ಶಿಕ್ಷಕರು ಮತ್ತು ಕಲಿತವರು
ಶಿಕ್ಷಕರು ಮತ್ತು ಕಲಿತವರು
'ಶಿಕ್ಷಕರು ಮತ್ತು ಶಿಕ್ಷೆ' ಇದೇಕೆ ಹತ್ತಿರವಿದೆಯೋ ಗೊತ್ತಿಲ್ಲ. ಅನೇಕ ಸಾಧಕರ ಬಗ್ಗೆ ಓದುವಾಗ ಅವರು ಕಠಿಣ ಶಿಕ್ಷಣ ಪದ್ಧತಿಯಲ್ಲಿ ಮಿಂದೆದ್ದು ಸಾಧನೆ ಮಾಡಿದವರು ಎಂದು ಓದುತ್ತೇವೆ. ಶಿಕ್ಷಣದಲ್ಲಿ ಒಂದು ರೀತಿಯ ಶಿಸ್ತು ದೊಡ್ಡ ಸಾಧನೆಗೆ ಕಾರಣವಾಗುತ್ತದೆ. ಆದರೆ ಸಾಧನೆಯೇ ಮುಖ್ಯವೇ?
ಒಂದು ದೇಶ ಕಠಿಣ ಶಿಕ್ಷಾತ್ಮಕ ಸಾಧನೆಗಳಿಂದ ಒಲಿಂಪಿಕ್ ಕ್ರೀಡೆಗಳಲ್ಲಿ ಹೆಚ್ಚು ಪದಕ ಗಳಿಸಿದ್ದೇ ದೊಡ್ಡ ಸಾಧನೆಯೇ? ಸಂಗೀತದಲ್ಲೋ, ಕಲೆಯಲ್ಲೋ ಕಠಿಣ ರೀತಿಯಲ್ಲಿ ಸಾಧನೆ ಮಾಡಿದ ಮಹನೀಯರ ಪ್ರತಿಭಾ ಪ್ರದರ್ಶನ ಎಷ್ಟೇ ಹೆಸರು ಮಾಡಿದ್ದರೂ, ಅವರ ನಡೆ, ನಿಷ್ಠುರ ಗುಣ, ಅವಿಧೇಯತೆ, ಸಿಡುಕುತನ ಮುಂತಾದವು ಅವರಲ್ಲಿ ಅವರ ಪ್ರತಿಭೆಗೆ ಮೀರಿದ ಮಾನಸಿಕ ಅನಾರೋಗ್ಯ ಲಕ್ಷಣಗಳನ್ನು ಕಾಣಿಸಿಕೊಟ್ಟಿದೆ.
ಯಾರು ಹೆಚ್ಚು ನಯ, ವಿನಯ, ಸುಸಂಸ್ಕೃತ ನಡವಳಿಕೆಗಳನ್ನು ಬಿಂಬಿಸಿದ್ದಾರೋ ಅವರು ತಮ್ಮ ಪ್ರತಿಭೆಗೆ ಒಂದು ವಿಶಿಷ್ಟ ಸ್ವಾಭಾವಿಕ ಎನಿಸುವಂತಹ ಸರಳ-ಸುಂದರ-ಸಹಜ ಆಭರಣದಂತಹ ಮೆರುಗನ್ನು ತೊಟ್ಟುಕೊಂಡು ಅಪಾರ ಜನಪ್ರೀತಿ ಗಳಿಸಿಕೊಂಡಿರುವುದು ಸುಳ್ಳಲ್ಲ.
ಬಾಲ್ಯದಿಂದ ಅಂತರಂಗ ವಿಹಾರಿಯಾಗಿದ್ದ ರವೀಂದ್ರನಾಥ ಠಾಕೂರರಿಗೆ ವ್ಯವಸ್ಥಿತ ಕಲಿಕೆಯಲ್ಲಿ ಹೊಂದಿಕೊಳ್ಳುವುದು ತುಂಬಾ ಕಷ್ಟವಿತ್ತು. ಹಲವು ಪ್ರಯತ್ನಗಳ ನಂತರ ಅವರನ್ನು ಒಂದು ಶಾಲೆಗೆ ಕಳುಹಿಸಲಾಯಿತು. ಅಲ್ಲಿನ ಒಂದು ಅನುಭವವನ್ನು ಅವರು ಸುಂದರವಾಗಿ ಕಟ್ಟಿಕೊಡುತ್ತಾರೆ. “ಒಮ್ಮೆ ನನಗೆ ಶಾಲೆಯಲ್ಲಿ ಬರೆಯಲು ಕೈಯೇ ಓಡಲಿಲ್ಲ. ಒಬ್ಬ ಅಧ್ಯಾಪಕರು ಆತ್ಮೀಯತೆಯಿಂದ ಬಳಿಬಂದು “ಮಗು ರವೀಂದ್ರ, ನೀನು ಆರೋಗ್ಯವಷ್ಟೇ?” ಎಂದರು. “ಅದು ಅತೀ ಸಾಮಾನ್ಯ ಪ್ರಶ್ನೆಯೇನೋ ಹೌದು. ಆದರೆ ಅದರ ಹಿಂದಿದ್ದ ಆಳವಾದ ಅನುಭೂತಿ ನನ್ನ ಮನದಲ್ಲಿ ಇಂದೂ ಚಿರಸ್ಥಾಯಿಯಾಗಿದೆ”. ಇದು ರವೀಂದ್ರರ ಕುರಿತ ನನ್ನ ಓದಿನಲ್ಲಿ ಅತ್ಯಂತ ಮನಸ್ಸಿನಲ್ಲಿ ಉಳಿದಿರುವ ಘಟನೆ.
ನನಗೆ ಪುಟ್ಟ ವಯಸ್ಸಿನಲ್ಲಿ ಹಾಸನದಲ್ಲಿದ್ದಾಗ ಓದು ಒಳಗೆ ಇಳಿಯುತ್ತಿರಲಿಲ್ಲ. ನನ್ನ ಕಾಲಿನಲ್ಲಿ ವಿಷುಬು ರಣಗಳಿದ್ದಾಗ್ಯೂ ಅದಕ್ಕೆ ಬಟ್ಟೆ ಸುತ್ತಿ ಒಂದು ಪೈಜಾಮಾ ಅಂತಹ ಬಟ್ಟೆ ಹಾಕಿ ಶಾಲೆಗೆ ಸೇರಿಸಿದ್ದರು. ಅಲ್ಲಿದ್ದ ನನ್ನ ಕ್ಲಾಸ್ ಟೀಚರ್ ಒಬ್ಬರಿಗಂತೂ ನನ್ನ ಮೊದ್ದುತನ, ಅನಾರೋಗ್ಯ, ಅಶುಚಿತ್ವಗಳ ಬಗ್ಗೆ ಕಹಿ ಭಾವ ಇತ್ತು. (ಬಹುಶಃ ನಾನೇ ಅವರ ಸ್ಥಾನದಲ್ಲಿದ್ದರೂ ನನ್ನ ವರ್ತನೆ ಅವರದಂತಿದ್ದರೆ ಅಚ್ಚರಿ ಇಲ್ಲ.) ಆದರೆ ಅಲ್ಲೊಬ್ಬರು ಗಮಕದ ಜಯಮ್ಮ ಎಂಬ ಟೀಚರ್ ಇದ್ದರು. ಅವರು ನಮ್ಮ ಕುಟುಂಬಕ್ಕೆ ಆಪ್ತರು ಎಂದು ನಮ್ಮ ತಂದೆ ನನಗೂ ಒಂದಷ್ಟು ಏನಾದರೂ ಮನೆಯಲ್ಲಿ ಹೇಳಿಕೊಡಿ ಎಂದಿದ್ದರು. ನಾನು ಅವರ ಮನೆಗೆ ಹೋದಾಗಲೆಲ್ಲ ಅವರ ಪುಟ್ಟ ಮನೆಯಲ್ಲಿ ಅವರ ಕೆಲಸ ಎಷ್ಟೇ ಇದ್ದರೂ ಕಂದಾ ಬಂದ್ಯಾ ಕೂತ್ಕೋ ಎಂದು ಒಂದಷ್ಟು ಅಕ್ಕರೆ ತೋರಿ, ಅದೂ ಇದು ಸ್ಲೇಟಲ್ಲಿ ತಿದ್ದಿಸಿ, ಸಮಯವಾದ ನಂತರ ಹೋಗ್ಬರ್ತೀಯಾ ಮಗು ಎಂದು ಕಳಿಸಿಕೊಡುತ್ತಿದ್ದರು.
ನಾನು ಮೈಸೂರು ಲಕ್ಷ್ಮೀಪುರಂ ಮಿಡಲ್ ಸ್ಕೂಲ್ ಓದುವಾಗ ಒಬ್ಬ ಮೇಷ್ಟರಿದ್ದರು. ಒಮ್ಮೆ ನನಗೆ ಕೆಲವು ದಿನ ಅನಾರೋಗ್ಯ ಇದ್ದು ಇನ್ನೂ ಅದೇ ಗುಂಗಿನಲ್ಲಿ ಶಾಲೆಗೆ ಹೋಗಿದ್ದೆ. ಅಂದಿನ ದಿನದಲ್ಲಿ ನನಗೆ ಹುಷಾರಿಲ್ಲದಿದ್ದಾಗ ಮನೆಯಲ್ಲಿ ಹಿರಿಯರು ತೋರುತ್ತಿದ್ದ ಅಕ್ಕರೆ ಅತ್ಯಂತ ಅಕ್ಕರೆಯದಿದ್ದು, ಅಂತದ್ದೇ ಅಕ್ಕರೆ ಲೋಕದಲ್ಲಿ ಸಿಗುತ್ತದೇನೋ ಎಂಬ ಭಾವದಲ್ಲಿ ಶಾಲೆಗೆ ಬಂದ ನನಗೆ, ಈ ಮೇಷ್ಟರು ಅನಗತ್ಯವಾಗಿ ಏಟುಕೊಟ್ಟು ನಡೆದುಕೊಂಡ ಗಾಯದ ಭಾವ ನನ್ನಲ್ಲಿ ಇಂದೂ ಮಾಸಿಲ್ಲ.
ಆ ವ್ಯಕ್ತಿ ನನಗೆ ಇನ್ನೊಂದು ರೀತಿ ಕೂಡಾ ನೆನಪು. ಅಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ತಮ್ಮ ಪಾಠ ಪ್ರದರ್ಶನ ತೋರಲು ಬರುತ್ತಿದ್ದ ಟೀಚರ್ಸ್ ಟ್ರೈನಿಂಗ್ ಅಭ್ಯರ್ಥಿಗಳು ತಮ್ಮ ಪಾಠದ ನಂತರ ಮಕ್ಕಳಾದ ನಮಗೆಲ್ಲ ಮೂರು ಗ್ಲೂಕೋಸ್ ಬಿಸ್ಕತ್ ನೀಡುವ ವಾಡಿಕೆ ಇತ್ತು. ಆ ಪಾಠದ ಅವಧಿ ಮುಗಿಯುವುದೇ ಕಾಯುತ್ತಿದ್ದ ಈ ಅಯೋಗ್ಯ ಮೇಷ್ಠರು ನಮ್ಮನ್ನು ಸರದಿಯಲ್ಲಿ ನಿಲ್ಲಿಸಿ ಎರಡು ಬಿಸ್ಕತ್ ಕಸಿದು ತನ್ನ ಜೇಬಿಗೆ ಹಾಕಿಕೊಳ್ಳುತ್ತಿದ್ದ. ಒಮ್ಮೆ ಬಿಸ್ಕತ್ ಹಂಚುವ ಸಮಯ ನನಗೆ ಎರಡೇ ಬಿಸ್ಕತ್ ಸಿಕ್ಕಿದ್ದು ಒಂದನ್ನು ಮಾತ್ರಾ ಈ ಮೇಷ್ಟರಿಗೆ ನೀಡಿ ಕಾರಣ ಹೇಳಿದೆ. ಪುಣ್ಯಾತ್ಮ ಅದಕ್ಕೂ ಬಡಿಯುತ್ತಾನೇನೊ ಅನಿಸಿತ್ತು. ಹಾಗೆ ಮಾಡಲಿಲ್ಲ.
ಆರ್. ಕೆ. ಲಕ್ಷ್ಮಣ್ ಮೈಸೂರಿನ ಮಹಾಜನಾಸ್ ಶಾಲೆಯಲ್ಲಿ ಓದುವಾಗ ಲೆಕ್ಕದ ಕ್ಲಾಸಿನಲ್ಲಿ ಕುಳಿತು ಮೇಷ್ಟರ ರೇಖಾ ಚಿತ್ರ ಬಿಡಿಸುತ್ತಿದ್ದರಂತೆ. ಕ್ಲಾಸ್ ಮುಗಿಯುವ ಸಮಯ ಮೆಲ್ಲಗೆ ಅವರ ಬಳಿ ಬಂದ ಮೇಷ್ಟರು ನುಡಿದರಂತೆ "ನೋಡು ಸ್ವಲ್ಪ ಸೊಂಟ ಡೊಂಕಾಗಬೇಕು, ಕನ್ನಡಕ ಕೆಳಗೆ ಇರಬೇಕು, ಮುಖದಲ್ಲಿ ನೆರಿಗೆ ಇನ್ನೊಂದೆರಡಿರಲಿ, ನಾಳೆ ಕ್ಲಾಸಲ್ಲಿ ಪ್ರಾಕ್ಟೀಸ್ ಮುಂದುವರೆಸು!".
ನನಗೆ ಮೈಸೂರಿನ ಶಾರದಾ ವಿಲಾಸ್ ಹೈಸ್ಕೂಲ್ನಲ್ಲಿ ಓದುವಾಗ ಸೋಮಯಾಜಿ ಎಂಬ ಸಂಸ್ಕೃತ ಅಧ್ಯಾಪಕರು ಮತ್ತು ಪ್ರಭಾಕರ್ ಎಂಬ ಲೆಕ್ಕದ ಅಧ್ಯಾಪಕರು ಸದ್ಗುಣಿಗಳಾಗಿ ಮೆಚ್ಚಿನ ಬೋಧಕರಾಗಿ ಇಂದೂ ನೆನಪಲ್ಲಿ ಇದ್ದಾರೆ. ಅದೇ ಸಮಯದಲ್ಲಿ ಚೆನ್ನಾಗಿ ಹೊಡೆದು ಕಲಿಸುತ್ತಿದ್ದ ಕೆಲವು ಅಧ್ಯಾಪಕರು ಕೂಡಾ ಪ್ರಖ್ಯಾತಿಯಲ್ಲಿದ್ದರು. ನನಗೆ ಆ ಕುರಿತು ಸಮ್ಮತವಿಲ್ಲ. ಅಲ್ಲೊಬ್ಬರು ಪಿ.ವಿ ಎಂಬ ಅಧ್ಯಾಪಕರು ಚರಿತ್ರೆಯನ್ನು ಎಷ್ಟು ಅದ್ಭುತವಾಗಿ ಹೇಳುತ್ತಿದ್ದರೆಂದರೆ ಅಂದು ದಡ್ಡತನದಲ್ಲಿ ಪ್ರಸಿದ್ಧನಾಗಿದ್ದ ನಾನು ಕೂಡಾ ಇಂದೂ ಅವರು ಹೇಳಿದ್ದನ್ನೆಲ್ಲ ಸುಸ್ಪಷ್ಟವಾಗಿ ಬರೆಯಬಲ್ಲೆ. ಅಷ್ಟು ಅದ್ಭುತ ಮನ ಮುಟ್ಟುವಂತಹ ಕಥಾಗಾರಿಕೆಯ, ಒಂದಿಷ್ಟೂ ಕ್ಲಾಸಿನಲ್ಲಿ ಓದದೆ ಅವರು ಮಾಡುತ್ತಿದ್ದ ವ್ಯಾಖ್ಯಾನ ವೈಖರಿ. ಅಲ್ಲೊಬ್ಬರು ಹಿಂದೀ ಪಾಠ ಮಾಡುತ್ತಿದ್ದವರು ಮಾತೆದ್ದಿದರೆ ಅಹಂಕಾರದಿಂದ "ಉಣ್ಣೀಶ್‍ಬಿಡ್ತೀನಿ ನಿಮಗೆಲ್ಲ" ಎನ್ನುತ್ತಿದ್ದರು. ಅವರ ವಸ್ತ್ರಭೂಷಣಗಳಲ್ಲಿ ಇದ್ದ ಅಚ್ಚುಕಟ್ಟು ಅವರ ಅಹಂಕಾರಯುಕ್ತ ಕೃತ್ರಿಮ ನಗೆಯಲ್ಲಿ ತನ್ನ ವಿಫಲತೆ ಸಾರುತ್ತಿತ್ತು. ಮುಂದಿನ ವರ್ಷಗಳಲ್ಲಿ ಕಿವಿಗೆ ಬಿದ್ದ ಸುದ್ದಿಯ ಪ್ರಕಾರ ಅವರು ತಮ್ಮ ಸಹೋದ್ಯೋಗಿಗೆ ಚಪ್ಪಲಿಯಲ್ಲಿ ಹೊಡೆದು ಉಚ್ಛಾಟಿತರಾದರು.
ನಾನು ಆರ್ಯ ಸಂಸ್ಕೃತಿ ವಿದ್ಯಾಶಾಲೆಯಲ್ಲಿ ಸಂಸ್ಕೃತ ಪಾಠ ಕಲಿಯಲು ಹೋಗುತ್ತಿದ್ದಾಗಲೂ ಅಲ್ಲಿದ್ದ ಒಬ್ಬರು ಶಿಕ್ಷಕಿ ಜ್ಞಾನಾನಂದಮಯಂ ದೇವಂ ಪ್ರಾರ್ಥನೆ ಹೇಳುತ್ತಿದ್ದ ರೀತಿ, ನಮ್ಮಂತಹ ದಡ್ಡರ ತಲೆಗೂ ಹೋಗುತ್ತಿದ್ದ ರೀತಿ ಪಾಠ ಮಾಡುತ್ತಿದ್ದುದು ಮತ್ತು ಅವರ ಸುಸಂಸ್ಕೃತ ನಡವಳಿಕೆ ಮರೆಯಲಾಗದ್ದು.
ನಾನು ಶಾರದಾ ವಿಲಾಸದಲ್ಲಿ ಪಿಯುಸಿ ಕಾಲೇಜು ಓದುವಾಗ ನನಗೆ ಆಪ್ತರಾಗಿ ಪಾಠ ಮಾಡಿದ್ದವರಲ್ಲಿ ತ್ರಿವೇಣಿ ಅವರ ಪತಿ ಶಂಕರ್, ಎಂಕೆಜಿ, ಗಾಂಧೀವಾದಿ ಪ್ರಾಣೇಶರಾವ್ ಎಂಬಂತಹ ಅಧ್ಯಾಪಕರು ಮೋಡಿ ಮಾಡಿದ್ದರು. ಹಿರಿಯ ಸದ್ಗುಣಿ ಸಾಹಿತಿ ಎಚ್. ಎಂ. ಶಂಕರನಾರಾಯಣರಾವ್ ಪ್ರಿನ್ಸಿಪಾಲರಾಗಿದ್ದರು. ಬನುಮಯ್ಯಾದಲ್ಲಿ ಓದುವಾಗ ನರಹರಿ, ಸಿದ್ದೇಶ್ವರ ಗೌಡ, ಪಾಂಡುರಂಗ ಭಟ್ ಮುಂತಾದವರು ಮನ ಸೆಳೆದಿದ್ದರು. ಸಿದ್ದೇಶ್ವರ ಗೌಡ ಅವರು ನಮ್ಮ ಕ್ಲಾಸಿಗೆ ಅಧ್ಯಾಪಕರಾಗದಿದ್ದರೂ ಅವರ ಕ್ಲಾಸಿಗೆ ಹೋಗಿ ಕೂರುತ್ತಿದ್ದೆವು. ಅವರ ಕ್ಲಾಸಿನಲ್ಲಿ ಕೆಲವೊಮ್ಮೆ ಕೂರಲು ಜಾಗವಿಲ್ಲದ ಹೌಸ್‍ಫುಲ್ ಪರಿಸ್ಥಿತಿ ಉದ್ಭವಿಸಿ "ಬೇರೆ ಕ್ಲಾಸಿನವರು ದಯಮಾಡಿ ಹೊರಹೋಗಿ" ಎಂದು ಪ್ರಾರ್ಥಿಸುತ್ತಿದ್ದರು. ಆದರೆ ದುರದೃಷ್ಟವಶಾತ್ ಬಹುತೇಕ ಕಾಲೇಜು ಅಧ್ಯಾಪಕರಿಗೆ ಪಾಠ ಮಾಡುವಲ್ಲಿ ಶ್ರದ್ಧೆ ಇರಲಿಲ್ಲ. ವಿದ್ಯಾರ್ಥಿಗಳಿಗೆ ನಡೆಯಾಗಿ ತೋರುವ ಸುಸಂಸ್ಕೃತಿ ಒಂದಿನಿತೂ ಅವರಲ್ಲಿ ಇರಲಿಲ್ಲ.
ನಾನು ಪಿಯುಸಿ ಓದುವಾಗ ನನಗೇನೂ ಅರ್ಥ ಆಗುತ್ತಿರಲಿಲ್ಲ. ಮೊದಲೇ ದಡ್ಡ. ಅನಿವಾರ್ಯವಾಗಿ ಕನ್ನಡ ಮೀಡಿಯಂ ಇಂದ ಇಂಗ್ಲಿಷ್ ಮೀಡಿಯಂಗೆ ಬಂದದ್ದು ಬಾಣಲೆಯಿಂದ ಒಲೆಗೆ ಬಿದ್ದ ಹಾಗಿತ್ತು. ಮೊದಲ ವರ್ಷ ಪಿಯಸಿಯಲ್ಲಿ ಅಕೌಂಟ್ಸ್ ವಿಷಯದಲ್ಲಿ ನಪಾಸಾದೆ. ನನ್ನ ಬಂಧು ಮತ್ತು ಆತ್ಮೀಯ ಗೆಳೆಯ ಕೃಷ್ಣದೇಶಿಕ ಬುದ್ಧಿವಂತ. ನಮ್ಮಮ್ಮನ ಕೋರಿಕೆಯ ಮೇರೆಗೆ ನನಗೆ ಕೆಲವು ತಿಂಗಳು ಪಾಠ ಹೇಳಿದರು. ಅವರು ಕಲಿಸಿದ ರೀತಿ ಎಷ್ಟು ಸರಳವಾಗಿ ಮತ್ತು ಹೇಗೆ ಆಪ್ತವಾಗಿತ್ತು ಎಂದರೆ "ನೋಡು, ಅಕೌಂಟ್ ಅಂದರೆ, 'T’ shapeನಲ್ಲಿರೋ formatನಲ್ಲಿ business transactionಗಳನ್ನು ಬರೆದಿಡೋದು. ಎಡಗಡೆ ಡೆಬಿಟ್ಟು, ಬಲಗಡೆ ಕ್ರೆಡಿಟ್ಟು. For every debit there is a corresponding credit”. ನಾನು ಸಪ್ಲಿಮೆಂಟಿರಿಯಲ್ಲಿ ಉತ್ತಮ ಅಂಕಗಳಿಂದ ಪಾಸಾಗಿದ್ದೆ. ಇಂದು ಕೂಡಾ ನನಗೆ ಅಕೌಂಟೆನ್ಸಿಯಲ್ಲಿ ಆಳವಾದ ಸುದೃಢ ಅಡಿಪಾಯ ಇದೆ. ಇದಕ್ಕೆ ಕಾರಣ ಕೃಷ್ಣದೇಶಿಕ ಅವರ ಅಂದಿನ ಆ ಪಾಠ.
ಕಳೆದ ಶತಮಾನದಲ್ಲಿ ಎಷ್ಟು ಶ್ರೇಷ್ಠ ಶಿಕ್ಷಕರಿದ್ದರು. ಬಿಎಂಶ್ರಿ, ಟಿ. ಎಸ್. ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರಿ, ತ. ಸು. ಶಾಮರಾಯ ಹೀಗೆ ಪ್ರಾರಂಭಗೊಂಡ ಹಾಗೆ ಅನೇಕರ ಹೆಸರು ಹೇಳಬಹುದು. ಅವರೆಲ್ಲ ತಮ್ಮ ವಿದ್ಯಾರ್ಥಿಗಳನ್ನು ಮಗು ಅಂತ ಕರೀತಿದ್ರಂತೆ. ಮಕ್ಕಳು ಶಾಲೆಗೆ ಬರದಿದ್ರೆ ಅವರ ಮನೆಗೇ ಹೋಗ್ತಿದ್ರಂತೆ. 'ಮರೆಯಲಾದೀತೆ' ಕೃತಿಯಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ಹುಸೇನ್ ಸಾಬಿ ಎಂಬ ಶಾಲಾ ಶಿಕ್ಷಕನೊಬ್ಬ "ಒಬ್ಬ ಹುಡುಗನಿಗೆ ಸರಿಯಾಗಿ ಅರ್ಥ ಆಗುತ್ತಿಲ್ಲ , ಅದಕ್ಕೆ ಅವನ ಮನೆಗೇ ಹೇಳಿಕೊಡಲು ಹೋಗುತ್ತಿದ್ದೇನೆ" ಎಂದು ಹೇಳುವ ಸನ್ನಿವೇಶವಿದೆ. ಅಸಂಖ್ಯಾತರು ತಮ್ಮ ತನು ಮನ ಧನಗಳನ್ನು ಕೊಟ್ಟು ಮಕ್ಕಳ ಮೇಲಿನ ಪ್ರೀತಿಯಿಂದ ಶಾಲೆ ಕಟ್ಟಲು ತೊಡಗಿದ ಘಟನೆಗಳಿವೆ. ಎಚ್. ನರಸಿಂಹಯ್ಯ ಅವರಂತಹವರು ಜೀವನ ಪರ್ಯಂತ ವಿದ್ಯಾರ್ಥಿಗಳೊಡನೆ ಬದುಕಿದ್ದನ್ನು ನೋಡಿದ್ದೇವೆ.
ವಿದ್ಯಾ ಸಂಸ್ಥೆಗಳು ಶಿಕ್ಷಕರು ಅಂದರೆ ಬುದ್ಧಿವಂತರನ್ನು ಸೃಷ್ಟಿ ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಪದವೀಧರರನ್ನು ಮತ್ತು 'ಪಿಎಚ್.ಡಿ'ಗಳನ್ನು ನಿರ್ಮಿಸುವುದೆ?
ಸಾಮಾನ್ಯವಾಗಿ ನಾವು ಏನನ್ನಾದರೂ ಹೇಳುವಾಗ ಕಾಲ ಕೆಟ್ಟುಹೋಗಿದೆ ಎನ್ನುವುದುಂಟು. ನಮ್ಮಮ್ಮ ಓದಿದ್ದು ಮಿಡ್ಲ್ ಸ್ಕೂಲ್ವರೆಗೆ 1940ರ ಮುಂಚೆ. ಆಗಿನ ದಿನದಲ್ಲೇ ಅಯೋಗ್ಯ ಶಿಕ್ಷಕ ಪಾಠ ಹೇಳು ಅಂತ ಹೇಳಿ ಪಾಠ ಒಪ್ಪಿಸುವಾಗ ಬೇಕೂ ಅಂತಾ ಕಾಲು ತುಳೀತಾ ಇದ್ನಂತೆ. ಅಯೋಗ್ಯತನ ಸಾರ್ವಕಾಲಿಕ. ಒಳ್ಳೆಯತನವೂ ಅಷ್ಟೇ, ಕಡಿಮೆಯೇ ಇದ್ದರೂ ಅದೂ ಸಾರ್ವಕಾಲಿಕ.
ಬದುಕಲು ಕಲಿಯಲು ಪ್ರೇರೇಪಿಸುವವರೇ ನಿಜ ಶಿಕ್ಷಕರು. ರ್‍ಯಾಂಡಿ ಪಾಶ್ಚ್ ತಮ್ಮ ಪ್ರಸಿದ್ಧ "The Last Lecture” ಪುಸ್ತಕದಲ್ಲಿ "ವಿದ್ಯಾರ್ಥಿಗಳಲ್ಲಿ ಹೇಗೆ ಕನಸು ಕಾಣುವುದು ಎಂಬುದನ್ನು ಕಲಿಸುವುದು ಮುಖ್ಯ; ವಿದ್ಯಾರ್ಥಿಗಳಿಗೆ ಹೇಗೆ ಉತ್ತಮ ಧ್ಯೇಯಗಳಲ್ಲಿ ಸೋಲುವುದಕ್ಕೆ ಹೆದರಬಾರದು ಎಂಬುದನ್ನು ಕಲಿಸುವುದು ಮುಖ್ಯ; ಡೇಟಿಂಗಲ್ಲಿ ಹೇಗೆ ಇರಬೇಕು ಎಂದು ಕಲಿಸುವುದೂ ಮುಖ್ಯ... " ಮುಂತಾಗಿ ಹಲವು ವಿಷಯ ಹೇಳುತ್ತಾರೆ. ನಮ್ಮ ಎಚ್. ನರಸಿಂಹಯ್ಯ ಹೇಳುತ್ತಾರೆ "ಹೇಗೆ supervision ಇಲ್ಲದೆ ಕೆಲಸ ನಿರ್ವಹಿಸಬೇಕು ಎಂಬುದನ್ನು ಇತರ ದೇಶದವರಿಂದ ನಾವು ಕಲಿಯಬೇಕು" ಎಂದು. ಇದನ್ನು ಶಿಕ್ಷೆಯ ಶಿಕ್ಷಣ ಕಲಿಸಲಾರದು.
"ನೀನು ನನಗೆ ಆಪ್ತ ಎಂಬ ಭಾವ" ಮುಖ್ಯ. ಅದನ್ನು ಕೊಡದ ಶಿಕ್ಷಣ ಕೇವಲ ವಿದ್ಯಾಸಂಸ್ಥೆಗಳನ್ನು ಕಟ್ಟಬಲ್ಲದು, ಕುಲಪತಿಗಳನ್ನು, ಪ್ರೊಫೆಸರ್ ಹುದ್ದೆಗಳನ್ನು, ಮಠಗಳನ್ನು ಪಿಎಚ್.ಡಿಗಳನ್ನು, ಪದವಿಗಳನ್ನು, ವ್ಯಸನಿಗಳನ್ನು, ದುರಹಂಕಾರಿಗಳನ್ನು, ಅತೃಪ್ತ ಜೀವಿಗಳನ್ನು, ಅಯೋಗ್ಯರನ್ನು, depressed ಜನಾಂಗವನ್ನು ಮಾತ್ರವೇ ಹುಟ್ಟಿಸಬಲ್ಲದು.
ಇಲ್ಲಿಂದ ಬಂದವರೆಲ್ಲ ಕಲಿತವರಲ್ಲ!
ಶಾಲೆಯ ಮೆಟ್ಟಿಲೇ ಹತ್ತದ ಅನೇಕಾನೇಕ ದಾರಿದೀಪಗಳು ನಮ್ಮಬದುಕಲ್ಲಿ ಅಂದೂ ಇಂದೂ ಯತೇಚ್ಛವಾಗಿದ್ದಾರೆ. ಸುವಿದ್ಯಾಶಾಲೆಗಳು ಖಂಡಿತ ಬೇಕು. ಒಳ್ಳೆಯ ಸಮಾಜ ಮಾತ್ರವೇ ಒಳ್ಳೆಯ ಸಮಾಜ ನಿರ್ಮಾಣ ಮಾಡಬಲ್ಲವು. ನಮಗೆ ಮಾತ್ರ ಒಳ್ಳೆಯದು ಬೇಕು ಎಂಬ ಸ್ವಾರ್ಥವಲ್ಲ.
ವಿ.ಸೂ: ಇಲ್ಲಿರುವ ಚಿತ್ರಗಳು ಸಾಂಕೇತಿಕವಾದದ್ದು. ಖಂಡಿತ ಸಮಗ್ರವಲ್ಲ
Teachers and the learnt
ಕಾಮೆಂಟ್‌ಗಳು