ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್.ಎಸ್.ಯದುರಾಜನ್


 ಎಸ್. ಎಸ್. ಯದುರಾಜನ್


ಎಸ್. ಎಸ್. ಯದುರಾಜನ್ ನಮ್ಮ ನಡುವಿನ ಹಿರಿಯ ಭಾಷಾ ಶಾಸ್ತ್ರಜ್ಞರು. 

ಎಸ್. ಎಸ್. ಯದುರಾಜನ್ 1949ರ ಆಗಸ್ಟ್ 18ರಂದು ಜನಿಸಿದರು. ಅವರದು ಮಹಾನ್ ವಿದ್ವಾಂಸರ ಮನೆತನ. ಇವರ ತಾತನವರಾದ  ಮಹಾಮಹೋಪಾಧ್ಯಾಯ ಸಂಕೀಘಟ್ಟಂ ವೆಂಕಟಾಚಾರ್ಯ ಅವರು ಮೈಸೂರು ಸಂಸ್ಥಾನದ ಅಸ್ಥಾನ ವಿದ್ವಾಂಸರಾಗಿದ್ದರು. ಯದುರಾಜನ್ ಅವರ ತಂದೆ ಪ್ರೊ. ಎಸ್. ವಿ. ಶ್ರೀನಿವಾಸ ರಾಘವಾಚಾರ್ಯ ಅವರು  ಮೈಸೂರು ವಿಶ್ವವಿದ್ಯಾಲಯದ ಹೆಸರಾಂತ ಪ್ರಾಧ್ಯಾಪಕರಾಗಿದ್ದರು.  

ಎಸ್. ಎಸ್. ಯದುರಾಜನ್ ಅವರು ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಸುದೀರ್ಘ ಕಾಲಾವಧಿಯವರೆಗೆ ಸೇವೆ ಸಲ್ಲಿಸಿ ಶೈಕ್ಷಣಿಕ ಕಾರ್ಯದರ್ಶಿಗಳಾಗಿ ನಿವೃತ್ತರಾಗಿದ್ದಾರೆ. ಇವರು ಕನ್ನಡ, ತಮಿಳು, ಮಲಯಾಳಂ, ಕೊಂಕಣಿ, ಡೋಗ್ರಿ, ನೇಪಾಲಿ, ಸಂತಾಲಿ, ಭಿಲಿ ಸೇರಿದಂತೆ ಹತ್ತು ಹಲವು ಭಾರತೀಯ ಭಾಷೆಗಳಲ್ಲಿ ಪಠ್ಯ ಹಾಗೂ ಪೂರಕ ಕಲಿಕಾ ಸಾಮಗ್ರಿಗಳನ್ನು ರಚಿಸಿದ್ದಾರೆ. 

ಯದುರಾಜನ್ ಅವರು ತಮ್ಮ ಸೇವಾವಧಿಯಲ್ಲಿ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯ ಮುಖ್ಯಸ್ಥರಾಗಿದ್ದು ಆಡಳಿತ ಕನ್ನಡದಲ್ಲಿ ಸಾವಿರಾರು ನೌಕರರಿಗೆ ತರಬೇತಿ ನೀಡಿದ್ದಾರೆ. ಅಂತೆಯೇ ವಿವಿಧ ಹಂತದ ಶಿಕ್ಷಕರಿಗಾಗಿ ನೂರಾರು ಮಾರ್ಗದರ್ಶಕ ಶಿಬಿರಗಳನ್ನೂ ಆಯೋಜಿಸಿದ್ದಾರೆ. 

ಮೊದಲ ಹೆಜ್ಜೆ, ಹೊಸಹೆಜ್ಜೆ, ನಿರಂತರ, ಕನ್ನಡ ಥ್ರೂ ಲಾಂಗ್ವೇಜ್ ಗೇಮ್ಸ್, ಕನ್ನಡ ನ್ಯೂಸ್ ಪೇಪರ್ ರೀಡರ್, ಓರಿಯಂಟ್ ಲಾಂಗ್ಮನ್ಸ್ ಇಂಗ್ಲಿಷ್-ಕನ್ನಡ ನಿಘಂಟು ಮುಂತಾದವು ಯದುರಾಜನ್ ಅವರ ಮೇರು ಕೃತಿಗಳಾಗಿವೆ.  

ಯದುರಾಜನ್ ಅವರು ಕವಿತಾರ್ಕಿಕಕೇಸರಿ ವೇದಾಂತ ದೇಶಿಕರು ಮತ್ತು ಸಮಾಜ ಸುಧಾರಕ ರಾಮಾನುಜರು ಎಂಬ ಎರಡು ಮಹತ್ವದ ಕೃತಿಗಳನ್ನೂ ಕೊಡುಗೆ ನೀಡಿದ್ದಾರೆ.

ಆತ್ಮೀಯ ಹಿರಿಯರಾದ ಯದುರಾಜನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ಎಂದಿನಂತೆ ತಮ್ಮ ಆತ್ಮೀಯ ಬೆಂಬಲ ನಮ್ಮೊಂದಿಗೆ ಸದಾ ಇರಲಿ.  ನಮಸ್ಕಾರ.

On the birthday of our linguistic scholar Yadurajan S S Sir 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ