ಸುನೀತಾ ವಿಲಿಯಮ್ಸ್
ಸುನೀತಾ ವಿಲಿಯಮ್ಸ್
'ಹ್ಯಾಪಿ ಬರ್ತ್ಡೇ, ಸುನೀತಕ್ಕ". ನಿಮ್ಮ ಹುಟ್ಟಿದ ದಿನ ಸೆಪ್ಟೆಂಬರ್ 19, 1965 ಅಂತ ಗೊತ್ತಾಯ್ತು. ನಿಜ, ನಿಮಗೆ ನಾವು ಯಾರು ಅಂತ ಗೊತ್ತಿರಲಿಕ್ಕಿಲ್ಲ. ಆದರೆ ಭಾರತೀಯತೆ ನಿಮ್ಮ ಹೃದಯದಲ್ಲಿ ಸಂವೇದಿಸುತ್ತಿರುವುದರಿಂದ, ನಿಮಗೆ ಭಾರತೀಯರಾದ ನಮ್ಮೆಲ್ಲರಲ್ಲಿ ಪ್ರೀತಿ ತುಂಬಿಹರಿಯುತ್ತಿದೆ ಎಂದು ನಮ್ಮ ಹೃದಯಗಳು ಅರಿತಿವೆ.
ವಿಜ್ಞಾನಿಗಳು ಅಂದರೆ, ಅದರಲ್ಲೂ ನಾಸಾ, ಇಸ್ರೋದಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವವರೆಂದರೆ ನಮಗೆ ಎಲ್ಲಿಲ್ಲದ ಗೌರವ. ನಮ್ಮ ವಿಕ್ರಂ ಸಾರಾಭಾಯಿ, ಸತೀಶ್ ಧವನ್, ಪ್ರೊ. ಯು. ಆರ್. ರಾವ್, ಅಬ್ದುಲ್ ಕಲಾಂ, ಕಲ್ಪನಾ ಚಾವ್ಲಾ ಮುಂತಾದವರ ಹೆಸರು ಕೇಳಿದರೆ ನಮಗೆ ಗೌರವ ಮೂಡುತ್ತೆ. ಕಿರಿಯರಾದರೂ ನಿಮ್ಮ ಬಗ್ಗೆ ನಮಗೆ ಗೌರವ ಮೂಡುತ್ತದೆ ಸುನೀತಾ.
ಪಕ್ಕದೂರಿಗೆ ಹೋಗಿ ಬಂದ್ರೆ ನಮಗೆಲ್ಲಾ ಮೈಕೈ ನೋವು. ಆದರೆ ಬಾಹ್ಯಾಕಾಶದಲ್ಲಿ ಮೊದಲಬಾರಿಗೆ ಹೋದಾಗ 195ದಿನಗಳ ಕಾಲ ಬಹಳಷ್ಟು ವೇಳೆ ಒಬ್ಬಂಟಿಯಾಗಿ ಇದ್ರಿ. ಎರಡನೇ ಬಾರಿ ಹೋಗಿ ಸಹಾ 127 ದಿನ ಇರುವುದರ ಜೊತೆಗೆ ಬಾಹ್ಯಾಕಾಶದಲ್ಲಿ ಒಟ್ಟಾರೆ 50 ಗಂಟೆ 40 ನಿಮಿಷಗಳ ನಡಿಗೆಯನ್ನು ಮಾಡಿದಂತಹ ಸಾಧನೆ ಮಾಡಿದ್ರಿ. 2024ರ ಜೂನ್ 5ರಂದು ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಒಂದ ವಾರದ ಪ್ರಯೋಗಕ್ಕೆಂದು ಹೋದವರು, ನೌಕೆಯಲ್ಲಿರುವ ತಾಂತ್ರಿಕ ದೋಷಗಳ ದೆಸೆಯಿಂದ 2025ರ ಫೆಬ್ರವರಿ ಮಾಸದವರೆಗೆ ತಾವು ಅಲ್ಲೇ ಇರುತ್ತೀರಂತೆ. ತಾವಂತೂ ವೈಜ್ಞಾನಿಕ ಅರಿವಿನ ಹಾದಿಯಲ್ಲಿ ಇದು ತಮಗೆ ಸಂತೋಷದಾಯಕ ಕಲಿಕೆಯ ಸಮಯವಾಗಿದೆ ಎಂದು ನಗೆಬೀರುತ್ತಿದ್ದೀರಿ. ಇಡೀ ವಿಶ್ವ ನಿಮ್ಮ ಮತ್ತು ನಿಮ್ಮ ಸಹಪಯಣಿಗರಾದ ಬ್ಯಾರಿ ವಿಲ್ಮೋರ್ ಅವರ ಸೌಖ್ಯ ಹಿಂದಿರುಗುವಿಕೆಗಾಗಿ ಪ್ರಾರ್ಥಿಸುತ್ತಿದೆ.
ಇಂಥ ಸಾಧನೆ ಮಾಡಿದ ಮಹಿಳೆಯರಲ್ಲಿ ತಾವೊಬ್ಬರೇ. ಒಟ್ಟಾರೆಯಾಗಿ ಸಹಾ ಇಷ್ಟೊಂದು ಸಾಧನೆ ಮಾಡಿದ ಬೆರಳೆಣಿಕೆಯ ಜನರಲ್ಲಿ ನೀವೊಬ್ಬರು. ಅಂತಾರಾಷ್ಟ್ರೀಯ ಅಂತರಿಕ್ಷ ಧಾಮ(ಐಎಸ್‌ಎಸ್)ದ ನಿಯಂತ್ರಣದ ಹೊಣೆಯನ್ನು ಹೊತ್ತಿದ್ದಿರಿ. ಅಲ್ಲಿ ಹೋಟೆಲ್ ಇಲ್ಲ, ಸಿನಿಮಾ ಇಲ್ಲ, ಶಾಪಿಂಗ್ ಇಲ್ಲ. ವಾವ್. ಅದು ಹೇಗೆ ನಿಮಗೆ ಅಲ್ಲಿ ಇರಲಿಕ್ಕೆ ಸಾಧ್ಯವಾಗುತ್ತೆ ಸುನೀತಕ್ಕ! ಅದೂ ಅನಿರ್ದಿಷ್ಟ ಬದುಕಿನ ಸವಾಲಿನ ಜೊತೆಗೆ! ಇದು ನಿಮಗೆ ನಿಮ್ಮ ಕೆಲಸದಲ್ಲಿ ಇರುವ ಶ್ರದ್ಧೆಯನ್ನು ತೋರುತ್ತೆ. ಪ್ರೀತಿಯನ್ನು ತೋರುತ್ತೆ. ಲೋಕದಲ್ಲಿ ಕೋಟ್ಯಾನುಕೋಟಿ ಜನರ ಮಧ್ಯದಲ್ಲಿ ಬಾಹ್ಯಾಕಾಶಕ್ಕೆ ಹೋಗುವುದಕ್ಕೆ ನೀವು ಆಯ್ಕೆಯಾದಿರಿ ಅಂದರೆ ಅದು ನಿಮ್ಮ ಬಗ್ಗೆ ಇನ್ನೂ ಬಹಳಷ್ಟು ಹೇಳದಿರುವುದಿದೆ ಎಂದು ನಮ್ಮ ಹೃದಯಗಳು ಹೇಳುತ್ತವೆ. ಇದಕ್ಕೆ ಮುಂಚೆ ತಾವು ಸೈನ್ಯದಲ್ಲಿ ಅಧಿಕಾರಿಯಾಗಿ ಸಹಾ ಕಾರ್ಯನಿರ್ವಹಿಸಿದ ಸಾಧಕರಾಗಿದ್ರಿ.
ಸುನೀತಕ್ಕ ಮತ್ತೊಂದು ವಿಚಾರ. ನಾವು ಪಟ್ಟಣದಲ್ಲಿ ಇದ್ದೀವಿ ಅಂತ ಪೊಗರಿನಲ್ಲಿ, ನಾವು ನಮ್ಮ ಸಂಸ್ಕೃತಿಯನ್ನೆಲ್ಲಾ ಬಿಟ್ಟು, ನಮ್ಮನ್ನು ಬಿಟ್ಟರೆ ಬೇರೆ ಪಾಶ್ಚಾತ್ಯರಿಲ್ಲ ಎಂದು ಬದುಕುತ್ತೇವೆ. ನೀವು ಅಮೇರಿಕದಲ್ಲಿ ಓದಿ, ಬೆಳೆದು, ಅಲ್ಲೇ ನಿಮ್ಮ ಜೀವನವನ್ನು ಸವೆಸಿದ್ದರೂ, ಭಾರತೀಯತೆಯನ್ನು ಭಗವದ್ಗೀತೆ ಪುಸ್ತಕ ರೂಪದಲ್ಲಿ, ಗಣಪತಿ ವಿಗ್ರಹ ರೂಪದಲ್ಲಿ, ಗಾಂಧೀವಾದದ ಸರ್ವಹಿತಚಿಂತನೆಯಲ್ಲಿ, ಕಲ್ಪನಾ ಚಾವ್ಲಾ ಎಂಬ ಸಾಹಸಿಯ ಹೃದಯರೂಪದಲ್ಲಿ ಬಾಹ್ಯಾಕಾಶಕ್ಕೂ ತೆಗೆದುಕೊಂಡು ಹೋದವರು ಎಂಬುದನ್ನ ಓದಿದರೆ ಅದೆಷ್ಟು ಸಂತಸವಾಗುತ್ತೆ ಗೊತ್ತಾ. ಆದ್ರೆ ಸುನೀತಕ್ಕ ನೀವು ಭಾರತದಲ್ಲಿದ್ದು ಈ ಸಾಧನೆ ಮಾಡಿದ್ರೆ, ನಿಮ್ಮ ಸಾಧನೆ ಸುದ್ದಿ ಅಗೋಕಿಂತ, ಭಗವದ್ಗೀತೆ, ಗಣಪತಿ ವಿಗ್ರಹ ತೊಗೊಂಡು ಹೋಗಿದ್ದು ದೊಡ್ಡ ವಿವಾದ ಆಗ್ತಿತ್ತು!
ಭಾರತಕ್ಕೆ ನೀವು ಬಂದು ಹೋದಾಗ ಇಲ್ಲಿನ ಜನ ನಿಮ್ಮ ಮೇಲೆ ಪ್ರೀತಿ ತೋರಿದಾಗ "ನನಗೆ ಗಾಂಧೀ ಅವರು ಆದರ್ಶ, ಕಲ್ಪನಾ ಚಾವ್ಲಾ ಬಗ್ಗೆ ಗೌರವ" ಎಂದು ಹೇಳಿದ ನಿಮ್ಮ ನುಡಿ ನಮಗೆ ನಮ್ಮನ್ನು ನಾವೇ ಸ್ವಲ್ಪ ಒಳಗೇ ನೋಡಿಕೊಳ್ಳುವಂತೆ ಪ್ರೇರೇಪಿಸಿತು. ನಾವು ಗಾಂಧೀ ಕಂಡ್ರೆ ಗೌರವ ಅಂತ ಹೇಳಿಕೊಂಡು ಬದುಕಲಾಗದ ಸ್ಥಿತಿಗೆ ಬಂದು ನಿಂತಿದ್ದೀವಿ ಸುನೀತಕ್ಕ😔.
ಸುನೀತಕ್ಕ, ನಿಮಗೆ ಬಾಹ್ಯಾಕಾಶದಲ್ಲೇ ಹೆಚ್ಚು ಇದ್ದು ಅಭ್ಯಾಸವಾಗಿ ಹೋಗುತ್ತಿದೆ. ನಮ್ಮ ಬೆಂಗಳೂರಿನ ಟ್ರಾಫಿಕ್ನಲ್ಲಿ ಓಡಾಡೋದಕ್ಕಿಂತ ಬಾಹ್ಯಾಕಾಶದಲ್ಲಿ ಓಡಾಡೋದೇ ಸುಲಭ ಅಂತಾನ? ತಮಾಷೆ ಮಾಡ್ದೆ ಸುನೀತಕ್ಕ. ಇಂತಹ ಕೆಲಸ ಎಷ್ಟೊಂದನ್ನ ಬೇಡುತ್ತೆ ಅಂತ ನಾವು ಸ್ವಲ್ಪ ಮಾತ್ರ ಊಹಿಸಬಲ್ಲೆವು. ನೀವು ಇನ್ನೂ ಹೆಚ್ಚಿನ ಮಹತ್ವದ ಸಾಧನೆ ಮಾಡುತ್ತೀರಿ ಎಂದು ನಮಗೆ ತಿಳಿದಿದೆ. ನೀವು ನಮ್ಮ ಭಾರತದ ಯುವ ಹೃದಯಗಳನ್ನು ಹೆಚ್ಚಿನದನ್ನು ಸಾಧಿಸುವುದಕ್ಕೆ ಪ್ರೇರೇಪಣೆ ಒದಗಿಸುತ್ತೀರಿ ಎಂಬ ವಿಶ್ವಾಸ ಕೂಡ.
ಸುನೀತಕ್ಕ 2015ರಲ್ಲಿ ನಾಸಾ ತಮ್ಮನ್ನು ಅಮೆರಿಕದ ವಾಣಿಜ್ಯ ಬಾಹ್ಯಾಕಾಶ ನೌಕೆಗಳಿಗೆ ಪ್ರಥಮ ಸಾಲಿನ ಗಗನಯಾತ್ರಿಗಳಲ್ಲೊಬ್ಬರಾಗಿ ಹೆಸರಿಸಿತು ಅಂತ ಗೊತ್ತಾಯ್ತು. ಮುಂದೆ ನೀವು ಸ್ಪೇಸ್ಎಕ್ಸ್ ಗಗನಯಾತ್ರಿಗಳ ತರಬೇತಿಯಲ್ಲಿ ಕೂಡಾ ಕಾರ್ಯನಿರ್ವಹಿಸಿದಿರಿ. 2018ರಲ್ಲಿ ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಷನ್ ಆಫ್ ಬೋಯಿಂಗ್ ಸಿಎಸ್‍ಟಿ-100 ಸ್ಟಾರ್‍ಲೈನ್ ಸರಣಿಯ ಪ್ರಥಮ ಸಿಎಸ್‍ಟಿ-1 ಮಿಷನ್ ಫ್ಲೈಟ್ ನಿರ್ವಹಿಸಿದ್ದೀರಿ. 2024ರ ಜೂನ್ ತಿಂಗಳಲ್ಲಿ ಒಂದು ವಾರಕ್ಕೆ ಅಂತ ಹೋದವರು ಫೆಬ್ರವರಿ 2025ರ ವರೆಗೆ ತಾವು ಅಲ್ಲೇ ಇರುವುದು ಅನಿವಾರ್ಯವಾಗಿದೆ. ನಮಗೆಲ್ಲ ಏನೋ ಭಯ ಕಾತರ. ಆದರೆ ಸಾಧನೆಯ ಅಪೂರ್ವ ತೇಜದ ನಿಮ್ಮ ನಗುಮುಖ ನಮಗೆ ಭರವಸೆ ನೀಡುತ್ತಿದೆ. ನೀವು ಜಯಶಾಲಿಯಾಗಿ ಹಿಂದಿರುಗುತ್ತೀರಿ. ಈ ಲೋಕಜ್ಞಾನಕ್ಕೆ ಬಹುದೊಡ್ಡ ಪ್ರೇರಕರಾಗಿ ನೂರು ವರ್ಷ ಈ ಲೋಕದಲ್ಲಿರುತ್ತೀರಿ ಎಂದು.
ನಿಮ್ಮ ಬದುಕು ಸುಂದರವಾಗಿರಲಿ ಸುನೀತಕ್ಕ. ನಿಮ್ಮ ನಗೆಮೊಗ ನೋಡಿದಾಗಲೆಲ್ಲ ನಮಗೆ ಸಂತಸ ಉಕ್ಕಿ ಹರಿಯುತ್ತೆ. ನಿಮ್ಮ ನಗೆ ಶಾಶ್ವತವಾಗಿರಲಿ. ನಿಮ್ಮ ಯಶಸ್ಸಿನ ನಗುಮೊಗ ನಮ್ಮೆಲ್ಲರಿಗೂ ಬೆಳಕು ತುಂಬುತ್ತಿರಲಿ. ಹ್ಯಾಪಿ ಬರ್ತ್ಡೇ ಸುನೀತಕ್ಕ.
Happy birth day to our pride Sunitha Williams
ಕಾಮೆಂಟ್‌ಗಳು