ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಂಚನಾ


 ಕಾಂಚನಾ 


ಕಾಂಚನಾ ದಕ್ಷಿಣ ಭಾರತ ಚಲನಚಿತ್ರರಂಗದ ಹಿರಿಯ ಕಲಾವಿದೆ. ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಹಲವು ನೂರು ಚಿತ್ರಗಳಲ್ಲಿ ನಟಿಸಿದ್ದಾರೆ. 

ಕಾಂಚನಾ 1939ರ ಆಗಸ್ಟ್ 16ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದರು. ಅವರ ಮೂಲ ಹೆಸರು ವಸುಂಧರಾ ದೇವಿ.  ಇವರು ಚಿಕ್ಕವರಾಗಿದ್ದಾಗ ಇವರ ಕುಟುಂಬ ಚೆನ್ನೈಗ ವಲಸೆ ಬಂತು. ಚಿಕ್ಕಂದಿನಲ್ಲೇ ಓದಿನ ಜೊತೆ  ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತವನ್ನೂ ಕಲಿತರು.  ತಮ್ಮ ತಂದೆಯವರ ಉದ್ದಿಮೆ ನಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ  ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಕೆಲಸಕ್ಕೆ ಸೇರಿದರು. 

'ಕಾದಲಿಕ್ಕ ನೇರಮಿಲ್ಲೈ' ತಮಿಳು ಚಿತ್ರಕ್ಕೆ ಹೊಸ ಮುಖದ ಹುಡುಕಾಟದಲ್ಲಿದ್ದ ತಮಿಳಿನ ಮೇರು ನಿರ್ದೇಶಕ ಸಿ.ವಿ. ಶ್ರೀಧರ್ ಅವರು ಏರ್ ಇಂಡಿಯಾದ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ವಸುಂಧರಾ ದೇವಿಯ ಮನವೊಲಿಸಿ ಕಾಂಚನಾ ಎಂಬ ಹೆಸರಿನಿಂದ ಅವರನ್ನು ಪರಿಚಯಿಸಿದರು. ಈ ಚಿತ್ರ ಕಂಡ ಯಶಸ್ಸಿನಿಂದ  ಅವರಿಗೆ ಎಲ್ಲ ಭಾಷೆಗಳಲ್ಲಿ ಉತ್ತಮ ಅವಕಾಶಗಳು ಲಭಿಸಿ ಜನಪ್ರಿಯ ತಾರೆಯಾದರು. ಆತ್ಮ ಗೌರವಂ, ವೀರಾಭಿಮನ್ಯು, ಭಾಮಾ ವಿಜಯಂ, ಶಾಂತಿ ನಿಲಯಂ, ಕಲ್ಯಾಣ ಮಂಡಪಂ, ಪವಿತ್ರ ಬಂಧಂ, ಶಿವಂದ ಮಣ್,  ಮುಂತಾದ ತಮಿಳು-ತೆಲುಗು ಚಿತ್ರಗಳು ಕಾಂಚನಾ ಅವರನ್ನು ಪ್ರಸಿದ್ಧ ತಾರೆಯರ ಸಾಲಿಗೆ ತಂದವು. ಅವರು ಕೆಲವೊಂದು ಪ್ರಸಿದ್ಧ ಹಿಂದೀ ಚಿತ್ರಗಳಲ್ಲೂ ನಟಿಸಿದ್ದಾರೆ. 

ಕಾಂಚನಾ ಕನ್ನಡದಲ್ಲಿ ಡಾ.ರಾಜ್‍ಕುಮಾರ್ ಅವರೊಂದಿಗೆ ಬಭ್ರುವಾಹನ, ಶಂಕರ್ ಗುರು, ನಾನೊಬ್ಬ ಕಳ್ಳ ಮುಂತಾದ ಚಿತ್ರಗಳಲ್ಲಿನ ಪ್ರಮುಖ ಪಾತ್ರಗಳಲ್ಲದೆ, ಬಿಳಿಗಿರಿಯ ಬನದಲ್ಲಿ, ಬಂಧನ, ಭಾಗ್ಯವಂತ, ಆನಂದ ಭೈರವಿ, ಭಕ್ತ ಪ್ರಹ್ಲಾದ, ಸಮಯದ ಗೊಂಬೆ, ಜಯಸಿಂಹ, ದೇವತಾ ಮನುಷ್ಯ ಮುಂತಾದ ಅನೇಕ ಚಿತ್ರಗಳಲ್ಲಿನ ಹಿರಿಯ ಪಾತ್ರಗಳಲ್ಲೂ ನಟಿಸಿದ್ದಾರೆ.

ಕಾಂಚನಾ ವೈಯಕ್ತಿಕ ಜೀವನದಲ್ಲಿ ತಮ್ಮ ಹೆತ್ತವರಿಂದಲೇ ಮೋಸಕ್ಕೊಳಗಾದ ಸಂಕಟಕ್ಕೊಳಗಾದರಂತೆ. ತಂಗಿಗೆ ಮದುವೆಯಾದರೂ ಈಕೆಯ ಸಂಪಾದನೆ ಸಿಗುವುದಿಲ್ಲ ಎಂದು ತಂದೆ ತಾಯಿ ಅಡ್ಡಬಂದರು.  ಈಕೆ  ಗಳಿಸಿದ ಅಪಾರ ಸಂಪಾದನೆಯನ್ನೆಲ್ಲ ಹೆತ್ತವರು ಕುತಂತ್ರದಿಂದ  ಕಸಿದುಕೊಂಡಾಗ,  ಇವರು ಚೆನ್ನೈ ಬಿಟ್ಟು ಬೆಂಗಳೂರಿನಲ್ಲಿರುವ ತಮ್ಮ ತಂಗಿ ಗಿರಿಜಾ ಪಾಂಡೆ ಅವರೊಂದಿಗೆ ನೆಲೆಸಿದ್ದರು. ಕೆಲವು ವರ್ಷಗಳ ಕಾನೂನು ಹೋರಾಟ ನಡೆಸಿದ ಕಾಂಚನಾ ನ್ಯಾಯಾಲಯದಲ್ಲಿದ್ದ ಪ್ರಕರಣದಲ್ಲಿ ವಿಜಯಿಯಾಗಿ ತಾವು ಸಂಪಾದಿಸಿದ್ದ ಆಸ್ಥಿಯನ್ನು ಪುನಃ ಪಡೆದುಕೊಂಡದ್ದಲ್ಲದೆ ತಮ್ಮ ಬಹುಪಾಲು ಸಂಪತ್ತನ್ನು ಧಾರ್ಮಿಕ ಮತ್ತು ಜನಪರ ಕಲ್ಯಾಣಕ್ಕೆ ನೀಡಿದ್ದಾರಂತೆ. 

ಸರಳ ಬದುಕಿನಲ್ಲಿ ಸಾಗಿರುವ ಕಾಂಚನಾ ಅವರಿಗೆ ತಮಿಳುನಾಡಿನ
ಕಲೈಮಾಮಣಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ