ಜೈದೇವ್
ಜೈದೇವ್
ಜೈದೇವ್ ಸಿನಿಮಾ ಸಂಗೀತಲೋಕ ಕಂಡ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲೊಬ್ಬರು. "ಅಲ್ಲಾಹ್ ತೇರೋ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್" ಅಂತಹ ಅವರ ಅನೇಕ ಸುಮಧುರ ಸಂಯೋಜನೆಗಳು ಇಂದೂ ಹೃದಯಸ್ಪರ್ಷಿಯೆನಿಸುವಂತಿವೆ.
ಜೈದೇವ್ ವರ್ಮಾ 1918ರ ಆಗಸ್ಟ್ 3ರಂದು ನೈರೋಬಿಯಲ್ಲಿ ಜನಿಸಿದರು. ಅವರು ಮುಂದೆ ಬೆಳೆದದ್ದು ಲೂಧಿಯಾನದಲ್ಲಿ. ಅಲ್ಲಿ ಅವರು ಪ್ರೊ. ಬರ್ಕತ್ ರಾಜ್ ಅವರಿಂದ ಸಂಗೀತ ಕಲಿತರು.
ಜೈದೇವ್ ತಮ್ಮ ಹದಿನೈದನೇ ವಯಸ್ಸಿನಲ್ಲಿ ಚಲನಚಿತ್ರಗಳಲ್ಲಿ ನಟಿಸುವ ಆಸೆಯಿಂದ ಮನೆ ಬಿಟ್ಟು ಮುಂಬೈಗೆ ಓಡಿಬಂದರು. ಜೈದೇವ್ ಮುಂಬೈನ ವಾಡಿಯಾ ಕಂಪನಿಯಲ್ಲಿ ಎಂಟು ಚಿತ್ರಗಳಲ್ಲಿ ಬಾಲಕಲಾವಿದನಾಗಿ ನಟಿಸಿದರು. ಮುಂಬೈನಲ್ಲಿ ಕೃಷ್ಣರಾವ್ ಜೌಕರ್ ಮತ್ತು ಜನಾರ್ಧನ್ ಜೌಕರ್ ಅವರಲ್ಲಿ ಇನ್ನಷ್ಟು
ಸಂಗೀತವನ್ನು ಕಲಿತರು.
ತಂದೆಯವರಿಗೆ ಕುರುಡುತನ ಬಂದ ಕಾರಣ ಜೈದೇವ್ ಅವರು ತಮ್ಮ ವೃತ್ತಿಯನ್ನು ಬಿಟ್ಟು ಲೂಧಿಯಾನದಲ್ಲಿ ಕುಟುಂಬದ ನಿರ್ವಹಣೆಯ ಹೊರೆ ನಿರ್ವಹಿಸಬೇಕಾಯಿತು. ತಂದೆಯವರ ನಿಧನಾನಂತರ ತಮ್ಮ ತಂಗಿ ವೇದಕುಮಾರಿ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತರು. ತಂಗಿಯ ವಿವಾಹವಾದ ನಂತರ 1943ರಲ್ಲಿ ಮಹಾನ್ ಸಂಗೀತಗಾರ ಅಲಿ ಅಕ್ಬರ್ ಖಾನ್ ಅವರಲ್ಲಿ ಸಂಗೀತ ಸಾಧನೆ ಮಾಡಲು ಲಕ್ನೋಗೆ ತೆರಳಿದರು.
ಅಲಿ ಅಕ್ಬರ್ ಖಾನ್ ಅವರು 1951ರಲ್ಲಿ ನವಕೇತನ್ ಅವರ 'ಆಂಧಿಯಾನ್' ಮತ್ತು 1952ರಲ್ಲಿ 'ಹಮ್ ಸಫರ್' ಚಿತ್ರಗಳಿಗೆ ಸಂಗೀತ ನೀಡುವಾಗ ಜೈದೇವ್ ಅವರನ್ನು ಸಹಾಯಕರನ್ನಾಗಿಸಿಕೊಂಡರು. ಮುಂದೆ 'ಟ್ಯಾಕ್ಸಿ ಡ್ರೈವರ್' ಚಿತ್ರದಿಂದ ಮೊದಲ್ಗೊಂಡಂತೆ ಎಸ್. ಡಿ. ಬರ್ಮನ್ ಅವರಿಗೆ ಸಹಾಯಕರಾದರು.
ಮುಂದೆ ಜೈದೇವ್ ಅವರು ತಾವೇ ಸಂಗೀತ ಸಂಯೋಜಿಸಿದ ಚೇತನ್ ಆನಂದ್ ಅವರ 'ಜೋರು ಕಾ ಬಾಯ್' ಮತ್ತು 'ಅಂಜಲಿ' ಅಪಾರ ಯಶಸ್ಸು ಗಳಿಸಿ ಜನಪ್ರಿಯರಾದರು. ನವಕೇತನ್ ಅವರ 'ಹಮ್ ದೋನೊ' ಚಿತ್ರದಲ್ಲಿ ಅವರ ಸಂಯೋಜಿಸಿದ ಶಾಸ್ತ್ರೀಯ ಸ್ವರೂಪದ 'ಅಲ್ಲಾಹ್ ತೇರೋ ನಾಮ್', 'ಅಭೀ ನ ಜಾವೊ ಚೋಡ್ಕರ್', 'ಮೈನ್ ಜಿಂದಗೀ ಕೆ ಸಾತ್', 'ಕಭೀ ಖುದ್ ಪೆ ಕಭೀ ಹಾಲತ್ ಪೆ' ಜನರ ಮನದಲ್ಲಿ ಶಾಶ್ವತ ನೆಲೆ ಪಡೆದವು. ಸುನಿಲ್ ದತ್ ಅಭಿನಯದ ‘ ಮುಜೆ ಜೀನೇ ದೋ' ಅವರ ಮತ್ತೊಂದು ಯಶಸ್ವೀ ಚಿತ್ರ. 'ಆಲಾಪ್’, ‘ಕಿನಾರೆ ಕಿನಾರೆ', 'ಅನ್ಕಹಿ' ಚಿತ್ರಗಳಲ್ಲಿನ ಅವರ ಗೀತ ಸಂಯೋಜನೆಗಳೂ ಸುಶ್ರಾವ್ಯತೆಗಳಿಂದ ಜನಪ್ರಿಯಗೊಂಡಿವೆ.
ಜೈದೇವ್ ಅವರು ರೇಷ್ಮಾ ಔರ್ ಷೇರಾ, ಗಮನ್ ಮತ್ತು ಅನ್ಕಹಿ ಚಿತ್ರಗಳ ಸಂಗೀತಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದು, 3 ಬಾರಿ ಸಂಗೀತಕ್ಕೆ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಪ್ರಥಮರೆನಿಸಿದರು. ಸುರೇಶ್ ವಾಡ್ಕರ್, ಹರಿಹರನ್, ಛಾಯಾ ಗಂಗೂಲಿ ಅಂತಹ ಪ್ರತಿಭಾವಂತರನ್ನು ಪರಿಚಯಿಸಿದರು. ಘರೋಂಡಾ, ತುಮ್ಹಾರೆ ಲಿಯೆ, ದೂರಿಯಾನ್, ಸೊಲ್ವಾ ಸಾವನ್, ಮನ್ ಜಾಯಿಯೇ, ಪರಿಣಯ್ ಮುಂತಾದವು ಅವರ ಸಂಗೀತದ ಇನ್ನಿತರ ಪ್ರಖ್ಯಾತ ಚಿತ್ರಗಳಲ್ಲಿ ಸೇರಿವೆ.
ಜೈದೇವ್ ಅವರು ಹರಿವಂಶರಾಯ್ ಬಚ್ಚನ್ ಅವರ ಗೀತೆಗಳ 'ಮಧುಶಾಲಾ' ಆಲ್ಬಮ್ ಅನ್ನು ಮನ್ನಾಡೆ ಅವರ ಧ್ವನಿಯಲ್ಲಿ ಮೂಡಿಸಿದರು. ಜಯದೇವ್ ಅವರು ಎಂ. ಅರ್. ವಿಠ್ಠಲ್ ನಿರ್ದೇಶನದ 'ಮಾರ್ಗದರ್ಶಿ' ಚಿತ್ರದಲ್ಲಿ ಮನ್ನಾಡೆ ಮತ್ತು ಸಂಗಡಿಗರ ಧ್ವನಿಯಲ್ಲಿ ಮೂಡಿಸಿದ 'ಜಯತೆ ಜಯತೆ ಜಯತೆ ಸತ್ಯಮೇಮ ಜಯತೆ' ಕೂಡಾ ಮರೆಯಲಾಗದ ಮಧುರಗೀತೆ.
ಬ್ರಹ್ಮಚಾರಿಯಾಗಿ ಸಿನಿಮಾ ಲೋಕದ ಸಂಗೀತ ತಪಸ್ವಿಯಂತಿದ್ದ ಜೈದೇವ್ 1987ರ ಜನವರಿ 6ರಂದು ತಮ್ಮ 68ರ ವಯಸ್ಸಿನಲ್ಲಿ ನಿಧನರಾದರು. ಅವರು ತಮ್ಮ ಶ್ರೇಷ್ಠ ಸಂಗೀತ ಸಂಯೋಜನೆಗಳಿಂದ ಅಮರರಾಗಿದ್ದಾರೆ.
On the birth anniversary of great music director Jaidev, known for classical music hits
ಕಾಮೆಂಟ್‌ಗಳು