ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅವನೀಂದ್ರನಾಥ


 ಅವನೀಂದ್ರನಾಥ ಠಾಕೂರ್


ಅವನೀಂದ್ರನಾಥ ಠಾಕೂರ್ ಅಥವಾ ಅಬನೀಂದ್ರ ಠಾಕೂರ್ ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿ ಭಾರತೀಯ ಚಿತ್ರಕಲೆಯ ಪುನರುಜ್ಜೀವನಕ್ಕೆ ಕಾರಣರಾದವರು.  ಠಾಕೂರ್ ವಂಶದಲ್ಲಿ ಸಾಹಿತ್ಯರಂಗದಲ್ಲಿ ರವೀಂದ್ರನಾಥ ಠಾಕೂರರು ಹೊಸ ಅಲೆ ಎಬ್ಬಿಸಿದರೆ, ಕಲಾರಂಗದಲ್ಲಿ ಅವನೀಂದ್ರನಾಥ ಠಾಕೂರರು ತಮ್ಮದೇ ಆದ ಶೈಲಿ ರೂಪಿಸಿದವರು.

ಅವನೀಂದ್ರನಾಥರು ಕೊಲ್ಕತ್ತಾದ ಜೋರಾಸಾಂಕೋದಲ್ಲಿದ್ದ ಠಾಕೂರ್ ಮನೆತನದ ಪುರಾತನ ಕಟ್ಟಡದಲ್ಲಿ 1871ರಲ್ಲಿ ಆಗಸ್ಟ್ 7ರಂದು ಜನಿಸಿದರು. ಅವನೀಂದ್ರನಿಗೆ ಬಾಲ್ಯದಲ್ಲಿಯೇ ಚಿತ್ರ ಬಿಡಿಸುವ ಹವ್ಯಾಸ. ಅವನೀಂದ್ರರ ತಂದೆ ತಾಯಿ ಇಬ್ಬರೂ ಚಿತ್ರ ಕಲಾವಿದರು. ಕೊಲ್ಕತ್ತಾದ ‘ಸ್ಕೂಲ್ ಆಫ್ ನ್ಯಾಚುರಲ್ ಆರ್ಟ್ಸ್’ ಸಂಸ್ಥೆಯ ಪ್ರಾರಂಭದ ದಿನಗಳಲ್ಲಿ ಅವನೀಂದ್ರರ ತಂದೆ ವಿದ್ಯಾರ್ಥಿಯಾಗಿ ಸೇರಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದ್ದರು. ತಾಯಿ ಸೌದಾಮಿನಿ ದೇವಿ ಶಿಸ್ತಿನ ಹೆಂಗಸು. ಮಕ್ಕಳ ಮೇಲೆ ಅವರ ಶಿಸ್ತಿನ ಮುದ್ರೆ ಅಚ್ಚಳಿಯದಂತೆ ಬಿದ್ದಿತ್ತು. ಹಳೆಯದಾಗಿದ್ದ ಬಂಗಲೆಯ ಗೋಡೆಗಳ ಮೇಲೆಲ್ಲಾ ಭಾರಿ ಭಾರಿ ಚಿತ್ರಗಳು. ಕಣ್ಣು ತಿರುಗಿಸಿದಲ್ಲೆಲ್ಲಾ  ತೈಲ ಚಿತ್ರಗಳು. ದೃಷ್ಟಿ ಹಾಯಿಸಿದ ಕಡೆಯಲ್ಲೆಲ್ಲಾ ಬಣ್ಣ ಬಣ್ಣದ ಬೊಂಬೆಗಳು ವಿಚಿತ್ರ ಕಲಾಕೃತಿಗಳು. ಅರಮನೆಯಂತಹ ಮನೆ, ಮನೆ ತುಂಬ ಜನ.

ಅವನೀಂದ್ರರ ತಂದೆ ತಾಯಿಗಳು ಸಂಸಾರ ಸಮೇತ ಕಲ್ಕತ್ತೆಯಿಂದ ಕೆಲವು ಮೈಲಿ ದೂರವಿದ್ದ  ಚಂಪಾದಾನಿ ಎಂಬಲ್ಲಿಗೆ ಬಂದು ನೆಲೆಸಿದರು. ಚಂಪಾದಾನಿ ಗಂಗಾನದಿ ತೀರದ ಸುಂದರ ಪ್ರದೇಶ. ದೊಡ್ಡ ತೋಟವೊಂದರ ನಡುವೆ ಭಾರಿ ಬಂಗಲೆ. ಸುತ್ತ ವಿವಿಧ ಜಾತಿಯ ಮರ ಗಿಡಗಳು. ಹಕ್ಕಿಗಳ ಚಿಲಿಪಿಲಿ, ಪ್ರಾಣಿಗಳ ಗಲಿಬಿಲಿ. ಬಾಲಕ ಅವನೀಂದ್ರನಿಗೆ ಸ್ವಚ್ಛಂದ ವಿಹಾರಕ್ಕೆ ಅವಕಾಶ. ಓಡುತ್ತಿರುವ ಮೊಲ, ಆಡುತ್ತಿರುವ ಅಳಿಲು, ಕುಪ್ಪಳಿಸುವ ಕೋತಿಗಳು, ಗಾಬರಿಯಿಂದ ನೋಡುವ ಜಿಂಕೆಗಳು ಬಾಲಕ ಅವನೀಂದ್ರನಿಗೆ ಮನರಂಜನೆ ಒದಗಿಸುತ್ತಿದ್ದವು. ಕೆಲವೊಮ್ಮೆ ನದಿಗೆ ನೀರು ಕುಡಿಯಲು ಬರುತ್ತಿದ್ದ ಹುಲಿಗಳನ್ನು ನೋಡಿ ಅವನೀಂದ್ರ ಹೆದರುತ್ತಿದ್ದ. ಬಂಗಾಲದ ಹುಲಿ ನೋಡಲು ಭಯಂಕರ ಮತ್ತು ಅಷ್ಟೇ ಕ್ರೂರ ಎಂದು ಪ್ರಸಿದ್ಧಿ.

ಗಂಗಾನದಿಯ ತೀರದಲ್ಲಿ ಮೊಣ ಕಾಲವರೆಗೆ ನೀರಿನಲ್ಲಿ ನಿಂತು ಮೀನಿಗಾಗಿ ಧ್ಯಾನ ಮಾಡುತ್ತಿದ್ದ  ಕೊಕ್ಕರೆಯನ್ನೇ ನೋಡುತ್ತ ಹುಲ್ಲಿನ ಮೇಲೆ ಅವನೀಂದ್ರ ಕುಳಿತು ಬಿಡುತ್ತಿದ್ದ. ನಿಂಬೆ ಗಿಡದಿಂದ ಹಣ್ಣು ಕಿತ್ತು ಅಳಿಲು ತಿನ್ನುತ್ತಿದ್ದರೆ ಅದನ್ನು ಓಡಿಸದೆ ಹಾಗೇ ನೋಡುತ್ತಾ ನಿಲ್ಲುತ್ತಿದ್ದ. ಮನೆಗೆ ಬಂದು ನೆಲದ ಮೇಲೋ ಗೋಡೆಯ ಮೇಲೋ ನಿಂತ ಕೊಕ್ಕರೆಯ, ಕುಳಿತ ಅಳಿಲಿನ ಚಿತ್ರ ಬಿಡಿಸುತ್ತಲಿದ್ದ.

ಅವನೀಂದ್ರನು ಇನ್ನೂ ಹುಡುಗನಾಗಿದ್ದಾಗಲೇ ತಂದೆ ತೀರಿಕೊಂಡರು. ಇದರಿಂದ ಹುಡುಗ ಅಂತರ್ಮುಖಿಯಾದ. ಆದರೆ, ಚಿಕ್ಕ ಮಕ್ಕಳಿಗೆ ಕಥೆ ಹೇಳುವುದರಲ್ಲಿ ಇತರರನ್ನು ಅನುಕರಿಸಿ ತಮಾಷೆ ಮಾಡುವುದರಲ್ಲಿ ಜಾಣನಾಗಿದ್ದ. ಕೆಲ ಕಾಲದ ನಂತರ ಅವನೀಂದ್ರ, ತಾಯಿ ಮತ್ತು ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಕಲ್ಕತ್ತೆಗೆ ಬಂದು ನೆಲಸಿದರು. ಹತ್ತಾರು ಹಿರಿಕಿರಿಯ ಬಾಲಕರಿದ್ದ ದೊಡ್ಡ ಮನೆ. ಅಣ್ಣ ತಮ್ಮಂದಿರು, ಅಣ್ಣ ತಮ್ಮಂದಿರ ಮಕ್ಕಳು ಓರಗೆಯವರಾಗುತ್ತಿದ್ದರು. ರವೀಂದ್ರರು ಅವನೀಂದ್ರರಿಗಿಂತ ಹತ್ತು ವರ್ಷ ಹಿರಿಯರು. ಆದರೆ ಸಂಬಂಧದಲ್ಲಿ ಅವನೀಂದ್ರರ ಚಿಕ್ಕಪ್ಪ. ಹಿರಿಯ ಕಿರಿಯ ಬಾಲಕರು ಕಲೆತು ಒಟ್ಟಿಗೆ ಆಡುವುದು, ಹಾಡುವುದು ನಡೆದಿತ್ತು. ಆದರೆ ಎಲ್ಲವೂ ಗಂಭೀರವಾಗಿ ಶಿಸ್ತಿನಿಂದ. ಸುನಾಯಿನಿ, ವಿನಾಯಿನಿ ಅವನೀಂದ್ರರ ತಂಗಿಯರು.

ಮನೆಯಲ್ಲಿ ಸ್ವಾತಂತ್ರ್ಯವಿತ್ತು, ಸ್ವಚ್ಛಂದಕ್ಕೆ ಅವಕಾಶ ಇರಲಿಲ್ಲ. ದೊಡ್ಡ ಕುಟುಂಬ ವ್ಯವಸ್ಥೆಯ ಇಂತಹ ಸ್ಥಿತಿಯಲ್ಲಿ ಕೆಲವು ಮಕ್ಕಳು ಅಂತರ್ಮುಖಿಗಳಾಗುವುದು ಅನಿವಾರ್ಯ. ತಾವು ಒಂಟಿಯಾಗಿದ್ದು, ಹೊರಗೆ ಹೋಗಲು ಅವಕಾಶ ಇಲ್ಲದಾಗ ಒಬ್ಬರೇ ಕುಳಿತು ಯೋಚಿಸುವುದು, ಕನಸು ಕಾಣುವುದು ಎಲ್ಲ ಸಹಜ. ಅವನೀಂದ್ರ ಇಂಥ ಅಂತರ್ಮುಖಿ. ಇಂತಹ ಏಕಾಂತ ಪ್ರವೃತ್ತಿ, ಸೂಕ್ಷ್ಮ ಗ್ರಹಣ ಶಕ್ತಿ, ಚಿತ್ರ ರಚನೆಗೆ ಪುಟ ಕೊಟ್ಟಿತು. ಪ್ರಕೃತಿ ಪಾಠ ಕಲಿಸಿತು, ನೆಲ ಜಲಗಳು ಬಣ್ಣ ಒದಗಿಸಿದವು.

ಒಂಭತ್ತು ವರ್ಷದ ಬಾಲಕ ಅವನೀಂದ್ರ ಒಂದು ಚಿತ್ರ ರಚಿಸಿದ. ತನ್ನ ಚಿಕ್ಕಪ್ಪ ರವೀಂದ್ರನಾಥರ ಮುಂದೆ ತಂದು ತೋರಿಸಿ “ಚಿಕ್ಕಪ್ಪಾ ಹೇಗಿದೆ” ಎಂದು ಕೇಳಿದ. ಹರಿಯುವ ಹೊಳೆಯ ದಂಡೆಯ ರಮಣೀಯ ಚಿತ್ರ. ಬಾಲಕನ ಕಲ್ಪನಾಶಕ್ತಿ ಕಂಡು ರವೀಂದ್ರರಿಗೆ ಸಂತೋಷವಾಯಿತು. ಅಣ್ಣನ ಮಗನಾದರೂ ತಮ್ಮನಂತೇ ಪ್ರೀತಿಸುತ್ತಿದ್ದ ಅವನೀಂದ್ರನಿಗೆ ತಮ್ಮ ಮೆಚ್ಚುಗೆಯ ಕುರುಹಾಗಿ ಚಿತ್ರ ಬರೆಯುವ “ಹಲಗೇ”ಯೊಂದನ್ನು ಉಡುಗೊರೆ ನೀಡಿದರು.

ಅವನೀಂದ್ರ ಕಲ್ಕತ್ತೆಯ ಸಂಸ್ಕೃತ ಕಾಲೇಜಿಗೆ ಸೇರಿದಾಗ ಹತ್ತು ವರ್ಷ. ಅಲ್ಲಿ ಅವನ ಜೊತೆಗಾರ ಅನುಕೂಲ ಚಕ್ರವರ್ತಿ. ಆತನಿಗೂ ಚಿತ್ರ ಬರೆಯುವ ಹುಚ್ಚು. ಅನುಕೂಲ ಚಿತ್ರ ಬರೆಯುತ್ತಿದ್ದುದು ಸೀಸದ ಕಡ್ಡಿಯಿಂದ.

ಅವನೀಂದ್ರನಿಗೆ ಇಂಗ್ಲಿಷ್ ವಿದ್ಯಾಭ್ಯಾಸ ಅಷ್ಟಾಗಿ ಹಿಡಿಸಲಿಲ್ಲ. ಸಂಸ್ಕೃತ ಸಾಹಿತ್ಯದಲ್ಲಿ ಅವನ ಒಲವು. 1881ರಲ್ಲಿ ಅವನು ಸಂಸ್ಕೃತ ಕಾಲೇಜಿಗೆ ಸೇರಿದ. ಆಗ ಅವನಿಗೆ ಹತ್ತು ವರ್ಷ. ಅಲ್ಲಿ ಒಂಬತ್ತು ವರ್ಷಗಳ ಕಾಲ ಸಂಸ್ಕೃತ ಸಾಹಿತ್ಯವನ್ನು ಅಭ್ಯಾಸ ಮಾಡಿದ. ಸಂಸ್ಕೃತ ಕಾವ್ಯಗಳಲ್ಲಿ ಬರುವ ಸುಂದರವಾದ ಅಲಂಕಾರಿಕ ವರ್ಣನೆ. ಕಾಳಿದಾಸನ ಮಹಾಕಾವ್ಯಗಳಾದ ಕುಮಾರ ಸಂಭವ, ಮೇಘ ಸಂದೇಶಗಳಲ್ಲ್ನಿ ಪ್ರಕೃತಿ ವರ್ಣನೆ, ವಾಲ್ಮೀಕಿ ರಾಮಾಯಣದಲ್ಲಿ ಬರುವ ಮಾನವೀಯ ಸ್ವಭಾವಗಳ ವರ್ಣನೆಗಳು, ತಾಯಿ ಹೇಳುತ್ತಿದ್ದ ಕೃಷ್ಣನ ಬಾಲಲೀಲೆಯ ಕಥೆಗಳು, ಇವೆಲ್ಲ ತಾರುಣ್ಯದ ಹೊಸ್ತಿಲಿನಲ್ಲಿ ಕಾಲಿಡುತ್ತಿದ್ದ ಅವನೀಂದ್ರರಲ್ಲಿ ಹುದುಗಿದ್ದ ಕಲ್ಪನಾಶಕ್ತಿಗೆ, ಚಿತ್ರಕ ಶಕ್ತಿಗೆ ಮೆರಗು ನೀಡಿದವು.

ಕಲ್ಕತ್ತೆಯಲ್ಲಿ ಗಿಲ್ ಹಾರ್ಡಿ ಎಂಬ ಇಟಾಲಿಯನ್ ಚಿತ್ರ ಕಲಾವಿದರಿದ್ದರು. ಆತ ಕೊಲ್ಕತ್ತಾ ಕಲಾ ಶಾಲೆಯ ಅಧ್ಯಾಪಕರು. ಅವನೀಂದ್ರ ಅವರ ಗೆಳೆತನ ಸಂಪಾದಿಸಿದರು. ಗೆಳೆತನ ಬಲಿತು ಗುರುತನವಾಯ್ತು. ಬಣ್ಣ ಕುಂಚಗಳ ಮೇಲೆ ಹಿಡಿತ ಸಾಧಿಸಿದ್ದ ಅವನೀಂದ್ರರು ಹಾರ್ಡಿಯ ಅಂತಃಕರಣ ಗೆದ್ದುಕೊಂಡು ಆತನಿಂದ ವರ್ಣವಿನ್ಯಾಸಗಳ ತಂತ್ರ ಕಲಿತರು. ಅವನೀಂದ್ರರ ಪ್ರತಿಭೆ, ಚುರುಕುತನ ಕಂಡು ಹಾರ್ಡಿಗೂ ಅಭಿಮಾನವೆನ್ನಿಸಿತು.
ರವೀಂದ್ರರು ತಮ್ಮ ಕವಿತಾ ಸಂಕಲನಗಳಿಗೆ ಅವನೀಂದ್ರರಿಂದಲೇ ಚಿತ್ರ ಬರೆಸುತ್ತಿದ್ದರು. ಚಿತ್ರಕಲೆಯ ಹಾಗೆ ಅವನೀಂದ್ರರಿಗೆ ಅಭಿನಯವೂ ಇಷ್ಟ . ರವೀಂದ್ರರು ನಾಟಕ ಬರೆದು ಅವರೇ ಪಾತ್ರ ವಹಿಸುತ್ತಿದ್ದರು. ಜೊತೆಗೆ ಅವನೀಂದ್ರರೂ ಇರಬೇಕು. ರವೀಂದ್ರರದು ಧೀರಗಂಭೀರ ಪಾತ್ರವಾದರೆ, ಅವನೀಂದ್ರರದು ಲಘುಹಾಸ್ಯದ ಪಾತ್ರಗಳು. 1882ರಿಂದ 1890ರವರೆಗಿನ ಒಂಬತ್ತು ವರ್ಷಗಳು ಅವನೀಂದ್ರರ ಜೀವನದಲ್ಲಿ ಕಲಿಕೆಯ ಕಾಲ.

ಅತ್ತ ಸಂಸ್ಕೃತ ಸಾಹಿತ್ಯ, ಇತ್ತ ಚಿತ್ರಕಲೆ. ಪಾಶ್ಚಾತ್ಯನಾದ ಗಿಲ್ ಹಾರ್ಡಿಯ ಜೊತೆಗಿದ್ದು ತರಬೇತಿ ಪಡೆದಿದ್ದರಿಂದ ಅವರ ಚಿತ್ರಗಳಲ್ಲಿ ಪಾಶ್ಚಾತ್ಯ ಮಾದರಿ ಕಾಣಬಹುದು. ಆದರೆ ಭಾರತೀಯ ದೇವತೆಗಳ ಸುಂದರ ಚಿತ್ರಗಳು ಶುದ್ಧ ಭಾರತೀಯ ಕಲ್ಪನೆಯಂತೆಯೇ ಮೂಡಿಬಂದವು. ಜಲವರ್ಣ, ತೈಲವರ್ಣಗಳ ವಿನ್ಯಾಸ, ಹೊಂದಾಣಿಕೆಗಳಲ್ಲಿ ವಿದೇಶೀಯರ ಅನುಭವ, ತಾಂತ್ರಿಕತೆಯನ್ನು ಅವರು ಬಳಸಿಕೊಂಡರು. ಹಳೆ ಬೇರಿನಲ್ಲಿ ಹೊಸ ಚಿಗುರು ಚಿಗುರಿಸಿದರು.

1889ರಲ್ಲಿ ಅವನೀಂದ್ರರ ವಿವಾಹವಾಯಿತು. ರಾಜಾಪ್ರಸನ್ನ ಕುಮಾರರ ಮಗಳು ಸುಹಾಸಿನೀ ದೇವಿ ವಧು.

ಆಗ ಕಲ್ಕತ್ತೆಯಲ್ಲಿ ಕಲಾ ಶಾಲೆಯೊಂದಿತ್ತು. ಅವನೀಂದ್ರರ ಚಿತ್ರ ರಚನಾಪ್ರವೃತ್ತಿ ಕಲೆಯನ್ನು ಬೆಳೆಸಿಕೊಂಡು ತಮ್ಮ ಕಲಾ ಪ್ರತಿಭೆಯನ್ನು ಹೆಚ್ಚು ಶ್ರೀಮಂತಗೊಳಿಸಿಕೊಳ್ಳುವ ಹಂಬಲ ಆ ಕಡೆಗೆ ಸೆಳೆಯಿತು. ಕಲಾ ಶಾಲೆಯ ಉಪಪ್ರಧಾನಾಚಾರ್ಯರಾದ ಹಾರ್ಡಿಯವರ ಗುರುತ್ವವನ್ನು ಮೊದಲೇ ಒಪ್ಪಿಕೊಂಡಿದ್ದ ಅವನೀಂದ್ರರು ಅಲ್ಲಿದ್ದ ಇನ್ನೊಬ್ಬ ಅಧ್ಯಾಪಕ ಸಿ.ಎಲ್. ಪಾಮರ್‌ರವರನ್ನು ತಮ್ಮ ಮಾರ್ಗದರ್ಶಕರಾಗಿ ಆರಿಸಿಕೊಂಡರು. ಅವನೀಂದ್ರರ ಕಲೆಯ ಮೇಲೆ ಪ್ರಭಾವ ಬೀರಿದ ಇನ್ನೊಂದು ದೇಶ ಜಪಾನ್. ಒಕಾಕುರಕುಕುಜೋ ಎಂಬ ಜಪಾನೀ ಕಲಾವಿದ 1902ರಲ್ಲಿ ಭಾರತಕ್ಕೆ ಭೇಟಿ ನೀಡಿದರು. ಕೊಲ್ಕತ್ತಾಗೆ ಬಂದ ಆತ ಕೆಲವು ದಿನ ಅವನೀಂದ್ರರ ಅತಿಥಿಯಾಗಿದ್ದರು.

ಅವನೀಂದ್ರರ ಕಲಾಪ್ರತಿಭೆ, ಅವರು ಬಳಸಿದ ಮಾರ್ಗ ವಿನ್ಯಾಸಗಳಿಂದ ಪ್ರಭಾವಿತನಾದ ಕುಕುಜೋ ಅವರ ಕಲೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ತನ್ನೂರಿಗೆ ಹಿಂತಿರುಗಿದ ನಂತರ ಅಲ್ಲಿನ ಇಬ್ಬರು ಉತ್ತಮ ಚಿತ್ರ ಕಲಾವಿದರುಗಳಾದ ಟೈಕಾನ್ ಮತ್ತು ಹಿಷಿಡಾ ಎಂಬುವವರನ್ನು ಕೊಲ್ಕತ್ತಾಗೆ ಕಳುಹಿಸಿಕೊಟ್ಟರು. ಅವರು ಅವನೀಂದ್ರರ ಜೊತೆಗೂಡಿ ಚಿತ್ರ ರಚನೆಯ ಕ್ಷೇತ್ರದಲ್ಲಿ ಹೊಸತನ ರೂಪಿಸಿಕೊಂಡರು. ವಿಚಾರ ವಿನಿಮಯ ಮಾಡಿಕೊಂಡರು. ಹಾಗೆಯೇ ಅವನೀಂದ್ರರೂ ಅವರಿಂದ ಸಾಕಷ್ಟು ಪ್ರಭಾವಿತರಾದರು.

ಶ್ರೀಕೃಷ್ಣನ ಲೀಲೆಗಳು ಕಥೆಗಳು ಅವನೀಂದ್ರರನ್ನು ಆಕರ್ಷಿಸಿದವು. “ಶ್ರೀಕೃಷ್ಣಲೀಲಾ” ಅವನೀಂದ್ರರ ಮೊಟ್ಟ ಮೊದಲ ಸಂಪೂರ್ಣ ಕೃತಿ. 1895ರಲ್ಲಿ ರಚಿಸಿದ ಈ ಕೃತಿ ಅವನೀಂದ್ರರನ್ನು ಕಲಾಜಗತ್ತಿಗೆ ಪರಿಚಯ ಮಾಡಿಕೊಟ್ಟಿತು. ಪ್ರಸಿದ್ಧ ವಿದೇಶಿ ಮತ್ತು ಸ್ವದೇಶೀ ಚಿತ್ರ ಕಲಾವಿದರು ಅವನೀಂದ್ರರ ಚಿತ್ರವನ್ನು ನೋಡಿ ಮೆಚ್ಚಿದರು. ಇದೇ ರೀತಿ 1896ರಲ್ಲಿ ರಚಿಸಿದ “ಶಕುಂತಲಾ” ಚಿತ್ರವೂ ಅವನೀಂದ್ರರ ಖ್ಯಾತಿಯ ಕಿರೀಟಕ್ಕೆ ಗರಿ ಸೇರಿಸಿತು. ಕಾಳಿದಾಸನ ಶಕುಂತಲೆ ಅವನೀಂದ್ರರ ಕುಂಚದಿಂದ ಪ್ರತ್ಯಕ್ಷಳಾದಳು.

ಕೊಲ್ಕತ್ತಾ ಕಲಾಶಾಲೆಯ ಪ್ರಾಚಾರ‍್ಯ ಇ.ಟಿ. ಹ್ಯಾವೆಲ್‌ರವರೂ ಅವನೀಂದ್ರರ ಚಿತ್ರಗಳನ್ನು ನೋಡಿ ಮೆಚ್ಚಿದವರಲ್ಲಿ ಒಬ್ಬರು. ಅವರು ಅವನೀಂದ್ರರಿಗೆ 1898ರಲ್ಲಿ ತಮ್ಮ ಕಲಾಶಾಲೆಯ ಉಪಪ್ರಾಚಾರ‍್ಯರ ಹುದ್ದೆ ನೀಡಿ ಗೌರವಿಸಿದರು. ಅಲ್ಲಿಯತನಕ ಯಾವ ಭಾರತೀಯನಿಗೂ ಆ ಹುದ್ದೆ ಸಿಕ್ಕಿರಲಿಲ್ಲ. ಪ್ರಾಚಾರ‍್ಯ ಹ್ಯಾವೆಲ್‌ರವರ ಮಾರ್ಗದರ್ಶನದಲ್ಲಿ ಅವನೀಂದ್ರರು ಮೊಗಲ್ ಮತ್ತು ರಜಪೂತ ಶೈಲಿಯ ಕಲೆಯ ಅಭ್ಯಾಸ ಮಾಡತೊಡಗಿದರು. ಹ್ಯಾವೆಲ್ ಆಂಗ್ಲರಾದರೂ ಅವರಿಗೆ ಭಾರತೀಯ ಕಲೆ, ಸಂಸ್ಕೃತಿಗಳ ಬಗ್ಗೆ ಆಸಕ್ತಿ ಇತ್ತು, ಗೌರವವಿತ್ತು. 1905ರಲ್ಲಿ ಹ್ಯಾವೆಲರು ನಿವೃತ್ತರಾದ ನಂತರ ಅವನೀಂದ್ರರು ಕಲಾ ಶಾಲೆಯ ಪ್ರಾಚಾರ‍್ಯರಾದರು. ತಮ್ಮ ವಿದ್ಯಾರ್ಥಿಗಳನ್ನು ಎದುರಿಗೆ ಕೂಡಿಸಿಕೊಂಡು ಭಾರತೀಯ ಪುರಾಣಗಳ, ರಾಮಾಯಣ, ಮಹಾಭಾರತಗಳ ಕಥೆಗಳನ್ನು ಸ್ವಾರಸ್ಯವಾಗಿ ಹೇಳುವುದರಲ್ಲಿ ಅವನೀಂದ್ರರು ನಿಪುಣರು.
ಅವರು ಕಥೆ ಹೇಳುತ್ತಿದ್ದರೆ ಚಿತ್ರ ಬಿಡಿಸಿದಂತೆ ಇರುತ್ತಿತ್ತಂತೆ.

ಕಲ್ಕತ್ತೆಯ ಕಲಾಶಾಲೆಯ ಉಪ ಪ್ರಾಚಾರ‍್ಯ ಹುದ್ದೆಯ ಅನುಭವ ಅವನೀಂದ್ರರ ಕಲಾರಚನೆಗೆ ಹೊಸ ತಿರುವು ನೀಡಿತು. “ಋತು ಸಂಹಾರ” ಚಿತ್ರಮಾಲಿಕೆಗಳಲ್ಲಿ “ಬುದ್ಧ ಸುಜಾತ” ಹಾಗೂ “ವಜ್ರಮಕುಟ” ಮುಂತಾದ ಕೃತಿಗಳಲ್ಲಿ ಬದಲಾವಣೆ ಕಾಣಿಸಿತು.

1907ರಲ್ಲಿ ಭಾರತ ಹಾಗೂ ಬ್ರಿಟನ್ನಿನ ಕೆಲವು ಉತ್ಸಾಹೀ ಕಲಾವಿದರು ಸೇರಿ “ಇಂಡಿಯನ್ ಸೊಸೈಟಿ ಫಾರ್ ಓರಿಯಂಟಲ್ ಆರ್ಟ್ಸ್” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದರಲ್ಲಿ ಅವನೀಂದ್ರರದೇ ಪ್ರಧಾನ ಪಾತ್ರ. ಅಲ್ಲಿ ಭಾರತೀಯ ಸಾಂಪ್ರದಾಯಿಕ ರೀತಿಯ ಕಲಾ ಬೋಧನೆ ಪ್ರಾರಂಭಿಸಿದರು. ಈ ಸಂಸ್ಥೆ ಹೊಸ ರೀತಿಯ ಚಿತ್ರಕಲಾ ಪ್ರದರ್ಶನಕ್ಕೆ ಒಂದು ವೇದಿಕೆಯಾಯ್ತು. ಈ ಸಂಸ್ಥೆ ಹಲವು ಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿತು. ಪೌರಾಣಿಕ ದೇವತೆಗಳು ಅವನೀಂದ್ರರ ಕಲ್ಪನೆಯ ಕುಂಚದಿಂದ ಬಣ್ಣಗಳ ಮೂಲಕ ಮೈದಾಳಿದರು. ಪಾಶ್ಚಾತ್ಯ ಹಾಗೂ ಇತರ ದೇಶೀಯ ಶೈಲಿಗಳ ಪ್ರಭಾವ ಅವನೀಂದ್ರರ ಮೇಲೆ ಇದ್ದರೂ ಅವರು ನಿರೂಪಿಸುತ್ತಿದ್ದ ಚಿತ್ರಗಳು ಸ್ವಚ್ಛ ಭಾರತೀಯ ಶೈಲಿ ಮತ್ತು ಬಣ್ಣದವು ಗಳಾಗಿದ್ದವು.

ಇತ್ತ ರವೀಂದ್ರರು 1902ರಲ್ಲೇ ಸ್ಥಾಪಿಸಿದ ಶಾಂತಿನಿಕೇತನ ಚಿಗುರೊಡೆದು, ಮೊಳಕೆ ಮೂಡಿ, ಗಿಡವಾಗಿ ಬೆಳೆಯತೊಡಗಿತ್ತು. ಭಾರತೀಯ ಗುರುಕುಲ ಪದ್ಧತಿಯ ಶಿಕ್ಷಣದಲ್ಲಿ ರವೀಂದ್ರನಾಥ ಠಾಕೂರರಂತೆ ಅವನೀಂದ್ರನಾಥ ಠಾಕೂರರಿಗೂ ಬಹಳ ವಿಶ್ವಾಸ. ಅವನೀಂದ್ರರು ಹಾಗೂ ಅವರ ಅನುಯಾಯಿ ಶಿಷ್ಯರು ಇತಿಹಾಸದ, ಪ್ರಕೃತಿಯ, ಪುರಾಣಗಳ ದೃಶ್ಯಗಳನ್ನೆಲ್ಲಾ ವರ್ಣಗಳಲ್ಲಿ ಸೆರೆ ಹಿಡಿದು ಶಿಲ್ಪದಲ್ಲಿ  ಕಡೆದರು. 1913ರಲ್ಲಿ ಅವನೀಂದ್ರರು ಮತ್ತು ಅವರ ಅನುಯಾಯಿ ಶಿಷ್ಯರ ಚಿತ್ರಕಲಾ ಪ್ರದರ್ಶನವೊಂದು ಲಂಡನ್ನಿನಲ್ಲಿ ನಡೆಯಿತು. ಸಹಸ್ರಾರು ವಿದೇಶೀಯರು, ವಿದೇಶೀ ಕಲಾವಿದರು ಈ ಭಾರತೀಯ ಕಲಾವಿದರ ವರ್ಣವಿನ್ಯಾಸ, ರೇಖಾ ವಿನ್ಯಾಸ ಹಾಗೂ ಕಲಾ ಫ್ರೌಢಿಮೆ ಕಂಡು ಬೆರಗಾಗಿ ಮನಸಾರೆ ಹೊಗಳಿದರು.

1919ರಲ್ಲಿ ರವೀಂದ್ರನಾಥ ಠಾಕೂರರು ಶಾಂತಿನಿಕೇತನದಲ್ಲಿ ಭಾರತೀಯ ಕಲಾ ಪೀಠ ಸ್ಥಾಪಿಸಿದಾಗ ಅವನೀಂದ್ರರು ಕಲ್ಕತ್ತೆಯ ಕಲಾಶಾಲೆಯ ಪ್ರಾಚಾರ‍್ಯ ಪದವಿಗೆ ರಾಜಿನಾಮೆ ನೀಡಿ ಶಾಂತಿನಿಕೇತನದ ಕಲಾಪೀಠದ ಮುಖ್ಯಸ್ಥರ ಹುದ್ದೆ ವಹಿಸಿಕೊಂಡರು. ಶಾಂತಿನಿಕೇತನ ಅವರಿಗೆ ನೆಮ್ಮದಿ ನೀಡಿತು. ಅಲ್ಲಿ ಸಜ್ಜುಗೊಳಿಸಿದ ವಸ್ತು ಸಂಗ್ರಹಾಲಯ, ಕಲಾಗ್ರಂಥ ಭಂಡಾರಗಳಿಗೆ ಅವನೀಂದ್ರರ ಶಿಷ್ಯ ನಂದಲಾಲ ಬಸುರವರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಯಿತು.

1919ರಲ್ಲಿಯೇ ಅವನೀಂದ್ರರ ಹಾಗೂ ಅವರ ಶಿಷ್ಯರ ಮತ್ತು ಆಪ್ತ ಕಲಾವಿದರ ಚಿತ್ರಕಲಾ ಪ್ರದರ್ಶನವೊಂದು ಟೋಕಿಯೋದಲ್ಲಿ ನಡೆಯಿತು. ಆ ಪ್ರದರ್ಶನದಿಂದ ಅವನೀಂದ್ರರ ಖ್ಯಾತಿ ದೇಶ ವಿದೇಶಗಳಲ್ಲಿ ಇನ್ನಷ್ಟು ಹರಡಿತು. 1929ರ ದಶಕದಲ್ಲಿ ಅವನೀಂದ್ರರ ಚಿತ್ರಕಲೆಯ ಶೈಲಿ ಹಾಗೂ ತಂತ್ರ ಒಂದು ಕ್ರಾಂತಿಯನ್ನೇ ಮಾಡಿತು. ಚಿತ್ರಕಲೆಯಲ್ಲಿ ಸಿದ್ಧಿಯ ಹಂತ ತಲಪುವ ವೇಳೆಗೆ ಅವನೀಂದ್ರರು “ವಿಶ್ವ ಭಾರತಿ”ಯ ಕುಲಪತಿಗಳಾಗಿದ್ದರು.

1940ರಲ್ಲಿ ನಿವೃತ್ತಿ ಹೊಂದಿದ ನಂತರ ಅವನೀಂದ್ರರ ಚಟುವಟಿಕೆ ಆಟಿಕೆಗಳನ್ನು ತಯಾರಿಸುವ ಕಡೆ ಹರಿಯಿತು. ಮಕ್ಕಳಿಗಾಗಿ ಹೊಸತರದ ಆಕರ್ಷಣೀಯ ಚಿಕ್ಕ ಚಿಕ್ಕ ಆಟಿಕೆಗಳನ್ನು ನಿರ್ಮಿಸುವುದು, ಚಿತ್ರ ವಿಚಿತ್ರ ಆಕೃತಿಗಳ ಮರದ ಕೊಂಬೆಗಳನ್ನು ಸಂಗ್ರಹಿಸುವುದು, ನಾನಾತರಹದ ಶಂಖ, ಕಪ್ಪೆಚಿಪ್ಪುಗಳನ್ನು ಕಲೆ ಹಾಕುವುದು ಅವರ ಪ್ರವೃತ್ತಿಯಾಗಿ ಬೆಳೆಯಿತು.

ನಂದಲಾಲ ಬಸು, ಮುಕುಲ್‌ಡೇ, ಪ್ರಮೋದ ಕುಮಾರಚಟರ್ಜಿ, ಅಸಿತಕುಮಾರ ಹಲಧರ, ಕರ್ನಾಟಕದ ಖ್ಯಾತ ಕಲಾವಿದ ಕೆ. ವೆಂಕಟಪ್ಪ ಮುಂತಾದವರು ಅವನೀಂದ್ರರ ಪ್ರತಿಭಾವಂತ ಶಿಷ್ಯರು. 

ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಪಡೆದಿದ್ದ ಅವನೀಂದ್ರರು ಪ್ರಾಚೀನ ಸಂಸ್ಕೃತ ಗ್ರಂಥಗಳನ್ನು ಸಂಶೋಧಿಸಿ ಅವುಗಳಲ್ಲಿ ಅಡಗಿರುವ ಚಿತ್ರಕಲೆಗೆ ಸಂಬಂಧಪಟ್ಟ ಅಂಶಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. 1914ರಲ್ಲಿ ಅವರು ರಚಿಸಿದ “ಷಡಂಗ” (ಚಿತ್ರಕಲೆಯ ಆರು ಅಂಗಗಳು), “ಭಾರತೀಯ ಚಿತ್ರಕಲೆಯ ಅಂಗರಚನೆಗೆ ಬೇಕಾದ ಕೆಲವು ಅಗತ್ಯಗಳು”, ಎಂಬ ಗ್ರಂಥಗಳು ಬಹಳ ಮುಖ್ಯವಾದವು. 1919ರಲ್ಲಿ “ಬಾಂಗ್ಲಾರ್ ಬ್ರತಾ” ಎಂಬ ಶೀರ್ಷಿಕೆಯ ಭಾರತೀಯ ಶಿಲ್ಪಕಲೆಯ ಪರಿಚಯ ಗ್ರಂಥ, “ಭಾರತೀಯ ಚಿತ್ರಕಲೆ” ಎಂಬ ಭಾರತೀಯ ಚಿತ್ರಕಲೆಯ ಪರಿಚಯ ಮೂಡಿಸುವ ಗ್ರಂಥಗಳನ್ನು ಬರೆದರು. ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅವನೀಂದ್ರರು ಭಾರತೀಯ ಶಿಲ್ಪಕಲೆಯ ಬಗೆಗೆ ನೀಡಿದ ಉಪನ್ಯಾಸಗಳ ಸಂಗ್ರಹವನ್ನು “ಶಿಲ್ಪಪ್ರಬಂಧಾವಳಿ” ಎಂಬ ಹೆಸರಿನಿಂದ ಕಲ್ಕತ್ತಾ ವಿಶ್ವವಿದ್ಯಾಲಯ ಪ್ರಕಟಿಸಿತು. ಚಿತ್ರಕಲೆಯ ಬಗೆಗೆ ಅವನೀಂದ್ರರು ಸಂಸ್ಕೃತದಿಂದ ಬಂಗಾಳಿಗೆ ಅನುವಾದ ಮಾಡಿ ಬರೆದ “ಷಡಂಗ” ಪುಸ್ತಕವು ಇಂಗ್ಲಿಷ್, ಫ್ರೆಂಚ್, ಜರ‍್ಮನ್ ಬಾಷೆಗಳಲ್ಲಿ ಅನುವಾದಗೊಂಡು ಕಲಾ ಪ್ರಪಂಚದಲ್ಲಿ ಮಾರ್ಗದರ್ಶಿ ಗ್ರಂಥವಾಗಿ ಉಳಿದಿದೆ.  ವಿಶ್ವಭಾರತಿಯ ಕುಲಪತಿಯಾಗಿ ಅವನೀಂದ್ರರು ತಮ್ಮ ಚಿಕ್ಕಪ್ಪ ರವೀಂದ್ರರ ಸಹವಾಸದಲ್ಲಿದ್ದಾಗ ಹಲವು ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ಮುಖ್ಯವಾದುವು “ಅಪನ್ ಕಥಾ”, “ಘರೋವ” ಎಂಬ ಎರಡು ಕೃತಿಗಳು. “ಜೋರಾ ಸಾಂಕೋರ್‌ದಾರೆ” ಎಂಬ ಹೆಸರಿನ ಪುಸ್ತಕದಲ್ಲಿ ತಮ್ಮ ಬಾಲ್ಯದ ದಿನಗಳ ಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇದು ಅಂದಿನ ಸಾಮಾಜಿಕ ಜೀವನದ ಪರಿಚಯ ಮಾಡಿಕೊಡುತ್ತದೆ. ಚಿತ್ರಕಲಾವಿದರಾಗಿ ಸ್ವಂತಿಕೆ, ವೈವಿಧ್ಯಗಳನ್ನು ತೋರಿದ ಅವನೀಂದ್ರರ ಸಾಹಿತ್ಯದಲ್ಲಿಯೂ ಸ್ವಂತಿಕೆ, ವೈವಿಧ್ಯಗಳು ಕಾಣುತ್ತವೆ.

1941ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯ ಅವನೀಂದ್ರನಾಥ ಠಾಕೂರರವರಿಗೆ “ಡಾಕ್ಟರ್ ಆಫ್ ಲೆಟರ‍್ಸ್” (ಡಿ. ಲಿಟ್) ಗೌರವ ನೀಡಿ ಸನ್ಮಾನಿಸಿತು. ಅವನೀಂದ್ರನಾಥ ಠಾಕೂರರು ತಮ್ಮ ಜೀವನದ ಕೊನೆಯ ದಿನಗಳನ್ನು ಕೊಲ್ಕತ್ತಾ ಬಳಿಯ ಬ್ಯಾರಕ್ ಪುರದ ತಮ್ಮ ಮನೆಯಲ್ಲಿ ಕಳೆದರು. ಅಲ್ಲಿದ್ದಾಗಿನ ಅವರ ಜೀವನ ಋಷಿಜೀವನ ಸದೃಶವಾದುದು. ಅವನೀಂದ್ರನಾಥ ಠಾಕೂರರು 1951ರ ಡಿಸೆಂಬರ್ 5ರಂದು ನಿಧನರಾದರು.

On the birth anniversary of great artiste Abanindranath Tagore

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ