳಿ ಸೊಬಗನ್ನೂ ಮೇಳೈಸಿದ್ದರು.  ಅವರೊಬ್ಬ ಸುರದ್ರೂಪಿ ನೃತ್ಯ ಕಲಾವಿದ, ನಟ ಮತ್ತು ನೃತ್ಯ ಸಂಯೋಜಕ. 

ಗೋಪಿ ಕೃಷ್ಣ 1935ರ ಆಗಸ್ಟ್ 22ರಂದು ಕೊಲ್ಕೊತ್ತಾದಲ್ಲಿ ಜನಿಸಿದರು.  ಅವರ ಕುಟುಂಬವು ಕಥಕ್ ನೃತ್ಯಕಲಾವಿದರಿಂದ ಕಂಗೊಳಿಸಿತ್ತು.  ಅವರ ತಾಯಿಯ ತಂದೆ ಪಂಡಿತ್ ಸುಖದೇವ್ ಮಹಾರಾಜ್ ಕಥಕ್ ನೃತ್ಯಗುರು.  ಚಿಕ್ಕಮ್ಮ ಸಿತಾರಾ ದೇವಿ ವಿಶ್ವದಲ್ಲೆಲ್ಲ ಕಥಕ್ ನೃತ್ಯಪ್ರದರ್ಶನಗಳನ್ನು ನೀಡಿ ಪ್ರಸಿದ್ಧರಾಗಿದ್ದವರು. 

ಗೋಪಿಕೃಷ್ಣ ತಮ್ಮ 11ನೇ ವಯಸ್ಸಿನಲ್ಲಿ ತಾತನವರಿಂದ ನೃತ್ಯ ಕಲಿಯಲಾರಂಭಿಸಿದರು. ಶಂಭು ಮಹಾರಾಜ್ ಅವರಿಂದಲೂ ಕಥಕ್ ನೃತ್ಯ ಸಾಧನೆ ಮಾಡಿದರು. ಕಥಕ್ ಅಲ್ಲದೆ ಮಹಾಲಿಂಗಂ ಪಿಳ್ಳೈ ಮತ್ತು ಗೋವಿಂದ ರಾಜ್ ಪಿಳ್ಳೈ ಅವರಿಂದ ಭರತನಾಟ್ಯಂ ಕಲಿತರು.  ಆಸ್ತಮಾ ಕಾಡಿದರೂ ನೃತ್ಯ ಸಾಧನೆಯನ್ನು ನಡೆಸುತ್ತಾ ಸಾಗಿದ ಅವರು ತಮ್ಮ 15ನೇ ವಯಸ್ಸಿನಲ್ಲಿ ಅಖಿಲ ಬಂಗಾಳ ಸಂಗೀತ ಸಮ್ಮೇಳನದಲ್ಲಿ 'ನಟರಾಜ' ಬಿರುದಾಂಕಿತರಾದರು. 

1952ರಲ್ಲಿ ಗೋಪಿ ಕೃಷ್ಣ ತಮ್ಮ 17ನೇ ವಯಸ್ಸಿನಲ್ಲಿ ಮಧುಬಾಲಾ ಅಭಿನಯದ 'ಸಖಿ' ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದರು. 1955ರಲ್ಲಿ ಚಿತ್ರರಂಗದಲ್ಲಿ ಶಾಸ್ತ್ರೀಯ ನೃತ್ಯಕಲೆಗೆ ಅಪಾರ ಪ್ರಸಿದ್ಧಿ ತಂದ 'ಝಣಕ್ ಝಣಕ್ ಪಾಯಲ್ ಬಾಜೆ' ಚಿತ್ರದ ನಾಯಕ 'ಗಿರಿಧರ್' ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದಿತು. ವಿ. ಶಾಂತಾರಾಂ ಅವರ ಅದ್ಭುತ ಕಲಾವಂತಿಕೆಯ ನಿರ್ದೇಶನ ಮತ್ತು ಅತ್ಯುತ್ತಮ ಗೀತೆಗಳಿಂದ ಮೂಡಿಬಂದ ಈ ಚಿತ್ರ ಭಾರತೀಯ ಚಿತ್ರರಂಗದ ವಿಶಿಷ್ಟ ಚಿತ್ರಗಳಲ್ಲೊಂದು.

ಗೋಪಿಕೃಷ್ಣ ಮುಂದೆ ಗೃಹಸ್ಥಿ, ದಾಸ್ಥಾನ್, ಮೆಹಬೂಬಾ, ಉಮ್ರಾವ್ ಜಾನ್, ನಾಛೇ ಮಯೂರಿ, ದ ಪರ್ಫೆಕ್ಟ್ ಮರ್ಡರ್ ಮುಂತಾದ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದರು. ಅವರು ಹಮ್ರಾಜ್, ಅನ್ನಧಾತಾ, ಜಮಾನಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಮಹಾಭಾರತ ದೂರದರ್ಶನ ಸರಣಿಯಲ್ಲೂ ಕಿರುಪಾತ್ರ ವಹಿಸಿದ್ದರು. ಕನ್ನಡದ ಕಳ್ಳ ಕುಳ್ಳ ಚಿತ್ರಕ್ಕಾಗಿ ಒಂದು ಪ್ರಣಯ ನೃತ್ಯಗೀತೆಯಲ್ಲಿ ವಿಜಯಲಲಿತ ಅವರೊಡನೆ ನಟಿಸಿದ್ದರು.

ಗೋಪಿಕೃಷ್ಣ ಸುನಿಲ್ ದತ್ ಅವರ ಅಜಂತಾ ಆರ್ಟ್ಸ್ ಕಲ್ಚರಲ್ ಟ್ರೂಪ್ ಜೊತೆಗೂಡಿ, 60 ಮತ್ತು 70ರ ದಶಕದಲ್ಲಿ ದೇಶದ ಗಡಿಭಾಗಗಳಲ್ಲಿ ದುಡಿಯುತ್ತಿರುವ ಸೈನಿಕರಿಗೆ ಮನರಂಜನೆ ಒದಗಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಅವರು ಕಥಕ್ ನೃತ್ಯವನ್ನು ಸತತ 9 ಗಂಟೆ ಇಪ್ಪತ್ತು ನಿಮಿಷಗಳ ಕಾಲ ಮಾಡಿ ದಾಖಲೆ ನಿರ್ಮಿಸಿದ್ದರು.

ಗೋಪಿ ಕೃಷ್ಣ ಮುಂದೆ ತಮ್ಮದೇ ನಟೇಶ್ವರ್ ಭವನ್ ಡ್ಯಾನ್ಸ್ ಅಕಾಡೆಮಿ ಮತ್ತು ನಟೇಶ್ವರ್ ನೃತ್ಯ ಕಲಾ ಮಂದಿರ ಎಂಬ ಸಂಸ್ಥೆಗಳನ್ನು ಸ್ಥಾಪಿಸಿದರು. 

1975ರಲ್ಲಿ ಗೋಪಿ ಕಷ್ಣ ಅವರಿಗೆ ಪದ್ಮಶ್ರೀ ಗೌರವ ಸಂದಿತು.

ಗೋಪಿ ಕೃಷ್ಣ ಕಥಕ್ ನೃತ್ಯಕಲಾವಿದೆ ಸಾವಿತ್ರಿ ಅವರನ್ನು ವರಿಸಿದ್ದರು.ಈ ದಂಪತಿಗಳು ಶಂಪಾ ಸಂಥಾಲಿಯ ಅವರನ್ನು ದತ್ತು ಪುತ್ರಿಯಾಗಿ ಬೆಳೆಸಿ ಹಿರಿಯ ಕಲಾವಿದೆಯಾಗಿ ರೂಪಿಸಿದರು. 

ಗೋಪಿ ಕೃಷ್ಣ 1994ರ ಫೆಬ್ರವರಿ 18ರಂದು ಈ ಲೋಕವನ್ನಗಲಿದರು.

On the birth anniversary of great lovely dancer, actor and choreographer Nataraj Gopi Krishna 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ