ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಸ್ಕೃತ ದಿನ


 ಸಂಸ್ಕೃತ ದಿನ


ವಿಶ್ವ ಸಂಸ್ಕೃತ ಭಾಷಾದಿನವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತಿದೆ. ಸಂಸ್ಕೃತ ಭಾಷೆಯ ಮಹತ್ವವನ್ನು ಸಾರುವುದು ಇದರ ಉದ್ದೇಶ.

ಸಂಸ್ಕೃತ ಇಂಡೊ ಯುರೋಪಿಯನ್ ಭಾಷಾಪರಿವಾರಕ್ಕೆ ಸೇರಿದ ಪ್ರಮುಖ ಭಾಷೆ. ಭಾರತೀಯ ಪ್ರಾಚೀನ ಆರ್ಯ ಭಾಷೆಗಳ ಪೈಕಿ ಒಂದು. ಗೀರ್ವಾಣ ಭಾಷೆ ಎಂದೂ ಇದು ಖ್ಯಾತಿ ಪಡೆದಿದೆ. ಈ ಭಾಷೆಗೆ ಸುಮಾರು ಐದುಸಾವಿರ ವರ್ಷಗಳ ಸಮೃದ್ಧವಾದ ಇತಿಹಾಸವಿದೆ. ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಸಂಸ್ಕೃತ, ಪ್ರಾಚೀನ ಪರ್ಷಿಯನ್, ಗ್ರೀಕ್, ಲ್ಯಾಟಿನ್, ಜರ್ಮನ್ ಮತ್ತು ಇಂಗ್ಲಿಷ್ ಮೊದಲಾದ ಭಾಷೆಗಳ ತೌಲನಿಕ ಅಧ್ಯಯನ ನಡೆಯಿತು. ಇದರ ಫಲವಾಗಿ ತೌಲನಿಕ ಭಾಷಾವಿಜ್ಞಾನಿಗಳು ಇವೆಲ್ಲವನ್ನು ಸಮಾನವಾದ ಮೂಲವೊಂದಕ್ಕೆ ಸಂಬಂಧಿಸಬಹುದೆಂದೂ ಅದನ್ನು ಪ್ರೋಟೋ ಇಂಡೊಯೂರೋಪಿಯನ್ ಎಂದು ಕರೆಯಬಹುದೆಂದೂ ತಮ್ಮ ಅಧ್ಯಯನಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಪ್ರಾಚೀನರೂಪ, ಅದರ ಮೊದಲ ಸಂತತಿಗಳಾದ ಸಂಸ್ಕೃತ ಮತ್ತು ಗ್ರೀಕನ್ನು ಬಹುಪಾಲು ಹೋಲುತ್ತಿದ್ದಿರಬಹುದೆಂದು ಊಹಿಸಲಾಗಿದೆ. ಸಂಸ್ಕೃತ ಭಾಷೆ ಪ್ರೋಟೋ ಇಂಡೊ ಯೂರೋಪಿಯನ್ ಭಾಷೆಯ ಅನೇಕ ಭಾಷಿಕ ಅಂಶಗಳನ್ನು ತನ್ನ ಧ್ವನಿವ್ಯವಸ್ಥೆ ಮತ್ತು ವ್ಯಾಕರಣ ವಿಚಾರದಲ್ಲಿ ಉಳಿಸಿಕೊಂಡಿದೆ.

ಸಂಸ್ಕೃತದ ಚಾರಿತ್ರಿಕ ಬೆಳವಣಿಗೆಯನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಇಂಡೊಯೂರೋಪಿಯನ್ (ಇಂಡೊಆರ್ಯನ್) ಎಂಬ ಮೂರು ಅವಸ್ಥೆಗಳಲ್ಲಿ ಗುರುತಿಸಬಹುದು.

1. ಪ್ರಾಚೀನಕಾಲ (ಕ್ರಿ.ಪೂ. 2000ದಿಂದ): ಒಂದು ಸಾವಿರ ಶ್ಲೋಕಗಳ ಸಂಗ್ರಹವಾದ ಋಗ್ವೇದವೇ ಅತ್ಯಂತ ಪ್ರಾಚೀನವಾದ ವೈದಿಕ ಸಾಹಿತ್ಯಭಾಗ.

2. ಮಧ್ಯಕಾಲೀನ (ಕ್ರಿ.ಪೂ. 500 ರಿಂದ ಕ್ರಿ.ಶ. 1000): ಪಾಲಿ ಮತ್ತು ಪ್ರಾಕೃತಭಾಷೆಗಳು ಪ್ರಚಲಿತವಾದವು. ಸಂಸ್ಕೃತದ ಕೆಲವು ಸ್ವರಗಳನ್ನು ಲೋಪಗೊಳಿಸುವುದು, ವಿಜಾತೀಯಾಕ್ಷರಗಳನ್ನು ಸಜಾತೀಯವಾಗಿಸುವುದು, ಪಾಲಿ ಮತ್ತು ಪ್ರಾಕೃತಗಳೆರಡಕ್ಕೂ ಇರುವ ಪ್ರಮುಖ ಲಕ್ಷಣ. ಪ್ರಾಕೃತಗಳು ವೈದಿಕ ಭಾಷೆಯ ಸಹಜವಾದ ಮತ್ತು ಪ್ರಾದೇಶಿಕವಾದ ಬೆಳೆವಣಿಗೆಗಳಾಗಿ, ಅಭಿಜಾತ ಸಂಸ್ಕೃತದೊಡನೆ ಸಹಬಾಳ್ವೆ ನಡೆಸಿದವು. ಮಹಾರಾಷ್ಟ್ರೀ (ದಕ್ಷಿಣ), ಶೌರಸೇನಿ(ಮಧ್ಯ), ಮಾಗಧೀ(ಪೂರ್ವ), ಪೈಶಾಚೀ(ಉತ್ತರ)-ಇವು ಕ್ಲಾಸಿಕಲ್ ಪ್ರಾಕೃತ ಭಾಷಾರೂಪಗಳು. ಅರ್ಧಮಾಗಧಿ ಪ್ರಾಕೃತ ಎಂಬುದು ಮತ್ತೊಂದು ಪ್ರಮುಖ ರೂಪ. ಇದು ಮಾಗಧಿ ಮತ್ತು ಶೌರಸೇನಿ ಇವೆರಡರ ಲಕ್ಷಣಗಳನ್ನೂ ಒಳಗೊಂಡಿದೆ. ಸಂಸ್ಕೃತ ನಾಟಕಗಳಲ್ಲಿ ಸ್ತ್ರೀಯರೂ ಸಾಮಾಜಿಕವಾಗಿ ಕೆಳವರ್ಗಕ್ಕೆ ಸೇರಿದ ವ್ಯಕ್ತಿಗಳೂ ಆಡುವ ಮಾತುಗಳಲ್ಲಿ ಪ್ರಾಕೃತವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸೇತುಬಂಧನ, ಗಾಥಾಸಪ್ತಶತಿ ಎಂಬ ಕೃತಿಗಳು ಮಹಾರಾಷ್ಟ್ರೀ ಪ್ರಾಕೃತದಲ್ಲಿ ರಚನೆಗೊಂಡಿವೆ. ಮಹಾರಾಷ್ಟ್ರೀಯಲ್ಲಿ ಸಾಹಿತ್ಯಸೃಷ್ಟಿ ವಿಪುಲವಾಗಿದೆ. ಕರ್ಪೂರ ಮಂಜರೀ ಎಂಬ ಕೃತಿಯ ಗದ್ಯ ಸಂಪೂರ್ಣವಾಗಿ ಶೌರಸೇನಿ ಪ್ರಾಕೃತದಲ್ಲಿದೆ. ಅರ್ಧಮಾಗಧಿಯಲ್ಲಿ ಜೈನರ ಪವಿತ್ರ ಧರ್ಮಗ್ರಂಥಗಳು ರಚಿತವಾಗಿವೆ.

3. ಆಧುನಿಕ ಕಾಲ (1000 ದಿಂದ): ಪ್ರತಿಯೊಂದು ಗ್ರಾಂಥಿಕ ಪ್ರಾಕೃತವೂ ಅಪಭ್ರಂಶವೆಂಬ ಆಡುಮಾತಿನ ರೂಪಗಳ ಉಗಮಕ್ಕೆ ಕಾರಣವಾಯಿತು. ಉತ್ತರ ಭಾರತದಲ್ಲಿ ಬಳಕೆಯಲ್ಲಿರುವ ದೇಶಭಾಷಾ ರೂಪಗಳು ಸರಳವಾಗಿ ಆಧುನಿಕ ಇಂಡೊಆರ್ಯನ್ ಭಾಷಾವರ್ಗಕ್ಕೆ ಸೇರಿದವು. ಇವೆಲ್ಲ ಅಪಭ್ರಂಶದಿಂದ ಜನಿಸಿದವು. ಮರಾಠಿ ಭಾಷೆ, ಮಹಾರಾಷ್ಟ್ರೀ ಅಪಭ್ರಂಶದಿಂದ ಉಗಮಗೊಂಡು ವಿಕಾಸ ಪಡೆದಿದೆ.

ಸಂಸ್ಕೃತದ ಪಾಣಿನಿ ವ್ಯಾಕರಣ ಪ್ರಪಂಚವು ಪ್ರಸಿದ್ಧಿ ಗಳಿಸಿದೆ. ಸೂತ್ರಶೈಲಿಯ ಅನ್ವೇಷಣೆ, ಭಾಷೆಯ ಅಂತ್ಯಾವಯವ ವಾಕ್ಯವೇ ಹೊರತು ಶಬ್ದವಲ್ಲವೆಂಬ ಸಿದ್ಧಾಂತ, ಶಬ್ದಗಳನ್ನು ಸುಬನ್ತ, ತಿಙನ್ತ, ಅವ್ಯಯಗಳೆಂದು ವಿಭಾಗಿಸಿರುವ ಕ್ರಮ, ಸ್ಥಾನ-ಪ್ರಯತ್ನ ವಿವೇಕ, ಲೌಕಿಕ ಮತ್ತು ಸಂಸ್ಕೃತ

 ಪದಗಳ ತೌಲನಿಕ ಅಧ್ಯಯನ - ಇವು ಪಾಣಿನಿ ವ್ಯಾಕರಣದ ಕೆಲವು ವೈಶಿಷ್ಟ್ಯಗಳು. ಇವುಗಳಿಂದ ಇಂದಿನ ಭಾಷಾವಿಜ್ಞಾನಕ್ಕೂ ಸ್ಫೂರ್ತಿ ಸಿಕ್ಕಿದೆ. ಪಾಣಿನಿ ಮತ್ತು ಅವನ ವಿಚಾರಗಳನ್ನು ಒಪ್ಪಿದ, ಅನುಮೋದಿಸಿದ ವಿದ್ವಾಂಸರು ಶುದ್ಧವಾದ ಸಂಸ್ಕೃತಭಾಷೆ ಹೇಗಿರಬೇಕೆಂದು ನಿಯಮಗಳನ್ನು ಮಂಡಿಸಿದ್ದರೂ ಮುಂದಿನ ತಲೆಮಾರಿನ ತಜ್ಞರ ವ್ಯಾಕರಣ ಚಟುವಟಿಕೆಗಳು ಪಾಣಿನಿಯ ಮಾರ್ಗವನ್ನು ಅತಿಕ್ರಮಿಸುವ ಹಾಗೂ ಅವನ ನಿಯಮಗಳನ್ನು ಅನ್ಯ ರೀತಿಯಲ್ಲಿ ವ್ಯಾಖ್ಯಾನಿಸುವ ರೀತಿಗಳಲ್ಲೇ ತೊಡಗಿದುವು. ಸಂಸ್ಕೃತ ಬರಹಗಳು ದೇವನಾಗರಿ ಲಿಪಿಯಲ್ಲಿದೆ.

On Sanskrit Day

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ