ಪಾಪನಾಶಂ ಶಿವನ್
ಪಾಪನಾಶಂ ಶಿವನ್
ಪಾಪನಾಶಂ ರಾಮಯ್ಯ ಶಿವನ್ ವಾಗ್ಗೇಯಕಾರರಾಗಿ, ಸಂಗೀತ ಸಂಯೋಜಕರಾಗಿ ಮತ್ತು ಗಾಯಕರಾಗಿ ಪ್ರಸಿದ್ಧರು. ಅವರು 1930 ಮತ್ತು 1940 ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಾಗೂ ತಮಿಳು ಚಿತ್ರರಂಗದಲ್ಲಿ ಚಲನಚಿತ್ರ ಸಂಯೋಜಕರಾಗಿಯೂ ಕೆಲಸ ಮಾಡಿದ್ದರು.
ಪಾಪನಾಶಂ ಶಿವನ್ ಅವರು ತಮ್ಮ ಭಕ್ತಿಪೂರ್ವಕ ರಚನೆಗಳಿಂದ ತಮಿಳಿನ ತ್ಯಾಗರಾಜರೆಂದು ಹೆಸರಾಗಿದ್ದರು. ಇವರ ರಚನೆಗಳನ್ನು ಎಂ. ಕೆ. ತ್ಯಾಗರಾಜ ಭಾಗವತರ್, ಡಿ. ಕೆ. ಪಟ್ಟಮ್ಮಾಳ್ ಮತ್ತು ಎಂ ಎಸ್ ಸುಬ್ಬುಲಕ್ಷ್ಮಿ ಮುಂತಾದವರು ತಮ್ಮ ಗಾಯನದಿಂದ ಜನಪ್ರಿಯಗೊಳಿಸಿದರು.
ಪಾಪನಾಶಂ ಶಿವನ್ 1890ರ ಸೆಪ್ಟೆಂಬರ್ 26ರಂದು ತಂಜಾವೂರು ಜಿಲ್ಲೆಯ ಪೊಲಗಂ ಗ್ರಾಮದಲ್ಲಿ ಜನಿಸಿದರು. ತಂಜಾವೂರು ಕರ್ನಾಟಕ ಸಂಗೀತದ ತ್ರಿಮೂರ್ತಿಗಳ ತವರೂರು. ಅವರು ತಮ್ಮ ಆರಂಭಿಕ ವರ್ಷಗಳನ್ನು ಕೇರಳದ ತಿರುವಾಂಕೂರು ಪ್ರದೇಶದಲ್ಲಿ ಕಳೆದರು. ಅವರ ಬಾಲ್ಯದ ಹೆಸರು ರಾಮಯ್ಯ. ಅವರು 7 ವರ್ಷದವರಾಗಿದ್ದಾಗ ತಂದೆ ತೀರಿಕೊಂಡರು. ತಾಯಿ ಯೋಗಾಂಬಾಳ್, ತನ್ನ ಮಕ್ಕಳೊಂದಿಗೆ ತಂಜಾವೂರಿನಿಂದ ಹೊರಟು ತನ್ನ ಚಿಕ್ಕಪ್ಪನ ಆಶ್ರಯದಲ್ಲಿರಲು 1899ರಲ್ಲಿ ತಿರುವನಂತಪುರಕ್ಕೆ ಬಂದರು. ತಿರುವನಂತಪುರಂನಲ್ಲಿ ಶಿವನ್ ಮಲಯಾಳಂ ಕಲಿತು ನಂತರದಲ್ಲಿ ಮಹಾರಾಜ ಸಂಸ್ಕೃತ ಕಾಲೇಜಿಗೆ ಸೇರಿ ವ್ಯಾಕರಣದಲ್ಲಿ ಪದವಿ ಪಡೆದರು.
ರಾಮಯ್ಯ ತುಂಬಾ ಧಾರ್ಮಿಕ ಮನೋಭಾವದವರಾಗಿದ್ದರು ಅವರು 20 ವರ್ಷದವರಾಗಿದ್ದಾಗ ತಾಯಿ ಯೋಗಾಂಬಾಳ್ ಅವರ ಮರಣದೊಂದಿಗೆ, ಅದು ಇನ್ನಷ್ಟು ಹೆಚ್ಚಾಯಿತು. ಸ್ಥಳದಿಂದ ಸ್ಥಳಕ್ಕೆ ಅಲೆದಾಡುತ್ತಾ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಅವರು ತಿರುವನಂತಪುರದಲ್ಲಿ ನೀಲಕಂದ ಶಿವನ್ ಅವರ ಮನೆಯಲ್ಲಿ ಭಕ್ತಿ ಸಂಗೀತದ ಅಧಿವೇಶನಗಳಲ್ಲಿ ಶ್ರದ್ಧೆಯಿಂದ ಭಾಗವಹಿಸುತ್ತಿದ್ದರು. ಅಲ್ಲಿ ಅವರು ನೀಲಕಂದ ಶಿವನ್ ಅವರ ಅನೇಕ ಸಂಯೋಜನೆಗಳನ್ನು ಕಲಿತರು. ಈ ಅವಧಿಯಲ್ಲಿ ಅವರು ಆಗಾಗ ಪಾಪನಾಶಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಲ್ಲಿ ಅವರು ತಮ್ಮ ದೇಹದಾದ್ಯಂತ ಭಸ್ಮವನ್ನು ಹಚ್ಚಿಕೊಳ್ಳುತ್ತಿದ್ದರು. ಹೀಗಾಗಿ ಜನ ಇವರನ್ನು ಪಾಪನಾಶಂ ಶಿವನ್ ಎಂದೇ ಕರೆಯಲು ಆರಂಭಿಸಿದರು.
ಪಾಪನಾಶಂ ಶಿವನ್ ತಮ್ಮ ಮೊದಲ ಸಂಗೀತ ಪಾಠಗಳನ್ನು ಪರಮೇಶ್ವರ ಭಾಗವತರ ಮಗ ನೂರಾನಿ ಮಹಾದೇವ ಭಾಗವತರಿಂದ ಪಡೆದರು. ನಂತರ, ಪ್ರಸಿದ್ಧ ಸಂಗೀತಗಾರರಾದ ಕೋನೇರಿರಾಜಪುರಂ ವೈದ್ಯನಾಥ ಅಯ್ಯರ್ ಅವರ ಶಿಷ್ಯರಾದರು.
ಅವರಿಗೆ ಸಂಗೀತದಲ್ಲಿನ ಭಕ್ತಿರಸದಲ್ಲಿ ಹೆಚ್ಚು ಅನುಭೂತಿ ಇತ್ತು. ಭಕ್ತಿಗೀತೆಗಳನ್ನು ಹಾಡುತ್ತಿದ್ದ ಅವರು ಇತರ ಗಾಯಕರೂ ತಮ್ಮೊಂದಿಗೆ ಭಕ್ತಿ ಸಂಗೀತದ ವೇದಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರಕರಾದರು. ದಕ್ಷಿಣ ಭಾರತದ ಎಲ್ಲ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿಯೂ ಸಂಗೀತ ಕಚೇರಿಗಳನ್ನು ನೀಡುತ್ತಾ ಬಂದರು.
ಪಾಪನಾಶಂ ಶಿವನ್ ನೂರಾರು ಜನಪ್ರಿಯ ಭಕ್ತಿರಚನೆಗಳನ್ನು ಮಾಡಿದ್ದಾರೆ. ಅವರ ಚಲನಚಿತ್ರ ಸಂಗೀತಗಳಲ್ಲಿ ಸೀತಾ ಕಲ್ಯಾಣಂ, ಪವಲಕ್ಕೋಡಿ, ನವೀನ ಸಾದರಂ, ನವೀನ ಸಾರಂಗಧರ, ಕುಚೇಲ, ಚಿಂತಾಮಣಿ, ಸೇವಾಸದನಂ, ಯಯಾತಿ, ಮಾತೃಭೂಮಿ, ಶಿವಕಾವಿ, ಹರಿದಾಸ, ಪಂಕಜವಲ್ಲಿ, ಕನ್ನಿಕಾ, ಬಿಲ್ಹಣ, ನಾಟ್ಯರಾಣಿ, ಅಂಬಿಕಾಪತಿ ಮುಂತಾದವು ಸೇರಿವೆ.
ಪಾಪನಾಶಂ ಶಿವನ್ 1962ರಲ್ಲಿ ರಾಷ್ಟ್ರಪತಿಗಳ ಪ್ರಶಸ್ತಿ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಸಂದಿತು. 1969ರಲ್ಲಿ 'ದಿ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ, ಚೆನ್ನೈ' ಸಮುದಾಯದಿಂದ ಸಂಗೀತ ಕಲಾಶಿಖಾಮಣಿ ಗೌರವ ಸಂದಿತು. 1971 ರಲ್ಲಿ 'ಸಂಗೀತ ಕಲಾನಿಧಿ' ಗೌರವ ಸಂದಿತು.
ಪ್ರಸಿದ್ಧ ಸೋದರಿ-ಸೋದರಾದ ಡಿ ಕೆ ಪಟ್ಟಮ್ಮಾಳ್ ಮತ್ತು ಡಿ ಕೆ ಜಯರಾಮನ್ ಪಾಪನಾಶಂ ಶಿವನ್ ಅವರ ಶಿಷ್ಯತ್ವ ಭಾಗ್ಯ ಪಡೆದಿದ್ದರು. ಶಿವನ್ ಅವರು ಪಟ್ಟಮ್ಮಾಳ್ ಅವರಿಗೆ ತಮ್ಮ ಅನೇಕ ಕೃತಿಗಳನ್ನು ಕಲಿಸಿದ್ದರು. ಪಟ್ಟಮ್ಮಾಳ್ ಅವರು ಅನೇಕ ಚಲನಚಿತ್ರಗಳಲ್ಲಿ ಶಿವನ್ ಅವರ ಸಂಯೋಜನೆಗಳನ್ನು ಹಾಡಿದ್ದಾರೆ.
ಪಾಪನಾಶಂ ಶಿವನ್ 1934ರಲ್ಲಿ ಭಜನಸಂಗೀತ ಸಂಪ್ರದಾಯವನ್ನು ಆರಂಭಿಸಿದರು. ಅವರ ಮರಣದ ನಂತರ, ಅವರ ಪುತ್ರಿ ರುಕ್ಮಿಣಿ ರಮಣಿ ಈ ಸಂಪ್ರದಾಯವನ್ನು ಮುಂದುವರಿಸಿದರು.
ಪಾಪನಾಶಂ ಶಿವನ್ 1973ರ ಅಕ್ಟೋಬರ್ 1ರಂದು ನಿಧನರಾದರು.
On the birth anniversary of great musician Papanasam Sivan 🌷🙏🌷
ಕಾಮೆಂಟ್‌ಗಳು