ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾಮಿನಾಥನ್


ಹಸಿರು ಕ್ರಾಂತಿಯ ಹರಿಕಾರ 
ಡಾ. ಎಂ. ಎಸ್. ಸ್ವಾಮಿನಾಥನ್


ಭಾರತ ರತ್ನ ಡಾ. ಎಂ. ಎಸ್. ಸ್ವಾಮಿನಾಥನ್ ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾದವರು.

ಸ್ವಾಮಿನಾಥನ್ 1925ರ ಆಗಸ್ಟ್ 7ರಂದು ಜನಿಸಿದರು.  ಸ್ವಾಮಿನಾಥನ್ ಅವರ ತಂದೆ ವೈದ್ಯರಾಗಿದ್ದು ಮಹಾತ್ಮ ಗಾಂಧೀಜಿ ಅವರ ಅನುಯಾಯಿಗಳಾಗಿದ್ದರು.  ತಮ್ಮ ಪ್ರಾರಂಭಿಕ ಶಿಕ್ಷಣದ ನಂತರದಲ್ಲಿ ಸ್ವಾಮಿನಾಥನ್ ಅವರು ಕೃಷಿ ಪದವಿಗಾಗಿ ಓದಿದರು.  1949ರಲ್ಲಿ ಅವರಿಗೆ ಜೈವಿಕ ತಂತ್ರಜ್ಞಾನದಲ್ಲಿನ ಅಧ್ಯಯನಕ್ಕಾಗಿ ನೆದೆರ್‍ಲ್ಯಾಂಡ್ ದೇಶದ ವಿದ್ಯಾರ್ಥಿವೇತನ ದೊರಕಿತು.  ಮುಂದೆ ಅವರು ಅಮೆರಿಕದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಿಎಚ್.ಡಿ ಮತ್ತು ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದಲ್ಲಿ ಉಚ್ಚತಮ ಶಿಕ್ಷಣವನ್ನು ಗಳಿಸಿದರು.

“ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದೆಂದರೆ ವಿದೇಶೀ ರೈತರನ್ನು ಶ್ರೀಮಂತರನ್ನಾಗಿಸುವ ಕೈಂಕರ್ಯ” ಎಂಬುದು ಸ್ವಾಮಿನಾಥನ್ ಅವರ ಬಲವಾದ ಅಭಿಪ್ರಾಯವಾಗಿತ್ತು.  ಆದ್ದರಿಂದ ಭಾರತ ದೇಶವನ್ನು ಎಲ್ಲ ರೀತಿಯ ಆಹಾರ ಧಾನ್ಯಗಳ ಆಮದುಗಳಿಂದ ಮುಕ್ತವಾಗಿಸಬೇಕೆಂಬುದು  ಅವರ ಅಭಿಲಾಷೆಯಾಗಿತ್ತು.  

1966ರ ವರ್ಷದಲ್ಲಿ ಸ್ವಾಮಿನಾಥನ್ ನವದೆಹಲಿಯ ‘ಭಾರತೀಯ ವ್ಯವಸಾಯ ಸಂಶೋಧನಾ ಕೆಂದ್ರ’ದ  ನಿರ್ದೇಶಕರಾಗಿ ನೇಮಕಗೊಂಡರು.  ಭಾರತೀಯ ಕೃಷಿಕರ ಮೂಲ ಅವಶ್ಯಕತೆಗಳ ಕುರಿತಾಗಿ ನೇರವಾದ ಅನುಭವ ಪಡೆಯುವ ನಿಟ್ಟಿನಲ್ಲಿ ಸ್ವಾಮಿನಾಥನ್ ಅವರು, ಮಣ್ಣಿನ ಮಕ್ಕಳಾದ ರೈತರೊಂದಿಗೆ ತಾವೂ ಬೆರೆತು ಕೈಕೆಸರು ಮಾಡಿಕೊಂಡು ಅಹರ್ನಿಶಿ ದುಡಿದರು.  ಸ್ವಾಮಿನಾಥನ್ ಅವರು ಸಿದ್ಧಪಡಿಸಿದ ವರದಿಯನ್ನು ಮೆಚ್ಚಿದ ರಾಕ್ ಫೆಲ್ಲರ್ ಪ್ರತಿಷ್ಠಾನ ಅವರಿಗೆ ಆರ್ಥಿಕ ಸಹಾಯ ನೀಡಲು ಮುಂದೆ ಬಂದದ್ದರ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸ್ವಾಮಿನಾಥನ್,  ಮಿಶ್ರತಳಿ ಗೋಧಿ ಬೀಜಗಳನ್ನು ಅಭಿವೃದ್ಧಿಪಡಿಸಿದರು.  ಇದರ ಬಳಕೆಯ ದೆಸೆಯಿಂದಾಗಿ ಗೋಧಿ ಉತ್ಪನ್ನದಲ್ಲಿನ ಇಳುವರಿ ಹಲವು ಪಟ್ಟು ಹಿರಿದಾಗಿತ್ತು.  ಈ ತೆರನಾದ ಗೋಧಿ ಬೀಜಗಳು ರೈತರಲ್ಲಿ ಸಂತಸ ಸಂಭ್ರಮೋತ್ಸಾಹಗಳನ್ನು ಮೂಡಿಸಿ ಬಹಳಷ್ಟು ರೈತರು  ಪ್ರಯೋಜನ ಪಡೆಯಲಾರಂಭಿಸಿದರು.

ಆಧುನಿಕ ಬೇಸಾಯ ಪದ್ಧತಿಗಳ ಅಳವಡಿಕೆಯಿಂದಾಗುವ ಪ್ರಯೋಜನಗಳನ್ನು ರೈತಾಪಿ ಜನರಿಗೆ ಮನನ ಮಾಡಿಕೊಡುವುದಕ್ಕಾಗಿ ಡಾ. ಸ್ವಾಮಿನಾಥನ್ ಅವರು ದೆಹಲಿಯ ಆಸುಪಾಸಿನಲ್ಲಿ ಸುಮಾರು 2000 ಪ್ರಾತಿನಿಧಿಕ ತೋಟಗಳನ್ನು ನಿರ್ಮಿಸಿದರು.  ತಮ್ಮ ಅಬಿವೃದ್ಧಿಶೀಲ ಕಾಯಕದ ಪ್ರಥಮ ಹಂತದಲ್ಲಿ, 18000 ಟನ್ನುಗಳ ಮೆಕ್ಸಿಕನ್ ಗೊಧಿಯ ಬೀಜಗಳನ್ನು ಆಮದು ಮಾಡಿಕೊಳ್ಳುವ ಪ್ರಸ್ತಾಪವನ್ನು ಸರ್ಕಾರದ ಮುಂದಿರಿಸಿದರು.   ಸ್ವಾಮಿನಾಥನ್ ಅವರ ಕಾರ್ಯವೈಖರಿಯಲ್ಲಿದ್ದ ಹುಮ್ಮಸ್ಸು ಮತ್ತು ಸಾಧ್ಯತೆಗಳನ್ನು ಮನಗಂಡ ಸರ್ಕಾರ ಸ್ವಾಮಿನಾಥನ್ ಅವರಿಗೆ ಉತ್ತಮ ಬೆಂಬಲ ನೀಡಿತು.  ಈ ಎಲ್ಲ ಕಾರಣಗಳ ದೆಸೆಯಿಂದಾಗಿ 1960ರ ವರ್ಷದಲ್ಲಿ ಕೇವಲ 12 ಮಿಲಿಯನ್ ಟನ್ನುಗಳ ಗೋಧಿ ಉತ್ಪಾದಿಸುತ್ತಿದ್ದ ದೇಶ ಮುಂದಿನ ದಶಕಗಳಲ್ಲಿ 70 ಮಿಲಿಯನ್ ಟನ್ನುಗಳಿಗೂ ಮೀರಿದ ಉತ್ಪಾದನಾ ಸಾಮರ್ಥ್ಯ ಗಳಿಸಿ ಆಹಾರ ಸ್ವಾವಲಂಬನೆ ಸಾಧಿಸುವ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತ ನಡೆಯಿತು.

ಹೀಗೆ ತಮ್ಮನ್ನು ನಿತ್ಯ ಅಭಿವೃದ್ಧಿಶೀಲ ಪ್ರಯೋಗಶೀಲತೆಯಲ್ಲಿ ತೊಡಗಿಸಿಕೊಂಡ ಸ್ವಾಮಿನಾಥನ್ ಅವರು ವೈಜ್ಞಾನಿಕ ತಳಹದಿಯ ಬೇಸಾಯ ಪದ್ಧತಿಗಳ ಅನುಷ್ಠಾನದಲ್ಲಿ ತಮ್ಮ ಗಮನವನ್ನು ಕೆಂದ್ರೀಕರಿಸಿದರು.  ಇದೇ “ಹಸಿರು ಕ್ರಾಂತಿ” ಎಂದು ಹೆಸರು ಪಡೆಯಿತು.  ತಮ್ಮ ಈ ಸಾಧನೆಗಾಗಿ ಡಾ. ಸ್ವಾಮಿನಾಥನ್ ಅವರು “ಭಾರತದ ಹಸಿರುಕ್ರಾಂತಿಯ ಪಿತಾಮಹ” ಎಂದು ಮನೆಮಾತಾದರು.

ಭಾರತದ ಕೃಷಿ ವರುಣನ ಕೃಪೆ ಇಲ್ಲವೇ ಅವಕೃಪೆಗೆ ಸಿಲುಕಿ ಡೋಲಾಯಮಾನವಾದ ಸ್ಥಿತಿ ಅನುಭವಿಸುವುದನ್ನು ಕಂಡ ಸ್ವಾಮಿನಾಥನ್ ‘sustainable water security system  for India’ ಎಂಬ ವಿಷಯದಲ್ಲಿ ತೀವ್ರವಾದ ಚಿಂತನೆಯನ್ನು ನಡೆಸಿದರು.  ಕೃಷಿ ಕ್ಷೇತ್ರದಲ್ಲಿ ಟ್ರಾಕ್ಟರ್ ಮತ್ತಿತರ ಉಳುಮೆ ಮತ್ತು ಸಾಗುವಳಿ  ಯಂತ್ರಗಳ ಬಳಕೆ, ಕಳೆ ಕೀಳುವ ಯಂತ್ರಗಳ ಬಳಕೆ, ಬೆಳೆ ತೆಗೆಯುವುದಕ್ಕೂ ಯಂತ್ರಗಳ ಉತ್ಪಾದನೆ ಇವೇ ಮುಂತಾಗಿ  ಹಲವು ನಿಟ್ಟಿನಲ್ಲಿ ಅವರು ಅಭಿವೃದ್ಧಿ ಪಡಿಸಿದ ವಿಶಿಷ್ಟ ತಂತ್ರಗಳು, ಕೃಷಿ ಕ್ಷೇತ್ರದಲ್ಲಿನ ಮಹತ್ವದ ಕ್ರಾಂತಿಗೆ ಪೂರಕವಾಗಿದ್ದವು.  

ಸ್ವಾಮಿನಾಥನ್ ಅವರಿಗೆ ಸಂದಿರುವ ವಿಶ್ವದಾದ್ಯಂತದ ಗೌರವಗಳು ಅನೇಕವಾದವು.  2024ರಲ್ಲಿ ಅವರಿಗೆ ಭಾರತ ರತ್ನ ಗೌರವ ಘೋಷಿಸಲಾಯಿತು.
1971ರಲ್ಲಿ ಅವರಿಗೆ ಮ್ಯಾಗ್ಸೇಸೆ ಪ್ರಶಸ್ತಿ ಸಂದಿತು.  ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕಾರದಂತಹ ಮಹತ್ವದ ಪ್ರಶಸ್ತಿಗಳೆಲ್ಲವೂ ಅವರಿಗೆ ಸಂದಿದ್ದು, ಭಾರತ ರತ್ನ ಪ್ರಶಸ್ತಿ ಕೂಡ ಸನಿಹದಲ್ಲೇ ಇದೇ ಎಂಬುದು ವಿವಿಧ ವಲಯಗಳಲ್ಲಿ ಹಲವು ವರ್ಷಗಳಿಂದಲೇ ಜನಜನಿತ ಸುದ್ಧಿ ನಿರೀಕ್ಷೆಗಳಾಗಿತ್ತು.  ಆದರೆ ಕಡೆಗೂ ಬರಲಿಲ್ಲ.  1986ರ ವರ್ಷದಲ್ಲಿ ಅವರಿಗೆ ಆಲ್ಬರ್ಟ್ ಐನ್ಸ್ಟೀನ್ ಪ್ರಶಸ್ತಿ ಮತ್ತು 1987ರಲ್ಲಿ ಪ್ರಥಮ ವಿಶ್ವ ಆಹಾರ ಪ್ರಶಸ್ತಿಗಳ ಗೌರವ ಕೂಡಾ ಸಂದಿತು.  1991ರಲ್ಲಿ ಅವರಿಗೆ ಅಮೆರಿಕದ ಟೈಲರ್ ಪುರಸ್ಕಾರ ಹಾಗೂ 1999ರ ವರ್ಷದಲ್ಲಿ ಯುನೆಸ್ಕೋದ ಗಾಂಧಿ ಸ್ವರ್ಣ ಪುರಸ್ಕಾರಗಳು ಸಂದವು.  ಟೈಮ್ಸ್ ಪತ್ರಿಕೆ 1999ರ ವರ್ಷದಲ್ಲಿ ಸ್ವಾಮಿನಾಥನ್ ಅವರನ್ನು 20ನೇ ಶತಮಾನದ 20 ಪ್ರಭಾವಪೂರ್ಣ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಿ ಭಾರತಕ್ಕೆ ಗೌರವ ಸಲ್ಲಿಸಿತು. ಈ ಪಟ್ಟಿಯಲ್ಲಿದ್ದ  ಇನ್ನಿಬ್ಬರು ಭಾರತೀಯರೆಂದರೆ ಮಹಾತ್ಮ ಗಾಂಧಿ ಮತ್ತು ರಬೀಂದ್ರನಾಥ ಠಾಗೂರರು. 

ಡಾ. ಸ್ವಾಮಿನಾಥನ್ ಅವರು 1990ರ ವರ್ಷದಲ್ಲಿ ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೆಶನ್ ಸಂಸ್ಥೆಯನ್ನು ಚೆನ್ನೈನಲ್ಲಿ ಸ್ಥಾಪಿಸಿ ಕೃಷಿಕ್ಷೇತ್ರದಲ್ಲಿನ ತಮ್ಮ ಕೊಡುಗೆಯನ್ನು ನಿರಂತರವಾಗಿ ಮುಂದುವರೆಸಿದ್ದರು.  ಈ ಸಂಸ್ಥೆ ಭಾರತೀಯ ಹಳ್ಳಿಗರ ಆರ್ಥಿಕ ಸ್ವಾವಲಂಬನೆಗಾಗಿ ಮಹತ್ವದ ಕಾಯಕ ನಡೆಸುತ್ತಿದೆ.  ಹೀಗೆ ಸ್ವಾಮಿನಾಥನ್ ಅವರ ಬದುಕು ಕಠಿಣ  ಪರಿಶ್ರಮ ಮತ್ತು ಅರ್ಪಣಾ ಮನೋಭಾವಗಳ ಉದ್ದೀಪನ ಶಕ್ತಿಯಾಗಿದ್ದು ದೇಶಭಕ್ತಿಯ ಹಾದಿಯಲ್ಲಿ  ಒಬ್ಬ ವ್ಯಕ್ತಿ ಯಾವ ರೀತಿ ಬದುಕಬೇಕೆಂಬುದಕ್ಕೆ ಮಾದರಿಯಂತಿದೆ.  

ಸ್ವಾಮಿನಾಥನ್ ಅವರ ಸುಪುತ್ರಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀಫ್ ಸೈಂಟಿಸ್ಟ್ ಪದವಿಯನ್ನು ಅಲಂಕರಿಸಿದ್ದವರು. 

ಡಾ. ಸ್ವಾಮಿನಾಥನ್ 2023ರ ಸೆಪ್ಟೆಂಬರ್‍ 28ರಂದು ತಮ್ಮ 99ನೇ ವಯಸ್ಸಿನಲ್ಲಿ ನಿಧನರಾದರು. 

On the birth anniversary of Father of India's Green Revolution, Bharath Ratna Dr. M.S. Swaminathan 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ