ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯಲಕ್ಷ್ಮಿ ಪಂಡಿತ್


 ವಿಜಯಲಕ್ಷ್ಮಿ ಪಂಡಿತ್


ವಿಜಯಲಕ್ಷ್ಮಿ ಪಂಡಿತ್ ಸ್ವಾತಂತ್ರ್ಯ ಹೋರಾಟಗಾರ್ತಿ, ರಾಜಕಾರಣಿ, ಭಾರತದ ಪ್ರಥಮ ಮಹಿಳಾಮಂತ್ರಿ, ರಾಯಭಾರಕುಶಲೆ, ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದವರು. 

ವಿಜಯಲಕ್ಷ್ಮಿ 1900ರ ಆಗಸ್ಟ್ 18ರಂದು ಅಲಹಾಬಾದಿನ ಆನಂದ ಭವನದಲ್ಲಿ ಮೋತೀಲಾಲ್ ನೆಹ್ರೂ ಮತ್ತು ಸ್ವರೂಪ ರಾಣಿಯರ ಮೂರು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದರು. ಅಣ್ಣ ಜವಾಹರಲಾಲ್, ತಂಗಿ ಕೃಷ್ಣಾ ಹತೀಸಿಂಗ್. 

ಶ್ರೀಮಂತ ಮನೆತನದಲ್ಲಿ ಹುಟ್ಟಿದ ವಿಜಯಲಕ್ಷ್ಮಿ ತಮ್ಮ ಸೋದರ ಸೋದರಿಯರಂತೆ ಇಂಗ್ಲಿಷ್ ಶಿಕ್ಷಕಿಯೊಬ್ಬರ ಮೇಲ್ವಿಚಾರಣೆಯಲ್ಲಿ ಬೆಳೆದರು.  ಆ ಕಾಲದ ಶ್ರೀಮಂತ ಮನೆತನದ ಪದ್ಧತಿಗೆ ಅನುಗುಣವಾಗಿ ಮನೆಯಲ್ಲೇ ಶಿಕ್ಷಣ ಪಡೆದರು. ಅವರು ತಮ್ಮ ಜೀವಮಾನದಲ್ಲಿ 21 ಭಾರತೀಯ ಹಾಗೂ ವಿದೇಶಿ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟೊರೇಟ್ ಪದವಿಗಳನ್ನೂ ಬಹುಮಾನಗಳನ್ನೂ ಪಡೆದಿದ್ದಾರೆ.
ಅವರ ತವರಿನಲ್ಲಿ ಎಲ್ಲ ಹಬ್ಬ ಉತ್ಸವಗಳನ್ನೂ ಆಚರಿಸಲಾಗುತ್ತಿತ್ತು. ಅವರಿಗೆ ಹಿಂದು, ಮುಸ್ಲಿಂ, ಕ್ರೈಸ್ತ ಮೊದಲಾದ ಎಲ್ಲ ಧರ್ಮಗಳಲ್ಲೂ ಆದರ ಗೌರವಗಳು ಸಹಜವಾಗಿಯೇ ಉಂಟಾದುವು. ತಮ್ಮ ಶಿಕ್ಷಕಿಯೊಂದಿಗೆ ಅವರು ಕ್ರೈಸ್ತಮಂದಿರಕ್ಕೂ ಹೋಗುತ್ತಿದ್ದರು. ಗೀತೆ, ರಾಮಾಯಣ, 1857ರ ಬಂಡಾಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಝಾಂನ್ಸಿರಾಣಿ ಲಕ್ಷ್ಮೀಬಾಯಿಯ ಜೀವನಚರಿತ್ರೆ ಇವು ಅವರ ಮೇಲೆ ಪ್ರಭಾವ ಬೀರಿದುವು. 1919ರಲ್ಲಿ ಮಹಾತ್ಮ ಗಾಂಧಿಯವರ ಪ್ರಭಾವಕ್ಕೆ ಅವರೂ ಒಳಗಾದರು. ಅವರೂ ಅಸಹಕಾರ ಚಳವಳಿಯನ್ನು ಪ್ರವೇಶಿಸಿದರು.
1921ರ ಮೇ ತಿಂಗಳಲ್ಲಿ ಕಾಠಿಯಾವಾಡದ ಬ್ಯಾರಿಸ್ಟರ್ ರಣಜಿತ್ ಸೀತಾರಾಮ ಪಂಡಿತರೊಂದಿಗೆ ಅಲಹಾಬಾದಿನಲ್ಲಿ ಅವರ ವಿವಾಹ ನೆರವೇರಿತು. ಸಾಹಿತ್ಯದ ಮೂಲಕ ಅವರಿಬ್ಬರ ನಡುವೆ ಉಂಟಾದ ಪರಿಚಯ ಬೆಳೆದು ವಿವಾಹದಲ್ಲಿ ಕೊನೆಗೊಂಡಿತು. ಚಂದ್ರಲೇಖಾ, ನಯನತಾರಾ ಮತ್ತು ರೀಟಾ ಇವರು ವಿಜಯಲಕ್ಷ್ಮಿ ಪಂಡಿತರ ಪುತ್ರಿಯರು.

1929ರಲ್ಲಿ ಜವಾಹರಲಾಲರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಅಂದಿನಿಂದ ವಿಜಯಲಕ್ಷ್ಮಿಯವರು ರಾಷ್ಟ್ರೀಯ ಚಳವಳಿಯ ಸುಳಿಯಲ್ಲಿ ಪೂರ್ಣವಾಗಿ ಸಿಲುಕಿಕೊಂಡರು. ಅವರು ಭಾಷಣಗಳನ್ನು ಮಾಡಿದರು. ಮುಷ್ಕರಗಳನ್ನು ನಡೆಸಿದರು, ಮೆರವಣಿಗೆಗಳನ್ನು ಸಂಘಟಿಸಿದರು. 1932ರ ಜನವರಿ 29ರಂದು ಸರ್ಕಾರ ಅವರನ್ನು ಬಂಧಿಸಿ ಅವರಿಗೆ ಒಂದು ವರ್ಷದ ಕಠಿಣ ಶಿಕ್ಷೆ ಮತ್ತು ರೂ. 500 ಜುಲ್ಮಾನೆ ವಿಧಿಸಿತು. 1936 ರಲ್ಲಿ ಅವರು ಅಲಹಾಬಾದಿನ ಪೌರಸಭಾ ಮಂಡಲಿಗೆ ಚುನಾಯಿತರಾದರು. ಆ ವರ್ಷ ವಿವಿಧ ಪಾಂತ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಗಳಲ್ಲಿ ಉತ್ತರ ಪ್ರದೇಶವೂ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಬಹುಮತ ಪಡೆಯಿತು. ಕಾಂಗ್ರೆಸ್ ಮಂತ್ರಿಮಂಡಲಗಳು ಅಧಿಕಾರಕ್ಕೆ ಬಂದುವು. ವಿಜಯಲಕ್ಷ್ಮಿಯವರು ಬಿಲ್ಹೋರ್ (ಕಾನ್‍ಪುರ) ಚುನಾವಣಾಕ್ಷೇತ್ರದಿಂದ ಆಯ್ಕೆಗೊಂಡು 1937ರಿಂದ 1939ರವರೆಗೆ ಗೋವಿಂದ ವಲ್ಲಭ ಪಂತರ ಮಂತ್ರಿಮಂಡಲದಲ್ಲಿ ಸ್ಥಳೀಯ ಆಡಳಿತ ಮತ್ತು ಸಾರ್ವಜನಿಕ ಆರೋಗ್ಯ ಮಂತ್ರಿಯಾದರು. ಅವರು ಭಾರತದ ಪ್ರಥಮ ಮಹಿಳಾ ಮಂತ್ರಿ. 

1939ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದಾಗ ಬ್ರಿಟನ್ನು ಭಾರತವನ್ನು ಅದರ ಇಚ್ಛೆಗೆ ವಿರುದ್ಧವಾಗಿ ಯುದ್ಧದಲ್ಲಿ ಭಾಗಿಯೆಂದು ಸಾರಿತು. ಎಲ್ಲ ಪ್ರಾಂತೀಯ ಕಾಂಗ್ರೆಸ್ ಮಂತ್ರಿ ಮಂಡಲಗಳೂ ಪ್ರತಿಭಟಿಸಿ ರಾಜೀನಾಮೆಯಿತ್ತುವು. ಗಾಂಧೀಜಿಯವರು ಪ್ರಾರಂಭಿಸಿದ ವೈಯಕ್ತಿಕ ಸತ್ಯಾಗ್ರಹದಲ್ಲಿ ವಿಜಯಲಕ್ಷ್ಮಿಯವರೂ ಭಾಗವಹಿಸಿ 1940 ರ ಡಿಸೆಂಬರ್ 9ರಂದು ಬಂಧಿತರಾದರು. ಸರ್ಕಾರ ಅವರಿಗೆ ನಾಲ್ಕು ತಿಂಗಳ ಶಿಕ್ಷೆ ವಿಧಿಸಿತು. 1942ರ ಆಗಸ್ಟಿನ ಆಂದೋಲನದ ಸಂಬಂಧವಾಗಿ ಚಳವಳಿಯಲ್ಲಿ ಸರ್ಕಾರ ಮತ್ತೆ ಅವರನ್ನು ಆ ತಿಂಗಳ 12 ರಂದು ಬಂಧಿಸಿತು. ಒಂಬತ್ತು ತಿಂಗಳುಗಳ ಅನಂತರ ಅಸ್ವಸ್ಥತೆಯ ಕಾರಣದಿಂದ ಅವರು ಬಿಡುಗಡೆ ಹೊಂದಿದರು. 1940-1942ರಲ್ಲಿ ಅವರು ಅಖಿಲಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷೆಯಾಗಿದ್ದರು. 1943ರಲ್ಲಿ ಬಂಗಾಲದಲ್ಲಿ ಕ್ಷಾಮ ತಲೆದೋರಿದಾಗ ಅವರು ಅಸ್ವಸ್ಥರಿದ್ದರೂ ಪೀಡಿತರಿಗೆ ಪರಿಹಾರ ನೀಡಲು ಸ್ವತಃ ಶ್ರಮಿಸಿದರು. 1944ರ ಜನವರಿ 14 ರಂದು ಪತಿ ರಣಜಿತ್ ಪಂಡಿತರು ತೀರಿಕೊಂಡರು. 1945ರಲ್ಲಿ ಅವರು ಅಮೆರಿಕಕ್ಕೆ ಪ್ರಯಾಣ ಮಾಡಿದರು. 1946ರಲ್ಲಿ ಅವರು ಪುನಃ ಉತ್ತರಪ್ರದೇಶದ ವಿಧಾನಸಭೆಗೆ ಚುನಾಯಿತರಾಗಿ 1946-47ರಲ್ಲಿ ಅಲ್ಲಿಯ ಮಂತ್ರಿಮಂಡಲದಲ್ಲಿದ್ದರು. ಆಗಲೂ ಹಿಂದಿನ ಇಲಾಖೆಗಳನ್ನೇ ಅವರು ನಿರ್ವಹಿಸಿದರು. 

ವಿಜಯಲಕ್ಷ್ಮಿ ಪಂಡಿತ್ ಅವರು ಶಾಂತಿ ಮತ್ತು ಸ್ವಾತಂತ್ರ್ಯಗಳಿಗಾಗಿ ಅಂತರರಾಷ್ಟ್ರೀಯ ಮಹಿಳಾ ಸಂಘದ ಉಪಾಧ್ಯಕ್ಷರಾಗಿದ್ದರು. ವರ್ಜಿನಿಯ ಹಾಟ್‍ಸ್ಪ್ರಿಂಗ್ಸ್‍ನಲ್ಲಿ ನಡೆದ ಪೆಸಿಫಿಕ್ ಸಂಬಂಧಗಳ ಸಮ್ಮೇಳನಕ್ಕೆ ವಿಶ್ವ ವ್ಯವಹಾರಗಳ ಭಾರತೀಯ ಸಭೆ ಕಳುಹಿಸಿದ ಆಯೋಗಕ್ಕೆ ಅವರು ನಾಯಕರಾಗಿದ್ದರು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸೇರಿದ್ದ ವಿಶ್ವಸಂಸ್ಥೆಯ ಪ್ರಥಮ ಸಭೆಯಲ್ಲಿ ಅವರು ಹಾಜರಿದ್ದರು. ಬ್ರಿಟನ್ ನೇಮಿಸಿದ್ದ ಭಾರತೀಯ ಪ್ರತಿನಿಧಿಗಳ ಹಕ್ಕನ್ನು ಅವರು ಅನೇಕ ಸಾರ್ವಜನಿಕ ಭಾಷಣಗಳಲ್ಲಿ ಪ್ರಶ್ನಿಸಿದರು. ಭಾರತಕ್ಕೆ ಮರಳಿದ ಮೇಲೆ ಅವರಿಗೆ ವೀರೋಚಿತ ಸ್ವಾಗತ ದೊರಕಿತು. 1946, 1947, 1948, 1949, 1950 ಮತ್ತು 1963ರಲ್ಲಿ ಅವರು ವಿಶ್ವಸಂಸ್ಥೆಯಲ್ಲಿ ಭಾರತದ ಆಯೋಗಗಳ ನೇತೃತ್ವ ವಹಿಸಿದ್ದರು. ಅವರು 1941-1949ರಲ್ಲಿ ಸೋವಿಯತ್ ದೇಶಕ್ಕೂ 1949-1952ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೂ 1949-1951ರಲ್ಲಿ ಮೆಕ್ಸಿಕೋಗೂ ಭಾರತದ ರಾಯಭಾರಿಯಾಗಿದ್ದರು. 1952-1954ರಲ್ಲಿ ಪಾರ್ಲಿಮೆಂಟಿನ ಸದಸ್ಯೆಯಾಗಿದ್ದರು. 1955-1961ರಲ್ಲಿ ಇಂಗ್ಲೆಂಡಿಗೆ ಭಾರತದ ಹೈಕಮಿಷನರೂ ಐರ್ಲೆಂಡಿಗೆ ರಾಯಭಾರಿಯೂ ಆಗಿದ್ದರು. ಅವರು ಸ್ಪೇನಿನಲ್ಲಿ ರಾಯಭಾರಿಯಾಗಿದ್ದದು 1958-1961ರಲ್ಲಿ. 1944ರ ನವಂಬರಿನಲ್ಲೂ 1967ರ ಜುಲೈಯಲ್ಲೂ ಅವರು ಫೂಲ್‍ಪುರ ಕ್ಷೇತ್ರದಿಂದ ಲೋಕ ಸಭೆಗೆ ಆಯ್ಕೆಗೊಂಡರು. 

ವಿಜಯಲಕ್ಷ್ಮಿ  ಅವರು 1965ರಲ್ಲಿ ಆಗಿನ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿಯವರ ವೈಯಕ್ತಿಕ ಪ್ರತಿನಿಧಿಯಾಗಿ ಫ್ರಾನ್ಸ್, ಹಾಲೆಂಡ್ ಮತ್ತು ಜರ್ಮನಿ ದೇಶಗಳ ಪ್ರವಾಸ ಕೈಗೊಂಡರು. 1962-1964ರಲ್ಲಿ ಅವರು ಮಹಾರಾಷ್ಟ್ರದ ರಾಜ್ಯಪಾಲರಾದರು. 1968ರಲ್ಲಿ ಲೋಕಸಭೆಯ ಸದಸ್ಯತ್ವಕ್ಕೆ ರಾಜೀನಾಮೆಯಿತ್ತು ಅಮೆರಿಕದಲ್ಲಿ ಭಾಷಣ ಪ್ರವಾಸ ಕೈಗೊಂಡರು.

ಸೋ ಐ ಬಿಕೇಮ್ ಎ ಮಿನಿಸ್ಟರ್ (1933), ಪ್ರಿಸನ್ ಡೇಸ್ (1946), ರೋಲ್ ಆಫ್ ವಿಮೆನ್ ಇನ್ ದಿ ಮಾಡರ್ನ್ ವಲ್ರ್ಡ್ (1957), ದಿ ಎವೊಲ್ಯೂಷನ್ ಆಫ್ ಇಂಡಿಯ (1958) - ಇವು ವಿಜಯಲಕ್ಷ್ಮಿ ಪಂಡಿತರ ಕೆಲವು ಪ್ರಕಟಣೆಗಳು. 

ವಿಜಯಲಕ್ಷ್ಮಿ ಅವರು 1977ರಲ್ಲಿ ಲೋಕಸಭೆಗೆ ನಡೆದ ಚುನಾವಣೆಗಳ ಸಮಯದಲ್ಲಿ ತಮ್ಮ ಸೋದರ ಸೊಸೆ ಇಂದಿರಾಗಾಂಧಿಯವರ ಸರ್ಕಾರದ ವಿರುದ್ಧ ಜನತಾ ಪಕ್ಷದ ಪರವಾಗಿ ಪ್ರಚಾರ ನಡೆಸಿದರು.

ತಮ್ಮ ಅಣ್ಣ ಜವಾಹರಲಾಲ್ ನೆಹರೂ ಅವರಿಗೆ ಅವರಲ್ಲಿ ಬಹಳ ಅಭಿಮಾನ, ವಿಧಿ ತಮಗೆ ಹುಟ್ಟಿನಿಂದ ನೀಡಿದ ವರಗಳ ಪೈಕಿ ಜವಾಹರಲಾಲರಂಥ ಅಣ್ಣನನ್ನು ಕೊಟ್ಟಿದ್ದು ಅತ್ಯಂತ ಮಹತ್ತ್ವದ್ದು ಎಂದು ಅವರು ಹೇಳಿದ್ದಾರೆ.

ವಿಜಯಲಕ್ಷ್ಮಿ  ಅವರು ಮಂತ್ರಿಯಾಗಿದ್ದಾಗ ಅವರು ಅನೇಕ ಸುಧಾರಣಾಕ್ರಮಗಳನ್ನು ಕೈಗೊಂಡಿದ್ದರು. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, ಮಕ್ಕಳಿಗಾಗಿ ಹಾಲಿನ ಯೋಜನೆ, ಹಳ್ಳಿಗಳಲ್ಲಿ ತರುಣರಿಗೆ ಆಟ ಮತ್ತು ಅಂಗಸಾಧನೆಗಳಿಗಾಗಿ ಕ್ರೀಡಾ ಸ್ಥಳಗಳು ಮೊದಲಾದ ಅನೇಕ ಸಮಾಜ ಸೇವಾ ಕಾರ್ಯಕ್ರಮಗಳಿಗೆ ಅವರು ತಳಹದಿ ಹಾಕಿದ್ದರು.

ವಿಜಯಲಕ್ಷ್ಮಿ ಪಂಡಿತ್ 1990ರ ಡಿಸೆಂಬರ್ 1ರಂದು ನಿಧನರಾದರು. 

On the birthday anniversary freedom fighter, diplomat and politician Vijayalakshmi Pandit

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ