ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಗಿರಿಜಮ್ಮ


 ಎಚ್. ಗಿರಿಜಮ್ಮ


ಡಾ. ಎಚ್. ಗಿರಿಜಮ್ಮ ಖ್ಯಾತ ವೈದ್ಯರಾಗಿ  ಮತ್ತು ಸಾಹಿತಿಗಳಾಗಿ ಹೆಸರಾಗಿದ್ದವರು. 

ಡಾ. ಎಚ್. ಗಿರಿಜಮ್ಮ ಅವರು ಹುಟ್ಟಿದ್ದು ಹರಿಹರದಲ್ಲಿ. ತಮ್ಮ ಮಗಳು ವೈದ್ಯಳಾಗಬೇಕು ಎಂಬ ತಾಯಿಯ ಆಶಯದಂತೆ ಗಿರಿಜಮ್ಮ ವೈದ್ಯಕೀಯ ಶಿಕ್ಷಣ ಪಡೆದರು.

ಗಿರಿಜಮ್ಮ ಕಾದಂಬರಿಗಾರ್ತಿ ತ್ರಿವೇಣಿ ಅವರ ಬರಹಗಳಿಂದ ಪ್ರೇರಣೆ ಪಡೆದು ಸಾಹಿತ್ಯ ರಚನೆಗೆ ತೊಡಗಿದರು. ಸುಧಾ, ಮಯೂರ, ತರಂಗ, ಕರ್ಮವೀರ,  ಸೇರಿದಂತೆ ಎಲ್ಲ ನಿಯತಕಾಲಿಕಗಳಲ್ಲಿ ಅವರ ಕಥೆ, ಲೇಖನ, ನೀಳ್ಗತೆಗಳು ಪ್ರಕಟಗೊಂಡವು.

ಗಿರಿಜಮ್ಮ ಅವರ  ಮೊದಲ ಕತೆ ‘ಹೂಬಳ್ಳಿಗೆ ಈ ಆಸರೆ’. ಚಂದಮಾಮ, ತಮಸೋಮಾ ಜ್ಯೋತಿರ್ಗಮಯ, ಅಂಬರತಾರೆ, ಮೇಘವುಂದಾರ ಸೇರಿದಂತೆ ಅವರ 27 ಕಾದಂಬರಿಗಳು ಪ್ರಕಟಗೊಂಡಿವೆ. ಅವರ ಆರು ಕಥಾಸಂಗ್ರಹಗಳು ಪ್ರಕಟವಾಗಿವೆ.
ನಿಮ್ಮ ಮಗು, ಸ್ತ್ರೀದೇಹ, ಬಸಿರು, ಬಂಜೆತನ ಮತ್ತು ಪರಿಹಾರೋಪಾಯಗಳು, ಮಕ್ಕಳು ಮನಸ್ಸು ಮತ್ತು ಬೆಳವಣಿಗೆ ಮುಂತಾದವು ಗಿರಿಜಮ್ಮ ಅವರ ಜನಪ್ರಿಯ ವೈದ್ಯಕೀಯ ಕೃತಿಗಳಲ್ಲಿ ಸೇರಿವೆ.

ಡಾ. ಗಿರಿಜಮ್ಮನವರು ರಾಜ್ಯದ ಇತರೆಡೆಗಳಲ್ಲಿ ಅಲ್ಲದೆ ಬೆಂಗಳೂರಿನಲ್ಲಿ 20 ವರ್ಷಗಳ ಸುದೀರ್ಘ ಅವಧಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು. ಜನಪ್ರಿಯ ವೈದ್ಯರಾಗಿದ್ದ ಗಿರಿಜಮ್ಮ ಕೆಲ ಧಾರಾವಾಹಿ ಹಾಗೂ ಕಿರುಚಿತ್ರಗಳಲ್ಲೂ ಅಭಿನಯಿಸಿದ್ದರು. ಅವರ 'ಮೇಘಮಂದಾರ' ಕೃತಿ ಅಂಬರೀಷ್ ಅಭಿನಯದ ಚಲನಚಿತ್ರವಾಗಿತ್ತು.  ಕಿರುತೆರೆಯ ಅನೇಕ ಧಾರಾವಾಹಿಗಳಿಗೆ ಅವರ ಕಥೆಗಳು ಬಳಕೆಯಾಗಿದ್ದವು. 

ಡಾ. ಗಿರಿಜಮ್ಮನವರ ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ಸಾಹಿತ್ಯ ಕ್ಷೇತ್ರಕ್ಕೆ ಸಂದ ಸೇವೆಗಾಗಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿತ್ತು. 2006 ವರ್ಷದಲ್ಲಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೇ
ಅಲ್ಲದೆ, ಕನ್ನಡ ಸಾಹಿತ್ಯ ಪರಿಷತ್ ಬಿ.ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಿತ್ತು. ಕನ್ನಡ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವ ಪುರಸ್ಕಾರಗಳಿಗೆ ಗಿರಿಜಮ್ಮ ಪಾತ್ರರಾಗಿದ್ದರು. 'ಕಾಡುತಾವ ನೆನಪುಗಳು' ಅವರ ಆತ್ಮಕಥೆ.

ವೈದ್ಯರೂ, ಸಾಹಿತಿಗಳೂ ಆಗಿದ್ದ ಡಾ. ಗಿರಿಜಮ್ಮನವರು 2021ರ ಆಗಸ್ಟ್ 17ರಂದು ತಮ್ಮ 72ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.


Respects to departed soul Dr. H. Girijamma

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ