ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೇಣುಕಾ ರಮಾನಂದ


 ರೇಣುಕಾ ರಮಾನಂದ

ರೇಣುಕಾ ರಮಾನಂದ ಹೆಸರಾಂತ ಕವಯತ್ರಿ.

ರೇಣುಕಾ ರಮಾನಂದ ಅವರ ಜನ್ಮದಿನ ಸೆಪ್ಟೆಂಬರ್ 19.  ಇವರು ಉತ್ತರಕನ್ನಡ ಜಿಲ್ಲೆಯ ಅಂಕೋಲದ ಶೆಟಗೇರಿಯವರು. ತಂದೆ ಹೊನ್ನಪ್ಪ. ತಾಯಿ ಮಾಣು. ಪತಿ ರಮಾನಂದ, ಮಕ್ಕಳು ಪ್ರಾರ್ಥನಾ ಮತ್ತು ತ್ರಿಭುವನ. ವೃತ್ತಿಯಲ್ಲಿ ಶಿಕ್ಷಕಿಯಾದ ಇವರು ಎಂ. ಎ. ಪದವೀಧರೆ. 

ಕಥೆ, ಕವಿತೆ, ಅಂಕಣಗಳಲ್ಲಿ ಉತ್ತರಕನ್ನಡದ ಕರಾವಳಿಯ ಪ್ರಾದೇಶಿಕತೆಯ ಕುರುಹನ್ನು ಕಾಣಿಸುವುದು ರೇಣುಕಾರ ಬರಹದ ವೈಶಿಷ್ಟ್ಯ.

2017ರಲ್ಲಿ ಪಲ್ಲವ ಪ್ರಕಾಶನ ಹೊಸಪೇಟೆ ಇವರು ಪ್ರಕಟಿಸಿದ 'ಮೀನುಪೇಟೆಯ ತಿರುವು' ರೇಣುಕಾ ರಮಾನಂದರ ಮೊದಲ ಕವಿತಾ ಸಂಕಲನ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಮುಂಬೈನ ಶ್ರೀಮತಿ ಸುಶೀಲಾ ಶೆಟ್ಟಿ ಕಾವ್ಯ ಹಸ್ತಪ್ರತಿ ಪ್ರಶಸ್ತಿ, ಗುಲ್ಬರ್ಗಾ ಸೇಡಂನ ಮಾತೋಶ್ರೀ 'ಅಮ್ಮ' ಪ್ರಶಸ್ತಿ, ಹಾಸನದ ಮಾಣಿಕ್ಯ ಪ್ರಕಾಶನದ ಕಾವ್ಯಮಾಣಿಕ್ಯ ರಾಜ್ಯಪ್ರಶಸ್ತಿ, ಹರಿಹರದ ಸಾಹಿತ್ಯ ಸಂಗಮದ  ಹರಿಹರಶ್ರೀ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೆ ವಿ ರತ್ನಮ್ಮ ದತ್ತಿ ಪ್ರಶಸ್ತಿಗಳು ಸಂದಿವೆ.

ರೇಣುಕಾ ರಮಾನಂದ ಅವರಿಗೆ ಮೇಲ್ಕಂಡ ಪ್ರಶಸ್ತಿಗಳೇ ಅಲ್ಲದೆ 2017ರ ಮೈಸೂರು ಅಸೋಸಿಯೇಷನ್ ಮುಂಬೈ ನೇಸರು ಜಾಗತಿಕ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2016ರ ಜೀವನ್ ‌ಪ್ರಕಾಶನ ಚಿಕ್ಕಬಳ್ಳಾಪುರ ಏರ್ಪಡಿಸಿದ ಯುಗಾದಿ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದಿಂದ ಎರಡು ಬಾರಿ 2014 ಮತ್ತು 2015ನೇ ಸಾಲಿನಲ್ಲಿ ಗುಡಿಬಂಡೆ ಪೂರ್ಣಿಮಾ ರಾಜ್ಯ ಉದಯೋನ್ಮುಖ ಕವಯತ್ರಿ ದತ್ತಿನಿಧಿ ಪ್ರಶಸ್ತಿ, 2014ರ ಸಂಕ್ರಮಣ ಕಾವ್ಯ ಬಹುಮಾನ, ತುಷಾರ ಮಾಸಪತ್ರಿಕೆಯ 2019 ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾಸ್ಪರ್ಧೆ ಬಹುಮಾನ, ಮುಂಬೈ ಗೋಕುಲವಾಣಿ ಪತ್ರಿಕೆ ಏರ್ಪಡಿಸಿದ 2020ರ ಕಥಾಸ್ಪರ್ಧೆಯ ದ್ವಿತೀಯ ಬಹುಮಾನ, ಕರಾವಳಿ ಮುಂಜಾವು ದೀಪಾವಳಿ ವಿಶೇಷಾಂಕ ಕಥಾಸ್ಪರ್ಧೆಯ ಮೊದಲ ಬಹುಮಾನ, ಗುಲ್ಬರ್ಗಾ ವಿಶ್ವ ವಿದ್ಯಾಲಯದ ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ 2021ರ ಕಥಾಸ್ಪರ್ಧೆಯ ದ್ವಿತೀಯ ಬಹುಮಾನದ ಜೊತೆಗೆ ಬೆಳ್ಳಿಪದಕ ಸಹಾ ಸಂದಿವೆ.  ಕವಿತೆಗಾಗಿಯೇ ಇರುವ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ರೇಣುಕಾ ಅವರ ಕವಿತೆ ಕೂಡ ದಾಖಲಾಗಿದೆ. ಇವರ ಲೇಖನ ಹಾಗೂ ಕವಿತೆಗಳು ಬೆಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪಠ್ಯವಾಗಿವೆ. ಕವಿತೆಗಳು ಇಂಗ್ಲಿಷ್ ಮರಾಠಿ ತೆಲಗು ತಮಿಳು ಕೊಂಕಣಿಗೆ ಅನುವಾದಿಸಲ್ಪಟ್ಟಿವೆ.

ಚಂದನವಾಹಿನಿ, ರಂಗಶಂಕರ ಹಾಗೂ ಎಫ್ ಎಮ್ ರೇನ್ಬೋ ಬೆಂಗಳೂರು ಇಲ್ಲಿ ಕವಿತೆ ವಾಚಿಸಿರುವ ರೇಣುಕಾರು ಅಲಪುಝಾ ಜಿಲ್ಲೆಯ ಚೆಂಗನ್ನೂರಿನ ಶಿವೇ ಪಂಪಾ ಫೆಸ್ಟಿವಲ್‌ನಲ್ಲಿ ಆಹ್ವಾನಿಯ ಕವಿಯಾಗಿ ಕೂಡ ಭಾಗವಹಿಸಿದ್ದಾರೆ.

ರೇಣುಕಾ ರಮಾನಂದರ ಎರಡನೇ ಕವನಸಂಕಲನ 'ಸಂಬಾರಬಟ್ಟಲ ಕೊಡಿಸು' ಇದು 2021ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಹಾಗೂ ಬಳ್ಳಾರಿಯ ಸಂಗಂ ರಾಷ್ಟ್ರೀಯ ಪುರಸ್ಕಾರ ಪಡೆದಿದೆ.

ರೇಣುಕಾ ರಮಾನಂದ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


Happy birthday Renuka Ramanand 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ