ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ಎಮ್. ಹೆಗ್ಡೆ


 ಬಿ. ಎಮ್. ಹೆಗ್ಡೆ


ಪದ್ಮ ವಿಭೂಷಣ ಬೆಳ್ಳೆ ಮೋನಪ್ಪ ಹೆಗ್ಡೆ ಅವರು  ಖ್ಯಾತ ಹೃದ್ರೋಗ ತಜ್ಞರಾಗಿ, ಬರಹಗಾರರಾಗಿ ಮತ್ತು ಜನಾನುರಾಗಿಗಳಾಗಿ ಪ್ರಸಿದ್ಧರಾಗಿದ್ದಾರೆ.

ಬೆಳ್ಳೆ ಮೋನಪ್ಪ ಹೆಗ್ಡೆ 1938ರ ಆಗಸ್ಟ್ 18ರಂದು  ಉಡುಪಿಯ ಪಾಂಗಳದಲ್ಲಿ ಜನಿಸಿದರು. ಹಿರಿಯಡ್ಕದ ಬೊರ್ಡ್ ಹೈಸ್ಕೂಲಿನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಉಡುಪಿಯ ಎಂಜಿಎಮ್ ಕಾಲೇಜ್ ನಲ್ಲಿ ಇಂಟರಮೀಡಿಯೇಟ್ ಓದಿ ಮದ್ರಾಸಿನ ಸ್ಟೇನ್ಲಿ ಮೆಡಿಕಲ್  ಕಾಲೇಜಿನಿಂದ ಎಂಬಿಬಿಎಸ್ ಪದವಿ ಮತ್ತು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನಿಂದ ಎಂ.ಡಿ ಪದವಿ ಗಳಿಸಿದರು. 

ಹೆಗ್ಡೆಯವರು ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿ, ಅಲ್ಲಿರುವ ರಾಯಲ್ ಕಾಲೇಜ್ ಆಫ್  ಪಿಸಿಷಿಯನ್ಸ್ ಅಲ್ಲಿ ಫೆಲೋ ಆದ ಪ್ರಪ್ರಥಮ ಕನ್ನಡಿಗ ಹಾಗೂ ಭಾರತೀಯರೆನಿಸಿಕೊಂಡರು. ಮುಂದೆ ವಿಶ್ವದ ಎಲ್ಲ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ಪ್ರತಿನಿಧಿತ್ವ ಗೌರವಗಳೂ ಅವರನ್ನರಸಿ ಬಂದಿವೆ. ಪ್ರೊ. ಬೆರ್ನಾರ್ಡ್ ಲೋವ್ನ್ ನಂತಹ ನೋಬೆಲ್ ಪುರಸ್ಕೃತ ವೈದ್ಯರೊಂದಿಗೆ ಕೆಲಸ ಮಾಡಿದ ಹೆಗ್ಡೆಯವರು ಲಂಡನ್ನಿನ ಕಾಲೇಜುಗಳ ಎಂ.ಆರ್.ಸಿ.ಪಿ ಪರೀಕ್ಷಕರಾಗಿ ಆಯ್ಕೆಯಾದ ಪ್ರಥಮ ಭಾರತೀಯರಾದರು. ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಎಚ್‍ಡಿ ಪರೀಕ್ಷಕರಾಗಿ ದಕ್ಷಿಣ ಅಮೇರಿಕ ಒಂದನ್ನು ಬಿಟ್ಟು ಜಗತ್ತಿನ ಉಳಿದ ಎಲ್ಲಾ ಖಂಡಗಳ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಹೋಗಿದ್ದರು. ಲಂಡನ್ ವಿಶ್ವವಿದ್ಯಾಲಯದ ಶಾಶ್ವತ ಸಂದರ್ಶನ ಪ್ರಾಧ್ಯಪಕರಾಗಿ ಕೆಲಸ ಮಾಡುತ್ತಿರುವ ಹೆಗ್ಡೆ ಅವರು ಕಸ್ತೂರಬಾ ವೈದ್ಯಕೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಪ್ರಾಚಾರ್ಯರಾಗಿ, ಡೀನ್ ಆಗಿ ಹಾಗೂ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ,  ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ಡಾ.ಬಿ.ಎಂ.ಹೆಗ್ಡೆಯವರು ಲಂಡನ್ನಿನ ಥೇಮ್ಸ್ ವ್ಯಾಲಿ ವಿ.ವಿಯ ಆಶ್ರಯದಲ್ಲಿ ಒಂದು ಆಯುರ್ವೇದ ವೈದ್ಯಕೀಯ ಕಾಲೇಜು ಆರಂಭವಾಗಲು ಸಹಾ ಕಾರಣರಾಗಿದ್ದಾರೆ.

ಡಾ.ಬಿ.ಎಂ.ಹೆಗ್ಡೆ ಅವರು ಯಾವುದೇ ರೀತಿಯ ಸಂಕೋಚವಿಲ್ಲದೆ ವೈದ್ಯಕೀಯ ರಂಗದಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಿರುವ ಸತ್ಯನಿಷ್ಠ ನಿಷ್ಠೂರವಾದಿಗಳೆಂದು ಹೆಸರಾಗಿದ್ದಾರೆ. ಆಧುನಿಕ ವೈದ್ಯಕೀಯದಲ್ಲಿರುವ ಅನಗತ್ಯ ತಪಾಸಣೆಗಳ, ಅನಗತ್ಯ ಔಷಧಗಳ ಹಾಗೂ ಅನಗತ್ಯ ಚಿಕಿತ್ಸೆಗಳನ್ನು ಅವರು ಯಾವುದೇ ಮುಲಾಜಿಲ್ಲದೆ ಖಂಡಿಸಿದ್ದಾರೆ. ಅನೇಕ ವೈದ್ಯಕೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಹೆಗ್ಡೆ ಅವರು ಅಂತಾರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕಗಳ (ಭಾರತ, ಬ್ರಿಟನ್, ಅಮೆರಿಕ, ಜರ್ಮನಿ, ಕುವೈಟ್, ಚೈನಾ) ಸಂಪಾದಕ ಮಡಳಿಯಲ್ಲಿ ಹಾಗೂ ಸಲಹಾಮಂಡಳಿಯಲ್ಲಿದ್ದು, ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್ (ಬಿ.ಎಂ.ಜೆ) ‘ರೆಫ್ರಿ‘ಯಾಗಿಯೂ ಕೆಲಸ ಮಾಡಿದ್ದಾರೆ.

ಡಾ.ಬಿ.ಎಂ.ಹೆಗ್ಡೆ ಅವರು ಶ್ರೇಷ್ಠ ಭಾಷಣಕಾರರು.  ನೂರಾರು ಜಾಗತಿಕ ದತ್ತಿ ಉಪನ್ಯಾಸಗಳನ್ನು ನೀಡಿದ್ದಾರೆ. ಆಕಾಶವಾಣಿ, ದೂರದರ್ಶನ, ಜ಼ೀ ಟಿವಿ ಲಂಡನ್, ಬಿಬಿಸಿ ಮುಂತಾದ ವಾಹಿನಿಗಳ ಮೂಲಕ ಆರೋಗ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇಂಗ್ಲೀಷಿನಲ್ಲಿ ಹಾಗೂ ಕನ್ನಡದಲ್ಲಿ 30 ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಮಂಗಳೂರು ಘಟಕದ ಮುಖ್ಯಸ್ಥರಾಗಿಯೂ ಅವರ ಸೇವೆ ಸಲ್ಲುತ್ತಿದೆ.  ಅರೋಗ್ಯದ ಕುರಿತಾಗಿ ಅವರು ನೀಡಿರುವ ಅನೇಕ ಕಾರ್ಯಕ್ರಮಗಳು ಯೂಟ್ಯೂಬ್ ಅಂತಹ ಮಾಧ್ಯಮಗಳಲ್ಲಿ ಮತ್ತು ನಿಯತಕಾಲಿಕಗಳಲ್ಲಿ ನಿರಂತರ ಜನರನ್ನಾಕರ್ಷಿಸುತ್ತಾ ಬಂದಿವೆ.

ಬೆಳ್ಳೆ ಮೋನಪ್ಪ ಹೆಗ್ಡೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವೈದ್ಯಲೋಕದ ಶ್ರೇಷ್ಠತೆಯ ಕುರುಹಾದ ಡಾ.ಬಿ.ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳೂ ಸೇರಿದಂತೆ ಅನೇಕ ಶ್ರೇಷ್ಠ ಗೌರವಗಳು ಸಂದಿವೆ. 

On the birthday of our great Padma Vibhushan Dr. B. M. Hegde Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ